Asianet Suvarna News Asianet Suvarna News

ಹೋರಾಟದ ಕಥಾಪ್ರಸಂಗ; 'ಅಂಗುಲಿಮಾಲಾ' ಕೃತಿಯ ಎರಡು ಅಧ್ಯಾಯ

ಸೆಪ್ಟೆಂಬರ್ 28, ಗುರುವಾರ, ತುಮಕೂರಿನಲ್ಲಿ ಲೋಕಾರ್ಪಣೆಗೊಳ್ಳಲಿರುವ 'ಅಂಗುಲಿಮಾಲಾ' ಕೃತಿಯ ಎರಡು ಅಧ್ಯಾಯಗಳು ಇಲ್ಲಿವೆ. ಲೇಖಕರು ಗುರುಪ್ರಸಾದ ಕಂಟಲಗೆರೆ ಜೊತೆ ತಿಮ್ಮಣ್ಣನವರು.

A story of struggle by Guruprasad Kuntalagere and Thimmanna Vin
Author
First Published Sep 24, 2023, 3:45 PM IST

1. ದಾಸಪ್ಪನ ಹಾಸ್ಟ್ಲು

ನನ್ನ ತಂದೆ ಕಣಿಯಾರ್ ಮೂಡ್ಲಯ್ಯ ತಾಯಿ ನಂಜಮ್ಮ. ನಮ್ಮಪ್ಪ ಮೂಡ್ಲಯ್ಯಂಗೆ ಕಂಟಲಗೆರೆಯ ಕರಿಯಜ್ಜನ ಒಬ್ಳೇ ಮಗಳಾದ ನಂಜಮ್ಮನ ಜೊತೆ ಮದುವೆ ಮಾಡ್ಲಾಗಿತ್ತು. ನಮ್ಮಪ್ಪ ಕುಂದೂರಿನಿಂದ ಮನ್ವಾಳ್ತನಕ್ಕೆ ಬಂದು ಕಂಟಲಗೆರೆಗೆ ಸೇರ್ಕಂಡಿತ್ತು. ನಮ್ಮ ಅಪ್ಪ ಅವ್ವುಂಗೆ ಐದು ಗಂಡು ಎರಡು ಹೆಣ್ಣು ಸೇರಿ ಒಟ್ಟು ಏಳು ಜನ ಮಕ್ಳು. ಸರ್ಕಾರಿ ದಾಖಲೆಗಳ ಪ್ರಕಾರ ನನ್ನ ಹುಟ್ಟು ಸಾವಿರದ ಒಂಭೈನೂರ ಐವತ್ತ ಮೂರು ಜೂನ್ ಒಂದರಂದು ಆಗೈತೆ. ನನ್ನ ಹುಟ್ಟು ಬಾಲ್ಯ ಎಲ್ಲ ನನ್ನ ತಾಯಿ ಊರಾದ ಕಂಟಲಗೆರೆಯಲ್ಲಿ ಆಯ್ತು. ಪ್ರಾಥಮಿಕ ಶಿಕ್ಷಣನ ಅಲ್ಲೇ ಪಡೆದೆ. ನಮ್ಮ ಅಣ್ಣ ಶಿವಣ್ಣ ಹೈಸ್ಕೂಲು ಓದ್ಲಿ ಅಂತ ತಗಂಡೋಗಿ ತಿಪಟೂರಿನ ದಾಸಪ್ಪನ ಹಾಸ್ಟ್ಲಿಗೆ ಸೇರಿಸಿದ.

ದಾಸಪ್ಪರೆಂದರೆ ಜಾತಿಯಲ್ಲಿ ನಮ್ಮವರೇ ಆಗಿದ್ದ ಹಿರಿಯ ಗಾಂಧಿವಾದಿಗಳು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಅನೇಕ ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಯಾವಾಗ್ಲೂ ಖಾದಿ ಜುಬ್ಬ ಪೈಜಾಮು, ಗಾಂಧಿ ಟೋಪಿ ಹಾಕಿರ್ತಿದ್ರು. ಊಟ ವಸತಿಗೆ ದಾಸಪ್ಪನ ಹಾಸ್ಟ್ಲಿಗೂ ಓದಕೆ ‘ಶ್ರೀವಿದ್ಯಾಪೀಠ’ ಸ್ಕೂಲಿಗೂ ನಮ್ಮಣ್ಣ ಸೇರಿಸಿದ್ದ. ಎಸ್‌ವಿಪಿನಲ್ಲಿ ಶಿಕ್ಷಣ ಚೆನ್ನಾಗಿರದ್ರ ಜೊತಿಗೆ ಸ್ವತಃ ದಾಸಪ್ಪರು ಆ ಶಾಲೆಯಲ್ಲಿ ಅತಿಥಿ ಡ್ರಿಲ್ ಮಾಸ್ಟರ್ ಆಗಿದ್ರು. ಆದ್ರಿಂದ ಸರ್ಕಾರಿ ಪ್ರೌಢಶಾಲೆ ಇದ್ರು ಸಹ ನಾವು ದಾಸಪ್ಪನ ಹಾಸ್ಟ್ಲಲ್ಲಿ ಇದ್ಕಂಡು ಅವರು ಡ್ರಿಲ್ ಮೇಷ್ಟ್ರಾಗಿದ್ದ ಎಸ್‌ವಿಪಿ ಶಾಲೆಗೆ ಸೇರ್ಕಂಡಿದ್ದು. ಹಿಂಗಾಗಿ ದಾಸಪ್ಪನ ಹಾಸ್ಟ್ಲಲ್ಲಿದ್ದ ಅರ್ಧದಷ್ಟು ಹುಡುಗ್ರು ಗೌರ್ಮೆಂಟ್‌ ಹೈಸ್ಕೂಲ್ ಸೇರ್ಕಂಡ್ರೆ, ಇನ್ನರ್ಧ ಎಸ್‌ವಿಪಿ ಸ್ಕೂಲ್‌ಗೆ ಹೋಗಿವು.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ನಾನು ಸ್ಪೋರ್ಟ್ಸ್ ಸ್ಟೂಡೆಂಟ್. ಅಥ್ಲೆಟಿಕ್ಸ್‌ಗಳಾದ ನೂರು ಮೀಟರ್, ನಾನೂರು ಮೀಟರ್ ರನ್ನಿಂಗ್ ರೇಸ್‌ನಲ್ಲಿ ಫಾಸ್ಟ್ ಇದ್ದೆ. ಕಬ್ಬಡಿ, ಫುಟ್ ಬಾಲ್ ಪ್ಲೇಯರ್ ಕೂಡ ಆಗಿದ್ದೆ. ಗೌರ್ಮೆಂಟ್‌ ಹೈಸ್ಕೂಲ್‌ಗೂ ನಮಗೂ ಸ್ಪೋರ್ಟ್ಸ್ ಇನ್ನಿತರೇ ವಿಚಾರದಲ್ಲಿ ಹೊಂದಾಣಿಕೆ ಇರ್ಲಿಲ್ಲ. ಹಾಗಾಗಿ ಮಕ್ಕಳು ಮತ್ತು ಟೀಚರ್ಸ್‌ ನಡುವೆ ಒಂದು ಬಗೆಯ ಟೀಕೆ ಮಾಡೋದು ನಡಿತಲೇ ಇರದು. ಒಮ್ಮೆ ತಾಲ್ಲೋಕ್ ಮಟ್ಟದ ಕ್ರೀಡೆಗಳು ಹೈಸ್ಕೂಲ್ ಫೀಲ್ಡ್‌ನಲ್ಲಿ ನಡಿತಾ ಇದ್ದು. ನಮ್ಮ ಬನಿಯನ್‌ಗಳ ಮೇಲೆ ಎಸ್‌ವಿಪಿ ಅಂತ ಬರೆದಿತ್ತು. ಅದುನ್ನ ನೋಡಿ ಗೌರ್ಮೆಂಟ್‌ ಹೈಸ್ಕೂಲ್ನರು ಆಡ್ಕೆಣದು, ಚಮ್ಕಾಯ್ಸದು ಮಾಡರು. ಒಂದು ಕ್ರೀಡಾಕೂಟದಲ್ಲಿ ಸುಮಾರು ಇಪ್ಪತ್ತು ಶಾಲೆಯಿಂದ ಬಂದಿದ್ದ ಸ್ಪರ್ಧಿಗಳು ನಿಂತಿದ್ರು. ನಾನು ಎಲ್ರಿಗಿಂತ ಫಾಸ್ಟ್ ಆಗಿ ಓಡ್ತಾ ಇದ್ದೆ. ಇನ್ನೇನು ಫಸ್ಟ್ ಬಂದು ಬಿಡ್ತಿನಿ ಎನ್ನುವಾಗ ಇವನಿಗೆ ಏನಾರ ಮಾಡಿ ಅಡ್ಡಿಪಡಿಸಬೇಕು ಎಂದು ತೀರ್ಮಾನಿಸಿದ ಎದುರಾಳಿ ನನ್ನ ಟ್ರಾಕ್‌ಗೆ ಅಡ್ಡ ಬಂದ. ನನಿಗೆ ಬ್ರೇಕ್ ಆಗೋಯ್ತು. ಪೋಲ್ ಆಗಿ ಹಿಂದೆ ಬಿದ್ದೆ. ಜಾನ್‌ಮೈಕಲ್ ಅನ್ನೋನು ಮುಂದೆ ಬಂದ. ನಂತರ ಅದು ಘರ್ಷಣೆ ಆಗೋಯ್ತು. ಹೀಗೆ ನಾನು ಕ್ರೀಡಾಪಟು ಆಗಿದ್ರಿಂದ ಯಾವಾಗ್ಲು ನಂಜೊತೆ ಹುಡುಗರ ಗುಂಪು ಇರ್ತಿತ್ತು. ಬಹಳಷ್ಟು ಜನ ಪ್ರೀತಿಸ್ತಿದ್ರು ಹಾಗೇನೆ ಘರ್ಷಣೆನೂ ಮಾಡ್ಕಂತಿರಿವು.

ದಾಸಪ್ಪನ ಹಾಸ್ಟ್ಲು ಅಂದ್ರೆ ಶಿಸ್ತಿಗೆ ಹೆಸರುವಾಸಿ. ಗಾಂಧಿವಾದಿಯಾಗಿದ್ದ ಅವರು ಸರ್ವೋದಯ ಹೆಸರಿನ ಶಿಕ್ಷಣ ಸಂಸ್ಥೆ ಕಟ್ಟಿ ಬೆಳಸಿದ್ರು. ಅದು ದಾಸಪ್ಪನ ಹಾಸ್ಟ್ಲು ಅಂತ ಫೇಮಸ್ ಆಗಿತ್ತು. ದಾಸಪ್ಪರು ಪಾನವಿರೋಧಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ರು. ಶನಿವಾರ ಭಾನುವಾರ ಬಂತು ಅಂದ್ರೆ ಹಾಸ್ಟ್ಲು ವಿದ್ಯಾರ್ಥಿಗಳ್ನೆಲ್ಲ ನಾಲ್ಕು ಗುಂಪು ಮಾಡಿ ಊರೂರ ಮೇಲೆ ಕಳಿಸೋರು. ಎಲ್ಲಿ ಸಾರಾಯಿ ಅಂಗಡಿ ಇರ್ತಿಂದ್ವೊ ಅಲ್ಲಿ ನಿಂತ್ಕಂಡು ಕುಡಿಯಕೆ ಬರೋರ್ನ ‘ಅಣ್ಣ ಅಯ್ಯ ಕುಡಿಬೇಡ್ರಿ’ ಅಂತ ಮನವಿ ಮಾಡಿವು. ನಮ್ಮ ಹಾಸ್ಟ್ಲಲ್ಲಿ ವಿದ್ಯಾರ್ಥಿ ಸಂಸತ್, ಮಂತ್ರಿ ಮಂಡಲ ಎಲ್ಲ ಇರ್ತಿತ್ತು. ದಾಸಪ್ಪರು ಕುದ್ದು ಆಸಕ್ತಿ ವಹಿಸಿ ಇದನ್ನೆಲ್ಲ ರಚನೆ ಮಾಡುಸ್ತಿದ್ರು. ಚೀಫ್ ಮಿನಿಸ್ಟರ್, ರಕ್ಷಣಾ ಮಂತ್ರಿ, ಆರೋಗ್ಯ ಮಂತ್ರಿ, ಆಹಾರ ಮಂತ್ರಿ ಎಂದೆಲ್ಲ ಸಮರ್ಥರಿಗೆ ಖಾತೆಗಳನ್ನು ಹಂಚುತ್ತಿದ್ರು. ಹತ್ತು ಹನ್ನೆರಡನೇ ಕ್ಲಾಸ್ ಓದ್ತಿದ್ದ ವಿದ್ಯಾರ್ಥಿಗಳು ಇದ್ರೂ ಸಹ ಅವರನ್ನೆಲ್ಲ ಮೀರಿ ಏಳನೇ ತರಗತಿಲಿ ಓದ್ತಿದ್ದ ನನ್ನನ್ನ ರಕ್ಷಣಾ ಮಂತ್ರಿ ಮಾಡಿದ್ರು. ನಾನು ಕ್ರೀಡಾಪಟುವಾಗಿದ್ದು ದೈಹಿಕವಾಗಿ ಸಮರ್ಥನಿದ್ದುದರಿಂದ ಈ ಖಾತೆ ಕೊಟ್ಟಿದ್ರು. ನನ್ನ ಜವಾಬ್ದಾರಿ ಏನಂದ್ರೆ ಹಾಸ್ಟ್ಲಲ್ಲಿ ಶಿಸ್ತು ಕಾಪಾಡದು. ಪ್ರೇಯರ್, ಡ್ರಿಲ್ ಮಾಡ್ಸದು. ಏನಾರ ಅಹಿತಕರ ಘಟನೆ ನಡುದ್ರೆ ಅದುನ್ನ ಸರಿಪಡ್ಸದು ನನ್ನ ಕರ್ತವ್ಯಗಳಾಗಿದ್ದು.

ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

ನಾನು ಬೆಳಗ್ಗೆ ಆರು ಗಂಟೆಗೆ ಎದ್ದು ಆಚೆ ಬಂದು ಬೀಬಲ್ ಊದ್ತಿದ್ದೆ. ಬೀಬಲ್ ಊದಿದ ಹತ್ತು ನಿಮಿಷಕ್ಕೆ ಎಲ್ಲ ಬಂದು ಪ್ರೇಯರ್‌ಗೆ ನಿಂತ್ಕಬೇಕಿತ್ತು. ಆನಂತರ ಸೈನಿಕರು ಹೋದಂಗೆ ಎರಡು ಲೈನ್ ಮಾಡ್ಕಂಡು ಏಕ್ ದೊ, ಏಕ್ ದೊ ಎಂದು ಮಾರ್ಚ್‌ಫಾಸ್ಟ್ ಮಾಡ್ಕಂಡು ಐದಾರು ಕಿಲೋಮೀಟರ್ ಹೋಗ್ತಿದ್ದು. ಅದೆಲ್ಲ ಉಸ್ತುವಾರಿ ನಂದೇ ಆಗಿರ್ತಿತ್ತು. ಊಟದ ಹಾಲ್‌ಗೆ ಬಂದಾಗ ಇಲ್ಲಿ ಗಲಾಟೆ ಗದ್ದಲ ಆಗದಂಗೆ ನೋಡ್ಕಂಬೇಕಿತ್ತು. ತಪ್ಪು ಮಾಡಿರೋನು ಎಷ್ಟು ದೊಡ್ಡವನೆ ಆಗಿದ್ರು ಹೊಡೆದುಬಿಡ್ತಿದ್ದೆ. ಎಸ್ಸೆಲ್ಸಿ, ಪಿಯುಸಿ ಓದ್ತಿದ್ದ ಹುಡುಗ್ರನ್ನು ಬಿಡ್ತಿರ್ಲಿಲ್ಲ. ಅಷ್ಟೊಂದು ಅಧಿಕಾರನ ನಾನು ಬಳಸ್ಕಂತಿದ್ದೆ. ಆದ್ರಿಂದ ಎಲ್ರೂ ನನ್ನ ಕಂಡ್ರೆ ಭಯ ಪಡೋರು. ನನ್ನ ಈ ಗುಣವೇ ಮುಂದೆ ನನ್ನ ಮೇಲೆ ಕಂಪ್ಲೆಂಟ್ ಆಗಿ ಹಾಸ್ಟ್ಲು ಬಿಡಕೆ ಕಾರಣವಾಯ್ತು.

ಹೊಡೆದಾಟದ ಕಬ್ಬಡಿ
ಎಲ್ಲರ ಬಾಯಲ್ಲೂ ಇವ್ನು ಸೋಲ್ಡ್ಜರ್ ಆಡಿದಂಗೆ ಆಡ್ತನೆ, ಇವುನ್ನ ಏನಾರ ಮಾಡಿ ಓಡುಸ್ಬೇಕು ಅನ್ನೊದೆ ಆಗಿರದು. ನನಿಗೆ ಕಾಚ (ಒಳಚಡ್ಡಿ) ಹಾಕ್ಯಣದೆ ಗೊತ್ತಿರ್ಲಿಯಲ್ಲ. ದಾಸಪ್ಪರು ಮನೆಗೆ ಕರ್ಕಂಡು ಹೋಗಿ ಕಾಚ ಕೊಡ್ಸಿದ್ರು. ಅವರು ಕಾಚ ಕೊಡ್ಸಕೆ ಕಾರಣ ಏನಿರಬೇಕು ಅಂದ್ರೆ, ನಾನು ಆಗ ಕಬ್ಬಡಿ ಪ್ಲೇಯರ್ ಆಗಿದ್ದು ಕಾಲು ಎತ್ತಿ ಒದ್ದು ಎದುರಾಳಿ ಮೇಲೆ ಅಟ್ಯಾಕ್ ಮಾಡ್ತಿದ್ದೆ. ನನ್ನ ಆಟವನ್ನ ಗಮನಿಸಿದ್ದ ಅವರಿಗೆ ನನ್ನತ್ರ ಕಾಚ ಇಲ್ದೆ ಇರೋದು ಕಂಡಿರ್ಬೇಕು. ಒಂದಿನ ಅವರ ಮನೆಗೆ ಕರ್ಕಂಡೋಗಿ ಕಾಚ ಹಾಕ್ಸಿದ್ರು. ನನ್ನ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ನಂಬಿಕೆ ಇತ್ತು. ಇಂಥ ದಾಸಪ್ಪನವರ ಮೇಲೆ ಆಗ ತಿಳಿದಲೆನೆ ಒಂಥರ ಹುಡುಗಾಟಿಕೆಯಲ್ಲಿ ಅವ್ರುನ್ನೆ ಅಣಕ್ಸಕೆ ಶುರುವಾಗಿದ್ದೆ. ಅದೆಂಗೆ ಅಂದ್ರೆ ದಾಸಪ್ಪರು ಬೆಳಗ್ಗೆ ಐದು ಗಂಟೆಗೇ ಎದ್ದು ಬರೋರು.

ನಮ್ಮ ಹಾಸ್ಟ್ಲಲ್ಲಿ ‘ದಾಸಪ್ಪ’ ಹೆಸರಿನ ಒಬ್ಬ ಸ್ಟುಡೆಂಟ್ ಇದ್ದ. ಅವ್ನುನ್ನ ದಾಸಪ್ಪರು ಬರೋ ದಾರಿಲಿ ನಿಲ್ಲಿಸಿ ಇವುನ್ನ ಕರ್ದಂಗೆ ಅವ್ರುನ್ನ ‘ದಾಸ ದಾಸ’ ಅಂತ ಕೂಗಿವೆ. ದಾಸಪ್ಪರನ್ನ ಇನ್ಸಲ್ಟ್ ಮಾಡಬೇಕು ಅನ್ನದು ನನ್ನ ಉದ್ದೇಶ ಆಗಿರದು. ಇದುನ್ನೆಲ್ಲ ನನ್ನ ಮೇಲೆ ಹಗೆ ಸಾದುಸ್ತಿದ್ದ ಹುಡುಗರು ಸೀದ ಹೋಗಿ ದೂರು ಹೇಳ್ತಿದ್ರು. ದಾಸಪ್ಪರು ನನ್ನ ಪುಂಡಾಟ ಸಹಿಸ್ಲಾರ್ದೆ ವಿಧಿ ಇಲ್ಲದೆ ಒಂಭತ್ನೆ ಕ್ಲಾಸಿಗೆ ಹಾಸ್ಟ್ಲಿಂದ ಈಚಿಕೆ ಹಾಕಿರು. ಅಣ್ಣ ಶಿವಣ್ಣ ಬಂದು ಹೇಳಿರೂ ಕೇಳ್ಲಿಲ್ಲ. ಇವ್ನು ಸರಿ ಇಲ್ಲ, ಹುಡುಗ್ರುನ್ನೆಲ್ಲ ಕೆಡಿಸಿಬಿಡ್ತನೆ ಅಂತ ಆಚಿಕೆ ಹಾಕಿರು. ಹತ್ನೇ ಕ್ಲಾಸ್‌ಗೆ ಬಂದು ತುರುವೇಕೆರೆ ಗೌರ್ಮೆಂಟ್‌ ಹೈಸ್ಕೂಲ್‌ಗೆ ಸೇರ್ಕಂಡೆ. ಇಲ್ಲೂ ಹಾಸ್ಟ್ಲೆ ನಮಗೆ ಅನ್ನದ ದಾರಿಯಾಗಿತ್ತು. ನಮ್ಮಣ್ಣನೂ ಸಹ ಹಿಂದೆ ಇದೇ ಹಾಸ್ಟಲ್ಲಿ ಇದ್ಕಂಡು ಓದಿದ್ದ. ಇಲ್ಲೂ ಸಹ ನಾನು ಕ್ರೀಡಾಪಟು ಆಗಿದ್ರಿಂದ ಬೇಗನೆ ಎಲ್ಲರ ಆಕರ್ಷಣೆಗೆ ಒಳಗಾದೆ.

ತುರುವೇಕೆರೆ ತಾಲ್ಲೋಕ್ ಮಟ್ಟದ ಕ್ರೀಡೆಗಳು ಆ ವರ್ಷ ಮಾಯಸಂದ್ರದಲ್ಲಿ ನಡಿತಾ ಇದ್ದು. ಅಲ್ಲಿ ಸಣ್ಣಪುಟ್ಟದ್ಕು ಅಲ್ಲಿನ ಮೇನೇಜ್ಮೆಂಟ್ ಮೇಲೆ ಜಗಳಕ್ಕೆ ಹೋಗ್ತಿದ್ದೆ. ನಮ್ಮ ಹುಡುಗರ ಗುಂಪು ಬೇರೆ ವಿದ್ಯಾರ್ಥಿಗಳ ಮೇಲೆ ಕಾಲು ಕೆರ್ಕಂಡು ಜಗಳಕ್ಕೆ ಹೋಗ್ತಿತ್ತು. ಉಯ್ದಾಟಕ್ಕೋದ್ರೆ ಇರ ಒಂದೊಂದು ಅಂಗಿನು ಅರ್ದೋಗಿಬಿಡ್ತವೆ ಅಂತ ಅಂಗಿ ಬಿಚ್ಚಿಕ್ಕಿ ಹೋಗ್ತಿದ್ದು.

ಇಂಗೆ ಒಂದ್ಸಲ ಗಲಾಟೆ ಮಾಡ್ಕೆಂಡಿದ್ದಾಗ, ಪೊಲೀಸ್ನರು ಬಂದು ಬರೆ ಮೈನಲ್ಲೆ ಕರ್ಕಂಡೋಗಿ ಸ್ಟೇಷನ್ನಿಗೆ ಕೂರಿಸ್ಕೆಂಡಿದ್ರು. ಆಮೇಲೆ ಮೇಷ್ಟ್ರುಗಳು ಬಂದು ಬಿಡಿಸ್ಕೆಂಡು ಬಂದ್ರು. ತಾಲ್ಲೋಕ್ ಮಟ್ಟದಲ್ಲಿ ಗೆದ್ದಿದ್ರಿಂದ ಜಿಲ್ಲಾ ಮಟ್ಟದ ಸ್ಪರ್ಧೆಗೆ ತುಮಕೂರಿಗೆ ಕಳಿಸಿರು. ಕ್ರೀಡಾಕೂಟಕ್ಕೆ ಹೋಗಕೆ ನಂತವ ಒಳ್ಳೆ ಬಟ್ಟೆಗಳಿರ್ಲಿಲ್ಲ. ಮೊಸ್ರುಕೊಟ್ಕೆ ಕೆಂಪೇಗೌಡ ಮತ್ತು ಗೊಟ್ಟಿಕೆರೆ ಕೃಷ್ಣ ಅನ್ನೋ ಕಬ್ಬಡಿ ಪ್ಲೇಯರ್ಸ್ ಇದ್ರು. ಅವರ ಅಂಗಿಗಳನ್ನೆ ನನಿಗೆ ಇಕ್ಕಿಸ್ಕೆಂಡು ಜಿಲ್ಲಾ ಮಟ್ಟದ ಸ್ಪರ್ಧೆಗೆ ಕರ್ಕಂಡು ಹೋಗಿದ್ರು. ಅಲ್ಲಿ ನೂರು ನಾನೂರು ಮೀಟರ್ ಓಟ ಮತ್ತು ಕಬ್ಬಡಿ ಈ ಮೂರ್ರಲ್ಲೂ ನಾನು ಸ್ಪರ್ಧಿಸಿದ್ದೆ. ನಾನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಸೆಕೆಂಡ್ ಬಂದೆ. ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನಕ್ಕೆ ಬಂದೆ. ಅಲ್ಲಿ ನಗರದಲ್ಲಿ ಪ್ರಾಕ್ಟೀಸ್ ಮಾಡ್ಕೆಂಡಿದ್ದ ಹುಡುಗರ ಜೊತೆಗೆ ಸ್ಪರ್ಧಿಸಿದ್ದರಿಂದ ಮೊದಲ ಸ್ಥಾನಕ್ಕೆ ಬರಕಾಗ್ಲಿಲ್ಲ. ನಾವೇನಿದ್ರು ಹಳ್ಳಿ ಹುಡುಗರು, ಅವತ್ತ ಆಡಿ ಅವತ್ತ ಗೆಲ್ತಾ ಇದ್ದು.

ಕಬ್ಬಡಿನಲ್ಲೂ ಒಳ್ಳೆ ಪ್ರದರ್ಶನ ನೀಡಿದ್ದೆ. ನಾನು ಒಳ್ಳೆ ರೈಡರ್ ಆಗಿದ್ರಿಂದ ಎರಡು ಮೂರು ಅಡಿ ಮೇಲಕ್ಕೆ ನೆಗೆದು ಅಟ್ಯಾಕ್ ಮಾಡ್ತಿದ್ದೆ. ನನ್ನ ಔಟ್ ಮಾಡದು ಎದುರಾಳಿಗಳಿಗೆ ಸವಾಲಾಗಿರ್ತಿತ್ತು. ನಾನೊಂದ್ಸಲ ರೈಡ್ ಮಾಡಕೆ ಹೋದವನು ಜಂಪ್ ಮಾಡಿದೆ. ಜಂಪ್ ಮಾಡಿದಾಗ ಕೆಳಗಿಂದ ಕಾಲು ಹಿಡಿದು ಕೆಡವಿಬಿಟ್ರು. ನಾನು ಕೆಳಕ್ಕೆ ಬಿದ್ದೆ. ಎಲ್ಲ ಮುತ್ತಿಕೊಂಡುಬಿಟ್ರು. ಅದರಲ್ಲಿ ಯಾರೊ ಒಬ್ಬ ಕೆಳಕ್ಕೆ ಬಿದ್ದಿದ್ದ ನನ್ನ ತಲೆ ಹಿಡಿದು ನೆಲಕ್ಕೆ ಕುಕ್ಕಿದ. ತಲೆಗೆ ಪೆಟ್ಟು ಬಿದ್ದು ರಕ್ತ ಚಿಮ್ಮಿತು. ಇವನು ರೈಡಿಂಗ್ ಬಂದರೆ ನಮ್ಮನ್ನೆಲ್ಲ ಔಟ್ ಮಾಡ್ತನೆ, ಇವನಿಗೆ ಪಾಯಿಂಟ್ ಕೊಡಬೇಕಾಗುತ್ತೆ ಅಂತ ಸಂಚು ಮಾಡಿ ಹಿಂಗೆ ಮಾಡಿದ್ರು. ಆಮೇಲೆ ಮೇಷ್ಟ್ರುಗಳು ಕರ್ಕಂಡೋಗಿ ಬ್ಯಾಂಡೇಜ್ ಕಟ್ಟಿಸ್ಕೆಂಡು ಬಂದು ಮತ್ತೆ ಆಡಕೆ ಬಿಟ್ರು. ನಾನು ಅಥ್ಲೆಟಿಕ್ಸ್ ಮತ್ತು ಗ್ರೂಪ್ ಗೇಮ್ (ಕಬ್ಬಡಿ) ಎರಡ್ರಲ್ಲೂ ಒಳ್ಳೆ ಪ್ರದರ್ಶನ ನೀಡಿದ್ರಿಂದ ಆ ವರ್ಷದ ಚಾಂಪಿಯನ್ ಟ್ರೋಫಿ ನನ್ದೆ ಆಯ್ತು. ಕ್ರೀಡಾಕೂಟಕ್ಕೆ ಹೋದ ಹುಡುಗರಿಗೆ ಮೇಷ್ಟ್ರುಗಳು ಊಟ ಕೊಡಿಸ್ತಿದ್ರು. ಅಲ್ಲೊಂದು ‘ಹೆಲ್ತ್ ಕ್ಯಾಂಟೀನ್’ ಹೋಟೆಲ್ ಇತ್ತು. ಅಲ್ಲಿ ಫುಲ್ ಮಿಲ್ಸ್. ಏನಾರ ತಿನ್ನು ಎಷ್ಟಾರ ತಿನ್ನು ಫುಲ್ ಊಟ ಕೊಡರು. ಇಲ್ಲಿಂದ ಹೋಗಿದ್ದ ನಾವು ಒಬ್ಬೊಬ್ರು ಇಪ್ಪತ್ತು ಮುವತ್ತು ಪೂರಿ ಚಪಾತಿ ತಿನ್ನಿವು. ಓನರ್ ಇದನ್ನ ಕಂಡು ಯಾವ ತಾಲ್ಲೋಕ್ನರು ಅಂತ ಕೇಳಿ, ತುರುವೇಕೆರೆ ತಾಲ್ಲೋಕಿನವ್ರಿಗೆ ನಾಳೆಯಿಂದ ಫುಲ್ ಮೀಲ್ಸ್ ಕೊಡಬೇಡಿ ಪ್ಲೇಟ್ ಮೀಲ್ಸ್ ಕೊಡಿ ಅಂತ ಹೇಳಿರು.

ಆ ವರ್ಷದ ಸ್ಪೋರ್ಟ್ಸ್‌ನಲ್ಲಿ ನಾನು ಚಾಂಪಿಯನ್ ಆಗಿ ಬಂದಿದ್ರಿಂದ ತುರುವೇಕೆರೆಲಿ ಹೂವಿನಾರ ಹಾಕಿ, ಸ್ವೀಟ್ಸ್ ಎಲ್ಲ ಹಂಚಿ ಅದ್ದೂರಿಯಾಗಿ ಸ್ವಾಗತ ಮಾಡಿರು. ನನ್ನನ್ನ ನೋಡಕೆ ಸ್ಕೂಲ್ ಹುಡುಗ್ರೆಲ್ಲ ಮುತ್ಕೆಣರು. ಚಿಕ್ಕಹನುಮಯ್ಯ ಅಂತ ನಮ್ಮವರೆ ಇನ್ನೊಬ್ರು ಒಂದು ಪ್ರೈವೇಟ್ ಹಾಸ್ಟೆಲ್ ನಡೆಸ್ತಿದ್ರು. ಅವ್ರಿಗೆ ಈ ಹುಡುಗ ನಮ್ಮವನಂತೆ ಅಂತ ತಿಳಿದು ಅವರ ಹಾಸ್ಟ್ಲಿಗೂ ಕರ್ಕಂಡೋಗಿ ಅಲ್ಲಿನ ಹುಡುಗ್ರಿಗೆಲ್ಲ ಪರಿಚಯ ಮಾಡಿ ಸನ್ಮಾನ ಮಾಡಿರು.

Follow Us:
Download App:
  • android
  • ios