ಶಿವನ ಕಳೆಯೇ ಅವತರಿಸಿ ಬಂದು, ಭಕ್ತಿಯ ಮಾರ್ಗವನ್ನು ಪ್ರಚಾರಮಾಡಿದವರಲ್ಲಿ ಬಸವಣ್ಣನವರಿಗೆ ಅಗ್ರಸ್ಥಾನ. ಅವರ ಕಾರ್ಯಗಳಲ್ಲಿ ಭಕ್ತಿಯೇ ಪ್ರಧಾನ, ಆದ್ದರಿಂದಲೇ ಅವರು ಭಕ್ತಿ ಭಂಡಾರಿ ಎಂಬ ಬಿರುದನ್ನು ತಾಳಿದರು.
ಭಕ್ತಿಯ ಮಾರ್ಗವನ್ನು ಪ್ರಚಾರಮಾಡಿದವರಲ್ಲಿ ಬಸವಣ್ಣನವರಿಗೆ ಅಗ್ರಸ್ಥಾನ | ಕ್ಷೀಣಿಸದ ಭಕ್ತಿಯ ತವನಿಧಿ | ಭಕ್ತಿ ಬಿತ್ತಿ ಬೆಳೆಯಲೆಂದೇ ಅವರು ಮರ್ತ್ಯಕ್ಕೆ ಬಂದಿದ್ದರು ಹಿಂದೂ ದರ್ಶನದಲ್ಲಿ ಶಾಸ್ತ್ರಕಾರರು ಶಿವನ ಅನುಗ್ರಹ ಪಡೆಯಲು ಅನೇಕ ಮಾರ್ಗಗಳ ಅವಲಂಬಿಸಿದ್ದು, ಅವುಗಳಲ್ಲಿ ಶಿವನೊಲಿಸಲು ಭಕ್ತಿ ಮಾರ್ಗ ಶ್ರೇಷ್ಠ. ಪಂಡಿತ ಪಾಮರರೆಲ್ಲ ಈ ಮಾರ್ಗವನ್ನು ಸುಲಭವಾಗಿ ಅನುಸರಿಸಬಹುದು. ಈ ಭಕ್ತಿಯ ಶ್ರೇಷ್ಠತೆಯನ್ನು ನಾರದೀಯ ಸೂತ್ರ, ಭಗವದ್ಗೀತೆ, ಶಿವರಹಸ್ಯ ಮೊದಲಾದ ಗ್ರಂಥಗಳಲ್ಲಿ ಬಹಳ ಸ್ವಾರಸ್ಯಕರವಾಗಿ ವರ್ಣಿಸಿದ್ದು, ಶಿವಶರಣರೂ ತಮ್ಮ ವಚನಗಳಲ್ಲಿ ಪರಿಪರಿಯಾಗಿ ವಿವರಿಸಿದ್ದಾರೆ. ಭಕ್ತಿಯ ಮಾರ್ಗ ಭೂಲೋಕದಲ್ಲಿ ಕ್ಷೀಣವಾದಾಗ ಆದನ್ನು ಪ್ರಚಾರಮಾಡುವ ಸಲುವಾಗಿ ಪರಮಾತ್ಮನ ಪ್ರೇರಣೆಯಿಂದ ಅವತಾರ ಪುರುಷರು ಬರುತ್ತಾರೆಂದು ನಮ್ಮ ತಿಳುವಳಿಕೆ. ಹೀಗೆ ಶಿವನ ಕಳೆಯೇ ಅವತರಿಸಿ ಬಂದು, ಭಕ್ತಿಯ ಮಾರ್ಗವನ್ನು ಪ್ರಚಾರಮಾಡಿದವರಲ್ಲಿ ಬಸವಣ್ಣನವರಿಗೆ ಅಗ್ರಸ್ಥಾನ. ಅವರ ಕಾರ್ಯಗಳಲ್ಲಿ ಭಕ್ತಿಯೇ ಪ್ರಧಾನ, ಆದ್ದರಿಂದಲೇ ಅವರು ಭಕ್ತಿ ಭಂಡಾರಿ ಎಂಬ ಬಿರುದನ್ನು ತಾಳಿದರು. ಅವರ ವಚನಗಳಲ್ಲಿ ಭಕ್ತಿಯ ಕುರಿತಾಗಿ ಹೀಗೆ ಹೇಳಿದ್ದಾರೆ.
ಭಕ್ತಿ ಎಂತಹದಯ್ಯ? ದಾಸಯ್ಯ ಮಾಡಿದಂತಹದಯ್ಯ.
ಭಕ್ತಿ ಎಂತಹದಯ್ಯ? ಸಿರಿಯಾಳ ಮಾಡಿದಂತಹದಯ್ಯ.
ಭಕ್ತಿ ಎಂತಹದಯ್ಯ? ನಮ್ಮ ಬಲ್ಲಾಳ ಮಾಡಿದಂತಹದಯ್ಯ.
ಭಕ್ತಿ ಎಂತಹದಯ್ಯ? ಕೂಡಲಸಂಗಮದೇವ, ನೀ ಬಾಣನ ಬಾಗಿಲ ಕಾದಂತಹದಯ್ಯ! ಎನ್ನುವಲ್ಲಿಗೆ ಭಕ್ತಿ ಎಂದರೆ ಎಂತಹದು ಎನ್ನುವುದನ್ನು ತಿಳಿಸಿದ್ದಾರೆ. ದಾಸಯ್ಯ, ಸಿರಿಯಾಳ, ಬಲ್ಲಾಳರೆಲ್ಲ ಒಮ್ಮೆಲೆ ಭಕ್ತಿಗಾಗಿ ಅದೆಂಥ ತ್ಯಾಗಕ್ಕೆ ಸಿದ್ಧರಾದರು! ಶಿವನು ಸಿರಿಯಾಳನ ಭಕ್ತಿಯನ್ನು ಪರೀಕ್ಷಿಸಲು ವೇಷ ಮರೆಸಿಕೊಂಡು ಬಂದು, “ನಿನ್ನ ಮಗನನ್ನೇ ಅಟ್ಟುಣಿಸು” ಎಂದು ತಾಕೀತು ಮಾಡಿದಾಗ ಹಿಂದೆಮುಂದೆ ಯೋಚಿಸದೇ ಶಿವನಿಗೆ ಉಣಬಡಿಸಿದ. ಸಂತೃಪ್ತನಾದ ಶಿವ ಅವನ ಭಕ್ತಿಗೆ ಮೆಚ್ಚಿ, ಮಗನನ್ನು ಉಳಿಸಿಕೊಟ್ಟನಲ್ಲದೇ ಸಿರಿಯಾಳನನ್ನು ಹರಸಿದ. ಶಿವ ಭಕ್ತನಾಗಿದ್ದ ಸಿಂಧು ಬಲ್ಲಾಳ ಒಬ್ಬ ರಾಜ. ಶಿವನು ಭಕ್ತಿ ಪರೀಕ್ಷಿಸಲು ಅವನ ಹೆಂಡತಿಯನ್ನು ತನಗೆ ಅರ್ಪಿಸುವಂತೆ ಕೇಳಿದಾಗ ರಾಜ ಯೋಚಿಸದೇ ಶಿವನಿಗೆ ಅರ್ಪಿಸಿದನು. ಇದನ್ನು ನೋಡಿ ಶಿವನೇ ಬಲ್ಲಾಳನ ಭಕ್ತಿಗೊಲಿದನು!
ಅಷ್ಟೇ ಅಲ್ಲ ಬಾಣಾಸುರ ಎಂಬ ದೈತ್ಯನ ಭಕ್ತಿಗೆ ಮೆಚ್ಚಿ ಸಾಕ್ಷಾತ್ ಶಿವನೇ ಏನು ವರ ಬೇಕು ಕೇಳು ಎಂದಾಗ ಹಿಂದೆ ಕೈಲಾಸದ ಬಾಗಿಲು ಕಾಯ್ದದ್ದರ ಪ್ರತೀಕಾರವಾಗಿ, ನೀನು ನನ್ನ ಅರಮನೆಯ ಬಾಗಿಲು ಕಾಯಬೇಕೆಂದು ಬಾಣಾಸುರ ಕೇಳಿದ! ಆದಾಗ್ಯೂ ಶಿವ ಅವನ ಭಕ್ತಿಗೆ ಮೆಚ್ಚಿದ್ದರಿಂದ ಆಗಲಿ ಎಂದು ಬಾಗಿಲು ಕಾಯ್ದ. ಇದು ಭಕ್ತಿಗೆ ಶಿವನಿತ್ತ ಗೌರವ, ಭಕ್ತರಿಗೆ ಅವನೊಲಿದ ಪರಿ. ಈ ವಚನದಲ್ಲಿ ಭಕ್ತಿ ಎಂದರೆ ಪರಮೋಚ್ಛ ತ್ಯಾಗ ಎನ್ನುವುದನ್ನು ಬಸವಣ್ಣ ತಿಳುಹಿದ್ದಾರೆ. ನಿಜವಾದ ಭಕ್ತಿಗೆ ಕೂಡಲ ಸಂಗನು ಒಲಿಯದೇ ಇರನು ಎಂಬುದನ್ನು ತಿಳಿಸಿದ್ದಾರೆ. ಸಕ್ಕರೆಯ ಕೊಡನ ತುಂಬಿ ಹೊರಗೆ ಸವಿದರೆ ರುಚಿಯುಂಟೆ? ತಕ್ಕೈಸಿ ಭುಜತುಂಬಿ ಲಿಂಗಸ್ಪರ್ಶನವ ಮಾಡದೆ ಅಕ್ಕಟಾ! ಸಂಸಾರ ವೃಥಾ ಹೋಯಿತ್ತಲ್ಲಾ! ಅದೇತರ ಭಕ್ತಿ? ಅದೇತರ ಯುಕ್ತಿ? ಕೂಡಿಕೋ, ಕೂಡಲಸಂಗಮದೇವಾ.
ಎಂಬಲ್ಲಿ ಒಂದು ಹೂಜಿಗೆ ಸಕ್ಕರೆ ತುಂಬಿಸಿ ಹೊರಗೆ ನೆಕ್ಕುವುದರಿಂದ ಅದರ ರುಚಿ ಸಿಗುತ್ತದೆಯೇ? ಇಲ್ಲವಲ್ಲ! ಹಾಗೆಯೇ ಅಲೌಕಿಕವು, ಭಕ್ತಿ ಪರಾಕಾಷ್ಠೆಯು ಅನುಭವಿಸದೇ ಅರಿವಿಗೆ ಬಾರದು. ಯಮನು ಬಂದೆಳೆದಾಗ ಶಿವಲಿಂಗವನ್ನು ತಬ್ಬಿಹಿಡಿದು ಮೃತ್ಯುವನ್ನು ಜಯಿಸಿ ಅಮೃತತ್ವವನ್ನು ಪಡೆದ ಮಾರ್ಕಂಡೇಯನಂತೆ ಶಿವಲಿಂಗವನ್ನು ತೋಳುಚಾಚಿ ಭುಜತುಂಬಿ ತಬ್ಬಿ ಮೃತ್ಯು ಜಯಿಸಬೇಕು, ಆಲಿಂಗನದಿಂದ ಆದ ಸ್ಪರ್ಶಸುಖದಿಂದ ಐಕ್ಯಾನಂದವನ್ನು ಆಸ್ವಾದಿಸಬೇಕು. ಇಲ್ಲದಿದ್ದರೆ ಅದೇತರ ಭಕ್ತಿ? ಇದನ್ನು ತಿಳಿಯದ ನನ್ನ ಜೀವನ ವ್ಯರ್ಥವಾಯಿತು. ಎಲೆ ಶಿವನೇ ನೀನೇ ನನ್ನನ್ನು ನಡೆಸಿಕೋ, ಕೂಡಿಕೋ ಎಂದು ಬಸವಣ್ಣನವರು ತಮ್ಮ ಭಕ್ತಿಸಾಮರ್ಥ್ಯವನ್ನು ಶಿವನಿಗೇ ನಿರ್ವಹಿಸಿ ಕೊಟ್ಟು-ಅವನೇ ತಮ್ಮನ್ನು ಪಾರವೈದಿಸಲೆಂದು ಪ್ರಾರ್ಥಿಸುತ್ತಿದ್ದು, ಭಕ್ತಿ ಮಾಡಿ ಭಗವಂತನಲ್ಲಿ ಒಂದಾಗುವಂತೆ ಕರೆ ನೀಡಿದ್ದಾರೆ.
ಸ್ವಾಮಿ ನೀನು, ಶಾಶ್ವತ ನೀನು: ಎತ್ತಿದೆಬಿರುದ ಜಗವೆಲ್ಲ ಅರಿಯಲು. ʼಮಹಾದೇವ, ಮಹಾದೇವ:ʼ ಇಲ್ಲಿಂದ ಮುಂದೆ ಶಬ್ದವಿಲ್ಲ! ಪಶುಪತಿ ಜಗಕ್ಕೆ ಏಕೋದೇವ, ಸ್ವರ್ಗ ಮರ್ತ್ಯ ಪಾತಾಳದೊಳಗೆ ಒಬ್ಬನೇ ದೇವ ಕೂಡಲಸಂಗಮದೇವ ಎಂದ ಬಸವಣ್ಣ ಶಿವನೋಬ್ಬನೇ ಸತ್ಯ ಎಂಬ ಮಾತನ್ನು ಹೇಳಿದ್ದಾರಲ್ಲದೆ, ಅವನೊಬ್ಬನೇ ಶಾಶ್ವತನು, ಅವನ ಹೊರತು ಇನ್ನೇನೂ ಇಲ್ಲ. ಜಗದಲ್ಲಿ ಅವನನ್ನು ದಾಟಿ ಬೇರೆನೂ ಸಾಧ್ಯವಿಲ್ಲ ಎಂದು ಅರುಹಿದ್ದಾರೆ. ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ, ರುದ್ರಪದವಿಯನೊಲ್ಲೆ: ನಾನು ಮತ್ತಾವ ಪದವಿಯನೊಲ್ಲೆನಯ್ಯಾ! ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯನೆ ಕರುಣಿಸಯ್ಯಾ ಎಂದ ಬಸವಣ್ಣನವರು ಭಕ್ತಿಯ ಉತ್ಕಟತೆ ತೋರಿದ್ದಾರೆ. ಅವರ ಹಗಲಿರುಳಿನ ಆಸೆ ಎಂದರೆ ಶಿವಶರಣರನ್ನು, ಜಂಗಮರನ್ನೂ ಉಪಚರಿಸುವ ಭಕ್ತನಾಗಿರುವುದೊಂದೇ. ಸದ್ಬಕ್ತ : ಶರಣ ಆಗಲೆಂದು ಮಾತ್ರ ಬಯಸಿದವರು ಬಸವಣ್ಣ. ಎಲ್ಲ ಸುಖಭೋಗಗಳನ್ನು ಅನುಭವಿಸಬಹುದಾದ ಸ್ಥಾನದಲ್ಲಿದ್ದರೂ ಯಾವುದಕ್ಕೂ ಅಂಟಿಕೊಳ್ಳದೇ ಭವದ ಭಾರ ನೂಕಿದವರು ಅವರು.
ಬಸವಣ್ಣನವರು ಯಾವ ಕಾರ್ಯವನ್ನು ಮಾಡಿದರೂ ಭಕ್ತಿಯಿಂದಲೇ ಮಾಡಿರುತ್ತಾರೆ. ಅವರ ವಚನಗಳನ್ನು ನೋಡಿದರೆ ಈ ಮಾತು ಸ್ಪಷ್ಟವಾಗಿ ತೋರುತ್ತಲಿದೆ. ಕೂಡಲಸಂಗನ ಭಕ್ತಿಯಿಲ್ಲದೆ ಅವರ ಯಾವ ವ್ಯವಹಾರವೂ ಇರುವದಿಲ್ಲ ಎಂದು ಬಸವಣ್ಣನವರ ಭಕ್ತಿಯ ಪ್ರಭಾವಾತಿಶಯವನ್ನು ಅವರ ಕಾಲದ ಶರಣರೂ, ವೀರಶೈವ ಕವಿಗಳೂ ಪರಿಪರಿಯಾಗಿ ಕೊಂಡಾಡಿದ್ದಾರೆ. ಇಂಥ ಬಸವಣ್ಣನವರ ಭಕ್ತಿ ಪರಾಕಾಷ್ಠೆಯ ಬಗ್ಗೆ, ಅಗಣಿತ ವ್ಯಕ್ತಿತ್ವದ ಬಗ್ಗೆ ಅಕ್ಕ ನಾಗಲಾಂಬಿಕೆ, "ಮರ್ತ್ಯಲೋಕದಲ್ಲಿ ಆ ಸದಾಚಾರದ ಬೆಳವಿಗೆಯ ಮಾಡಲೆಂದು ಬಸವಣ್ಣ ಬಂದು ಭಕ್ತಿಸ್ಥಲವ ಹರಹಿದ. ಗುರು ಲಿಂಗ ಜಂಗಮ ದಾಸೋಹ ಪಾದೋದಕ ಪ್ರಸಾದದ ಹಾದಿಯನೆಲ್ಲರಿಗೆ ತೋರಿದ. ಶಿವಾಚಾರವ ಬೆಳವಿಗೆಯ ಘನವನಹುದಲ್ಲವೆಂದು ಬಿಜ್ಜಳ ತರ್ಕಿಸಲು, ಅನಂತಮುಖದಿಂದ ಒಡಂಬಡಿಸಿ ಅಹುದೆನಿಸಿದ" ಎಂದು ಉಸುರಿದ್ದಾಳೆ. ಭಕ್ತಿಯ ತವನಿಧಿಯೆ, ಮುಕ್ತಿಯ ಮೂರುತಿಯೆ, ಲಿಂಗಜಂಗಮದ ಚೈತನ್ಯವೆ ನಿಮ್ಮನಗಲಿ ಎಂತು ಸೈರಿಸುವೆನು? ಎಂದ ಅಕ್ಕ ನಾಗಮ್ಮ ಬಸವಣ್ಣನನ್ನು ಎಂದೂ ಕ್ಷೀಣಿಸದ ಭಕ್ತಿಯ ತವನಿಧಿ ಎಂದು ಬಣ್ಣಿಸಿದ್ದಾಳೆ.
ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ !
ಅಯ್ಯಾ, ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು ?
ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು
ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ.
ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ.
ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ.
ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷಮೂರ್ತಿ ಬಸವಣ್ಣಾ.
ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ
ಪ್ರಾಣಲಿಂಗವಾಗಿ ಹೋದೆಯ ಸಂಗನಬಸವಣ್ಣ ಎಂದು ಬಸವಣ್ಣನೊಡನೆ ಭಕ್ತಿ ಬಂದಿತ್ತು, ಅವನಿಂದ ಜಗದೆಲ್ಲೆಡೆ ಪಸರಿಸಿತ್ತು, ಅವನು ಹೊರಟೊಡನೆ ಭಕ್ತಿಯೂ ಹೊರಟು ಹೋಗಿತ್ತು ಎಂದು ಜಗದ ಗುರುವಾದ ಬಸವಣ್ಣನವರ ಭಕ್ತಿಯ ಪರಾಕಾಷ್ಠೆಯನ್ನು, ಭಕ್ತಿ ಬಿತ್ತಿ ಬೆಳೆಯಲೆಂದೇ ಅವರು ಮರ್ತ್ಯಕ್ಕೆ ಬಂದಿದ್ದರೆಂದೂ, ಭಕ್ತಿಯಲ್ಲದೇ ಇನ್ನೇನನ್ನೂ ಮಾಡಲಿಲ್ಲವೆಂದು, ಉಳಿದೆಲ್ಲವೂ ಭಕ್ತಿಯ ಪ್ರಸರಣಕ್ಕೆ ಮಾಡಿದ ಮಹತ್ಕಾರ್ಯಗಳೆಂದೂ, ಆತ್ಮಸಾಕ್ಷಾತ್ಕಾರದ ಮಾರ್ಗವೊಂದೇ ಸತ್ಯವೆಂದು ಅಕ್ಕ ನಾಗಲಾಂಬಿಕೆ ನಂಬಿದ್ದಾಳೆ. ಸರಸಕವಿಸಾರ್ವಭೌಮನೂ, ವೀರಶೈವರ ಆದ್ಯಕವಿಯೂ ಆದ ಹರಿಹರೇಶ್ವರನು “ಸದ್ಭಕ್ತಿ ಸೂರೆಗಾರಂ'', "ಭಕ್ತ ಕುಲತಿಲಕಂ" ಎಂದು ತನ್ನ ಬಸವರಾಜದೇವರ ರಗಳೆಯಲ್ಲಿ ಕೊಂಡಾಡಿದ್ದಾನೆ. ಶರಣರು ಬಸವಣ್ಣನವರ ಮನೆಯಲ್ಲಿ ಲಿಂಗಾರ್ಚನೆ ಮಾಡುವ ಕಾಲದಲ್ಲಿ ತಮತಮಗೆ ಬೇಕಾದ ಪದಾರ್ಥಗಳನ್ನು ಬೇಡಿದರೂ "ಇಲ್ಲೆನ್ನದಚಳ" ಭಕ್ತಿ ಸಾಮ್ರಾಜ್ಯ ಚಕ್ರವರ್ತಿ ಬಸವಣ್ಣ ಎಂದು ಸಂಬೋಧಿಸಿದ್ದಾನೆ.
ಬಸವಣ್ಣನವರು ಆಚರಿಸುತ್ತಿದ್ದ ಭಕ್ತಿಯನ್ನು ಶಿಂಗಿರಾಜ ಪುರಾಣ ವಿಜಯಲ್ಲಿ "ದಾಸೋಹಕ್ಕೆ ಕಲ್ಪವೃಕ್ಷ, ಶರಣರು ಕಾಮಿಸಿದ್ದನ್ನು ಕೊಡುವುದಕ್ಕೆ ಕಾಮಧೇನು, ಶರಣರು ಚಿಂತಿಸಿದ್ದನ್ನು ಕೊಡುವುದಕ್ಕೆ ಚಿಂತಾರತ್ನವು, ಜಗತ್ತಿನ ಅಶುದ್ಧವನ್ನು ಶುದ್ಧ ಮಾಡುವದಕ್ಕೆ ಸಿದ್ಧರಸ, ಪುರುಷಾಕಾರವನ್ನು ಹೊಂದಿದ ಪರುಷವು" ಎಂದು ಬಣ್ಣಿಸಿದ್ದಾನೆ ಶಿಂಗಿರಾಜ. ಈ ಕಾಲಕ್ಕೆ ಬಸವಣ್ಣನವರನ್ನು ಕ್ರಾಂತಿಕಾರಿ ಎಂದು ಅನೇಕರು ಹೇಳುವುದುಂಟು. ಆದರೆ, ಬಸವಣ್ಣನೊಬ್ಬ ಭಕ್ತಿಭಂಡಾರಿ, ಜಗತ್ತಿಗೆ ಭಕ್ತಿಯ ಬೆಳವಿಗೆಯ ಪ್ರಕಾಶವನ್ನು ಬೀರಿದ ಮಹಾಯೋಗಿ, ವಿಶ್ವದೆಲ್ಲೆಡೆ ಶಿವತ್ವವನ್ನು ಪಸರಿಸಿದ ಪ್ರಚಾರಕ, ಭಗವಂತನಲ್ಲಿ ಶ್ರದ್ಧೆ ಜಾಗೃತಗೊಳಿಸಿದ ವಿಶ್ವಗುರು, ಜಗಕೆ ಕಾಯಕದ ಮಹತ್ವವನ್ನು, ಮುಕ್ತಿಯ ತತ್ವವನ್ನು, ದಾಸೋಹದ ಶ್ರೇಷ್ಠತೆಯನ್ನು, ಆಧ್ಯಾತ್ಮದ ಸತ್ವವನ್ನು ತೋರಿದ ಜಗಜ್ಯೋತಿ. ಬಸವಣ್ಣನ ಭಕ್ತಿ ನಮಗೆಲ್ಲ ಜೀವನ್ಮುಕ್ತಿಯ ಮಾರ್ಗವಾಗಲಿ. ಭಕ್ತಿಯ ಪರುಷಮಣಿ ಬಸವಪ್ರಭುವಿನ ತತ್ವ ನಮ್ಮೊಳಗೆ ಹೊಕ್ಕು, ಶಿವನಲ್ಲಿನ ಭಕ್ತಿ ನೂರ್ಮಡಿಯಾಗಲಿ.
- ಕಿರಣಕುಮಾರ ವಿವೇಕವಂಶಿ, ಯುವವಾಗ್ಮಿ
kirankumardodmani2016@gmail.com


