ಸನಾತನ ಧರ್ಮದ ಶುದ್ಧ ಸ್ಪಟಿಕದ ಮೂಲಕ ಭಕ್ತಿ ಭಂಡಾರಿ ಬಸವೇಶ್ವರರನ್ನು ನೋಡಬೇಕಾಗಿದೆ ಹೊರತು ವಸಾಹತುಶಾಹಿ ಮತ್ತು ಮಾರ್ಕ್ಸವಾದಿ ವ್ಯಾಖ್ಯಾನಗಳ ವಕ್ರ ದೃಷ್ಟಿಯಿಂದ ಅಲ್ಲ. ಮಾರ್ಕ್ಸ್‌ವಾದಿಗಳು ಅವರಿಗೆ ಕೇವಲ "ಸಾಮಾಜಿಕ ಸುಧಾರಕ" ಎಂದು ಹಣೆಪಟ್ಟಿ ಕಟ್ಟಿದ್ದರೂ, ಬಸವಣ್ಣನವರು 12ನೇ ಶತಮಾನದ ಭರತವರ್ಷದಲ್ಲಿ ಭಕ್ತಿ ಪಂಥವನ್ನು ಪುನರುಜ್ಜೀವನಗೊಳಿಸಿದ, ಹಿಂದೂ ಧರ್ಮಕ್ಕೆ ಶಕ್ತಿ ತುಂಬಿದ ಒಬ್ಬ ಶ್ರೇಷ್ಠ ತತ್ವಜ್ಞಾನಿ. 

ಸನಾತನ ಧರ್ಮದ ಶುದ್ಧ ಸ್ಪಟಿಕದ ಮೂಲಕ ಭಕ್ತಿ ಭಂಡಾರಿ ಬಸವೇಶ್ವರರನ್ನು ನೋಡಬೇಕಾಗಿದೆ ಹೊರತು ವಸಾಹತುಶಾಹಿ ಮತ್ತು ಮಾರ್ಕ್ಸವಾದಿ ವ್ಯಾಖ್ಯಾನಗಳ ವಕ್ರ ದೃಷ್ಟಿಯಿಂದ ಅಲ್ಲ. ಮಾರ್ಕ್ಸ್‌ವಾದಿಗಳು ಅವರಿಗೆ ಕೇವಲ "ಸಾಮಾಜಿಕ ಸುಧಾರಕ" ಎಂದು ಹಣೆಪಟ್ಟಿ ಕಟ್ಟಿದ್ದರೂ, ಬಸವಣ್ಣನವರು 12ನೇ ಶತಮಾನದ ಭರತವರ್ಷದಲ್ಲಿ ಭಕ್ತಿ ಪಂಥವನ್ನು ಪುನರುಜ್ಜೀವನಗೊಳಿಸಿದ, ಹಿಂದೂ ಧರ್ಮಕ್ಕೆ ಶಕ್ತಿ ತುಂಬಿದ ಒಬ್ಬ ಶ್ರೇಷ್ಠ ತತ್ವಜ್ಞಾನಿ. 

ಬಸವಣ್ಣನವರ ಮಾರ್ಗ ಶಿವ ಭಕ್ತಿ ಪ್ರಣೀತ ಅಧ್ಯಾತ್ಮದ್ದಾಗಿತ್ತು, ಅವರದ್ದು ಸಮಾಜೋ ರಾಜಕೀಯ ಚಿಂತನೆ ಅಲ್ಲ. ಅವರ ದಿವ್ಯ ವಚನಗಳು, ಅನುಭಾವದ ಗದ್ಯ-ಕವಿತೆಗಳು. ಶಿವನ ಕುರಿತು ಆಳವಾದ ಹಂಬಲ, ಅವರ ಜೀವನ ಶುದ್ಧ ಭಕ್ತಿಯ ಪ್ರತಿಬಿಂಬವಾಗಿವೆ. ವರ್ಗ ಸಂಘರ್ಷ ಅಥವಾ ಸಾಮಾಜಿಕ ಬದಲಾವಣೆ ಅವರ ಉದ್ದೇಶಗಳಾಗಿರಲಿಲ್ಲ ಎಂಬುದು ಸ್ಪಷ್ಟ.

ಇಂದು, ಬಸವಣ್ಣನವರ ನಿಜವಾದ ಪರಂಪರೆಯನ್ನು ಮಾರ್ಕ್ಸವಾದಿ ತಪ್ಪು ವ್ಯಾಖ್ಯಾನಗಳಿಂದ ಮರಳಿ ಪಡೆಯುವ ಅಗತ್ಯವಿದೆ. ಅವರನ್ನು "ಮೊದಲ ಕಮ್ಯುನಿಸ್ಟ್ ಚಿಂತಕ" ಎಂದು ಚಿತ್ರಿಸುವುದು ದೊಡ್ಡ ಮೂರ್ಖತನ. ಬಸವಣ್ಣನವರು ರಾಜಕೀಯ ಕಾರ್ಯಕರ್ತರಲ್ಲ, ಶಿವಶರಣರು. ಶಿವನಿಗೆ ಸಂಪೂರ್ಣವಾಗಿ ಶರಣಾದ ಒಬ್ಬ ಆತ್ಮಾನ್ವೇಷಕ, ಮಹಾ ವಿಭೂತಿ ಪುರುಷ.

ಶಿವ ಭಕ್ತಿಯಲ್ಲಿ ನೆಲೆಸಿದ ಜೀವನ

ಬಸವಣ್ಣನವರ ಸಂಪೂರ್ಣ ಜೀವನ ಕೂಡಲಸಂಗಮ ದೇವ (ಶಿವನ ರೂಪ)ನ ಭಕ್ತಿ ಕೇಂದ್ರಿತವಾಗಿತ್ತು. ಸದಾ ಧರಿಸುವ ಇಷ್ಟಲಿಂಗ ಶಿವಚೈತನ್ಯದ ಪ್ರತೀಕವಾಗಿದೆ. "ಕೂಡಲಸಂಗಮದೇವಾ, ನೀವೇ ಸತ್ಯ, ನಿಮ್ಮ ನೆನಹೇ ಸತ್ಯ” ಎಂಬ ವಚನ, ಇದು ಯಾವುದೇ ಸಾಮಾಜಿಕ ಘೋಷಣೆಯಲ್ಲ. ಇದು ವೇದಾಂತಿಕ ಸತ್ಯದ ಘೋಷಣೆ. ಶಿವ ಮಾತ್ರ ಸತ್ಯ, ಉಳಿದದ್ದೆಲ್ಲ ಅನಿತ್ಯ. 

ಇನ್ನೊಂದು ವಚನದಲ್ಲಿ “ಉಳ್ಳವರು ಶಿವಾಲಯವ ಮಾಡುವರಯ್ಯಾ” ಎಂದು ದೇಹವನ್ನು ದೇಗುಲವಾಗಿಸುವ ಪರಿ ಹೇಳುತ್ತಾರೆ. ಇಲ್ಲಿ ಬಸವಣ್ಣನವರು ಶುಷ್ಕ ಬಾಹ್ಯ ಆಚರಣೆಗಳ ಬದಲು ಅಂತರಂಗ ಭಕ್ತಿಯನ್ನು, ಉಪನಿಷತ್ತುಗಳಲ್ಲಿ ಹೇಳಿದ ಆಂತರಿಕ ಅರಿವಿನ ಸಂದೇಶವನ್ನು ನೀಡುತ್ತಾರೆ.

ಅವರದ್ದು ಸಮಾಜವಾದವಲ್ಲ, ಅಧ್ಯಾತ್ಮದ ಹಾದಿ

ಮಾರ್ಕ್ಸ್‌ವಾದಿ ಇತಿಹಾಸಕಾರರು ಬಸವಣ್ಣನವರನ್ನು "ರಾಜಸತ್ತೆಯ ದಮನದ ವಿರುದ್ಧ ಹೋರಾಡಿದ ಸುಧಾರಕ" ಎಂದು ತಪ್ಪಾಗಿ ಚಿತ್ರಿಸುತ್ತಾರೆ. ಇದು ತಪ್ಪು ವ್ಯಾಖ್ಯಾನ. ಬಸವಣ್ಣನವರ ಕರೆ ಆಂತರಿಕ ಶುದ್ಧಿಗಾಗಿತ್ತು, ರಾಜಕೀಯ ಬಂಡಾಯಕ್ಕಲ್ಲ. ಅವರ ಕಾಯಕ (ಭಕ್ತಿಕೂಡಿದ ಕರ್ಮ) ಮತ್ತು ದಾಸೋಹ (ನಿಸ್ವಾರ್ಥ ಸೇವೆ) ಆಧ್ಯಾತ್ಮಿಕ ತತ್ವಗಳು, ರಾಜಕೀಯ ಸಿದ್ಧಾಂತಗಳಲ್ಲ. ಬಸವಣ್ಣನವರು ಕೈಲಾಸವನ್ನು ನಿರಾಕರಿಸಲಿಲ್ಲ ಬದಲಾಗಿ "ಕಾಯಕವೇ ಕೈಲಾಸ'' ಕಾಯಕವೇ ಶಿವನ ನಿವಾಸ ಎಂದರು.

ಮಾರ್ಕ್ಸ್‌ವಾದಿಗಳು ಭೌತಿಕ ಕೆಲಸವನ್ನು "ಆರ್ಥಿಕ ಕ್ರಾಂತಿಯ ಸಾಧನ" ಎಂದು ನೋಡಿದರೆ, ಬಸವಣ್ಣನವರು ಕಾಯಕ ಮೋಕ್ಷದ ಪವಿತ್ರ ಮಾರ್ಗ ಎಂದಿದ್ದಾರೆ. ಕಾಯಕವು ವರ್ಗ ಸಂಘರ್ಷದ ಶಸ್ತ್ರವಲ್ಲ, ಭಗವಂತನನ್ನು ಕಾಣುವ ಮಾರ್ಗ. ಅಂತೆಯೇ, ದಾಸೋಹ ಈಶ್ವರಾರ್ಪಣೆಯಾಗಿತ್ತು, ಕಿತ್ತುಕೊಂಡು ಕೊಡುವ ಉಚಿತ ಭಾಗ್ಯಗಳಲ್ಲ. "ಉಣ್ಣುವಾಗ ಲಿಂಗವ ನೆನೆ, ಇಟ್ಟಾಗ ಜಂಗಮವ ನೆನೆ. ತಿನ್ನುವಾಗ ಶಿವನನ್ನು ನೆನೆ, ಕೊಡುವಾಗ ಜಂಗಮನನ್ನು ನೆನೆ" ಎನ್ನುವಂತಹ ಮಾತುಗಳು ಇದನ್ನು ನೆನಪಿಸುತ್ತವೆ. ಇಂತಹ ಬೋಧನೆಗಳು, ದೈವಾರ್ಪಿತ ನಿಸ್ವಾರ್ಥ ಕರ್ಮ ಯಜ್ಞದಂತಹ ಹಿಂದೂ ಆದರ್ಶವಾಗಿದೆ. ಇದು ಕಮ್ಯುನಿಸಂನ ಬಲಪ್ರಯೋಗದ ಭೋಗವಾದಕ್ಕೆ ವಿರುದ್ಧವಾದ ಸಂಗತಿ.

ಬಾಹ್ಯ ಆಚರಣೆಗಿಂತ ಆಂತರಿಕ ಶುದ್ಧಿ ಬಸವಣ್ಣನವರ ಆದ್ಯತೆ. ಅರ್ಥಹೀನ ಆಚರಣೆಗಳನ್ನು ಟೀಕಿಸಿದರೂ, ಧರ್ಮವನ್ನು ಎಂದೂ ತಿರಸ್ಕರಿಸಲಿಲ್ಲ. ಅವರು ಅಂತಃಕರಣವನ್ನು ಭಕ್ತಿಯ ಮೂಲಕ ಶುದ್ಧಿಗೊಳಿಸಲು ಬಯಸಿದರು. ಬಾಹ್ಯ ಅಶುದ್ಧತೆ ತೊಳೆದರೆ ಹೋಗುತ್ತದೆ, ಮನಸ್ಸಿನ ಅಶುದ್ಧತೆ ಭಕ್ತಿಯಿಲ್ಲದೆ ಹೋಗದು ಎಂದರು. ಅವರು ಧಾರ್ಮಿಕ ಜೀವನವನ್ನು ತ್ಯಜಿಸಲು ಹೇಳಲಿಲ್ಲ, ಬದಲಾಗಿ ಸಂಪೂರ್ಣವಾಗಿ ಹಿಂದೂ ಚಿಂತನೆಯ ಚೌಕಟ್ಟಿನೊಳಗೆ, ಅದನ್ನು ಶುದ್ಧಿ ಮತ್ತು ಆಧ್ಯಾತ್ಮೀಕರಣ ಮಾಡಲು ತಿಳಿಸಿದರು.

ಬಸವಣ್ಣನವರು ಮಾರ್ಕ್ಸ್‌ವಾದಿ ಪ್ರತೀಕವಲ್ಲ

ಬಸವಣ್ಣನವರನ್ನು ಕಾರ್ಲ್‌ಮಾರ್ಕ್ಸ್ ಅಥವಾ ಆಧುನಿಕ ರಾಜಕೀಯ ಚಿಂತಕರೊಂದಿಗೆ ಹೋಲಿಸುವುದು ನಾವು ಅವರಿಗೆ ಮಾಡುವ ದೊಡ್ಡ ಅವಮಾನ. ಮಾರ್ಕ್ಸ್‌ವಾದವು ನಾಸ್ತಿಕ, ಈಶ್ವರನ ಅಸ್ತಿತ್ವವನ್ನೇ ನಿರಾಕರಿಸುತ್ತದೆ. ಬಸವಣ್ಣನವರು ಪ್ರತಿ ಉಸಿರನ್ನು ಶಿವನಿಗೆ ಅರ್ಪಿಸಿದವರು.

ಮಾರ್ಕ್ಸ್‌ವಾದವು ವರ್ಗ ಸಂಘರ್ಷವನ್ನು ಬೋಧಿಸುತ್ತದೆ; ಆದರೆ ಬಸವಣ್ಣನವರು ಸಾರ್ವತ್ರಿಕ ಪ್ರೀತಿಯನ್ನು ಆಧ್ಯಾತ್ಮಿಕ ಅರಿವಿನ ಮೂಲಕ ಬೋಧಿಸಿವರು. ಕಮ್ಯುನಿಸಂ ಬಲದಿಂದ ಸಮಾನತೆ ಬಯಸಿದರೆ, ಬಸವಣ್ಣನವರು ಎಲ್ಲ ಜೀವಿಗಳಲ್ಲಿಯೂ ದಿವ್ಯತ್ವದ ಅರಿವಿನ ( ಸರ್ವ ಭೂತ ಆತ್ಮ ಭವ) ಮೂಲಕ ಆಧ್ಯಾತ್ಮಿಕ ಸಮಾನತೆ ಬಯಸಿವರು. ಆದ್ದರಿಂದ, ಅವರನ್ನು ಕೇವಲ "ಸಾಮಾಜಿಕ ಸುಧಾರಕ" ಎಂದು ಕರೆಯುವುದು ತಪ್ಪು ಮಾತ್ರವಲ್ಲ, ಅದು ಅವರ ಪವಿತ್ರ ಪರಂಪರೆಗೆ ಮಾಡುವ ಅಪಮಾನ.

ಬಸವಣ್ಣನವರ ನಿಜವಾದ ಪರಂಪರೆ

ಬಸವಣ್ಣನವರ ಅನುಭವ ಮಂಟಪವನ್ನು ಸರಳವಾಗಿ "ಪ್ರಜಾಪ್ರಭುತ್ವದ ಮೊದಲ ಸಂಸತ್ತು" ಎಂದು ವರ್ಣಿಸಲಾಗುತ್ತದೆ. ಆದರೆ ನಿಜವಾಗಿ, ಅದು ಒಂದು ಧಾರ್ಮಿಕ ಸಭೆ, ಶಿವಶರಣರ ಸತ್ಸಂಗ ಮತ್ತು ಆತ್ಮ ವಿಚಾರದ (ಆಧ್ಯಾತ್ಮಿಕ ಚರ್ಚೆ) ಸ್ಥಳವಾಗಿತ್ತು. ಅದು ಸಾಮಾಜಿಕ ವೇದಿಕೆಯಲ್ಲ, ಆಧ್ಯಾತ್ಮಿಕ ವೇದಿಕೆ.

ಈ ಬಸವ ಜಯಂತಿಯಂದು, ಬಸವಣ್ಣನವರ ಮೂಲ ತತ್ವಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಒಬ್ಬ ಮಹಾತ್ಮ, ದ್ರಷ್ಟಾರ ಮತ್ತು ಶ್ರೇಷ್ಠ ಭಕ್ತನನ್ನು 19ನೇ ಶತಮಾನದ ರಾಜಕೀಯ ಮತ್ತು ಭೋಗವಾದದ ಸಿದ್ಧಾಂತಗಳ ಪೆಟ್ಟಿಗೆಗೆ ಸೀಮಿತಗೊಳಿಸಿದರೋಣ.

ಬಸವಣ್ಣನವರು ಹೇಳಿದಂತೆ:

"ಕಲಿಸಿ ಕಾಣೋ ಕೂಡಲಸಂಗಮದೇವಾ, ನಿನ್ನ ಶರಣರ ಸಂಗವೇ ಮೋಕ್ಷ. ಕೂಡಲಸಂಗಮದೇವ, ನಿನ್ನ ಭಕ್ತರ ಸಹವಾಸವೇ ಮೋಕ್ಷ". 

ಇಂದು ಹಿಂದೂ ತತ್ವಜ್ಞಾನಿ ಬಸವೇಶ್ವರರ ಜಯಂತಿ. ಈ ಶುಭದಿನದಂದು ಅವರ ಜೀವನ ಮತ್ತು ಸಂದೇಶವನ್ನು ನಿಜಾರ್ಥದಲ್ಲಿ ತಿಳಿದು ನಡೆಯಬೇಕಾಗಿದೆ. ಬಸವಣ್ಣನವರಂಥ ಮಹಾನ್ ಭಕ್ತರ ಸಂಗವನ್ನು ಹುಡುಕೋಣ, ಮತ್ತು ಭಕ್ತಿ, ಧರ್ಮ ಮತ್ತು ದಿವ್ಯ ಪ್ರೇಮದ ಮಾರ್ಗವನ್ನೇ ಹಿಡಿಯೋಣ — ಭೌತಿಕವಾದಿ, ನಾಸ್ತಿಕ ಮತ್ತು ಭೋಗದ ಸಿದ್ಧಾಂತಗಳಿಂದ ದೂರ ಸರಿಯೋಣ.

ಡಾ. ನಿರಂಜನ ಬಿ. ಪೂಜಾರ
ಸಹಾಯಕ ಪ್ರಾಧ್ಯಾಪಕ
ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ.