ಕಳೆದ 4-5 ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯಗಳಿಗೆ ಕನ್ನಡ ಪುಸ್ತಕಗಳ ಸಗಟು ಖರೀದಿ ಆಗಿಲ್ಲ ಎಂಬುದು ಮಾಧ್ಯಮಗಳ ಮುಖಾಂತರ ತಮ್ಮ ಗಮನಕ್ಕೆ ಬಂದಿದೆ. ಅನೇಕ ಪ್ರಕಾಶಕರು ಈ ವಿಷಯದ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ.

ಬೆಂಗಳೂರು (ನ.02): ಸಾರ್ವಜನಿಕ ಗ್ರಂಥಾಲಯಗಳಿಗೆ ಕನ್ನಡ ಪುಸ್ತಕಗಳನ್ನು ಸಗಟು ಖರೀದಿ ಮಾಡುವಂತೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಕಳೆದ 4-5 ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯಗಳಿಗೆ ಕನ್ನಡ ಪುಸ್ತಕಗಳ ಸಗಟು ಖರೀದಿ ಆಗಿಲ್ಲ ಎಂಬುದು ಮಾಧ್ಯಮಗಳ ಮುಖಾಂತರ ತಮ್ಮ ಗಮನಕ್ಕೆ ಬಂದಿದೆ. ಅನೇಕ ಪ್ರಕಾಶಕರು ಈ ವಿಷಯದ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ. ನಾಡಿನಲ್ಲಿ ಓದುವ ಸಂಸ್ಕೃತಿ ಬೆಳೆಯಬೇಕು. ಯುವ ಜನರು ಮೊಬೈಲ್ ನಲ್ಲಿ ಕಳೆದುಹೋಗುವ ಬದಲು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಓದಿನ ಸಂಸ್ಕೃತಿ ಉತ್ತೇಜಿಸುವ ಕೆಲಸ ಎಲ್ಲರೂ ಸೇರಿ ಮಾಡಬೇಕಿದೆ. ವಿಫುಲವಾಗಿ ಬೆಳೆದಿರುವ ಕನ್ನಡ ಸಾಹಿತ್ಯವನ್ನು ಮಾತೃ ಪ್ರೀತಿಯಿಂದ ನೋಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದ್ದಾರೆ. ಸಾಮಾನ್ಯರು ಓದುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಭಾಷಾಭಿಮಾನ ಬೆಳೆಸುವ, ಸಾಹಿತ್ಯಾಸಕ್ತಿ ಸೃಷ್ಟಿಸುವ ಕೆಲಸ ಆಗಬೇಕಿದೆ. ಪುಸ್ತಕ ಸಂಸ್ಕೃತಿ ಬೆಳೆದಷ್ಟು ಭಾಷೆ ಸದೃಢವಾಗಿ ಬೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಂಡು ಕನ್ನಡ ಪುಸ್ತಕಗಳ ಸಗಟು ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

ಖಾತಾ ಪರಿವರ್ತನೆ ಬೋಗಸ್‌: ‘ಬಿ’ ಖಾತಾದಿಂದ ‘ಎ’ ಖಾತಾ ಪರಿವರ್ತನೆ ಎನ್ನುವುದೇ ಬೋಗಸ್‌. ಖಜಾನೆ ಖಾಲಿ ಆಗಿರುವುದರಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರ ದುಡ್ಡು ಹೊಡೆಯಲು ಈ ಸುಲಿಗೆ ಕಾರ್ಯಕ್ರಮ ತಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಯಾರೂ ಖಾತಾ ಬದಲಾವಣೆ ಮಾಡಿಸಿಕೊಳ್ಳಲು ಹಣ ಕಟ್ಟಬೇಡಿ. ಎರಡು ವರ್ಷಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕಡಿಮೆ ದರದಲ್ಲಿ ನಿಮಗೆ ಖಾತೆ ಮಾಡಿಕೊಡುತ್ತೇವೆ. ಈ ಸರ್ಕಾರದ ಬೋಗಸ್ ಆಮಿಷಕ್ಕೆ ಮರುಳಾಗಬೇಡಿ ಎಂದೂ ಅವರು ಮನವಿ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಜನರನ್ನು ಸುಲಿಗೆ ಸರಕನ್ನಾಗಿ ಮಾಡಿಕೊಂಡಿದೆ. ನಿಮ್ಮನ್ನು ಉಳಿಸುವ, ನಿಮ್ಮ ಹಿತ ಕಾಯುವ ಜವಾಬ್ದಾರಿ ನಮ್ಮದು. ಎರಡು ವರ್ಷ ಕಳೆದ ಬಳಿಕ ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಅತ್ಯಂತ ಸರಳ, ಸುಲಭವಾಗಿ ಖಾತೆ ಮಾಡಿಕೊಡುತ್ತೇವೆ. ನಿಮಗೆ ಯಾವುದೇ ಹಣಕಾಸಿನ ಹೊರೆ ಆಗುವುದಿಲ್ಲ ಎಂದು ಹೇಳಿದರು.

ಇದು 6ನೇ ದೋಖಾ ಗ್ಯಾರಂಟಿ

ಈಗಾಗಲೇ ಬೆಲೆ ಏರಿಕೆ ಮತ್ತು ತೆರಿಗೆ ಹೇರಿಕೆಯಿಂದ ಜನತೆ ಬಸವಳಿದಿದ್ದಾರೆ. ಈ ಹೊತ್ತಲ್ಲಿ ರಾಜ್ಯ ಸರ್ಕಾರ ‘ಎ’ ಖಾತಾ ಬಗ್ಗೆ ದೀಪಾವಳಿ ಕೊಡುಗೆ ಎಂದು ಪುಟಗಟ್ಟಲೆ ಜಾಹೀರಾತು ನೀಡಿದೆ. ‘ಎ’ ಖಾತಾ ಎನ್ನುವ ದೋಖಾ ಕಾರ್ಯಕ್ರಮವನ್ನು 6ನೇ ಗ್ಯಾರಂಟಿಯಾಗಿ ಜನರಿಗೆ ದೀಪಾವಳಿ ಉಡುಗೊರೆ ಕೊಟ್ಡಿದ್ದೇವೆ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೇಳಿದ್ದಾರೆ. ದೀಪಾವಳಿ ಕೊಡುಗೆ ಎಂದರೆ ಜನರಿಂದ ಲಕ್ಷ ಲಕ್ಷ ಪೀಕುವುದೇ ಎಂದು ಇದೇ ವೇಳೆ ಕುಮಾರಸ್ವಾಮಿ ಪ್ರಶ್ನಿಸಿದರು.