ಶಿಕಾರಿಪುರ [ನ.07]: ಕರಾರಿನಂತೆ ಗ್ರಾಪಂ ಅಧ್ಯಕ್ಷ ಸ್ಥಾನವನ್ನು ನೀಡದೆ ಸಬೂಬು ಹೇಳುವ ಬಿಜೆಪಿ ಮುಖಂಡರ ವರ್ತನೆಗೆ ಬೇಸತ್ತು ಸಾಲೂರು ಗ್ರಾಪಂನಲ್ಲಿ ಬಿಜೆಪಿ ಅಧಿಕಾರಗಳಿಸಲು ನೀಡಿದ ಬೆಂಬಲವನ್ನು ವಾಪಸ್‌ ಪಡೆಯುತ್ತಿರುವುದಾಗಿ ಸಾಲೂರು ಗ್ರಾಪಂ ಸದಸ್ಯೆ ರೇಣುಕಮ್ಮ ಪರಸಪ್ಪ ಸ್ಪಷ್ಟಪಡಿಸಿದರು.

ಬುಧವಾರ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲೂರು ಗ್ರಾಪಂ 13 ಸದಸ್ಯ ಬಲದಲ್ಲಿ ಬಿಜೆಪಿ ಬೆಂಬಲಿತ 6 ಸದಸ್ಯರಿದ್ದಾರೆ. 4 ವರ್ಷದ ಹಿಂದೆ ಗ್ರಾಪಂ ಅಧಿಕಾರದ ಗದ್ದುಗೆಯನ್ನು ಏರುವ ತವಕದಲ್ಲಿದ್ದ ಬಿಜೆಪಿ ಮುಖಂಡರು ಪ.ಜಾತಿಗೆ ಮೀಸಲಾದ ಅಧ್ಯಕ್ಷ ಹುದ್ದೆಗೆ ಮೂವರು ಅರ್ಹರಿದ್ದ ಕಾರ​ಣ ಪ್ರತಿಯೊಬ್ಬರಿಗೂ ತಲಾ 20 ತಿಂಗಳ ಅವಧಿಯನ್ನು ನೀಡುವುದಾಗಿ ವಾಗ್ದಾನ ಮಾಡಿ​ದ್ದರು. ಇದೀಗ ಜಾಣ ಕಿವುಡು ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಮುಖಂಡರ ವಾಗ್ದಾನ ನಂಬಿಕೊಂಡು ಪ್ರಥಮ ಅವಧಿಗೆ ಚಿಕ್ಕಸಾಲೂರು ಗ್ರಾಮದಿಂದ ಆಯ್ಕೆಯಾದ ಕೇಶವರನ್ನು ಅಧ್ಯಕ್ಷರಾಗಲು ಬೆಂಬಲಿಸಿದ್ದಾಗಿ ತಿಳಿಸಿದ ಅವರು ಅವಧಿ ಪೂರ್ಣಗೊಂಡ ನಂತರದಲ್ಲಿ 2 ನೇ ಅವಧಿಗೆ ನೀಡಿದ ವಾಗ್ದಾನದಂತೆ ಅಧ್ಯಕ್ಷ ಹುದ್ದೆಯನ್ನು ವಿವಿಧ ಸಬೂಬು ಹೇಳಿಕೊಂಡು ತಪ್ಪಿಸಲಾಗಿದ್ದು, ಇದೀಗ 3ನೇ ಅವಧಿಗೂ ಬಿಜೆಪಿ ಮುಖಂಡರು ಅಧ್ಯಕ್ಷ ಹುದ್ದೆಯನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಗಾಗಲೇ ನೀಡಲಾದ ವಾಗ್ದಾನಕ್ಕೆ ಮೋಸ ಮಾಡದೆ ಉಳಿದ ಅಲ್ಪಾವಧಿಗೆ ಅಧ್ಯಕ್ಷರಾಗಿ ಗ್ರಾಮದ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಪರಿಪರಿಯಾಗಿ ವಿನಂತಿಸಿದರೂ ಬಿಜೆಪಿಯ ತಾಲೂಕು ಮಟ್ಟದ ಮುಖಂಡರು ಸ್ಪಂದಿಸುತ್ತಿಲ್ಲ. ಗ್ರಾಪಂ ಗೆ ಸ್ವತಂತ್ರವಾಗಿ ಆಯ್ಕೆಯಾಗಲು ಮತದಾರರು ಕಾರಣರಾಗಿದ್ದು, ಮತದಾರರ ಗೌರವ ಕಾಪಾಡಲು ನಿರ್ಧರಿಸಿ ಬೆಂಬಲ ವಾಪಸ್‌ ಪಡೆಯುತ್ತಿದ್ದು ಬಿಜೆಪಿ ಮುಖಂಡರ ವರ್ತನೆ ಬಗ್ಗೆ ರೋಸಿಹೋಗಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪತಿ ಪರ​ಸ​ಪ್ಪ, ನಿವೃತ್ತ ಶಿಕ್ಷಕ ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ನವೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ