ಶರಾವತಿ ಹಿನ್ನೀರಿನ ಜನರಿಗೆ ಸಿಗಂದೂರು ಸೇತುವೆ ಲೋಕಾರ್ಪಣೆ ಸಂಭ್ರಮ ತಂದಿದೆ. 470 ಕೋಟಿ ವೆಚ್ಚದ ಈ ಸೇತುವೆ ಜುಲೈ 14 ರಂದು ಲೋಕಾರ್ಪಣೆಯಾಗಲಿದ್ದು, ಸ್ಥಳೀಯರಿಗೆ ಸಂಪರ್ಕ ಸುಧಾರಣೆಯಾಗಲಿದೆ.

ಬೆಂಗಳೂರು (ಜು.5): ರಾಜ್ಯದ ಜನರ ಬಾಳಿನಲ್ಲಿ ಬೆಳಕು ಮೂಡುವ ನಿಟ್ಟಿನಲ್ಲಿ ತನ್ನೂರನ್ನು ತ್ಯಾಗ ಮಾಡಿದ್ದ ಶರಾವತಿ ಹಿನ್ನೀರ (Sharavathi backwater) ಜನರಿಗೆ ಖುಷಿ ಸುದ್ದಿ ಸಿಕ್ಕಿದೆ. 470 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಳಸವಳ್ಳಿ- ಅಂಬಾರಗೋಡ್ಲು ಸೇತುವೆ (Kalasavalli-Ambaragodu Bridge) ಅಥವಾ ಸಿಗಂದೂರು ಸೇತುವೆ (Sigandur Bridge) ಕಾಮಗಾರಿ ಮುಕ್ತಾಯವಾಗಿದ್ದು ಜು.14 ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶಿವಮೊಗ್ಗ (Shivamogga) ಸಂಸದ ಬಿವೈ ರಾಘವೇಂದ್ರ (BY Raghavendra) ಮಾಹಿತಿ ನೀಡಿದ್ದಾರೆ.

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಡಿ ಕೂಡ ಭಾಗಿಯಾಗಲಿದ್ದಾರೆ. ಸೇತುವೆ ಲೋಕಾರ್ಪಣೆಯಾಗುತ್ತಿರವ ಹೊತ್ತಿನಲ್ಲಿ ನಮ್ಮದೊಂದು ಮನವಿ ಇದೆ. ಈ ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರು ಇಡಲು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಹೇಳಿದ್ದಾರೆ.

ಲಿಂಗನಮಕ್ಕಿಯಲ್ಲಿ ಜಲಾಶಯ ನಿರ್ಮಾಣವಾದ ಬಳಿಕ ಇಲ್ಲಿ ಸಂಪರ್ಕಕ್ಕೆ ಭಾರಿ ತೊಂದರೆಯಾಗಿತ್ತು. ಹೋರಾಟಗಾರರ ತಪಸ್ಸಿನ ಫಲ. ಮಾಜಿ ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ಮುಖಂಡರ ಪ್ರಯತ್ನದ ಫಲದಿಂದ ಈ ಸೇತುವೆ ನಿರ್ಮಾಣವಾಗಿದೆ ಎಂದು ರಾಘವೇಂದ್ರ ತಿಳಿಸಿದ್ದಾರೆ. ದಿಲೀಪ್‌ ಬಿಲ್ಡ್‌ ಎನ್ನುವ ಕಂಪನಿಯು ಈ ಸೇತುವೆ ನಿರ್ಮಾಣದ ಉಸ್ತುವಾರಿ ಹೊತ್ತುಕೊಂಡಿತ್ತು.

ದೇಶದ 2ನೇ ಅತಿ ಉದ್ದದ ಕೇಬಲ್‌ ಆಧಾರಿತ ಸೇತುವೆ

ಇದು ದೇಶದ ಎರಡನೇ ಅತೀ ಉದ್ದದ ಕೇಬಲ್ ಆಧಾರಿತ ಸೇತುವೆ ಆಗಿದ್ದು, 470 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಸೇತುವೆ ಸುಮಾರು 2.14 ಕಿ.ಮೀ ಉದ್ದ ಹಾಗೂ 16 ಮೀಟರ್ ಅಗಲವಿದೆ. ಸೇತುವೆ ಕಾಮಗಾರಿಯು 2020ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿತ್ತು. ಆದರೆ, ಕೋವಿಡ್‌ ಸಾಂಕ್ರಾಮಿಕ ಹಾಗೂ ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದ ಹಿನ್ನೀರು ಸಂಗ್ರಹವಾಗಿದ್ದ ಕಾರಣದಿಂದ ಕಾಮಗಾರಿ ನಿಧಾನವಾಗಿ ನಡೆದಿತ್ತು. ಆದರೆ, ಇತ್ತೀಚಿನ ಕೆಲ ತಿಂಗಳಲ್ಲಿ ಕಾಮಗಾರಿ ಭಾರೀ ವೇಗ ಪಡೆದುಕೊಂಡಿತ್ತು. ಈ ಸೇತುವೆಯಿಂದ ಶರಾವತಿ ಹಿನ್ನೀರು ಭಾಗದ ದಶಕಗಳ ಸಮಸ್ಯೆ ಈಡೇರಿದಂತಾಗಿದೆ. ಇನ್ನೊಂದೆಡೆ ಇಡೀ ವಲಯದ ಪ್ರವಾಸೋದ್ಯಮಕ್ಕೆ ದೊಡ್ಡ ಬೂಸ್ಟರ್‌ ಸಿಕ್ಕಿದೆ.

ಬಂಗಾರಪ್ಪ ಕಾಲದಿಂದಲೂ ನಡೆದ ಹೋರಾಟ

ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಕಾಲದಿಂದಲೂ ಇಲ್ಲೊಂದು ಸೇತುವೆ ನಿರ್ಮಾಣದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಆದರೆ, ನಮ್ಮದೇ ನಾಯಕರಲ್ಲಿ ಇದ್ದ ತಾಳಮೇಳದ ಕೊರತೆಯಿಂದಾಗಿ ಅಲ್ಲಿನ ಜನರು ಸಮಸ್ಯೆ ಎದುರಿಸುವಂತಾಗಿತ್ತು. ಆದರೆ, ಬಿಎಸ್‌ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪ್ರಯತ್ನದ ಫಲವಾಗಿ 2019ರಲ್ಲಿ ಬೃಹತ್‌ ಸೇತುವೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿತ್ತು. ಸೇತುವೆ ನಿರ್ಮಾಣಕ್ಕೂ ನಿತಿನ್‌ ಗಡ್ಕರಿ ಚಾಲನೆ ನೀಡಿದ್ದರು.

ಲಕ್ಷಾಂತರ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿರುವ ನಿಸರ್ಗರಮಣೀಯ ಸಿಗಂದೂರು ಶ್ರೀ ಚೌಡೇಶ್ವರಿ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬರುವ ಯಾತ್ರಾತ್ರಿಗಳಿಗೆ ಹಿನ್ನೀರ ಈ ಸೇತುವೆ ಅತೀ ಸಮೀಪದ ಸಂಪರ್ಕ ಕೊಂಡಿಯಾಗಿದೆ. ಇದರ ಮಾರ್ಗವನ್ನು 369 ಇ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲಾಗಿದೆ. ನಿಸರ್ಗದ ಮಡಿಲಲ್ಲಿ ಹಾದುಹೋಗುವ ಈ ಹೆದ್ದಾರಿ ಮಧ್ಯದ ತುಮರಿ, ಬ್ಯಾಕೋಡು, ಸಸಿಗೊಳ್ಳಿ, ಮಳೂರಿನಂತಹ ಗ್ರಾಮೀಣ ಪ್ರದೇಶಗಳು ಕೂಡ ಅಭಿವೃದ್ಧಿಯ ಕನಸುಕಾಣುತ್ತಿವೆ. ಈ ಭಾಗದ ಸುಮಾರು ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಅಲ್ಲದೆ ಪ್ರಸಿದ್ಧ ಯಾತ್ರ ಸ್ಥಳಗಳಿಂದಾಗಿ ಪ್ರವಾಸೋದ್ಯಮವೂ ಗರಿಗೆದರಿಕೊಳ್ಳುತ್ತಿವೆ.

ಮೂಕಾಂಬಿಕೆಗೂ-ಚೌಡೇಶ್ವರಿಗೂ ಸಂಪರ್ಕ

ಈ ಸೇತುವೆಯಿಂದಾಗಿ ಕೊಲ್ಲೂರಿನ ಮೂಕಾಂಬಿಕೆಗೂ ಸಿಗಂದೂರಿನ ಚೌಡೇಶ್ವರಿಗೂ ಸಂಪರ್ಕ ಸಿಕ್ಕಂತಾಗಿದೆ. ಈ ಎರಡೂ ದೇವಸ್ಥಾನದ ಭಕ್ತಾದಿಗಳಿಗೆ ಈ ಸೇತುವೆ ಅತೀ ಸಮೀಪದ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಲಿದೆ. ಇಲ್ಲಿ ಮಾರ್ಗವನ್ನು 369 ಇ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲಾಗಿದೆ. ಈ ಹೆದ್ದಾರಿ ಮಧ್ಯದದಲ್ಲಿ ತುಮರಿ, ಬ್ಯಾಕೋಡು, ಸಸಿಗೊಳ್ಳಿ, ಮಳೂರಿನಂಥ ಗ್ರಾಮೀಣ ಪ್ರದೇಶಗಳೂ ಕೂಡ ಅಭಿವೃದ್ಧಿಯ ಕನಸು ಕಾಣುತ್ತಿದೆ.