ಸಾಗರ [ಜ.20]:  ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಕಾಮ​ಗಾ​ರಿ ಒಂದು ವಾರದಲ್ಲಿ ಪ್ರಾರಂಭವಾಗಲಿದ್ದು ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಗುತ್ತಿಗೆದಾರ ಕಂಪನಿ ಮಧ್ಯಪ್ರದೇಶದ ದಿಲೀಪ್‌ ಬಿಲ್ಡ್‌ಕನ್‌ ಭೋಪಾಲ್‌ ಮಾಡಿಕೊಂಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಅಂಬಾರಗೋಡ್ಲುವಿನಲ್ಲಿ ತುಮರಿ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಬಳಿ ಚರ್ಚೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, 423.150 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆ ಮುಂದಿನ ಮೂರು ವರ್ಷ ಮೊದಲು ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.

ಈಗಾಗಲೆ ದೇಶದಲ್ಲಿ ನೀರಿನ ನಡುವೆ ಅತ್ಯಂತ ಉದ್ದ ಮತ್ತು ಅಗಲವಾದ 7 ಸೇತುವೆ ನಿರ್ಮಾಣವಾಗಿವೆ. ತುಮರಿ ಸೇತುವೆ 8ನೆಯದಾ​ಗಿ ಹೊರಹೊಮ್ಮಲಿದೆ. ಅಗಲ-ಉದ್ದದ ವಿಸ್ತೀರ್ಣದಲ್ಲಿ ತುಮರಿ ಸೇತುವೆ ದೇಶದಲ್ಲಿಯೆ 2ನೇ ದೊಡ್ಡ ಸೇತು​ವೆ ಸ್ಥಾನ ಪಡೆಯಲಿದೆ. 2.425 ಕಿ.ಮೀ. ಉದ್ದ ಮತ್ತು 16 ಮೀಟರ್‌ ಅಗಲದಲ್ಲಿ ನಿರ್ಮಾಣಗೊಳ್ಳುವ ಸೇತುವೆಯನ್ನು ಗುತ್ತಿಗೆದಾರ ಕಂಪನಿಯು ಮುಂದಿನ 10 ವರ್ಷಗಳ ಕಾಲ ನಿರ್ವಹಣೆ ಮಾಡಲಿದೆ. ಜೊತೆಗೆ ಅಂಬಾರಗೋಡ್ಲುವಿನಿಂದ ಸೇತುವೆವರೆಗೆ 1 ಕಿ.ಮೀ. ಮತ್ತು ಕಳಸವಳ್ಳಿ ದಡದಲ್ಲಿ 4 ಕಿ.ಮೀ. ರಸ್ತೆಯನ್ನು ಸಂಬಂಧಪಟ್ಟಕಂಪನಿ ಅಭಿವೃದ್ಧಪಡಿಸಲಿದೆ ಎಂದು ಮಾಹಿತಿ ನೀಡಿದರು.

ಕೊಡಚಾದ್ರಿ - ಕೊಲ್ಲೂರು ನಡುವೆ ಕೇಬಲ್ ಕಾರ್ !..

ತುಮರಿ ಸೇತುವೆ ಹಿನ್ನೀರಿನ ಜನರ ತ್ಯಾಗಕ್ಕೆ ಸರ್ಕಾರ ಮಾಡುತ್ತಿರುವ ಸಣ್ಣ ಸಹಾಯ ಇದಾ​ಗಿ​ದೆ. ಏಕೆಂದರೆ ನಾಡಿಗೆ ಬೆಳಕು ನೀಡಲು ಹಿನ್ನೀರಿನ ಜನರು ಮಾಡಿರುವ ತ್ಯಾಗವನ್ನು ಹಣ ಅಥವಾ ಇನ್ಯಾವುದೇ ರೂಪದಲ್ಲಿ ಅಳೆಯಲು ಸಾಧ್ಯವಿಲ್ಲ. ಯೋಜನೆ ಅನುಷ್ಠಾನದ ಹಿಂದೆ ಮುಖ್ಯಮಂತಿ, ಕ್ಷೇತ್ರದ ಶಾಸಕರಾದ ಹಾಲಪ್ಪ, ಸ್ಥಳೀಯ ಮುಖಂಡರಾದ ಪರಮೇಶ್ವರ ಚದರವಳ್ಳಿ, ಪ್ರಸನ್ನ ಕೆರೆಕೈ ಅವ​ರ ಪಾತ್ರ ಅತ್ಯಂತ ದೊಡ್ಡದಾಗಿದೆ ಎಂದು ವಿವ​ರಿ​ಸಿ​ದ​ರು.

ಸೇತುವೆ ನಿರ್ಮಾಣದಿಂದ ತುಮರಿ ಸೇರಿ ಹಿನ್ನೀರಿನ ಜನರು ತಾಲೂಕು ಕೇಂದ್ರಕ್ಕೆ ಬಂದು ಹೋಗಲು ಹೆಚ್ಚು ಅನುಕೂಲವಾಗಲಿದೆ. ಜೊತೆಗೆ ದಕ್ಷಿಣ ಕನ್ನಡ ಮತ್ತು ಮಲೆನಾಡು ಸಂಪರ್ಕ ಹತ್ತಿರವಾಗುತ್ತದೆ ಎಂದು ಹೇಳಿದರು.

ಗ್ರಾಮಲೆಕ್ಕಾಧಿಕಾರಿ ನೇಮಕಾತಿಗೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೇ ನೇರ ನೇಮಕಾತಿ.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌, ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ ಶಿಕಾರಿಪುರ, ಸಾಗರ ನಗರ ಅಧ್ಯಕ್ಷ ಕೆ.ಆರ್‌. ಗಣೇಶಪ್ರಸಾದ್‌, ತಾಲೂಕು ಅಧ್ಯಕ್ಷ ಲೋಕನಾಥ್‌ ಬಿಳಿಸಿರಿ, ಪ್ರಮುಖರಾದ ಪ್ರಸನ್ನ ಕೆರೆಕೈ, ಸತೀಶ್‌ ಮೊಗವೀರ, ವಿ.ಮಹೇಶ್‌, ಸುಧೀಂದ್ರ, ನಾಗರಾಜಯ್ಯ, ರಾಜೀವ್‌, ರಾಷ್ಟ್ರೀಯ ಹೆದ್ದಾರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಪೀರ್‌ ಪಾಷಾ ಇನ್ನಿತರ ಅಧಿಕಾರಿಗಳು ಹಾಜರಿದ್ದರು.