ವಿವಾದಕ್ಕೆ ಒಳಗಾಗಿದ್ದ ನಿಸಾರ್ ಅಹ್ಮದ್ ಅಧ್ಯಕ್ಷತೆಯ 73ನೇ ಕನ್ನಡ ಸಾಹಿತ್ಯ ಸಮ್ಮೇಳನ
ಶಿವಮೊಗ್ಗದಲ್ಲಿ 2006ರಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿಸಾರ್ ಅಹ್ಮದ್ ವಹಿಸಿದ್ದರು. ಈ ಸಮ್ಮೇಳನ ವಿವಾದಕ್ಕೂ ಸಾಕ್ಷಿಯಾಯಿತು. ಏನದು ವಿವಾದ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಶಿವಮೊಗ್ಗ(ಮೇ.05): 2006ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ನಿಸಾರ್ ಅಹ್ಮದ್. ಆಗ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿದ್ದವರು ಚಂಪಾ. ವಿವಾದಲ್ಲಿಯೇ ಸಮ್ಮೇಳನ ಮುಗಿದದ್ದು ಕೂಡ ಇತಿಹಾಸ.
ಕಸಾಪ ಇತಿಹಾಸದಲ್ಲಿಯೇ ಈ ಮಟ್ಟದ ವಿವಾದಕ್ಕೆ ಒಳಗಾದ ಇನ್ನೊಂದು ಸಾಹಿತ್ಯ ಸಮ್ಮೇಳನ ಇರಲಿಕ್ಕಿಲ್ಲ. ಆಗ ಮುಖ್ಯಮಂತ್ರಿಯಾದ್ದ ಎಚ್. ಡಿ. ಕುಮಾರಸ್ವಾಮಿ ಅವರನ್ನು ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಆಹ್ವಾನಿಸದೆ ತಮ್ಮ ಖಡಕ್ ನಿಲುವನ್ನು ಚಂಪಾ ಪ್ರದರ್ಶಿಸಿದ್ದರು. ಸಮಾರೋಪಕ್ಕೆ ಅವರು ಬಂದು ನಮ್ಮ ಬೇಡಿಕೆಗೆ ಸ್ಪಂದಿಸಲಿ ಎಂಬುದು ಅವರ ನಿಲುವಾಗಿತ್ತು.
ನಿಸಾರ್ ಅಹ್ಮದರ ನಿತ್ಯೋತ್ಸವ ಗೀತೆ ಹುಟ್ಟಿದ್ದು ಘಟ್ಟನಗರದಲ್ಲಿಯೇ...
ಆಗ ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿದ್ದವರು ಶಿವಮೊಗ್ಗದ ಬಿ.ಎಸ್. ಯಡಿಯೂರಪ್ಪ. ಇದರ ಜೊತೆಗೆ ಗೋಷ್ಠಿಯೊಂದಕ್ಕೆ ಎಡಪಂಥೀಯ ವಿಚಾರಧಾರೆಯ ಕಲ್ಕುಳ್ಳಿ ವಿಠ್ಠಲ ಹೆಗ್ಡೆ ಮತ್ತು ಗೌರಿ ಲಂಕೇಶ್ ಅವರನ್ನು ಆಹ್ವಾನಿಸಿದ್ದು ಕೂಡ ತೀವ್ರ ವಿವಾದಕ್ಕೆ ಆಸ್ಪದವಾಗಿದ್ದು, ಸಾಹಿತ್ಯ ಸಮ್ಮೇಳನಕ್ಕೆ ಪೊಲೀಸರ ಬಿಗಿ ಬಂದೋಬಸ್ ಬೇಕಾಗಿತ್ತು.
ಇಂತಹ ಸನ್ನಿವೇಶದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಿಸಾರ್ ಅಹ್ಮದ್ ಈ ವಿವಾದಕ್ಕೆ ಸಿಲುಕಲಿಲ್ಲ. ವಿವಾದವನ್ನು ಸಾಹಿತ್ಯದಿಂದ ದೂರ ಉಳಿಸುವ ಯತ್ನ ನಡೆಸಿದರು. ಇಡೀ ಸಮ್ಮೇಳನವನ್ನು ವಿವಾದದಿಂದ ಹೊರ ತರಲು ಪ್ರಯತ್ನಿಸಿದರು. ಎಲ್ಲರನ್ನೂ ಒಂದಾಗಿ ಕೊಂಡೊಯ್ಯುವ ಯತ್ನ ನಡೆಸಿದರು.