- ಗೋಪಾಲ ಯಡಗೆರೆ, ಕನ್ನಡಪ್ರಭ

ಶಿವಮೊಗ್ಗ(ಮೇ.04): ನಿತ್ಯೋತ್ಸವದ ಕವಿ ಎಂದೇ ಖ್ಯಾತರಾದ ಪ್ರೊ.ನಿಸಾರ್ ಅಹ್ಮದ್ ಅವರಿಗೂ ಮಲೆನಾಡಿನ ಶಿವಮೊಗ್ಗಕ್ಕೂ ಬಲು ದೊಡ್ಡ ನಂಟು. ನಿತ್ಯೋತ್ಸವದ ಕವಿ ಎಂದು ಹೆಸರು ಬರಲು ಕಾರಣವಾದ ಜೋಗದ ಸಿರಿ ಬೆಳಕಿನಲ್ಲಿ ಗೀತೆ ಬರೆದಿದ್ದು ಶಿವಮೊಗ್ಗದ ಮೀನಾಕ್ಷಿ ಭವನದ ಕೋಣೆಯಲ್ಲಿ. 

ಇದೆಲ್ಲ ನಡೆದಿದ್ದು 1973 ರ ಹೊತ್ತು. ಆಗ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಭೂಗರ್ಭ ಶಾಸ್ತ್ರ ಅಧ್ಯಾಪಕರಾಗಿ ಬಂದ ನಿಸಾರ್ ಇಲ್ಲಿನ ಪ್ರಕೃತಿಗೆ ಮನ ಸೋತಿದ್ದರು. ಸದಾ ಪ್ರಕೃತಿಯನ್ನು ಆರಾಧಿಸುತ್ತಿದ್ದರು. ಆಗಲೇ ಅವರು ಜೋಗ ಜಲಪಾತವನ್ನು ಪ್ರಕೃತಿಯ ನಿತ್ಯೋತ್ಸವಾಗಿ ಕಂಡರು. ಅವರು ಜೋಗದ ಸಿರಿ ಬೆಳಕಿನಲ್ಲಿ ಕವನ ರಚಿಸಿ ಮೊದಲ ಬಾರಿಗೆ ಓದಿದ್ದು ಮೀನಾಕ್ಷಿ ಭವನದ ಕೋಣೆಯಲ್ಲಿ ಕೆಲವೇ ಕೆಲವು ಆಪ್ತರ ಮುಂದೆ. ಅದೆಂದರೆ ಆಗ ಶಿವಮೊಗ್ಗದಲ್ಲಿ ಸಾಹಿತಿಗಳೆಲ್ಲರಿಗೂ ಆಪ್ತರು ಎನಿಸಿದ್ದ ಹಸೂಡಿ ದತ್ತಾತ್ರೇಯ ಶಾಸ್ತ್ರಿ, ನಿಸಾರ್ ಅವರ ಆಪ್ತರಾಗಿದ್ದ ಕವಿ ಸತ್ಯನಾರಾಯಣ ಅಣತಿ, ಕೆ.ಜಿ. ಸುಬ್ರಹ್ಮಣ್ಯ, ಶಿವಮೊಗ್ಗ ಸುಬ್ಬಣ್ಣ ಅವರುಗಳಿದ್ದರು. 

ಬಳಿಕ 1978ರಲ್ಲಿ ಕನ್ನಡ ಭಾವಗೀತೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಭಾವಗೀತೆಗಳ ಕ್ಯಾಸೆಟ್ ನಿತೋತ್ಸವ ಅನ್ನು ಸಿ. ಅಶ್ವಥ್ ಮತ್ತು ಮೈಸೂರು ಅನಂತಸ್ವಾಮಿ ಜೊತೆಗೂಡಿ ಹೊರ ತಂದರು. ಅವರ ಇನ್ನೆರಡು ಪ್ರಮುಖ ಗೀತೆಗಳಾದ ಮನಸ್ಸು ಗಾಂಧಿ ಬಜಾರ್, ಸಂಜೆ ಐದರ ಮಳೆ, ರಾಮನ್ ಸತ್ತ ಸುದ್ದಿ ಗೀತೆಗಳು ಕೂಡ ಶಿವಮೊಗ್ಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ರಚಿಸಿದರು. 

ನಿಸಾರ್ ಅಹ್ಮದ್ ಜೊತೆಗಿನ ಒಡನಾಟವನ್ನು ರವಿ ಬೆಳಗೆರೆ ಸ್ಮರಿಸಿದ್ದು ಹೀಗೆ

ಶಿವಮೊಗ್ಗದಲ್ಲಿದ್ದಾಗ ಸವಳಂಗ ರಸ್ತೆಯಲ್ಲಿ ವಾಯು ವಿಹಾರಕ್ಕೆಂದು ಹೋಗುತ್ತಿದ್ದರು. ಅಲ್ಲಿ ಹೊಲದಲ್ಲಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ರೈತರೊಬ್ಬರ ಜೊತೆ ನಿಸಾರ್ ಮಾತನಾಡುತ್ತಿದ್ದ ವೇಳೆ ಸಿ.ವಿ. ರಾಮನ್ ಮೃತಪಟ್ಟ ಸುದ್ದಿ ಕೇಳಿ ಅದನ್ನು ಆ ರೈತರಿಗೆ ಹೇಳುತ್ತಾರೆ. ಆಗ ರೈತ ಪ್ರತಿಕ್ರಿಯಿಸಿದ ರೀತಿಯನ್ನು ಮುಂದಿಟ್ಟುಕೊಂಡು ಈ ಕವನ ರಚಿಸಿದರು ಎನ್ನುತ್ತಾರೆ ಕವಿ ಸತ್ಯನಾರಾಯಣ ಅಣತಿ. ಮನಸ್ಸು ಗಾಂಧಿ ಬಜಾರ್ ಗೀತೆ ಶಿವಮೊಗ್ಗದ ಗಾಂಧಿ ಬಜಾರ್‌ಗೆ ಸಂಬಂಧಿಸಿದ್ದು. ಶಿವಮೊಗ್ಗದಲ್ಲಿ ಇದ್ದ ವೇಳೆ ಸಂಜೆ ಗಾಂಧಿ ಬಜಾರ್‌ನಲ್ಲಿನ ರಾಜಾರಾಮ್ ಬುಕ್‌ಹೌಸ್‌ಗೆ ಹೋಗಿ ಮಾತುಕತೆ ನಡೆಸುತ್ತಿದ್ದರು. ಮಳೆ ಬರುವಾಗಲೂ ಅಲ್ಲಿಗೆ ಹೋಗುವುದನ್ನು ಬಿಡುತ್ತಿರಲಿಲ್ಲ. ಈ ವೇಳೆಯಲ್ಲಿಯೇ ಈ ಗೀತೆ ರಚಿಸಿದರು. ಶಿವಮೊಗ್ಗದ ನಮ್‌ಟೀಮ್ ತಂಡ 2011 ರಲ್ಲಿ ನಿಸಾರ್ ಅಹ್ಮದ್ ಅವರು ಅನುವಾದಿಸಿದ್ದ ಶೇಕ್ಸ್‌ಫಿಯರ್ ನಾಟಕ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯನ್ನು ರಂಗದ ಮೇಲೆ ತಂದಿತ್ತು. ನೀನಾಸಂನ ರವಿ ಇದನ್ನು ನಿರ್ದೇಶಿಸಿದ್ದರು. 

ಮಲೆನಾಡೆಂದರೆ ಅಚ್ಚುಮೆಚ್ಚು: ಕವಿ ನಿಸ್ಸಾರ್ ಅಹ್ಮದ್ ಅವರಿಗೆ ಮಲೆನಾಡೆಂದರೆ ಅಚ್ಚುಮೆಚ್ಚು. ತಮ್ಮ ಸೇವಾವಧಿಯಲ್ಲಿ ಎರಡು ಬಾರಿ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದ ಅವರು ಪ್ರತಿಕ್ಷಣವೂ ಮಲೆನಾಡನ್ನು ಆರಾಧಿಸುತ್ತಿದ್ದರು. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ವೇಳೆಯಲ್ಲಿ ಮಲೆನಾಡಿನ ವಿದ್ಯಾರ್ಥಿಗಳ ಸ್ನೇಹ ಬಯಸುತ್ತಿದ್ದರು. ಅವರ ಮನೆಗಳಿಗೆ ಹೋಗಿ ಅಲ್ಲಿನ ಸಂಸ್ಕೃತಿ, ಪ್ರಕೃತಿಯನ್ನು ಸವಿಯುತ್ತಿದ್ದರು. 

ಸಿಟ್ಟಾಗದ ನಿಸಾರ್: ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ವೇಳೆಯಲ್ಲಿ ಸಾಹಿತಿ ಶ್ರೀಕಂಠ ಕೂಡಿಗೆ, ಚಿತ್ರನಟ ದಿ. ಮಾನು ಇವರ ಶಿಷ್ಯರಾಗಿದ್ದರು. ಒಮ್ಮೆ ಇವರು ಕೊಠಡಿಗೆ ಬರುವ ಮುನ್ನ ಮಾನು ಮತ್ತು ಶ್ರೀಕಂಠ ಕೂಡಿಗೆ ಸೇರಿ ಕೀಟಲೆ ಮಾಡಲೆಂದು ಬೋರ್ಡಿನಲ್ಲಿ ನಿಸಾರ್ ಅಹ್ಮದ್ ಎನ್ನುವ ಹೆಸರನ್ನು ತಿದ್ದಿ ನಿಸ್ಸಾರ ಎಂದು ಬರೆದಿದ್ದರು. ಒಳಗೆ ಬಂದ ನಿಸಾರ್ ವಿದ್ಯಾರ್ಥಿಗಳ ಕಡೆಗೆ ಒಮ್ಮೆ ನೋಡಿ ಬಳಿಕ ಬೋರ್ಡಿನ ಕಡೆಗೆ ತಿರುಗಿದಾಗ ಈ ಬರಹ ಗಮನಿಸುತ್ತಾರೆ. ಆಗ ಸಿಟ್ಟಾಗದ ನಿಸಾರ್ ನಾನೆಂಬುದು ನನಗೆ ಗೊತ್ತು, ಏಕೆ ಬೇಕು ಸಾ ಗೆ ಸಾವತ್ತು ಎಂದು ಹೇಳಿ ಪಾಠ ಮುಂದುವರಿಸಿದ್ದರು