ಶಿವಮೊಗ್ಗ(ಜು.20): ಆರು ತಿಂಗಳಲ್ಲಿ ಬರೋಬ್ಬರಿ 75 ಸಾವಿರ ಕಡತಗಳನ್ನು ವಿಲೇವಾರಿ ಮೂಲಕ ಸಾಧನೆ ಮಾಡಿರುವ ಶಿವಮೊಗ್ಗದ ತಹಸೀಲ್ದಾರ್‌ ಬಿ.ಎನ್‌. ಗಿರೀಶ್‌ ಅವರನ್ನು ವಿಧಾನಪರಿಷತ್‌ ಸದಸ್ಯ ಎಸ್‌. ರುದ್ರೇಗೌಡರು ಅಭಿನಂದಿಸಿದ್ದಾರೆ.

ಒಬ್ಬ ತಹಸೀಲ್ದಾರ್‌ ಹೇಗೆ ಕೆಲಸ ಮಾಡಬಹುದು ಮತ್ತು ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದೀರಿ. ಹಲವು ವಿಶಿಷ್ಟಸಾಧನೆಗಳ ಮೂಲಕ ಅತ್ಯಲ್ಪ ಸಮಯದಲ್ಲಿಯೇ ಮನೆ ಮಾತಾಗಿರುವ ಶಿವಮೊಗ್ಗ ತಹಸೀಲ್ದಾರ್‌ ಗಿರೀಶ್‌ ಅವರು ಇತರರಿಗೆ ಮಾದರಿಯಾಗಿದ್ದೀರಿ ಎಂದು ಎಸ್‌. ರುದ್ರೇಗೌಡ ಅವರು ಗಿರೀಶ್‌ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.

ಅಧಿಕಾರ ಸ್ವೀಕರಿಸಿದ ಬಳಿಕ ಎಲ್ಲ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ಪಡೆದು ರಾಜ್ಯದಲ್ಲಿಯೇ ದಾಖಲೆ ಎನ್ನುವ ರೀತಿಯಲ್ಲಿ ಕಾರ್ಯವೆಸಗಿರುವುದು ಮಾದರಿ ಎಂದರಲ್ಲದೆ, ಈ ಸಾಧನೆಯ ಹಾದಿಯ ಕುರಿತು ತಹಶೀಲ್ದಾರ್‌ ಅವರಿಂದ ವಿವರ ಮಾಹಿತಿ ಪಡೆದುಕೊಂಡರು. ಮರಳು ಮಾಫಿಯಾ ದಂಧೆಕೋರರನ್ನು ಹಿಡಿಯಲು ಅವರು ತೋರಿದ ಧೈರ್ಯವನ್ನು ಇದೇ ಸಂಧರ್ಭದಲ್ಲಿ ಶಾಸಕರು ಶ್ಲಾಘಿಸಿದರು.

6 ತಿಂಗಳಲ್ಲಿ ಬರೋಬ್ಬರಿ 75 ಸಾವಿರ ಕಡತ ವಿಲೇವಾರಿ; ಶಿವಮೊಗ್ಗ ತಹಸೀಲ್ದಾರ್‌ ಗಿರೀಶ್‌ ಸಾಧನೆ

ತಮ್ಮ ಕೆಲಸಕ್ಕೆ ಯಾವುದೇ ಸಮಯದ ಮಿತಿ ಹಾಕಿಕೊಳ್ಳದೆ ಹಗಲಿರುಳು ದುಡಿಯುತ್ತಿರುವ ಅಪರೂಪದ ವ್ಯಕ್ತಿತ್ವದ ತಹಶೀಲ್ದಾರ್‌ ಸರ್ಕಾರಿ ನೌಕರರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.