Asianet Suvarna News Asianet Suvarna News

6 ತಿಂಗಳಲ್ಲಿ ಬರೋಬ್ಬರಿ 75 ಸಾವಿರ ಕಡತ ವಿಲೇವಾರಿ; ಶಿವಮೊಗ್ಗ ತಹಸೀಲ್ದಾರ್‌ ಗಿರೀಶ್‌ ಸಾಧನೆ

ಆರು ತಿಂಗಳಲ್ಲಿ ಬರೋಬ್ಬರಿ 75 ಸಾವಿರ ಕಡತ ವಿಲೇವಾರಿ! ಶಿವಮೊಗ್ಗ ತಹಸೀಲ್ದಾರ್‌ ಗಿರೀಶ್‌ ಸಾಧನೆ; ರಾಜ್ಯದಲ್ಲಿಯೇ ದಾಖಲೆ | ಅಧಿಕಾರ ಸ್ವೀಕರಿಸಿದಾಗ ಕಚೇರಿಯಲ್ಲಿ ಕಡತಗಳ ರಾಶಿಯೇ ಇತ್ತು | ಪ್ರತಿದಿನ ಸಂಜೆ ಶಿರಸ್ತೆದಾರ್‌ ಜೊತೆ, ಆಗಾಗ್ಗೆ ಸಿಬ್ಬಂದಿ ಜೊತೆ ಸಭೆ 

Shivamogga Tahsildar B N Girish cleares 75 thousand files within 6 months
Author
Bengaluru, First Published Jul 18, 2019, 8:27 AM IST

ಶಿವಮೊಗ್ಗ (ಜು. 18):  ಒಬ್ಬ ತಹಸೀಲ್ದಾರ್‌ ಹೇಗೆ ಕೆಲಸ ಮಾಡಬಹುದು ಮತ್ತು ಮಾಡಬೇಕು ಎಂಬುದಕ್ಕೆ ಹಲವು ವಿಶಿಷ್ಟಸಾಧನೆಗಳ ಮೂಲಕ ಅತ್ಯಲ್ಪ ಸಮಯದಲ್ಲಿಯೇ ಮನೆ ಮಾತಾಗಿರುವ ಶಿವಮೊಗ್ಗ ತಹಸೀಲ್ದಾರ್‌ ಮಾದರಿಯಾಗಿದ್ದಾರೆ.

ಇದೀಗ ಇನ್ನೊಂದು ಗರಿ ಅವರ ಸಾಧನೆಯ ಕಿರೀಟಕ್ಕೆ ಸೇರಿಕೊಂಡಿದ್ದು, ಅಧಿಕಾರ ವಹಿಸಿಕೊಂಡ ಕೇವಲ ಆರು ತಿಂಗಳಲ್ಲಿ ಅವರು ಮಾಡಿರುವ ಕಡತ ವಿಲೇವಾರಿ ಬರೋಬ್ಬರಿ ಸುಮಾರು 75 ಸಾವಿರ.

ಈ ರೀತಿಯ ಕಡತ ಯಜ್ಞ ನಡೆದಿರುವುದು ಬಹುಶಃ ಶಿವಮೊಗ್ಗ ಕಂದಾಯ ಇಲಾಖೆಯಲ್ಲಿ ಮಾತ್ರವಲ್ಲ, ರಾಜ್ಯದಲ್ಲಿಯೇ ದಾಖಲೆ ಎನ್ನಲಾಗುತ್ತಿದೆ.

ಮರಳು ಮಾಫಿಯಾ ದಂಧೆಕೋರರನ್ನು ಹಿಡಿಯಲು ತಹಶೀಲ್ದಾರ್ ಹೊಸ ಪ್ಲಾನ್

ಈ ಸಾಧನೆ ಮಾಡಿರುವುದು ಶಿವಮೊಗ್ಗ ತಾಲೂಕು ತಹಸೀಲ್ದಾರ್‌ ಬಿ.ಎನ್‌. ಗಿರೀಶ್‌. 2019ರ ಜನವರಿಯಲ್ಲಿ ಶಿವಮೊಗ್ಗ ತಹಸೀಲ್ದಾರ್‌ ಆಗಿ ಅಧಿಕಾರ ಸ್ವೀಕರಿಸಿದಂದಿನಿಂದಲೂ ಜನಪರವಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಕೆಲಸಕ್ಕೆ ಯಾವುದೇ ಸಮಯದ ಮಿತಿ ಹಾಕಿಕೊಳ್ಳದೆ ಹಗಲಿರುಳು ದುಡಿಯುತ್ತಿದ್ದಾರೆ. ಇಡೀ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ.

ಅವರು ಅಧಿಕಾರ ಸ್ವೀಕರಿಸಿದಾಗ ಕಚೇರಿಯಲ್ಲಿ ಕಡತಗಳ ರಾಶಿಯೇ ಇತ್ತು. ಇದು ಅವರನ್ನು ಆಶ್ಚರ್ಯಕ್ಕೆ ನೂಕಿತು. ಏಕೆ ಹೀಗೆ ಎಂದು ಪ್ರಶ್ನೆ ಮಾಡಿದರು. ಸಿಬ್ಬಂದಿ ಸರಿಯಾದ ಉತ್ತರ ನೀಡಲಿಲ್ಲ. ಬಳಿಕ ತಾವೇ ಇದಕ್ಕೊಂದು ಮೋಕ್ಷ ಕೊಡಲು ನಿರ್ಧರಿಸಿದರು.

ಆಗ ಶುರುವಾದ ಕಡತ ಯಜ್ಞಕ್ಕೆ ಈಗ ಆರು ತಿಂಗಳು. ಈ ಆರು ತಿಂಗಳಲ್ಲಿ ಸುಮಾರು 70 ಸಾವಿರ ಕಡತಗಳನ್ನು ವಿಲೇವಾರಿ ಮಾಡಿದ್ದಲ್ಲದೆ, ಕಡತ ಯಜ್ಞ ಸಪ್ತಾಹ ಆಚರಿಸಲಾಯಿತು. ಆಗ ವಿಲೇವಾರಿಯಾದ ಕಡತಗಳ ಸಂಖ್ಯೆ 5289. ಒಟ್ಟು ವಿಲೇವಾರಿಯಾದ ಕಡತಗಳ ಸಂಖ್ಯೆ ಸುಮಾರು 75 ಸಾವಿರ!

ತಮ್ಮ ಕಚೇರಿ ಸಿಬ್ಬಂದಿಯನ್ನು ತಮ್ಮ ವೇಗಕ್ಕೆ ತಕ್ಕಂತೆ ಸಜ್ಜುಗೊಳಿಸುತ್ತಿದ್ದಾರೆ. ಹೊಂದಿಕೊಂಡವರು ಇಲ್ಲಿಯೇ ಉಳಿಯುತ್ತಿದ್ದಾರೆ. ಹೊಂದಿಕೊಳ್ಳಲು ಸಾಧ್ಯವಾಗದವರನ್ನು ವರ್ಗಾವಣೆ ಮಾಡುತ್ತಿದ್ದಾರೆ. ಕೆಲವೊಮ್ಮೆ ಸಿಬ್ಬಂದಿಗೆ ಬೇರೆ ಬೇರೆ ರೀತಿಯಲ್ಲಿಯೂ ಬಿಸಿ ಮುಟ್ಟಿಸಿದ್ದುಂಟು.

ಸಂಬಳ ಹಿಡಿದಿದ್ದೂ ಉಂಟು. ಈ ಸಿಬ್ಬಂದಿ ಯಾರ್ಯಾರಿಂದಲೋ ಒತ್ತಡ ತಂದಿದ್ದೂ ಉಂಟು. ಆದರೆ ನಾನು ಇದಕ್ಕೆ ಬಗ್ಗಲಿಲ್ಲ. ಇದೆಲ್ಲವೂ ಜನಪರವಾದ ಕೆಲಸಕ್ಕಾಗಿಯೇ ಹೊರತು ಇನ್ನೇನಲ್ಲ. ನನ್ನ ಆಶಯಕ್ಕೆ ಈಗ ಸಿಬ್ಬಂದಿ ಹೊಂದಿಕೊಂಡಿದ್ದಾರೆ. ಅವರು ಜನಪರವಾಗಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ಗಿರೀಶ್‌.

ಇದಕ್ಕಾಗಿ ಪ್ರತಿದಿನ ಸಂಜೆ ಶಿರಸ್ತೆದಾರ್‌ ಜೊತೆ ಸಭೆ ನಡೆಸುತ್ತಾರೆ. ಆಗಾಗ್ಗೆ ಸಿಬ್ಬಂದಿ ಜೊತೆಯೂ ಸಭೆ ನಡೆಸುತ್ತಾರೆ. ಇವೆಲ್ಲದರ ನಡುವೆ ಸಿಬ್ಬಂದಿ ಕಷ್ಟಸುಖಗಳಿಗೂ ಸ್ಪಂದಿಸುತ್ತಿದ್ದಾರೆ. ಇತ್ತೀಚೆಗೆ ಗರ್ಭೀಣಿ ಸಹದ್ಯೋಗಿಯೊಬ್ಬರು ಈ ಸಂಬಂಧದ ರಜಾ ಮೇಲೆ ಹೋಗುವ ದಿನ ಇಡೀ ಕಚೇರಿಯಲ್ಲಿನ ಸಿಬ್ಬಂದಿ ಸೇರಿಸಿ ಅವರಿಗೆ ಅಚ್ಚರಿ ಮೂಡಿಸಿ, ಆ ಸಹೋದ್ಯೋಗಿಗೆ ಸೀಮಂತ ಕಾರ್ಯ ನಡೆಸಿದ್ದರು.

ಶಿವಮೊಗ್ಗ ಹೊರವಲಯದ ಗಜ್ಜೇನಹಳ್ಳಿಯಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲುಕ್ವಾರಿ ಮೇಲೆ ಮಾರುವೇಷದಲ್ಲಿ ದಾಳಿ ನಡೆಸಿ ಟ್ರ್ಯಾಕ್ಟರ್‌, ಜೆಸಿಬಿಗಳನ್ನು ವಶಕ್ಕೆ ಪಡೆಯುವ ಮೂಲಕ ಇಂತಹ ದುಷ್ಟರಲ್ಲಿ ಭಯ ಹುಟ್ಟಿಸಿದ್ದರು.

ಭಾನುವಾರವೂ ಕೆಲಸ

ಸಿಬ್ಬಂದಿಗೆ ಸದಾ ಶಿಸ್ತಿನ ಪಾಠ ಮಾಡುತ್ತಾರೆ. ತಾವೇ ಮಾದರಿಯಾಗಿ ತಮ್ಮನ್ನು ಅನುಸರಿಸುವಂತೆ ಮಾಡಿದ್ದಾರೆ. ಭಾನುವಾರವೂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ದಿನ ಯಾವ ವಿಭಾಗದ ಕಡತಗಳ ವಿಲೇವಾರಿ ನಡೆಯುತ್ತದೆಯೋ ಆ ಸಿಬ್ಬಂದಿ ಹಾಜರಾತಿ ಕಡ್ಡಾಯ ಮಾಡಿದ್ದಾರೆ. ಆರಂಭದಲ್ಲಿ ಸಿಬ್ಬಂದಿ ಗೊಣಗಾಟ ಇದ್ದೇ ಇತ್ತು. ಆದರೆ ಈಗ ಅವರೇ ಇಂತಹ ಕೆಲಸವನ್ನು ಇಷ್ಟಪಡುವಂತಾಗಿದೆ.

ಆರು ತಿಂಗಳಿಂದ ಊರಿಗೇ ಹೋಗಿಲ್ಲ

ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ಊರಿನವರಾದ ಗಿರೀಶ್‌ ಶಿವಮೊಗ್ಗ ತಹಸೀಲ್ದಾರ್‌ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಊರಿಗೇ ಹೋಗಿಲ್ಲ. ಇದರಿಂದ ಕುಟುಂಬದವರು ಅಸಂತುಷ್ಟರಾಗಿದ್ದಾರೆ ಎನ್ನುತ್ತಾರೆ ಗಿರೀಶ್‌. ಆದರೆ ಇಲ್ಲಿ ಕೆಲಸ ಮುಖ್ಯ. ಹೀಗಾಗಿ ಹೋಗಿಲ್ಲ ಎನ್ನುವ ಮೂಲಕ ತಮ್ಮ ಕರ್ತವ್ಯ ನಿಷ್ಠೆಯನ್ನು ತೋರುತ್ತಾರೆ.

 

Follow Us:
Download App:
  • android
  • ios