ಆನೆಗಳಿಗೆ ಹರಡುತ್ತಿದೆ ಹೊಸ ರೋಗ : ಹೈ ಅಲರ್ಟ್ ಘೋಷಣೆ
ಆನೆಗಳ ಆರೋಗ್ಯದ ಮೇಲೆ ಇದೀಗ ಮಾರಾಕ ವೈರಸ್ ಒಂದು ದಾಳಿ ಮಾಡುತ್ತಿದ್ದು ಇದೇ ಆನೆಗಳ ಸಾವಿಗೆ ಕಾರಣ ಎನ್ನಲಾಗಿದೆ. ಅಲ್ಲದೇ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ಶಿವಮೊಗ್ಗ [ಅ.12]: ಸಮೀಪದ ಸಕ್ರೆಬೈಲು ಆನೆಬಿಡಾರದಲ್ಲಿನ ಆನೆಗಳ ಸರಣಿ ಅಸಹಜ ಸಾವುಗಳಿಂದ ಉಂಟಾದ ಆತಂಕದ ಬೆನ್ನಲ್ಲೇ ಮತ್ತೊಂದು ಅಘಾತ ಎದುರಾಗಿದೆ. ಇದೀಗ ಈ ಬಿಡಾರದಲ್ಲಿ ಆನೆಗಳಿಗೆ ಅತ್ಯಂತ ಮಾರಣಾಂತಿಕ ಎನ್ನಲಾದ ‘ಎಂಡೋಥಿಲಿಯೋಟ್ರೋಫಿಕ್ ಹರ್ಪೀಸ್ ವೈರಸ್’(ಇಎಚ್‌ವಿ) ಪತ್ತೆಯಾಗಿದೆ.
ಈ ಆನೆ ಬಿಡಾರದ ಸಾವಿನ ಸರಣಿಯ ಕೊನೆಯಲ್ಲಿದ್ದ ನಾಗಣ್ಣನ ಮೃತ ದೇಹದಲ್ಲಿ ಈ ಹರ್ಪೀಸ್ ವೈರಸ್ ಪತ್ತೆಯಾಗಿದ್ದು, ಇದೇ ಆನೆಯ ಸಾವಿಗೆ ಕಾರಣವಾಗಿದೆ. ಇದರಿಂದಾಗಿ ಇಡೀ ಆನೆ ಬಿಡಾರದಲ್ಲೀಗ ಆತಂಕದ ಛಾಯೆ ಮನೆ ಮಾಡಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಆನೆ ಬಿಡಾರವೊಂದರಲ್ಲಿ ಈ ಮಾರಣಾಂತಿಕ ವೈರಸ್ ಕಾಣಿಸಿದ್ದು, ಬೆನ್ನಲ್ಲೇ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗೂ ಸಕ್ರೆಬೈಲು ಆನೆ ಬಿಡಾರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಸಕ್ರೆಬೈಲು ಆನೆ ಬಿಡಾರದಲ್ಲಿನ ಮರಿಯಾನೆ ಮತ್ತು ಅದರ ತಾಯಿ ಸೇರಿ ಹತ್ತು ಆನೆಗಳನ್ನು ಬಿಡಾರದಿಂದ ಬೇರ್ಪಡಿಸಿ ಇಲ್ಲಿಂದ ಸುಮಾರು 8 ಕಿ. ಮೀ. ದೂರವಿರುವ ನಂದಳ್ಳಕ್ಕೆ ಸ್ಥಳಾಂತರಿಸಲಾಗಿದೆ.
ರೋಗ ನಿರೋಧಕ ಚುಚ್ಚು ಮದ್ದು:
ಆನೆ ಬಿಡಾರದ ಎಲ್ಲ ಆನೆಗಳಿಗೂ ಮುನ್ನೆಚ್ಚರಿಕೆ ಕ್ರಮವಾಗಿ ರೋಗ ನಿರೋಧಕ ಚುಚ್ಚುಮದ್ದನ್ನು ನೀಡಲಾಗುತ್ತಿದ್ದು, ನಿಗಾ ವಹಿಸಲಾಗುತ್ತಿದೆ. ಆದರೆ ಈ ವೈರಸ್ ಆನೆಯೊಂದರಲ್ಲಿ ಕಾಣಿಸಿಕೊಂಡ 48 ಗಂಟೆಗಳ ಒಳಗಾಗಿ ಸಾವು ಕಾಣುವ ಸಾಧ್ಯತೆ ಇದ್ದು, ಇದು ಇಲಾಖೆಯನ್ನು ಕಂಗಾಲಾಗಿಸಿದೆ. ಯಾವ ರೀತಿಯಲ್ಲಿ ಇದನ್ನು ತಡೆಗಟ್ಟಬಹುದು ಎಂಬುದರ ಬಗ್ಗೆ ಇಲಾಖೆ ತಲೆ ಕೆಡಿಸಿಕೊಳ್ಳುತ್ತಿದ್ದು, ಪರಿಹಾರ ಕಾಣುತ್ತಿಲ್ಲ. ಯಾವುದೇ ಕ್ಷಣದಲ್ಲಿ ಆನೆ ಬಿಡಾರದ ಮೇಲೆ ‘ಯಮರಾಯ’ ದಾಳಿ ನಡೆಸಬಹುದು. ಅದರಲ್ಲಿಯೂ ಮರಿಯಾನೆಗಳಿಗೆ ಈ ರೋಗ ತಗಲುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಇದುವರೆಗೆ ಕರ್ನಾಟಕದಲ್ಲಿ ಈ ರೀತಿಯ ವೈರಸ್ ಕಾಣಿಸಿಕೊಂಡಿರಲಿಲ್ಲ. ಇಲ್ಲಿ ಮಾತ್ರವಲ್ಲ, ಮಧ್ಯಪ್ರದೇಶ ಮತ್ತು ಓಡಿಶಾ ರಾಜ್ಯದ ಹೊರತಾಗಿ ಬೇರೆಲ್ಲೂ ಈ ವೈರಾಣು ಪತ್ತೆಯಾಗಿರಲಿಲ್ಲ. ಈ ಹಿಂದೆ ಮಧ್ಯಪ್ರದೇಶ ಮತ್ತು ಓಡಿಸ್ಸಾ ರಾಜ್ಯದಲ್ಲಿ ಈ ವೈರಾಣುವಿನಿಂದಾಗಿ ಹಲವು ಆನೆಗಳು ಮೃತಪಟ್ಟಿದ್ದವು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪತ್ತೆಯಾಗಿದ್ದು ಹೇಗೆ?: ಕಳೆದ ಮೂರೂವರೆ ವರ್ಷಗಳಲ್ಲಿ ಈ ಬಿಡಾರದಲ್ಲಿ 9 ಆನೆಗಳು ಮೃತಪಟ್ಟಿದ್ದು, ಈ ಒಂದು ವರ್ಷದಲ್ಲಿಯೇ ನಾಲ್ಕು ಆನೆಗಳು ಮೃತಪಟ್ಟಿದ್ದವು. ಅದರಲ್ಲಿಯೂ ಎಳೆ ಮತ್ತು ಮಧ್ಯ ವಯಸ್ಕ ಆನೆಗಳೇ ಹೆಚ್ಚಾಗಿ ಮೃತಪಡುತ್ತಿದ್ದವು. ಈ ಬಗ್ಗೆ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ರಾಜ್ಯದಲ್ಲಿನ ವಿವಿಧ ಆನೆ ಬಿಡಾರಗಳಲ್ಲಿ ಆನೆಗಳು ಸಾಯುತ್ತಿರುವ ಕುರಿತು ಸಮಗ್ರ ತನಿಖೆ ನಡೆಸುವಂತೆ ವ್ಯಕ್ತಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿತ್ತು.
2019 ರ ಜೂನ್‌ನಲ್ಲಿ ಭಾರತಿ ಮತ್ತು ಜುಲೈನಲ್ಲಿ ಶಾರದಾ ಎಂಬ ಮರಿಯಾನೆಗಳು ಇದ್ದಕ್ಕಿದ್ದಂತೆ ಮೃತಪಟ್ಟಿದ್ದವು. ಈ ಎರಡೂ ಮರಿಗಳು ಬೇರೆ ಬೇರೆ ಕಾರಣಕ್ಕೆ ಮೃತಪಟ್ಟಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದ ಇಲಾಖೆ ಇವುಗಳ ಅಂತ್ಯ ಸಂಸ್ಕಾರ ನಡೆಸಿತ್ತು. ಆದರೆ ಆ. 23 ರಂದು ನಾಗಣ್ಣ ಎಂಬ ಮಧ್ಯ ವಯಸ್ಕ ಆನೆಯೊಂದು ಮೃತಪೃಟ್ಟಾಗ ಸಹಜವಾಗಿಯೇ ಬಿಡಾರದಲ್ಲಿ ಆತಂಕ ಮನೆ ಮಾಡಿತ್ತು. ತಕ್ಷಣವೇ ನಾಗಣ್ಣನ ದೇಹದ ಕೆಲ ಅಂಗಾಂಗಗಳು, ರಕ್ತದ ಮಾದರಿ, ಬಾಯಿಯ ಜೊಲ್ಲಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪರೀಕ್ಷೆಯಲ್ಲಿ ನಾಗಣ್ಣನ ಸಾವಿಗೆ ಹರ್ಪೀಸ್ ರೋಗಾಣು ಕಾರಣ ಎಂಬುದು ಪತ್ತೆಯಾಯಿತು.
ಮಾದರಿ ಸಂಗ್ರಹ: ಬೆನ್ನಲ್ಲೇ ಇದೀಗ ಬಿಡಾರದ ಎಲ್ಲ ಆನೆಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇವುಗಳ ಫಲಿತಾಂಶ ಇನ್ನಷ್ಟೇ ಬರಬೇಕಿದೆ. ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಇದು ಬಾರದಂತೆ ತಡೆಗಟ್ಟುವ ಪ್ರಯತ್ನ ನಡೆಸಬಹುದು. ಆದರೆ ಇದು ನಿಖರ ಫಲಿತಾಂಶ ನೀಡುವುದಿಲ್ಲ ಎನ್ನುತ್ತಾರೆ ಬಿಡಾರದ ತಜ್ಞರು. ಪ್ರಪಂಚದಲ್ಲಿ 1995 ರಲ್ಲಿ ಮೊದಲ ಬಾರಿಗೆ ಈ ರೋಗದ ವೈರಾಣು ಪತ್ತೆಯಾಗಿತ್ತು.