ವೆಂಕಟೇಶ್ ಪ್ರಸಾದ್ ನೇತೃತ್ವದ 'ಗೇಮ್ ಚೇಂಜರ್' ಬಣದಿಂದ KSCA ಚುನಾವಣೆಗೆ ಸ್ಪರ್ಧಿಸುತ್ತಿರುವ ನಾಗೇಂದ್ರ ಕೆ. ಪಂಡಿತ್, ಶಿವಮೊಗ್ಗ ವಲಯದ ಪ್ರಮುಖ ಅಭ್ಯರ್ಥಿಯಾಗಿದ್ದಾರೆ. ಗ್ರಾಮೀಣ ಪ್ರತಿಭೆಗಳಿಗೆ ತರಬೇತಿ ನೀಡಲು ತಮ್ಮದೇ ಆದ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಶಿವಮೊಗ್ಗ (ಡಿ.4): ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ನೇತೃತ್ವದ 'ಗೇಮ್ ಚೇಂಜರ್' ಬಣವು 2025-2028ರ ಅವಧಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕ್ರಿಕೆಟ್ ಸಂಬಂಧಿತ ಕೆಲವು ಅಹಿತಕರ ಘಟನೆಗಳ (ಆರ್‌ಸಿಬಿ ಸಂಭ್ರಮಾಚರಣೆಯ ಕಾಲ್ತುಳಿತ, ಮಹಿಳಾ ವಿಶ್ವಕಪ್ ಸ್ಥಳಾಂತರ) ಹಿನ್ನೆಲೆಯಲ್ಲಿ ಈ ಚುನಾವಣೆ ಮಹತ್ವ ಪಡೆದಿದೆ. ಡಿಸೆಂಬರ್ 7 ರಂದು ನಡೆಯಲಿರುವ ಕೆಎಸ್‌ಸಿಎ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ, ಶಿವಮೊಗ್ಗ ವಲಯದಿಂದ (Shivamogga Zone) ಸ್ಪರ್ಧಿಸುತ್ತಿರುವ ನಾಗೇಂದ್ರ ಕೆ. ಪಂಡಿತ್ ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಯಾರು ಈ ನಾಗೇಂದ್ರ ಕೆ. ಪಂಡಿತ್?: 

ಸಾಗರದವರಾದ ನಾಗೇಂದ್ರ ಕೆ. ಪಂಡಿತ್ ಅವರು 80ರ ದಶಕದ ಮಲೆನಾಡು ಪರಿಸರ ಕಂಡ ರಾಜ್ಯ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ತಮ್ಮ 15ನೇ ವಯಸ್ಸಿನಿಂದ ಸತತ ಏಳು ವರ್ಷಗಳ ಕಾಲ ಕೆಎಸ್‌ಸಿಎ ಶಿವಮೊಗ್ಗ ವಲಯವನ್ನು ಪ್ರತಿನಿಧಿಸಿ, ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು ರಾಜ್ಯ ಕಂಬೈಂಡ್ ಮೊಫಿಷಿಯಲ್ ಟೀಮ್, ಮೈಸೂರು ವಿಶ್ವವಿದ್ಯಾಲಯ ಮತ್ತು ದಕ್ಷಿಣ ವಲಯ ತಂಡವನ್ನು ಸಹ ಪ್ರತಿನಿಧಿಸಿದ್ದರು. ಕ್ರೀಡಾ ಕೋಟಾದಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿ ನೇಮಕಗೊಂಡ ನಂತರವೂ ಕ್ರಿಕೆಟ್ ಮೇಲಿನ ಅವರ ಒಲವು ಮುಂದುವರೆಯಿತು.

NPCA ಸ್ಥಾಪನೆ: 

ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ, ನಾಗೇಂದ್ರ ಪಂಡಿತ್ ಅವರು ತಮಗೆ ಸಿಕ್ಕಿದ್ದನ್ನು ಕ್ರಿಕೆಟ್‌ಗೆ ವಾಪಸ್ ನೀಡುವ ಗುರಿಯೊಂದಿಗೆ ಸಾಗರದಲ್ಲಿ 'ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡೆಮಿ' (NPCA) ಒಳಾಂಗಣ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ. ತಮ್ಮ ಉಳಿತಾಯವನ್ನು ಬಳಸಿ ತೆರೆದಿರುವ ಈ ಅಕಾಡೆಮಿ ಮೂಲಕ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶದ ಪ್ರತಿಭಾವಂತ ಯುವ ಕ್ರಿಕೆಟಿಗರಿಗೆ ತರಬೇತಿ ನೀಡುತ್ತಿದ್ದಾರೆ. ಪ್ರಸ್ತುತ 35-40 ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದು, ಇವರಲ್ಲಿ ಹಲವರು ರಾಜ್ಯಮಟ್ಟದಲ್ಲಿ ಸ್ಥಾನ ಪಡೆಯುವ ಕನಸು ಹೊಂದಿದ್ದಾರೆ. ಗೇಮ್ ಚೇಂಜರ್ ಬಣದ ಭಾಗವಾಗಿ ಕೆಎಸ್‌ಸಿಎ ಚುನಾವಣೆಗೆ ಸ್ಪರ್ಧಿಸುವ ಮೂಲಕ, ನಾಗೇಂದ್ರ ಕೆ. ಪಂಡಿತ್ ಅವರು ಸಂಸ್ಥೆಯಲ್ಲಿ ಹೊಸ ಸವಾಲನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ.

ಟೀಂ ಗೇಮ್‌ ಚೇಂಜರ್ಸ್‌ ಬಣದ ಅಭ್ಯರ್ಥಿಗಳಿವರು:

1. ವೆಂಕಟೇಶ್ ಪ್ರಸಾದ್: ಅಧ್ಯಕ್ಷ ಹುದ್ದೆಯ ಸ್ಪರ್ಧಾಳು

2. ಸುಜಿತ್ ಸೋಮಸುಂದರ್: ಉಪಾಧ್ಯಕ್ಷ ಹುದ್ದೆಯ ಸ್ಪರ್ಧಾಳು

3. ಸಂತೋಷ್ ಮೆನನ್: ಕಾರ್ಯದರ್ಶಿ ಹುದ್ದೆಯ ಸ್ಪರ್ಧಾಳು

4. ಎ.ವಿ ಶಶಿಧರ: ಜಂಟಿ ಕಾರ್ಯದರ್ಶಿ ಹುದ್ದೆಯ ಸ್ಪರ್ಧಾಳು

5. ಬಿ.ಎನ್. ಮಧುಕರ್: ಖಜಾಂಚಿ ಹುದ್ದೆಯ ಸ್ಪರ್ಧಾಳು

6. ವಿ ಎಂ ಮಂಜುನಾಥ್: ಮ್ಯಾನೇಜಿಂಗ್ ಕಮಿಟಿ ಮೆಂಬರ್ ಸ್ಪರ್ಧಿ

7. ಶೈಲೇಶ್ ಪೌಲ್: ಮ್ಯಾನೇಜಿಂಗ್ ಕಮಿಟಿ ಮೆಂಬರ್ ಸ್ಪರ್ಧಿ

8. ಆಶೀಶ್ ಅಮರ್‌ಲಾಲ್: ಮ್ಯಾನೇಜಿಂಗ್ ಕಮಿಟಿ ಮೆಂಬರ್ ಸ್ಪರ್ಧಿ

9. ಅವಿನಾಶ್ ವೈದ್ಯ: ಮ್ಯಾನೇಜಿಂಗ್ ಕಮಿಟಿ ಮೆಂಬರ್ ಸ್ಪರ್ಧಿ

10. ಕಲ್ಪನಾ ವೆಂಕಟಾಚಾರ್: ಮ್ಯಾನೇಜಿಂಗ್ ಕಮಿಟಿ ಮೆಂಬರ್ ಸ್ಪರ್ಧಿ

11. ಶ್ರೀನಿವಾಸ್ ಪ್ರಸಾದ್: ಮೈಸೂರು ಝೋನ್ ಸ್ಪರ್ಧಾಳು

12. ನಾಗೇಂದ್ರ ಪಂಡಿತ್: ಶಿವಮೊಗ್ಗ ಝೋನ್ ಸ್ಪರ್ಧಾಳು

13. ಸಿ ಆರ್ ಹರೀಶ್: ತುಮಕೂರು ಝೋನ್ ಸ್ಪರ್ಧಾಳು

14. ಅಹಮದ್ ರಾಜಾ ಕಿತ್ತೂರು: ಧಾರವಾಡ ಝೋನ್ ಸ್ಪರ್ಧಾಳು

15. ಪಾರ್ಥಸಾರಥಿ ಕನಕವಿಡು: ರಾಯಚೂರು ಝೋನ್ ಸ್ಪರ್ಧಾಳು