ಸುಭಾಶ್ಚಂದ್ರ ಎಸ್‌.ವಾಗ್ಳೆ

ಆಗುಂಬೆ [ಅ.18]:  ಆಗುಂಬೆ ಮಳೆಕಾಡು ಹತ್ತಾರು ಕೌತುಕಗಳ ಆಗರ, ಅಂತಹ ಒಂದು ಕೌತುಕ ಎಂದರೆ ಅದು ಕಾಳಿಂಗ ಹಾವುಗಳ ಸ್ವರ್ಗ, ಆದರೆ ಈ ಕೌತುಕದ ಜೊತೆಗೆ ಆತಂಕಕಾರಿ ವಿಷಯವೂ ಇದೀಗ ಬೆಳಕಿಗೆ ಬಂದಿದೆ, ಅದೆಂದರೆ ಈ ಕಾಳಿಂಗ ಸರ್ಪಗಳ ಲಿಂಗಾನುಪಾತ.

ಆಗುಂಬೆಯಲ್ಲಿರುವ ಗಂಡು ಹೆಣ್ಣು ಕಾಳಿಂಗ ಸರ್ಪಗಳ ಲಿಂಗಾನುಪಾತ ಹೆಚ್ಚುಕಡಿಮೆ 85:15. ಅಂದರೆ ಇಲ್ಲಿ 100 ಕಾಳಿಂಗ ಸರ್ಪಗಳನ್ನು ಪತ್ತೆಯಾದರೆ ಅವುಗಳಲ್ಲಿ 85 ಗಂಡು ಕಾಳಿಂಗ ಸರ್ಪಗಳು ಮತ್ತು ಕೇವಲ 15 ಹೆಣ್ಣು ಕಾಳಿಂಗ ಸರ್ಪಗಳು ಸಿಗುತ್ತಿವೆ.

ಇದು ಯಾಕೆ ಹೀಗೆ ಆಯಿತು ಎಂಬುದಕ್ಕೆ ನಿಖರವಾದ ಕಾರಣಗಳು ಗೊತ್ತಾಗಿಲ್ಲ, ಈ ವ್ಯತ್ಯಾಸ ಹಿಂದೆಯೂ ಹೀಗೆ ಇತ್ತೇ ಅಥವಾ ಇತ್ತೀಚೆಗೆ ಹೀಗಾಯಿತೇ ಅಥವಾ ಇದೊಂದು ಪ್ರಾಕೃತಿಕ ನಿಯಮವೇ ಎಂಬ ಬಗ್ಗೆ ಇದೀಗ ಆಗುಂಬೆಯಲ್ಲಿರುವ ರೈನ್‌ ಫಾರೆಸ್ಟ್‌ ರಿಸರ್ಚ್ ಸ್ಟೇಷನ್‌ (ಎಆರ್‌ಎಫ್‌ಆರ್‌ಎಸ್‌) ಸಂಶೋಧನೆ ನಡೆಸುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದಕ್ಕಾಗಿ ವಾರದ ಹಿಂದೆ ಹೆಣ್ಣು ಕಾಳಿಂಗ ಹಾವಿಗೆ ರೇಡಿಯೋ ಟೆಲಿಮೆಟ್ರಿ ಚಿಪ್‌ ಅಳವಡಿಸಲಾಗಿದೆ. ಈ ಚಿಪ್‌ ಹಾವಿನ ಚಲನವಲನ, ವರ್ತನೆ, ಜೀವನ ಕ್ರಮದ ಬಗ್ಗೆ ಮಾಹಿತಿ ನೀಡುತ್ತದೆ. ಇದರಿಂದ ಅವುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ನಿಖರ ಮಾಹಿತಿ ಸಿಗಲಿದೆ ಎಂದು ಎಆರ್‌ಎಫ್‌ಆರ್‌ಎಸ್‌ ಸಂಶೋಧನಾ ನಿರ್ದೇಶಕ ಅಜಯ್‌ ಗಿರಿ   ತಿಳಿಸಿದ್ದಾರೆ.

ಕಾಳಿಂಗ ಸರ್ಪ ಸ್ವಜಾತಿಭಕ್ಷಕ!:

ಕಾಳಿಂಗ ಸರ್ಪ ಸ್ವಜಾತಿಭಕ್ಷಕ, ಅದು ಕೇರೆ ಹಾವು , ನಾಗರಹಾವು (ಕೋಬ್ರ), ಹಪ್ಪಟೆ ಹಾವು (ಪಿಟ್‌ ವೈಪರ್‌), ಹೆಬ್ಬಾವು (ಪೈಥಾನ್‌) ಇತ್ಯಾದಿ ಹಾವುಗಳನ್ನು ತಿನ್ನುತ್ತದೆ. ವಿಚಿತ್ರ ಅವು ಕಾಳಿಂಗ ಸರ್ಪಗಳನ್ನೂ ತಿನ್ನುತ್ತವೆ.

ಕಾಳಿಂಗ ಸರ್ಪಕ್ಕೂ ಬಂತು ಆಧಾರ್ ರೀತಿ ವಿಶಿಷ್ಟ ನಂಬರ್!...

ಬೇರೆ ಹಾವುಗಳಲ್ಲಿ ಹೆಣ್ಣು ಹಾವು ಉದ್ದ ಮತ್ತು ಬಲಿಷ್ಠವಾಗಿರುತ್ತವೆ. ಆದರೆ ಕಾಳಿಂಗ ಸರ್ಪಗಳಲ್ಲಿ ಗಂಡು ಹಾವೇ ಬಲಿಷ್ಠ ಮತ್ತು ಉದ್ದ. ಗಂಡು ಕಾಳಿಂಗ ಸರ್ವೇಸಾಧಾರಣವಾಗಿ 10-12 ಅಡಿ ಉದ್ದವಿದ್ದರೆ, ಹೆಣ್ಣು ಕಾಳಿಂಗ ಸರ್ಪ 6 - 8 ಅಡಿ ಉದ್ದವಿರುತ್ತದೆ.

ಸುಖಿಸಿ ಕೊಂದು ತಿನ್ನುತ್ತದೆ!:

ಹೆಣ್ಣು ಕಾಳಿಂಗ ಸರ್ಪ ತನ್ನ ದೇಹದಿಂದ ಒಂದು ವಿಚಿತ್ರ ರೀತಿಯ ವಾಸನೆಯನ್ನು ಹೊರಸೂಸುವ ಮೂಲಕ ತಾನು ಲೈಂಗಿಕಕ್ರಿಯೆಗೆ ಸಿದ್ಧವಿರುವುದನ್ನು ಪ್ರಕಟಪಡಿಸುತ್ತದೆ. ಅದನ್ನು ಸೇರಲು ಬರುವ ಒಂದಕ್ಕಿಂತ ಹೆಚ್ಚು ಗಂಡು ಕಾಳಿಂಗ ಸರ್ಪಗಳ ಮಧ್ಯೆ ಕಾದಾಟ ನಡೆದು, ಗೆದ್ದ ಗಂಡು ಕಾಳಿಂಗ ಹೆಣ್ಣು ಕಾಳಿಂಗದೊಂದಿಗೆ ಕೂಡುತ್ತದೆ. ಈ ಮಿಥುನ ಕ್ರಿಯೆ ಸುಮಾರು ಒಂದು ಗಂಟೆಯವರೆಗೂ ನಡೆಯುತ್ತವೆ.

ಈ ರೀತಿ ಲೈಂಗಿಕ ಕ್ರಿಯೆಯ ನಂತರ ಗಂಡು ಕಾಳಿಂಗ ಹೆಣ್ಣು ಕಾಳಿಂಗ ಹಾವನ್ನು ಕಚ್ಚಿ ಕೊಂದು ತಿನ್ನುವ ವಿಚಿತ್ರ ಘಟನೆಗಳು ಕ್ಯಾಮೆರದಲ್ಲಿ ದಾಖಲಾಗಿವೆ. ಆದರೆ ಇದಕ್ಕೆ ಕಾರಣ ಏನು ಎಂಬುದು ಮಾತ್ರ ಖಚಿತವಾಗಿಲ್ಲ. ಹೆಣ್ಣು ಕಾಳಿಂಗಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಇದೂ ಒಂದು ಕಾರಣ ಇರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಕಾಳಿಂಗ ಸರ್ಪಕ್ಕೂ ಮನುಷ್ಯರಿಗೂ ಏನೀ ಸಂಬಂಧ?...

ಜೊತೆಗೆ ಹೆಣ್ಣು ಕಾಳಿಂಗ ಹಾವುಗಳು ಹೆಚ್ಚು ಸೂಕ್ಷ್ಮ ಸ್ವಭಾವ ಹಾವುಗಳಾಗಿರುತ್ತವೆ. ಅವುಗಳ ವಾಸಸ್ಥಾನದ ವ್ಯಾಪ್ತಿಯೂ ಗಂಡಿಗಿಂತ ಕಡಿಮೆ ಇರುತ್ತವೆ, ಆದ್ದರಿಂದ ಅವು ತುಂಬಾ ಸಂಖ್ಯೆಯಲ್ಲಿ ಕಣ್ಣಿಗೆ ಬೀಳುವುದಿಲ್ಲ, ಆದ್ದರಿಂದ ಅವುಗಳ ಸಂಖ್ಯೆ ಕಡಿಮೆ ಇದೆ ಎಂಬ ಸಂಶಯಕ್ಕೂ ಕಾರಣವಾಗಿರಬಹುದು ಎನ್ನುತ್ತಾರೆ ತಜ್ಞರು.

ಒಟ್ಟಾರೆ, ಹೆಣ್ಣು ಕಾಳಿಂಗ ಸರ್ಪಗಳ ಸಂಖ್ಯೆ ಇಳಿಕೆಯಾಗಿರುವುದು ಬಹಳ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿರುವುದು ನಿಜ, ವಿಶ್ವದ ಬೇರೆಲ್ಲಿಯೂ ಈ ಬಗ್ಗೆ ಅಧ್ಯಯನ ಆಗಿಲ್ಲ. ಪ್ರಸ್ತುತ ಆಗುಂಬೆ ರೈನ್‌ ಫಾರೆಸ್ಟ್‌ ರಿಸರ್ಚ್ ಸ್ಟೇಷನ್‌ನಲ್ಲಿ ಈ ಬಗ್ಗೆ ಸಂಶೋಧನೆ ಆರಂಭಿಸಲಾಗಿದೆ. ಇದು ದೀರ್ಘಕಾಲೀನ ಸಂಶೋಧನೆಯಾಗಿರುವುದರಿಂದ ಇನ್ನೊಂದು ವರ್ಷದಲ್ಲಿ ಉತ್ತರ ಸಿಗಬಹುದು ಎನ್ನುತ್ತಾರೆ ಅಜಯ್‌ ಗಿರಿ.

ಗಂಡು ಕಾಳಿಂಗ ಸರ್ಪ ಏಕಪತ್ನಿ ವ್ರತಸ್ಥವಂತೆ!

ಈ ಬಗ್ಗೆ ಅಂತರ್ಜಾಲ ತಾಣಗಳಲ್ಲಿ ತಜ್ಞರು ಅನೇಕ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಪ್ರತಿಯೊಂದು ಕಾಳಿಂಗ ಹಾವಿಗೂ ನಿರ್ದಿಷ್ಟಭೌಗೋಳಿಕ ವ್ಯಾಪ್ತಿ ಇರುತ್ತದೆ, ಗಂಡು ಕಾಳಿಂಗ ತನ್ನ ವ್ಯಾಪ್ತಿಯೊಳಗೆ ಬಂದ ಹೆಣ್ಣು ಹಾವನ್ನು ಕೊಲ್ಲುತ್ತದೆ, ಹೆಣ್ಣು ಕಾಳಿಂಗ ಹಾವು ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ಅದನ್ನು ಗಂಡು ಕಾಳಿಂಗ ಹಾವು ಕೊಲ್ಲುತ್ತದೆ, ಗಂಡು ಹಾವು ಬಲಿಷ್ಠವಾಗಿರುವುದರಿಂದ ಹಸಿವಾದಾಗ ತನಗಿಂತ ದುರ್ಬಲ ಹೆಣ್ಣು ಹಾವನ್ನು ಕೊಂದು ತಿನ್ನುತ್ತದೆ ಎಂದೆಲ್ಲಾ ಹೇಳಲಾಗುತ್ತಿದೆ. ಎಲ್ಲಕ್ಕಿಂತ ವಿಚಿತ್ರ ಎಂದರೆ ಗಂಡು ಕಾಳಿಂಗಗಳು ಏಕಪತ್ನಿ ವ್ರತಸ್ಥವಾಗಿರುತ್ತವೆ, ತಾನು ಕೂಡಿದ ಹೆಣ್ಣು ಕಾಳಿಂಗ ಬೇರೆ ಗಂಡು ಹಾವಿನೊಂದಿಗೆ ಕೂಡಿದ್ದು ತಿಳಿದರೆ, ಅದನ್ನು ಗಂಡು ಕಾಳಿಂಗ ಕೊಂದು ಬಿಡುತ್ತದೆ ಎಂದೂ ಒಬ್ಬರು ಇಂಟರ್‌ನೆಟ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಅದಕ್ಕೆಲ್ಲಾ ಯಾವುದೇ ದಾಖಲೆಗಳಿಲ್ಲ. ಇದರಲ್ಲಿ ಸತ್ಯ ಎಷ್ಟು ಸುಳ್ಳೆಷ್ಟು ಎಂಬುದು ಈಗ ಅಧ್ಯಯನದಿಂದಷ್ಟೇ ಸಿದ್ಧಗೊಳ್ಳಬೇಕಾಗಿವೆ.