Asianet Suvarna News Asianet Suvarna News

ಶಿವಮೊಗ್ಗ ರೈತರಿಗೆ ಸಿಎಂ ಗುಡ್ ನ್ಯೂಸ್ : ಶೀಘ್ರವೇ ಮಂಕಿ ಪಾರ್ಕ್

ಶಿವಮೊಗ್ಗದಲ್ಲಿ ಮಂಗಗಳಿಂದ ವಿವಿಧ ಬೆಳೆಗಳು ತೀವ್ರ ಹಾನಿಯಾಗುತ್ತಿದ್ದು ಈ ನಿಟ್ಟಿನಲ್ಲಿ ಶೀಘ್ರ ಮಂಕಿ ಪಾರ್ಕ್ ನಿರ್ಮಾಣ ಮಾಡಲು ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. 

CM BS Yediyurappa Order To Build Moneky Park In Shivamogga
Author
Bengaluru, First Published Nov 6, 2019, 9:23 AM IST

ಬೆಂಗಳೂರು [ನ.06]:  ಮಂಗಗಳಿಂದ ರೈತರ ಬೆಳೆ ಹಾಳಾಗುವುದನ್ನು ತಡೆಯಲು ಯಾವುದೇ ನೆಪ ಹೇಳದೆ ಶಿವಮೊಗ್ಗದಲ್ಲಿ ಕೂಡಲೇ ‘ಮಂಗಗಳ ಪಾರ್ಕ್’ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿದ ಅವರು, ಮಂಗಗಳ ಪಾರ್ಕ್ ನಿರ್ಮಿಸಲು ಅಧ್ಯಯನ ಎಂದೆಲ್ಲಾ ನೆಪ ಹೇಳದೇ ಕೂಡಲೇ 100 ಎಕರೆ ಪ್ರದೇಶದಲ್ಲಿ ಮಂಗಗಳ ಪಾರ್ಕ್ ಮಾಡುವಂತೆ ಸೂಚನೆ ನೀಡಿದರು.

ಹಿಮಾಚಲ ಪ್ರದೇಶದಲ್ಲಿ ‘ಮಂಕಿ ಪಾರ್ಕ್’ ಇದೆ. ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ ಅಧ್ಯಯನ ಮಾಡಿದ ನಂತರ ಶಿವಮೊಗ್ಗದಲ್ಲಿ ಪಾರ್ಕ್ ಮಾಡೋಣ ಎಂಬ ಅರಣ್ಯ ಅಧಿಕಾರಿಯೊಬ್ಬರ ಸಲಹೆಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ನೀವೆಲ್ಲ ಅಧ್ಯಯನ ಮಾಡುವುದರಲ್ಲೇ ಕಾಲ ಕಳೆಯುತ್ತೀರಾ. ನೆರೆ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು ಅಧ್ಯಯನ ಮಾಡುವಂತಹ ಕೆಲಸ ಏನು ಮಾಡಿದ್ದೀರಾ? ಕೂಡಲೇ ಶಿವಮೊಗ್ಗದಲ್ಲಿ ಮಂಗಗಳ ಪಾರ್ಕ್ ಮಾಡಿ ಅಲ್ಲಿಯೇ ಅಧ್ಯಯನ ಮಾಡೋಣ. ಪಾರ್ಕ್ ಯಶಸ್ವಿಯಾದರೆ ಬೇರೆ ಕಡೆಯೂ ಮಾಡೋಣ ಎಂದು ಸೂಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದಕ್ಕೂ ಮುನ್ನ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗದಲ್ಲಿ ಮಂಗಗಳಿಂದ ರೈತರ ಬೆಳೆ ಹಾಳಾಗುತ್ತಿದೆ. ರೈತರು ಮಂಗಗಳಿಗೆ ಹೆದರುವ ಪರಿಸ್ಥಿತಿ ಇದೆ. ಹಾಗಾಗಿ, ಮಂಗಗಳಿಂದ ರೈತರ ಬೆಳೆಗಳನ್ನು ಸಂರಕ್ಷಿಸಲು ಹಾಗೂ ಮಂಗಗಳನ್ನೂ ಸಂರಕ್ಷಣೆ ಮಾಡಲು ಮಂಗಗಳ ಪಾರ್ಕ್ ಅಗತ್ಯವಿದೆ. ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸದ ಕಾರಣ ಮಂಗಗಳು ರೈತರ ಬೆಳೆಗಳಿಗೆ ಹಾನಿ ಮಾಡುತ್ತಿವೆ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಈ ಸಮಸ್ಯೆಗೆ ಕಾರಣ ಎಂದರು.

ಸಭೆಯಲ್ಲಿ ಸಚಿವರಾದ ಕೆ.ಎಸ್‌.ಈಶ್ವರಪ್ಪ, ಸಿ.ಸಿ.ಪಾಟೀಲ್‌, ಕೋಟಾ ಶ್ರೀನಿವಾಸ್‌ ಪೂಜಾರಿ, ಶಾಸಕರಾದ ಅರಗ ಜ್ಞಾನೇಂದ್ರ, ಕುಮಾರ್‌ ಬಂಗಾರಪ್ಪ, ಹರತಾಳು ಹಾಲಪ್ಪ ಹಾಗೂ ಅಧಿಕಾರಿಗಳು ಇದ್ದರು.

Follow Us:
Download App:
  • android
  • ios