Asianet Suvarna News Asianet Suvarna News

'ಸಿಹಿ' ಸುದ್ದಿ: ಈಗ ತೀರ್ಥಹಳ್ಳಿಯಲ್ಲೇ ತಯಾರಾಗ್ತಿದೆ ಆಗ್ರಾ ಪೇಟಾ..!

ಬಾಯಲ್ಲಿ ನೀರೂರಿಸುವ, ಆರೋಗ್ಯಕರವಾದ ಬೂದಗುಂಬಳಕಾಯಿಯಿಂದ ತಯಾರಿಸಲಾಗುವ ಸಿಹಿ ತಿನಿಸು ಆಗ್ರಾ ಪೇಟಾ ಇದೀಗ ಮಲೆನಾಡಿನಲ್ಲೇ ತಯಾರಾಗಲಿದೆ. ಸದ್ಯದಲ್ಲೇ ತೀರ್ಥಹಳ್ಳಿ ಪೇಟಾ ಮಾರುಕಟ್ಟೆಗೆ ಬರಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Agra petha manufactured in Thirthahalli good news for sweet lovers
Author
Thirthahalli, First Published May 4, 2020, 12:16 PM IST

ವರದಿ: ಜಿ.ಆರ್‌. ಸತ್ಯನಾರಾಯಣ

ತೀರ್ಥಹಳ್ಳಿ(ಮೇ.04): ತೀರ್ಥಹಳ್ಳಿ ಪೇಟಾ ಮಾರುಕಟ್ಟೆಗೆ ಬರಲಿದೆ. ಇದು ತಾಲೂಕಿನ ಬೂದಗುಂಬಳಕಾಯಿ ಬೆಳೆಗಾರರಿಗೆ ವರದಾನವಾಗಲಿದ್ದು, ರೈತರು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ. ಬಾಯಲ್ಲಿ ನೀರೂರಿಸುವ, ಆರೋಗ್ಯಕರವಾದ ಬೂದಗುಂಬಳಕಾಯಿಯಿಂದ ತಯಾರಿಸಲಾಗುವ ಸಿಹಿ ತಿನಿಸು ಪೇಟಾ. ಈ ವರೆಗೆ ಉತ್ತರ ಭಾರತದಲ್ಲಿ ತಯಾರಿಸಲಾಗುತ್ತಿದ್ದು, ಇದು ಆಗ್ರ ಪೇಟಾ ಎಂದೇ ಹೆಸರುವಾಸಿಯಾಗಿದೆ.

ಈ ಬಾರಿ ಕೊರೋನಾ ಎಫೆಕ್ಟ್ನಿಂದಾಗಿ ತಾಲೂಕಿನ ಬೂದಗುಂಬಳಕಾಯಿ ಬೆಳೆಗಾರರಿಗೆ ಬೆಳೆದ ಬೆಳೆಯನ್ನು ಹೊರ ರಾಜ್ಯಗಳಿಗೆ ಕಳುಹಿಸಲಾಗದೆ ಗದ್ದೆಯಲ್ಲೇ ಬೆಳೆ ಹಾಳಾಗಿ ಹೋಗುವ ಅಪಾಯ ಎದುರಾಗಿದ್ದು, ನಷ್ಟದ ಸುಳಿಯಲ್ಲಿ ಸಿಲುಕುವ ಅಪಾಯ ಎದುರಾಗಿತ್ತು.

ತಾಲೂಕಿನಲ್ಲಿ ಸುಮಾರು 2000 ಕ್ವಿಂಟಲ್‌ ಬೂದಗುಂಬಳಕಾಯಿ ಬೆಳೆ ಹಾಳಾಗುವ ಅಪಾಯ ಎದುರಾಗಿತ್ತು. ಮಹಾರಾಷ್ಟ್ರ, ಗೋವಾ, ಪುಣೆಯಂತಹ ನಗರ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಾಗಿ ರವಾನೆಯಾಗುತ್ತಿದ್ದ ಬೂದು ಕುಂಬಳಕಾಯಿಗೆ ಹೆಚ್ಚಿನ ಬೆಲೆ ಬರಬಹುದು ಎಂಬ ನಿರೀಕ್ಷೆಯಲ್ಲಿ ತೀರ್ಥಹಳ್ಳಿಯಲ್ಲಿ ಅನೇಕ ರೈತರು ಬೂದು ಕುಂಬಳಕಾಯಿಯನ್ನು ಬೆಳೆದಿದ್ದರು. ಆದರೆ ಕೊರೋನಾ ಮಹಾಮಾರಿಯಿಂದ ದೇಶದೆಲ್ಲೆಡೆ ಲಾಕೌಡೌನ್‌ ಜಾರಿಯಾಗಿದ್ದರಿಂದ ಕುಂಬಳಕಾಯಿಗೆ ಮಾರುಕಟ್ಟೆಇಲ್ಲದೆ ರೈತರು ಸಂಕಷ್ಟಕ್ಕೊಳಗಾಗಿದ್ದರು.

ಲಾಕ್‌ಡೌನ್ ಸಡಿಲಿಕೆ: ಸಹಜ ಸ್ಥಿತಿಯತ್ತ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ

ರೈತರ ಬಗ್ಗೆ ವಿಶೇಷ ಕಾಳಜಿಯುಳ್ಳ ತಹಸೀಲ್ದಾರ್‌ ಡಾ. ಶ್ರೀಪಾದ್‌ ಅವರು ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ವಿಷಯ ತಿಳಿಸಿ ಸಂಕಷ್ಟಕ್ಕೀಡಾದ ರೈತರ ಬಗ್ಗೆ ಚರ್ಚಿಸಿದ್ದಾರೆ. ತಕ್ಷಣ ಮೇಳಿಗೆ ಸಮೀಪದ ಕುಂಟುವಳ್ಳಿ ವಿಶ್ವನಾಥ್‌ ರವರನ್ನು ಸಂಪರ್ಕಿಸಿದ್ದಾರೆ.

ಕ್ರಿಯಾಶೀಲ ಉದ್ಯಮಿ ಕುಂಟವಳ್ಳಿ ವಿಶ್ವನಾಥ್‌ ರೈತರ ಸಂಕಷ್ಟವನ್ನು ತಿಳಿಯುತ್ತಿದ್ದಂತೆ ಸೌಟು ಬಾಣಲೆ ಹಿಡಿದು ಆಗ್ರಾ ಪೇಟಾ ತಯಾರಿಸಲು ಮುಂದಾಗಿದ್ದಾರೆ. ಆಗ್ರಾ ಪೇಟಾಕ್ಕೆ ರಾಜಸ್ಥಾನ, ಗುಜರಾತ್‌, ಗೋವಾ, ಮುಂಬೈ ಮತ್ತಿತರ ಕಡೆಗಳಲ್ಲಿ ವಿಶೇಷ ಬೇಡಿಕೆಯಿದ್ದು ಇದನ್ನು ತಯಾರಿಸುವುದು ಕಷ್ಟಕರ ಕೆಲಸವಾಗಿದೆ. ಮೂರು ನಾಲ್ಕು ದಿನಗಳಿಂದ ವಿವಿಧ ರೀತಿಯ ಕಷ್ಟಕರವಾದ ಹಂತದಿಂದ ಈ ಬೂದು ಕುಂಬಳಕಾಯಿ ಆಗ್ರಾಪೇಟಾ ಮಾಡುವುದಾಗಿದ್ದು ಅದರಲ್ಲೀಗ ಉದ್ಯಮಿ ವಿಶ್ವನಾಥ ಅವರು ಯಶಸ್ವಿಯಾಗಿದ್ದಾರೆ. ತೀರ್ಥಹಳ್ಳಿಯಲ್ಲಿಯೇ ರೈತರು ಬೆಳೆದ ಒಂದು ಟನ್‌ ಬೂದು ಕುಂಬಳಕಾಯಿ ಖರೀದಿಸಿ ಆಗ್ರಾ ಪೇಟಾ ತಯಾರಿಸಿ ಶಾಸಕರ ಸಮ್ಮುಖದಲ್ಲಿ ಪ್ರದರ್ಶಿಸಿ, ಸದ್ದಿಲ್ಲದೆ ಮಾರುಕಟ್ಟೆಪ್ರವೇಶ ಮಾಡಲು ಸಿದ್ಧತೆ ನೆಡೆಸಿದ್ದಾರೆ.

ತಹಸೀಲ್ದಾರ್‌ ಡಾ.ಶ್ರೀಪಾದ್‌ ಅವರ ತರ್ಕಬದ್ಧ ಚುರುಕುಬದ್ಧಿ, ಕುಂಟುವಳ್ಳಿ ವಿಶ್ವನಾಥರ ಕ್ರಿಯಾಶೀಲ ಉದ್ಯಮಕ್ಕೆ ಮತ್ತೊಂದು ಕಿರೀಟ ನೀಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ತೀರ್ಥಹಳ್ಳಿ ಪೇಟಾ ಮಾರುಕಟ್ಟೆಪ್ರವೇಶಿಸಿದರೆ ಮಾರಾಟ ವ್ಯವಸ್ಥೆಯ ಜಾಲವನ್ನು ಈಗಾಗಲೇ ಹೊಂದಿರುವ ವಿಶ್ವನಾಥ ಈ ಬಾರಿ ರೈತರ ಬೆಳೆಗೆ ಆಪದ್ಬಾಂಧವರಾಗಲಿದ್ದಾರೆ. ತಾಲೂಕಿನ ಕುಂಬಳಕಾಯಿ ಬೆಳೆಗಾರರು ಈಗ ಖುಷಿಯಿಂದಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡ ವಿಶ್ವನಾಥ್‌, ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಮುಂದಿನ ದಿನಗಳಲ್ಲಿ ಯಂತ್ರಗಳಲ್ಲಿ ಉತ್ಪಾದಿಸುವ ಅಥವಾ ಸಂಘ ಸಂಸ್ಥೆಗಳ ಸದಸ್ಯರು ಮನೆಯಲ್ಲೇ ತೀರ್ಥಹಳ್ಳಿ ಪೇಟಾ ಉತ್ಪಾದಿಸಿ ತಮ್ಮ ಸಂಸ್ಥೆಯ ಮೂಲಕ ಮಾರುಕಟ್ಟೆಒದಗಿಸುವ ಯೋಜನೆ ಹಾಕಿಕೊಂಡಿದ್ದಾಗಿ ತಿಳಿಸಿದ್ದಾರೆ.
 

Follow Us:
Download App:
  • android
  • ios