ಸಾಗರ(ಮೇ.05): ತಾಲೂಕಿನ ಕುಗ್ವೆ ಗ್ರಾಮದಲ್ಲಿ ಶನಿವಾರ ತಾಯಿಯೋರ್ವಳು ತನ್ನಿಬ್ಬರು ಮಕ್ಕಳಿಗೆ ಕಳೆನಾಶಕ ಕೊಟ್ಟು, ತಾನೂ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ.

ಪಾರ್ವತಿ (30) ಎಂಬ ಗೃಹಿಣಿ ಬೆಳಿಗ್ಗೆ ಪುಳಿಯೋಗರೆಗೆ ಕಳೆನಾಶಕವನ್ನು ಮಿಶ್ರಣ ಮಾಡಿ ತನ್ನಿಬ್ಬರು ಮಕ್ಕಳಾದ 9 ವರ್ಷದ ಸಿಂಚನಾ ಹಾಗೂ 6 ವರ್ಷದ ಸ್ನೇಹಾ ಎಂಬುವವರಿಗೆ ನೀಡಿ, ತಾನೂ ತಿಂದಿದ್ದಾರೆ. ಆದರೆ ಕಳೆನಾಶಕ ಮಿಶ್ರಿತ ಪುಳಿಯೋಗರೆ ಸೇವನೆ ಮಾಡಿದ್ದು ಯಾವುದೇ ಪರಿಣಾಮ ಬೀರಿರಲಿಲ್ಲ.

ನಂತರ ಬೆಳಗ್ಗೆ 11 ಗಂಟೆ ಸುಮಾರಿಗೆ ಚಹಾಕ್ಕೆ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿ ತಾನೂ ಕುಡಿದು ಆತ್ಮಹತ್ಯೆಗೆ ಎರಡನೇ ಬಾರಿಗೆ ಪ್ರಯತ್ನ ಮಾಡಿದ್ದಾರೆ. ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಗಂಡ ಆನಂದ ಮಕ್ಕಳು ಅಸ್ವಸ್ಥರಾಗಿ ವಾಂತಿ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಹೆಂಡತಿ ಬಳಿ ವಿಚಾರಿಸಿದಾಗ ತಾನು ಹಾಗೂ ಇಬ್ಬರು ಮಕ್ಕಳು ವಿಷ ಸೇವನೆ ಮಾಡಿರುವ ವಿಷಯ ತಿಳಿಸಿದ್ದಾರೆ.

ಕೊಡಗು: ಗುಂಡು ಹಾರಿಸಿಕೊಂಡು ವೃದ್ಧೆ ಆತ್ಮಹತ್ಯೆ

ತಕ್ಷಣ ಆನಂದ ಮಕ್ಕಳು ಹಾಗೂ ಪತ್ನಿಯನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗೆ ಕರೆ ತಂದಿದ್ದಾನೆ. ಪ್ರಥಮ ಚಿಕಿತ್ಸೆ ನಂತರ ವೈದ್ಯರು ಮೂವರನ್ನು ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ಕಳಿಸಿದ್ದಾರೆ. ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಪಾರ್ವತಿ ಚೇತರಿಸಿಕೊಳ್ಳುತ್ತಿದ್ದಾರೆ.

ತಾವು ವಿಷ ಸೇವಿಸಲು ಗಂಡನ ಕಿರುಕುಳವೇ ಕಾರಣ ಎಂದು ಪಾರ್ವತಿ ದೂರು ನೀಡಿದ್ದರೆ, ಪಾರ್ವತಿ ತಾಯಿ ನೀಲಮ್ಮ ತನ್ನ ಮೊಮ್ಮಕ್ಕಳಾದ ಸಿಂಚನಾ ಮತ್ತು ಸ್ನೇಹ ಅವರಿಗೆ ವಿಷ ನೀಡಿ ಸಾಯಿಸಲು ಪ್ರಯತ್ನ ನಡೆಸಿದ್ದಾಳೆ ಎಂದು ಆನಂದ್‌ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪಾರ್ವತಿ ವಿರುದ್ದ 307 ಹಾಗೂ ಆನಂದ್‌ ವಿರುದ್ದ 498 (ಎ), 504 ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದೆ.