ಚಂದ್ರನ ಮೇಲೆ ಹೊಸ ಇತಿಹಾಸ: ಚಂದಿರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಖಾಸಗಿ ಕಂಪನಿ
ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾಗಿರುವ ಚಂದ್ರನ ಮೇಲೆ ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ನೌಕೆ ಇಳಿಸುವ ಮೂಲಕ ಹೊಸ ಇತಿಹಾಸವನ್ನು ಬರೆದಿದೆ.
ಪಿಟಿಐ ವಾಷಿಂಗ್ಟನ್: ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾಗಿರುವ ಚಂದ್ರನ ಮೇಲೆ ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ನೌಕೆ ಇಳಿಸುವ ಮೂಲಕ ಹೊಸ ಇತಿಹಾಸವನ್ನು ಬರೆದಿದೆ. ಅಮೆರಿಕದ ಇಂಟ್ಯೂಟಿವ್ ಮಷಿನ್ಸ್ (ಐಎಂ) ಎಂಬ ಕಂಪನಿಯ ಒಡಿಸ್ಸಿಯಸ್ ಲ್ಯಾಂಡರ್ ಚಂದ್ರನ ಮೇಲೆ ಗುರುವಾರ ನಸುಕಿನ ಜಾವ ಪಾದಾರ್ಪಣೆ ಮಾಡಿದೆ. ಇದರೊಂದಿಗೆ 50 ವರ್ಷಗಳ ಬಳಿಕ ಚಂದಿರನ ಅಂಗಳಕ್ಕೆ ಅಮೆರಿಕ ಮತ್ತೊಮ್ಮೆ ಮರಳಿದಂತಾಗಿದೆ.
1972ರಲ್ಲಿ ಅಮೆರಿಕದ ಅಪೋಲೋ 17 ಮಿಷನ್ ರಾಕೆಟ್ ಚಂದ್ರನ ಮೇಲೆ ಇಳಿದಿತ್ತು. ಅದಾದ ನಂತರ ಅಮೆರಿಕದ ಯಾವುದೇ ನೌಕೆ ಅಲ್ಲಿಗೆ ಹೋಗಿರಲಿಲ್ಲ. ಗಮನಾರ್ಹ ಎಂದರೆ, ಒಡಿಸ್ಸಿಯಸ್ ನೌಕೆಯನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಐಎಂ ಕಂಪನಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತದ ಚಂದ್ರಯಾನ-3 ನೌಕೆ ಕೂಡ ಈ ಭಾಗದಲ್ಲೇ ಇಳಿದಿತ್ತು. ತನ್ಮೂಲಕ ಚಂದ್ರನ ಮೇಲೆ ನೌಕೆ ಇಳಿಸಿದ ಭಾರತ, ರಷ್ಯಾ, ಅಮೆರಿಕ ಹಾಗೂ ಚೀನಾಗಳ ಸಾಲಿಗೆ ಮೊದಲ ಖಾಸಗಿ ವಾಣಿಜ್ಯ ಕಂಪನಿಯಾಗಿ ಇಂಟ್ಯೂಟಿವ್ ಮಷಿನ್ಸ್ ಕೂಡ ಸೇರ್ಪಡೆಯಾದಂತಾಗಿದೆ.
Watch: ಮಂಗಳ ಗ್ರಹದ ಸೂರ್ಯಗ್ರಹಣ ಚಿತ್ರ ಸೆರೆಹಿಡಿದ ನಾಸಾ ರೋವರ್!
ಒಡಿಸ್ಸಿಯಸ್ ಲ್ಯಾಂಡರ್‌ನಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಹಲವಾರು ಉಪಕರಣಗಳು ಇವೆ. ದಕ್ಷಿಣ ಧ್ರುವದಲ್ಲಿ ಇಳಿದಿರುವ ಕಾರಣ ಈ ಲ್ಯಾಂಡರ್ ಕಾರ್ಯ ನಿರ್ವಹಿಸಲು ಏಳು ದಿನಗಳ ಸಮಯಾವಕಾಶವಿದೆ. ಬಳಿಕ ಅಲ್ಲಿ ಕತ್ತಲು ಕವಿಯಲಿದೆ. ಅದಾದ ನಂತರ ಲ್ಯಾಂಡರ್‌ನಲ್ಲಿರುವ ಸೌರಫಲಕಗಳು ವಿದ್ಯುತ್ ಉತ್ಪಾದಿಸಿ ಒಡಿಸ್ಸಿಯಸ್ ಯಶಸ್ವಿಯಾಗಿ ಕಾರ್ಯಾಚರಣೆ ಮಾಡುವಂತೆ ನೋಡಿಕೊಳ್ಳಲು ತೊಡಕಾಗಲಿದೆ.
ಚಂದ್ರನ ಮೇಲೆ ಮೊದಲ ಬಾರಿಗೆ ಖಾಸಗಿ ನೌಕೆಯನ್ನು ಇಳಿಸುವ ಅಪರೂಪದ ವಿದ್ಯಮಾನವನ್ನು ಅವಿಸ್ಮರಣೀಯಗೊಳಿಸುವ ಸಲುವಾಗಿ ಐಎಂ ಕಂಪನಿ ತನ್ನ ನೌಕರರ ಹೆಸರನ್ನು ನೌಕೆಯ ಪಾದದ ಭಾಗದಲ್ಲಿ ಮೂಡಿಸಿದೆ. ಆ ನೌಕೆ ಚಂದ್ರನ ಮೇಲೆ ಕಾಲಿಡುತ್ತಿದ್ದಂತೆ ನೌಕರರ ಹೆಸರು ಚಂದ್ರನ ಅಂಗಳದಲ್ಲಿ ಮೂಡುವಂತೆ ಮಾಡಲಾಗಿದೆ.
YearEnder 2023: ಈ ವರ್ಷ ಬಾಹ್ಯಾಕಾಶದಿಂದ ತೆಗೆದ ಭೂಮಿಯ ಐದು ಸುಂದರ ಚಿತ್ರಗಳಿವು!