Watch: ಮಂಗಳ ಗ್ರಹದ ಸೂರ್ಯಗ್ರಹಣ ಚಿತ್ರ ಸೆರೆಹಿಡಿದ ನಾಸಾ ರೋವರ್!
ಭೂಮಿಯ ಮೇಲಿನ ಗ್ರಹಣದ ಸುದ್ದಿಯನ್ನು ಓದುತ್ತಿರುವ ನಡುವೆ ನಾಸಾದ ಪರ್ಸೆವೆರೆನ್ಸ್ ರೋವರ್ ಮಂಗಳ ಗ್ರಹದಲ್ಲಿ ಫೆಬ್ರವರಿ 8 ರಂದು ನಡೆದ ಸೂರ್ಯಗ್ರಹಣದ ಚಿತ್ರವನ್ನು ಸೆರೆ ಹಿಡಿದಿದೆ.
ನವದೆಹಲಿ (ಫೆ.16): ಅಮೆರಿಕದ ನಾಸಾ ಸಂಸ್ಥೆಯ ಬಹುನಿರೀಕ್ಷಿತ ಪರ್ಸೆವೆರೆನ್ಸ್ ರೋವರ್ 2024ರ ಫೆಬ್ರವರಿ 8 ರಂದು ಮಂಗಳ ಗ್ರಹದಲ್ಲಿ ಸಂಭವಿಸಿದ ಸೂರ್ಯಗ್ರಹಣದ ಅದ್ಭುತವಾದ ಚಿತ್ರಗಳನ್ನು ಸೆರೆಹಿಡಿದೆ. ಇದರಲ್ಲಿ ಮಂಗಳ ಗ್ರಹದ ಚಂದ್ರನಾದ ಫೋಬೋಸ್ (ಅಂದರೆ ಗ್ರೀಕ್‌ನಲ್ಲಿ ಫಿಯರ್ ಅಥವಾ ಭಯ ಎಂದರ್ಥ) ಚಿತ್ರವನ್ನು ಪರ್ಸೆವೆರೆನ್ಸ್ ರೋವರ್ ತೆಗೆದಿದೆ. ಫೋಬೋಸ್ ಆಲೂಗಡ್ಡೆಯಂತೆ ಕಂಡಿದೆ. ಜೆಜೆರೊ ಕ್ರೇಟರ್‌ನಲ್ಲಿ ರೋವರ್ ನಿಂತಿದ್ದಾಗ ಫೋಬೋಸ್ ಸೂರ್ಯ ಮುಂದೆ ಹಾದು ಹೋಗಿದೆ. ಈ ವೇಳೆ ಮಂಗಳನಲ್ಲಿ ಸೂರ್ಯಗ್ರಹಣ ಸಂಭವಿಸಿದೆ. ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಪರ್ಸೆವೆರೆನ್ಸ್‌ನ ಎಡ ಮಸ್ಟ್‌ಕ್ಯಾಮ್-ಝಡ್ ಕ್ಯಾಮೆರಾದಿಂದ ತೆಗೆದ ಗ್ರಹಣದ 68 ಚಿತ್ರಗಳನ್ನು ಹಂಚಿಕೊಂಡಿದೆ. ಈ ಕ್ಯಾಮೆರಾ ರೋವರ್‌ನ ಕುತ್ತಿಗೆಯ ಬಳಿ ಇದ್ದು, ಸಾಮಾನ್ಯವಾಗಿ ಮಂಗಳ ಗ್ರಹದ ವಿಶಾಲವಾದ ಚಿತ್ರಗಳನ್ನು ತೆಗೆಯುವ ನಿಟ್ಟಿನಲ್ಲಿ ಇದನ್ನು ಅಳವಡಿಸಲಾಗಿದೆ. ಫೋಬೋಸ್ ಅನ್ನು ಮೊದಲ ಬಾರಿಗೆ 1877ರಲ್ಲಿ ಕಂಡುಹಿಡಿಯಲಾಗಿತ್ತು. ಇದು ಮಂಗಳನನ್ನು ಸುತ್ತುವ ಸಣ್ಣ ಚಂದ್ರ. ಇದು ಮಂಗಳ ಗ್ರಹಕ್ಕೆ ಹತ್ತಿರವಾಗುತ್ತಿದ್ದು, ಅಂತಿಮವಾಗಿ ಮಂಗಳನ ಮೇಲ್ಮೈ ಮೇಲೆ ಅಪ್ಪಳಿಸಲಿದೆ.
ಫೋಬೋಸ್ ಮತ್ತು ಮಂಗಳನ ಇತರ ಚಂದ್ರ ಡೀಮೋಸ್ ಹೇಗೆ ರೂಪುಗೊಂಡಿತು ಎಂಬುದು ವಿಜ್ಞಾನಿಗಳಿಗೆ ಖಚಿತವಾಗಿಲ್ಲ. ಅವರು ಕ್ಷುದ್ರಗ್ರಹ ಪಟ್ಟಿಯಿಂದ ಅಥವಾ ಆರಂಭಿಕ ಸೌರವ್ಯೂಹದ ಬಿಡಿಭಾಗಗಳಿಂದ ಉಂಟಾಗಿರಬಹುದು ಎನ್ನಲಾಗಿದೆ. ಇಲ್ಲಿಯವರೆಗೂ ಯಾವುದೇ ಬಾಹ್ಯಾಕಾಶ ನೌಕೆಯು ಇನ್ನೂ ಫೋಬೋಸ್‌ಗೆ ಭೇಟಿ ನೀಡಿಲ್ಲ, ಆದರೆ ಜಪಾನ್ 2026 ರಲ್ಲಿ ಒಂದು ನೌಕೆಯನ್ನು ಕಳುಹಿಸಲು ಯೋಜನೆ ರೂಪಿಸಿದೆ. ಮಾರ್ಟಿಯನ್ ಮೂನ್ಸ್ ಎಕ್ಸ್‌ಪ್ಲೋರೇಶನ್ (MMX) ಎನ್ನುವ ಹೆಸರಿನ ಮಿಷನ್ ಇದಾಗಿದ್ದು, ಪೋಬೋಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ನಿಟ್ಟಿನಲ್ಲಿ ಇದರ ಧೂಳನ್ನು ಮರಳಿ ಭೂಮಿಗೆ ತರುವ ಗುರಿಯನ್ನು ಹೊಂದಿದೆ.
ಫೋಬೋಸ್ ಅನ್ನು ಅಧ್ಯಯನ ಮಾಡುವುದು ಮಂಗಳ ಗ್ರಹವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಾಲಾನಂತರದಲ್ಲಿ ಮಂಗಳವು ತನ್ನ ವಾತಾವರಣವನ್ನು ಏಕೆ ಕಳೆದುಕೊಂಡಿತು ಎಂಬುದನ್ನು ಕಂಡುಹಿಡಿಯಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಮಂಗಳ ಗ್ರಹವು ಜೀವನವನ್ನು ಬೆಂಬಲಿಸುತ್ತದೆಯೇ ಎಂಬುದಕ್ಕೆ ಇದು ಉತ್ತರ ನೀಡುವ ಸಾಧ್ಯತೆ ಇದೆ.
ಮೊದಲ ಬಾರಿ ಚಂದ್ರನ ಮೇಲೆ ಇಳಿಯಲಿದೆ ಖಾಸಗಿ ಲ್ಯಾಂಡರ್!
ಪರ್ಸೆವೆರೆನ್ಸ್ ಮಂಗಳ ಗ್ರಹದ ಮಾದರಿಗಳನ್ನೂ ಸಂಗ್ರಹ ಮಾಡುತ್ತಿದೆ. ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ, 2030ರಲ್ಲಿ ಮಂಗಳ ಗ್ರಹಕ್ಕೆ ನೌಕೆಯನ್ನು ಕಳಿಸಲು ಯೋಜಿಸಿದ್ದು, ಪರ್ಸೆವೆರೆನ್ಸ್ ರೋವರ್ ಸಂಗ್ರಹ ಮಾಡಿರುವ ಮಾದರಿಯನ್ನು ಭೂಮಿಗೆ ಮರಳು ತರುವ ಪ್ರಯತ್ನ ಮಾಡಲಿದೆ. ಹಾಗಿದ್ದರೂ, ಮಾರ್ಸ್ ಸ್ಯಾಂಪಲ್ ರಿಟರ್ನ್ (MSR) ಮಿಷನ್ ಸವಾಲುಗಳನ್ನು ಎದುರಿಸುತ್ತಿದ್ದು, ಇನ್ನಷ್ಟು ಹೆಚ್ಚಿನ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈಗ ಮಾಡಿರುವ ಅಂದಾಜಿಗಿಂತ ಹೆಚ್ಚಿನ ವೆಚ್ಚ ಇದಕ್ಕೆ ಆಗುತ್ತದೆ. ಈ ಮಿಷನ್‌ನ ವಿಪರೀತ ಬಜೆಟ್‌ನ ಕಾರಣದಿಂದಾಗಿ ಜೆಪಿಎಲ್‌ನಲ್ಲಿ ಕೆಲ ಹಿರಿಯ ನೌಕರರನ್ನು ವಜಾ ಕೂಡ ಮಾಡಲಾಗಿದೆ. ಆ ಮೂಲಕ ಮಿಷನ್‌ಗೆ ಹಣ ಹೊಂದಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
YearEnder 2023: ಈ ವರ್ಷ ಬಾಹ್ಯಾಕಾಶದಿಂದ ತೆಗೆದ ಭೂಮಿಯ ಐದು ಸುಂದರ ಚಿತ್ರಗಳಿವು!