ಚಂದ್ರನ ದಕ್ಷಿಣ ಧ್ರುವದಲ್ಲಿಳಿಯಲು ರಷ್ಯಾ ವಿಫಲ: ಚಂದ್ರನ ಅಂಗಣದಲ್ಲಿ ಕ್ರ್ಯಾಶ್ ಆದ ಲೂನಾ25
ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವ ರಷ್ಯಾ ಯತ್ನ ವಿಫಲವಾಗಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ ಈ ವಿಚಾರವನ್ನು ಖಚಿತಪಡಿಸಿದೆ.
ಮಾಸ್ಕೋ: ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವ ರಷ್ಯಾ ಯತ್ನ ವಿಫಲವಾಗಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ ಈ ವಿಚಾರವನ್ನು ಖಚಿತಪಡಿಸಿದೆ. ನಿನ್ನೆಯಷ್ಟೇ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಷ್ಯಾದ ಚಂದ್ರಯಾನ ನೌಕೆ ಲೂನಾ-25 ಯೋಜನೆಯ ಡೀಬೂಸ್ಟಿಂಗ್ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ಹೇಳಿತ್ತು. ಅಲ್ಲದೇ ಈ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ ಈಗ ಈ ನೌಕೆ ಚಂದ್ರನ ಅಂಗಣದಲ್ಲೇ ಕ್ರ್ಯಾಶ್ ಆಗುವ ಮೂಲಕ 47 ವರ್ಷಗಳ ಬಳಿಕ ರಷ್ಯಾ ಕೈಗೊಂಡ ಬೃಹತ್ ಕನಸೊಂದು ಭಗ್ನವಾದಂತಾಗಿದೆ. ಆಗಸ್ಟ್ 11 ರಂದು ರಷ್ಯಾದ ಲೂನಾ 25 ಚಂದ್ರಯಾನ ನೌಕೆಯನ್ನು ರಷ್ಯಾ ಲಾಂಚ್ ಮಾಡಿತ್ತು.
ನಿಜವಾಗಿ ಇದ್ದ ಸಮಸ್ಯೆ ಹಾಗೂ ನಿರೀಕ್ಷೆ ಮಾಡಲಾಗಿದ್ದ ಲೆಕ್ಕಾಚಾರಗಳಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಲೂನಾ 25 ನಿರೀಕ್ಷಿತ ಕಕ್ಷೆ ಸೇರಲು ವಿಫಲವಾಗಿ ಚಂದ್ರನ ಮೇಲೈಯಲ್ಲಿ ಕ್ರ್ಯಾಶ್ ಆಗಿ ಹಾನಿಗೊಳಗಾಯ್ತು ಎಂದು ರಷ್ಯಾ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ ತಿಳಿಸಿದೆ. ಆಗಸ್ಟ್ 1 ರಂದು ಈ ಲೂನಾ 25 ನೌಕೆಯನ್ನು ರಷ್ಯಾದ ಪೂರ್ವದ ವೊಸ್ಟೊಚ್ನಿ ಕಾಸ್ಮೊಡ್ರೋಮ್‌ನಲ್ಲಿ ಉಡಾವಣಾ ಪ್ಯಾಡ್‌ನಿಂದ ಸೋಯುಜ್-2.1ಬಿ ರಾಕೆಟ್ ಹೊತ್ತೊಯ್ದಿತ್ತು. ಶನಿವಾರ ಹೇಳಿಕೆ ಬಿಡುಗಡೆ ಮಾಡಿದ್ದ ರಷ್ಯಾ ಬ್ಯಾಹ್ಯಾಕಾಶ ಸಂಸ್ಥೆ (Russian space agency)ರಾಸ್ ಕಾಸ್ಮೋಸ್ (Roscosmos), ‘ಲ್ಯಾಂಡಿಂಗ್ ಪೂರ್ವ ಕಕ್ಷೆಗೆ ನೌಕೆ ಇಳಿಸುವ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿದೆ’ ಎಂದು ಹೇಳಿತ್ತು.
ಚಂದ್ರಯಾನದ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜು: ಶ್ರೀಹರಿಕೋಟಕ್ಕೆ ಬಂದ ಆದಿತ್ಯ-ಎಲ್1 ಉಪಗ್ರಹ
ಭಾರತದ ಚಂದ್ರಯಾನ-3 ಯೋಜನೆಯ ಉಡಾವಣೆಯ ಬಳಿಕ ರಷ್ಯಾ ಈ ರಾಕೆಟ್ ಉಡಾವಣೆ ಮಾಡಿತ್ತು. ಭಾರತಕ್ಕಿಂತಲೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವುದಾಗಿಯೂ ರಷ್ಯಾ ಹೇಳಿತ್ತು. ಆದರೆ ಇದೀಗ ತಾಂತ್ರಿಕ ಸಮಸ್ಯೆ ಉಂಟಾಗಿ ಲೂನಾ 25 ಭಗ್ನವಾಗಿದ್ದು, ಇದರೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿ ನೌಕೆ ಇಳಿಸುವ ರಷ್ಯಾದ ಕನಸು ಧ್ವಂಸವಾಗಿದೆ.
ಜೂನ್‌ನಲ್ಲೇ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದ ರಾಸ್‌ಕಾಸ್ಮೋಸ್‌ನ ಮುಖ್ಯಸ್ಥ ಯೂರಿ ಬೋರಿಸೋವ್ ( Yuri Borisov), ರಷ್ಯಾದ ಈ ಯೋಜನೆ ಸಾಕಷ್ಟು ಸಮಸ್ಯೆಯಿಂದ ಕೂಡಿದ್ದು, ಇದು ಯಶಸ್ವಿಯಾಗುವ ಸಾಧ್ಯತೆ ಶೇ.70ರಷ್ಟಿದೆ ಎಂದು ಹೇಳಿದ್ದರು. 1976ರ ಬಳಿಕ ಸುಮಾರು 47 ವರ್ಷದ ನಂತರ ರಷ್ಯಾ ಇದೇ ಮೊದಲ ಬಾರಿಗೆ ಚಂದ್ರನ ಅನ್ವೇಷಣೆಗೆ ನೌಕೆಯನ್ನು ಕಳಿಸಿ ಕೊಟ್ಟಿತ್ತು. 1976ರಲ್ಲಿ ರಷ್ಯಾ ಚಂದ್ರನ ಬಳಿ ನೌಕೆ ಕಳಿಸಿದಾಗ ರಷ್ಯಾ ಜೊತೆ ಆಗ ಅಮೆರಿಕಾ ಸ್ಪರ್ಧೆಯಲ್ಲಿತ್ತು. ಇದಾದ ನಂತರ ಈಗ ಭಾರತ ಚಂದ್ರಯಾನ 3 ನೌಕೆಯನ್ನು ದಕ್ಷಿಣ ಧ್ರುವದಲ್ಲಿಳಿಯುವ ಕನಸಿನೊಂದಿಗೆ ಹಾರಿಬಿಟ್ಟ ಸಂದರ್ಭದಲ್ಲಿಯೇ ರಷ್ಯಾ ಭಾರತದ ಜೊತೆ ಸ್ಪರ್ಧೆಗಿಳಿದಿತ್ತು. ಭಾರತ ಚಂದ್ರನ ಮೇಲೆ ಲ್ಯಾಂಡ್ ಆಗುವ ನಿಟ್ಟಿನಲ್ಲಿ ಆಮೆಯಂತೆ ಎಚ್ಚರಿಕೆ ಹೆಜ್ಜೆ ಇರಿಸಿದ್ದರೆ, ರಷ್ಯಾ ಮೊಲದಂತೆ ವೇಗವಾಗಿ ಚಂದ್ರನ ತಲುಪುವ ಇರಾದೆಯಲ್ಲಿತ್ತು. ಆದರೆ ಈಗ ರಷ್ಯಾದ ಈ ನೌಕೆ ಚಂದ್ರನ ಮೇಲ್ಮೈಯಲ್ಲೇ ಸ್ವಲ್ಪದರಲ್ಲೇ ಕ್ರ್ಯಾಶ್ ಆಗುವ ಮೂಲಕ ರಷ್ಯಾ 47 ವರ್ಷಗಳ ಬಳಿಕ ಕೈಗೊಂಡ ಯೋಜನೆಯೊಂದು ಸ್ವಲ್ಪದರಲ್ಲೇ ಕೈ ತಪ್ಪಿದೆ.
Chandrayaan - 3: ಚಂದ್ರನ ಮೇಲೆ ಕಾಲಿಡಲು ಇನ್ನೊಂದೇ ಹೆಜ್ಜೆ ಬಾಕಿ: ನೌಕೆಯಿಂದ ಬೇರ್ಪಟ್ಟ ವಿಕ್ರಂ ಲ್ಯಾಂಡರ್