ಚಂದ್ರಯಾನದ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜು: ಶ್ರೀಹರಿಕೋಟಕ್ಕೆ ಬಂದ ಆದಿತ್ಯ-ಎಲ್1 ಉಪಗ್ರಹ
ಚಂದ್ರನ ಕುರಿತು ನಾನಾ ಮಾಹಿತಿ ಕಲೆ ಹಾಕುವಲ್ಲಿ ಯಶಸ್ವಿಯಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಸೂರ್ಯನ ಅಧ್ಯಯನದತ್ತ ತನ್ನ ಚಿತ್ತ ಹರಿಸಿದೆ.
ಶ್ರೀಹರಿಕೋಟಾ: ಚಂದ್ರನ ಕುರಿತು ನಾನಾ ಮಾಹಿತಿ ಕಲೆ ಹಾಕುವಲ್ಲಿ ಯಶಸ್ವಿಯಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಸೂರ್ಯನ ಅಧ್ಯಯನದತ್ತ ತನ್ನ ಚಿತ್ತ ಹರಿಸಿದೆ. ಸೂರ್ಯನ ಅಧ್ಯಯನಕ್ಕೆಂದೇ ಹಾರಿಬಿಡಲು ಉದ್ದೇಶಿಸಿರುವ ಇಸ್ರೋ ಅಭಿವೃದ್ಧಿಪಡಿಸಿರುವ ಆದಿತ್ಯ- ಎಲ್ 1 ಉಪಗ್ರಹವನ್ನು ಬೆಂಗಳೂರಿನಿಂದ ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ನೆಲೆಗೆ ತರಲಾಗಿದೆ. ಈ ಉಪಗ್ರಹವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡ್ಡಯನ ಮಾಡುವ ಸಾಧ್ಯತೆ ಇದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಏನಿದು ಆದಿತ್ಯ- ಎಲ್1?:
ಇದು ಸೂರ್ಯನ ಅಧ್ಯಯನಕ್ಕೆ ಇಸ್ರೋ (ISRO) ರೂಪಿಸಿರುವ ಉಪಗ್ರಹ. ಆದಿತ್ಯ (SUN)ಎನ್ನುವುದು ಸೂರ್ಯನ ಹೆಸರನ್ನು ಸೂಚಿಸಿದರೆ, ಎಲ್ 1 ಎನ್ನುವುದು ಲ್ಯಾಗ್‌ರೇಂಜ್ ಪಾಯಿಂಟ್ 1 ಎನ್ನುವುದನ್ನು ಸೂಚಿಸುತ್ತದೆ. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಎಲ್1 ಎಂಬ ಪ್ರದೇಶವು ಭೂಮಿ ಮತ್ತು ಸೂರ್ಯನ ನಡುವಿನ ಅತ್ಯಂತ ನಿಖರ ಪ್ರದೇಶವಾಗಿದೆ. ಇಲ್ಲಿ ಭೂಮಿ ಮತ್ತು ಸೂರ್ಯನ ಗುರುತ್ವಾಕರ್ಷಣೆ ಸಮವಾಗಿರುತ್ತದೆ. ಹೀಗಾಗಿ ಇಲ್ಲಿ ಉಪಗ್ರಹ (Satellite)ನಿಯೋಜಿಸಿದರೆ ಅದು ಸೂರ್ಯನನ್ನು ಸತತವಾಗಿ ಗ್ರಹಣದಂಥ ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ಸತತವಾಗಿ ನೇರವಾಗಿ ವಿಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಹೆಚ್ಚಿನ ಇಂಧನ ವ್ಯರ್ಥಮಾಡದೇ ಸುದೀರ್ಘ ಕಾಲ ಉಪಗ್ರಹ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಂಚಲನ; ಚಂದ್ರ-ಭೂಮಿಯ ಫೋಟೋ ಕಳುಹಿಸಿದ ಉಪಗ್ರಹ!
ಉಡ್ಡಯನದ ಉದ್ದೇಶ:
ಉಪಗ್ರಹವು ಒಟ್ಟು 7 ಪೇ ಲೋಡ್‌ಗಳನ್ನು ಒಳಗೊಂಡಿದೆ. ಅಂದರೆ 7 ವಿವಿಧ ಉಪಕರಣಗಳನ್ನು ಹೊಂದಿದೆ. ಇವುಗಳ ಮೂಲಕ ಫೋಟೋಸ್ಪಿಯರ್, ಕ್ರೋಮೋಸ್ಪಿಯರ್ ಮತ್ತು ಸೂರ್ಯನ ಹೊರವಲಯ (ಕೊರೋನಾ)ವನ್ನು ಎಲೆಕ್ಟ್ರೋಮ್ಯಾಗ್ನೆಟಿಕ್, ಪಾರ್ಟಿಕಲ್ ಮತ್ತು ಮ್ಯಾಗ್ನೆಟಿಕ್ ಫೀಲ್ಡ್ ಡಿಟೆಕ್ಟರ್‌ಗಳ ಮೂಲಕ ಅಧ್ಯಯನ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ಉಪಗ್ರಹದಲ್ಲಿನ 4 ಉಪಕರಣಗಳು ಸತತವಾಗಿ ಸೂರ್ಯನನ್ನು ವೀಕ್ಷಿಸುತ್ತಾ ಮಾಹಿತಿ ಸಂಗ್ರಹಿಸಲಿದ್ದರೆ, ಉಳಿದ ಮೂರು ಉಪಕರಣಗಳು ಸ್ಥಳದಲ್ಲಿನ ಪಾರ್ಟಿಕಲ್ (ಕಣಗಳು) ಮತ್ತು ಪ್ರದೇಶಗಳ ಅಧ್ಯಯನ ನಡೆಸಿ ಅದರ ಮಾಹಿತಿಯನ್ನು ಭೂಮಿಗೆ ರವಾನಿಸಲಿದೆ. ಇದರಿಂದಾಗಿ ಕರೋನಾದ (ಸೂರ್ಯನ ಪ್ರಭಾವಲಯ) ಉಷ್ಣತೆಯ ಸಮಸ್ಯೆಗಳು, ಪ್ರಭಾವಲಯದಿಂದ ಹೊರಹೊಮ್ಮುವ ಭಾರೀ ಪ್ರಮಾಣದ ಜ್ವಾಲೆ, ಜ್ವಾಲೆಗೂ ಮುನ್ನಾ ಸ್ಥಿತಿ, ಜ್ವಾಲೆಯ ಚಟುವಟಿಕೆಗಳು, ಜ್ವಾಲೆಯ ಗುಣಲಕ್ಷಣ, ಬಾಹ್ಯಾಕಾಶದ ಹವಾಮಾನ ಮೊದಲಾದ ವಿಷಯಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಇಸ್ರೋಗೂ ಮೊದಲೇ ಚಂದ್ರನ ದಕ್ಷಿಣ ಧ್ರುವಕ್ಕಿಳಿಯಲು ರಷ್ಯಾ ಸಾಹಸ