Rain Drop Shape: ಮಳೆ ಬಂದರೆ ಸಾಕು, ನಾವೆಲ್ಲಾ ಕಣ್ಣೀರ ಹನಿಯ ಆಕಾರದಲ್ಲಿ ಮಳೆ ಹನಿ ಇರುತ್ತೆ ಅಂದುಕೊಳ್ಳುತ್ತೇವೆ. ಚಿಕ್ಕಂದಿನಿಂದ ಪುಸ್ತಕ, ಕಾರ್ಟೂನ್‌ಗಳಲ್ಲಿ ಇದನ್ನೇ ನೋಡಿ ಬೆಳೆದಿದ್ದೇವೆ. ಆದರೆ ವಿಜ್ಞಾನಿಗಳ ಪ್ರಕಾರ ಮಳೆ ಹನಿಯ ನಿಜವಾದ ಆಕಾರ ಇದಲ್ಲವಂತೆ.
ಭೂಮಿಯ ಮೇಲಿರುವ ನೀರು ಸೂರ್ಯನ ಶಾಖಕ್ಕೆ ಆವಿಯಾಗಿ ವಾತಾವರಣ ಸೇರುತ್ತದೆ. ಈ ಆವಿ ಮೇಲೆ ಸಾಗಿದಂತೆ ತಣ್ಣಗಾಗುತ್ತದೆ. ಆಗ, ನೀರಿನ ಸಣ್ಣ ಕಣಗಳು ಒಂದಕ್ಕೊಂದು ಸೇರಿಕೊಳ್ಳುತ್ತವೆ. ಹೀಗೆ ಲಕ್ಷಾಂತರ ಸೂಕ್ಷ್ಮ ಹನಿಗಳು ಸೇರಿ ಮೋಡಗಳನ್ನು ರೂಪಿಸುತ್ತವೆ. ಆರಂಭದಲ್ಲಿ ಈ ನೀರಿನ ಹನಿಗಳು ತುಂಬಾ ಚಿಕ್ಕದಾಗಿರುತ್ತವೆ. ಕ್ರಮೇಣ, ಇನ್ನಷ್ಟು ನೀರಿನ ಕಣಗಳು ಸೇರಿ ಅವು ದೊಡ್ಡದಾಗುತ್ತವೆ. ಒಂದು ಹಂತದಲ್ಲಿ ಅವುಗಳ ತೂಕ ಹೆಚ್ಚಾಗಿ, ಭೂಮಿಯತ್ತ ಬೀಳಲು ಆರಂಭಿಸುತ್ತವೆ. ಇವನ್ನೇ ನಾವು ಮಳೆ ಹನಿಗಳು ಎನ್ನುತ್ತೇವೆ.
ನೀರಿನ ಅಣುಗಳ ನಡುವೆ ಇರುವ 'ಸರ್ಫೇಸ್ ಟೆನ್ಶನ್' (ಮೇಲ್ಮೈ ಸೆಳೆತ) ಎಂಬ ಶಕ್ತಿಯಿಂದ ನೀರು ಸ್ವಾಭಾವಿಕವಾಗಿ ದುಂಡಗಿನ ಆಕಾರ ಪಡೆಯುತ್ತದೆ. ಈ ಸೆಳೆತದಿಂದಾಗಿ, ನೀರು ಕಡಿಮೆ ಜಾಗದಲ್ಲಿ ಹೆಚ್ಚು ಪ್ರಮಾಣವನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಇದರಿಂದ ನೀರಿನ ಹನಿ ದುಂಡಗಾಗುತ್ತದೆ. ಇದೇ ಕಾರಣಕ್ಕೆ ಮೋಡಗಳಲ್ಲಿ ರೂಪುಗೊಳ್ಳುವ ಸಣ್ಣ ನೀರಿನ ಹನಿಗಳು ಬಹುತೇಕ ಸಂಪೂರ್ಣ ದುಂಡಗಿರುತ್ತವೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಕಡಿಮೆ ಇರುವುದರಿಂದ, ಅಲ್ಲಿ ನೀರಿನ ಹನಿಗಳು ಪರಿಪೂರ್ಣ ಗೋಳಾಕಾರದಲ್ಲಿ ಕಾಣಿಸುತ್ತವೆ.
ಮಳೆ ಹನಿಗಳು ಮೋಡಗಳಿಂದ ಕೆಳಗೆ ಬೀಳುವಾಗ ಗಾಳಿಯ ಪ್ರತಿರೋಧವನ್ನು (Air Resistance) ಎದುರಿಸುತ್ತವೆ. ಈ ಗಾಳಿಯ ಒತ್ತಡವು ಹನಿಯ ಕೆಳಭಾಗದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ಹನಿಯ ಕೆಳಭಾಗ ಸ್ವಲ್ಪ ಚಪ್ಪಟೆಯಾಗುತ್ತದೆ, ಆದರೆ ಮೇಲ್ಭಾಗವು ದುಂಡಾಗಿಯೇ ಉಳಿಯುತ್ತದೆ. ಇದರಿಂದ ಹನಿಯ ಆಕಾರವು ಹ್ಯಾಂಬರ್ಗರ್ ಬನ್ ಅಥವಾ ಚಿಕ್ಕ ಕೊಡೆಯಂತೆ ಕಾಣುತ್ತದೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ (NASA) ನಡೆಸಿದ ಅಧ್ಯಯನಗಳ ಪ್ರಕಾರ, ಮಧ್ಯಮ ಗಾತ್ರದ ಮಳೆ ಹನಿಗಳು ಮೇಲ್ಭಾಗದಲ್ಲಿ ದುಂಡಗೆ ಮತ್ತು ಕೆಳಭಾಗದಲ್ಲಿ ಸ್ವಲ್ಪ ಚಪ್ಪಟೆಯಾಗಿರುತ್ತವೆ. ಅಂದರೆ, ನಾವು ಊಹಿಸುವ ಕಣ್ಣೀರಿನ ಹನಿಯ ಆಕಾರದಲ್ಲಿ ಖಂಡಿತ ಇರುವುದಿಲ್ಲ.
ತುಂಬಾ ದೊಡ್ಡ ಗಾತ್ರದ ಮಳೆ ಹನಿಗಳು ಇನ್ನಷ್ಟು ಗಾಳಿಯ ಒತ್ತಡವನ್ನು ಎದುರಿಸುತ್ತವೆ. ಇದರಿಂದ ಅವು ಸಂಪೂರ್ಣವಾಗಿ ಬಾಗಲು ಪ್ರಾರಂಭಿಸುತ್ತವೆ. ಒಂದು ಹಂತದಲ್ಲಿ, ಅವು ಪ್ಯಾರಾಚೂಟ್ ಅಥವಾ ಜೆಲ್ಲಿಫಿಶ್ ಆಕಾರದಲ್ಲಿ ಕಾಣಿಸುತ್ತವೆ. ಇನ್ನೂ ದೊಡ್ಡದಾದರೆ, ಗಾಳಿಯ ಒತ್ತಡವನ್ನು ತಡೆದುಕೊಳ್ಳಲಾಗದೆ ಸಣ್ಣ ಸಣ್ಣ ಹನಿಗಳಾಗಿ ಒಡೆದುಹೋಗುತ್ತವೆ. ಇದೇ ಕಾರಣಕ್ಕೆ, ಪ್ರಕೃತಿಯಲ್ಲಿ ಅತಿ ದೊಡ್ಡ ಮಳೆ ಹನಿಗಳು ಕಾಣಸಿಗುವುದಿಲ್ಲ. ಅವು ಭೂಮಿಯನ್ನು ತಲುಪುವ ಮೊದಲೇ ಸಣ್ಣ ಹನಿಗಳಾಗಿ ವಿಭಜನೆಯಾಗುತ್ತವೆ. ಇದು ಪ್ರಕೃತಿಯಲ್ಲಿ ನಡೆಯುವ ಒಂದು ಅದ್ಭುತ ಭೌತಶಾಸ್ತ್ರದ ಪ್ರಕ್ರಿಯೆ.
ಹಾಗಿದ್ದರೆ ಕಣ್ಣೀರಿನ ಹನಿಯ ಆಕಾರ ಹೇಗೆ ಜನಪ್ರಿಯವಾಯಿತು?
ಇಲ್ಲೇ ಹೆಚ್ಚಿನವರು ತಪ್ಪು ತಿಳಿದುಕೊಳ್ಳುವುದು. ಮಳೆ ಹನಿಗಳಲ್ಲ, ಬದಲಾಗಿ ಕಿಟಕಿ ಗಾಜು ಅಥವಾ ಎಲೆಗಳ ಮೇಲೆ ಜಾರುವ ನೀರಿನ ಹನಿಗಳು ಮಾತ್ರ ಕಣ್ಣೀರಿನ ಹನಿಯ ಆಕಾರದಲ್ಲಿ ಕಾಣಿಸುತ್ತವೆ. ಏಕೆಂದರೆ, ಅವು ಚಲಿಸುವಾಗ ಗುರುತ್ವಾಕರ್ಷಣೆಯಿಂದ ಕೆಳಕ್ಕೆ ಸೆಳೆಯಲ್ಪಡುತ್ತವೆ. ಇದರಿಂದಾಗಿ ಉದ್ದವಾದ ಬಾಲದಂತಹ ಆಕಾರ ಸೃಷ್ಟಿಯಾಗುತ್ತದೆ. ಹಳೆಯ ಚಿತ್ರಗಳು, ಕಾರ್ಟೂನ್‌ಗಳು ಮತ್ತು ಪಠ್ಯಪುಸ್ತಕಗಳಲ್ಲಿ ಇದೇ ಆಕಾರವನ್ನು ಮಳೆ ಹನಿಗೆ ಸಂಕೇತವಾಗಿ ಬಳಸಲಾಯಿತು. ಸುಲಭವಾಗಿ ಗುರುತಿಸಲು ಈ ವಿನ್ಯಾಸವು ವ್ಯಾಪಕವಾಗಿ ಜನಪ್ರಿಯವಾಯಿತು. ಕ್ರಮೇಣ, ಇದೇ ಸತ್ಯವೆಂದು ಅನೇಕರು ನಂಬಲು ಆರಂಭಿಸಿದರು.


