ಸ್ಕ್ವೇರ್ ವೇವ್ ಎಂದು ಕರೆಯಲ್ಪಡುವ ಈ ವಿದ್ಯಮಾನಕ್ಕೆ ಕಾರಣ ಏನು?
ಸಾಗರದಲ್ಲಿ ವಿಚಿತ್ರವಾದ ಚೌಕಾಕಾರದ ಅಲೆಗಳು ಕಾಣಿಸಿಕೊಂಡಿದ್ದು, ಮೀನುಗಾರರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಇದಕ್ಕೇನು ಕಾರಣ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸಮುದ್ರ ಸಾಗರ ಯಾರ ಊಹೆಗೂ ನಿಲುಕದ ಒಂದು ಅನೂಹ್ಯವಾದ ಲೋಕ, ಲಕ್ಷಾಂತರ ಚಿತ್ರ ವಿಚಿತ್ರ ಜೀವ ಜಂತುಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಸಾಗರವೂ ಕೂಡ ಕೆಲವೊಮ್ಮೆ ವಿಲಕ್ಷಣವಾದ ಘಟನೆಗಳಿಗೆ ಸಾಕ್ಷಿಯಾಗುತ್ತದೆ. ಹುಣ್ಣಿಮೆ ಹಾಗೂ ಅಮವಾಸ್ಯೆಯೆಂದು ಹೇಗೆ ಸಮುದ್ರದಲೆಗಳು ತೀವ್ರ ಸ್ವರೂಪದಲ್ಲಿ ಅಪ್ಪಳಿಸುತ್ತವೆಯೋ ಹಾಗೆಯೇ ವಿವಿಧ ಅಪರೂಪದ ಊಹೆಗೂ ನಿಲುಕದ ವಿದ್ಯಮಾನಗಳಿಗೆ ಸಾಗರವೂ ಸಾಕ್ಷಿಯಾಗುತ್ತದೆ. ಸಾಗರದ ಮಕ್ಕಳು ಎಂದೇ ಖ್ಯಾತಿ ಗಳಿಸಿರುವ ಮೀನುಗಾರರಿಗೆ ಈ ಅಪರೂಪದ ದೃಶ್ಯಗಳು ಕೆಲವೊಮ್ಮೆ ಕಣ್ಣಿಗೆ ಕಾಣಲು ಸಿಗುತ್ತವೆ. ಅದೇ ರೀತಿ ಸಾಗರದಲ್ಲಿ ನಡೆದ ಅಪರೂಪದ ವಿದ್ಯಮಾನವೊಂದರನ್ನು ಮೀನುಗಾರರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ವೀಡಿಯೋದಲ್ಲೇನಿದೆ.
ವೈರಲ್ ಆದ ವೀಡಿಯೋದಲ್ಲಿ ಸಾಗರದ ಮೇಲೈಯಲ್ಲಿ ಯಾರೋ ನೀರಿನ ಮೇಲೆ ತ್ರಿಡಿಯಲ್ಲಿ ಇಂಟರ್‌ಲಾಕ್ ಮಾಡಿದಂತೆ ಈ ದೃಶ್ಯಾವಳಿಗಳು ಕಂಡು ಬರುತ್ತಿದೆ. ನೀರಿನ ಉಬ್ಬರಕ್ಕೆ ತಕ್ಕಂತೆ ಅದು ಓಲಾಡುತ್ತಿದ್ದು, ಚೌಕಾಕಾರದ ಈ ಅಪರೂಪದ ರಚನೆ ನೋಡುಗರನ್ನು ಕುತೂಹಲಿಗರನ್ನಾಗಿ ಮಾಡುತ್ತಿದೆ. ಪ್ರಕೃತಿಯ ಈ ವೈಶಿಷ್ಟ್ಯದ ಮುಂದೆ ಮನುಷ್ಯನ ಕಲಾಕೃತಿಗಳು ಏನೇನೂ ಅಲ್ಲ ಎಂಬುದನ್ನು ಈ ದೃಶ್ಯಾವಳಿ ಸಾಬೀತುಪಡಿಸಿದೆ. ಹಾಗಿದ್ರೆ ಸಾಗರದ ಮೇಲ್ಮೈಯಲ್ಲಿ ಕಂಡು ಬರುತ್ತಿರುವ ಈ ಅಪರೂಪದ ದೃಶ್ಯಕ್ಕೇನು ಕಾರಣ?
ಕೇರಳ ಕಡಲ ತೀರಕ್ಕೆ ತನ್ನಷ್ಟಕ್ಕೆ ಬಂದು ಬಿದ್ದ ಲಕ್ಷಾಂತರ ಮೀನುಗಳು: ಇದು ಸುನಾಮಿ ಮುನ್ಸೂಚನೆಯೇ ?
ಈ ಅಪರೂಪದ ದೃಶ್ಯಾವಳಿಗೆ ಕಾರಣ ಏನು?
ಅಂದಹಾಗೆ ಈ ಅಪರೂಪದ ದೃಶ್ಯಾವಳಿಯನ್ನು ಟರ್ಕಿಯ ಮೀನುಗಾರರು ಸೆರೆ ಹಿಡಿದಿದ್ದಾರೆ. howallthisworks ಎಂಬ ಇನ್ಸ್ಟಾಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಈ ಅಪರೂಪದ ವಿದ್ಯಮಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಾಗರದ ಮೇಲಿನ ಈ ಚೌಕಾಕಾರದ ರಚನೆಯನ್ನು ಅಡ್ಡ ಸಮುದ್ರ ಎಂದೂ ಕರೆಯುತ್ತಾರೆ. ಈ ಚೌಕಾಕಾರದ ಅಲೆಗಳು ಅಪರೂಪದ ಮತ್ತು ಗಮನಾರ್ಹ ವಿದ್ಯಮಾನವಾಗಿದ್ದು, ನೀರಿನ ಮೇಲ್ಮೈಯನ್ನು ಛೇದಿಸುವ ಅಲೆಗಳ ಜಾಲರಿಯಂತಹ ಮಾದರಿಯನ್ನು ರೂಪಿಸುತ್ತದೆ. ಎರಡು ವಿಭಿನ್ನ ತರಂಗ ವ್ಯವಸ್ಥೆಗಳು ಪರಸ್ಪರ ಓರೆಯಾದ ಕೋನಗಳಲ್ಲಿ ಚಲಿಸಿದಾಗ ಇದು ಸಂಭವಿಸುತ್ತದೆ, ಸಾಮಾನ್ಯವಾಗಿ ಗಾಳಿಯ ಮಾದರಿಗಳು ಬದಲಾಗುವುದರಿಂದ ಅಥವಾ ದೂರದ ಬಿರುಗಾಳಿ ವ್ಯವಸ್ಥೆಗಳು ವಿಭಿನ್ನ ದಿಕ್ಕುಗಳಲ್ಲಿ ಉಬ್ಬರಗಳನ್ನು ಕಳುಹಿಸುವುದರಿಂದ ಇದು ಸಂಭವಿಸುತ್ತದೆ ಎಂದು ಮಾಹಿತಿ ನೀಡಲಾಗಿದೆ.
ನೆಟ್ಟಿಗರ ಪ್ರತಿಕ್ರಿಯೆ
ಅತೀ ಅಪರೂಪವೆನಿಸುವ ಈ ದೃಶ್ಯಗಳನ್ನು ನೋಡಿ ಅನೇಕರು ಪ್ರಕೃತಿಯ ಈ ವಿಸ್ಮಯಕ್ಕೆ ಬೆರಗಾಗಿದ್ದಾರೆ. ಕೆಲವರು ಇದು ಭೂಕಂಪನ ಸೂಚನೆ ಎಂದು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಚೌಕಾಕಾರದ ಅಲೆಗಳು, ಷಡ್ಭುಜಾಕೃತಿಯ ಮೋಡಗಳು... ಪ್ರಕೃತಿಯು ರೇಖಾಗಣಿತವನ್ನು ಪಾಲಿಸಿದಾಗ, ಜನರು ಭಯಭೀತರಾಗುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅಪರೂಪದ ವಿದ್ಯಮಾನಕ್ಕೆ ಆಕಾಶವೇ ಕೆಂಪೇರಿತು: ಬಲ್ಗೇರಿಯಾ ಬಾನಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ನಾರ್ತರ್ನ್ ಲೈಟ್
ಈ ಸ್ಕ್ವೇರ್ ಅಲೆಗಳು ಸಾಗರದಲ್ಲಿ ಅಪಾಯಕಾರಿ ಏಕೆಂದರೆ ಅವು ಎರಡು ವಿಭಿನ್ನ ದಿಕ್ಕುಗಳು ಮತ್ತು ಹವಾಮಾನ ವ್ಯವಸ್ಥೆಗಳಿಂದ ಬರುತ್ತವೆ. ಅವು ನಿಮಿಷಗಳಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಕಣ್ಮರೆಯಾಗಬಹುದು. ಸಣ್ಣ ಉಬ್ಬರವಿಳಿತದ ಪರಿಸ್ಥಿತಿಗಳಲ್ಲಿಯೂ ಸಹ ಚದರ ಅಲೆಗಳು ಅತ್ಯಂತ ಅಪಾಯಕಾರಿಯಾಗಬಹುದು. ಅವು ಶಕ್ತಿಯುತ ಮತ್ತು ವಿರುದ್ಧ ಪ್ರವಾಹಗಳು, ಶಕ್ತಿಯುತ ಪ್ರವಾಹಗಳು, ಅನಿರೀಕ್ಷಿತ ಅಲೆಗಳು, ತೀವ್ರವಾದ ಉರುಳುವಿಕೆ ಚಲನೆ, ಹಡಗು ಮುಳುಗುವುದಕ್ಕೆ ಕಾರಣವಾಗಬಹುದು ಎಂದು ಒಬ್ಬರು ವಿವರಿಸಿದ್ದಾರೆ. ಮತ್ತೊಬ್ಬರು ಇದು ಸಾಗರದಾಳದ ವೈಬ್ರೇಷನ್‌ನ ಕಾರಣದಿಂದ ಸಂಭವಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಅಪರೂಪದ ದೃಶ್ಯಾವಳಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
ಸಾಗರದ ಈ ಅಪರೂಪದ ವೀಡಿಯೋ ಇಲ್ಲಿದೆ ನೀವು ಒಮ್ಮೆ ನೋಡಿ ಕಣ್ತುಂಬಿಕೊಳ್ಳಿ