Asianet Suvarna News Asianet Suvarna News

2024ಕ್ಕೆ ಇಸ್ರೋ ಶುಭಾರಂಭ: ಕಪ್ಪುಕುಳಿ ಅಧ್ಯಯನಕ್ಕೆ ಉಪಗ್ರಹ ಕಳಿಸಿದ ವಿಶ್ವದ 2ನೇ ದೇಶ ಎಂಬ ಖ್ಯಾತಿ ಪಡೆದ ಭಾರತ

ಕಪ್ಪುಕುಳಿ, ಆಕಾಶಯಗಳ ಕುರಿತ ಅಧ್ಯಯನಕ್ಕಾಗಿ ರೂಪಿಸಲಾದ ‘ಎಕ್ಸ್‌ಪೋಸ್ಯಾಟ್‌’ ಎಂಬ ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಕಕ್ಷೆ ಸೇರಿಸಿದೆ. ಜೊತೆಗೆ ಇನ್ನೂ 10 ಉಪಗ್ರಹಗಳನ್ನು ಕೂಡಾ ನಿಗದಿತ ಕಕ್ಷೆ ಸೇರಿಸುವಲ್ಲಿ ಯಶಸ್ವಿಯಾಗಿದೆ.

pslv c58 xposat india successfully launches satellite to study black holes from sriharikota ash
Author
First Published Jan 2, 2024, 7:35 AM IST

ಶ್ರೀಹರಿಕೋಟ (ಜನವರಿ 2, 2024): ಪ್ರಸಕ್ತ ವರ್ಷ ಗಗನಯಾನದಂಥ ಮಹತ್ವಕಾಂಕ್ಷೆಯ ಯೋಜನೆಗಳನ್ನು ಮುಂದಿಟ್ಟುಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ, 2024ರ ವರ್ಷಾರಂಭಕ್ಕೆ ಶುಭ ಮುನ್ನುಡಿ ಬರೆದಿದೆ. ಕಪ್ಪುಕುಳಿ, ಆಕಾಶಯಗಳ ಕುರಿತ ಅಧ್ಯಯನಕ್ಕಾಗಿ ರೂಪಿಸಲಾದ ‘ಎಕ್ಸ್‌ಪೋಸ್ಯಾಟ್‌’ ಎಂಬ ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಕಕ್ಷೆ ಸೇರಿಸಿದೆ. ಜೊತೆಗೆ ಇನ್ನೂ 10 ಉಪಗ್ರಹಗಳನ್ನು ಕೂಡಾ ನಿಗದಿತ ಕಕ್ಷೆ ಸೇರಿಸುವಲ್ಲಿ ಯಶಸ್ವಿಯಾಗಿದೆ.

ಕಪ್ಪುಕುಳಿಗಳ ಅಧ್ಯಯನಕ್ಕೆ ಅಮೆರಿಕದ ಬಳಿಕ ಉಪಗ್ರಹ ಹಾರಿಸಿದ ಕೇವಲ 2ನೇ ದೇಶ ಎಂಬ ಹಿರಿಮೆಗೂ ಪಾತ್ರವಾಗಿದೆ.

ಇದನ್ನು ಓದಿ: ನಿಸಾರ್ ಮಿಷನ್​ಗೂ ಇದೆ ಡಾ. ಅಕ್ಷತಾ ಕೃಷ್ಣಮೂರ್ತಿ ಕೊಡುಗೆ: ಯೋಜನೆಯ ಮಹತ್ವ, ವಿವರ ಹೀಗಿದೆ..

ಪಿಎಸ್‌ಎಲ್‌ವಿ ಸಿ-58 ರಾಕೆಟ್‌ ಸೋಮವಾರ ಬೆಳಗ್ಗೆ 9.10ಕ್ಕೆ ಸರಿಯಾದ ನಭಕ್ಕೆ ನೆಗೆದು, 23 ನಿಮಿಷಗಳ ತರುವಾಯ ಎಕ್ಸ್‌ಪೋಸ್ಯಾಟ್‌ ಉಪಗ್ರಹವನ್ನು 650 ಕಿ.ಮೀ ಎತ್ತರದ ಕಕ್ಷೆಗೆ ಸೇರಿಸಿತು. ಬಳಿಕ ಒಂದಾದ ಮೇಲೊಂದರಂತೆ ಉಳಿದ 10 ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸಲಾಯಿತು. ಅದರ ತರುವಾಗ ವಿಜ್ಞಾನಿಗಳು, ಉಪಗ್ರಹದಲ್ಲಿನ ಎಂಜಿನ್‌ ಅನ್ನು ಉರಿಸುವ ಮೂಲಕ ಅದನ್ನು 350 ಕಿ.ಮೀ ಎತ್ತರದ ಸ್ಥಳಕ್ಕೆ ಕಕ್ಷೆ ಬದಲಾಯಿಸುವ ಪ್ರಕ್ರಿಯೆ ನಡೆಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್‌, ‘ಪಿಎಸ್‌ಎಲ್‌ವಿಗೆ ಮತ್ತೊಂದು ಯಶಸ್ಸು ಸಿಕ್ಕಿದೆ. ಅದು ಎಕ್ಸ್‌ಪೋಸ್ಯಾಟ್‌ ಅನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಗೆ ಸೇರಿಸಿದೆ. ಉಪಗ್ರಹದ ಸೌರಫಲಕಗಳನ್ನೂ ಯಶಸ್ವಿಯಾಗಿ ತೆರೆಯಲಾಗಿದೆ’ ಎಂದು ಹೇಳಿದರು.

ಗಗನಯಾನ ಯೋಜನೆಯ ಸ್ಪೇಸ್ ಕ್ಯಾಪ್ಸುಲ್‌ ಸಿಮ್ಯುಲೇಟರ್ ನಿರ್ಮಾಣಕ್ಕೆ ಬೋಯಿಂಗ್ - ಇಸ್ರೋ ಸಹಯೋಗ

ಜೊತೆಗೆ ‘ಇತರೆ ಹೆಮ್ಮೆಯ ಜೊತೆಗೆ, 11 ಉಪಗ್ರಹಗಳ ಪೈಕಿ ಒಂದು ಉಪಗ್ರಹವನ್ನು ತಿರುವನಂತಪುರದ ಎಲ್‌ಬಿಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಂಪೂರ್ಣ ಮಹಿಳಾ ತಂಡವೇ ರೂಪಿಸಿರುವುದು ಕೇವಲ ಇಸ್ರೋಗೆ ಮಾತ್ರವಲ್ಲದೇ ಇಡೀ ದೇಶಕ್ಕೆ ಖುಷಿಯ ಸಂಗತಿ’ ಎಂದರು.

ಅಧ್ಯಯನದ ಉದ್ದೇಶವೇನು?:
ಆಕಾಶಕಾಯಗಳಿಂದ ಹೊರಹೊಮ್ಮುವ ಎಕ್ಸ್‌ ರೇ ಕಿರಣಗಳು ಹೇಗೆ ಧ್ರುವೀಕರಣಗೊಳ್ಳುತ್ತದೆ ಎಂಬುದರ ಅಧ್ಯಯನ ಈ ಉಪಗ್ರಹ ಉಡ್ಡಯನದ ಪ್ರಮುಖ ಗುರಿಯಾಗಿದೆ. ಈ ಅಧ್ಯಯನವು ವಿಕಿರಣ ವ್ಯವಸ್ಥೆ ಮತ್ತು ಆಕಾಶಕಾಯಗಳ ಮೂಲಗಳ ಜ್ಯಾಮಿತಿ ಕುರಿತು ಅರಿಯಲು ನೆರವಾಗಲಿದೆ ಎಂದು ಇಸ್ರೋ ಹೇಳಿದೆ.

ಮೋದಿ, ಖರ್ಗೆ ಪ್ರತಿಕ್ರಿಯೆ
2024ಕ್ಕೆ ಅದ್ಭುತ ಆರಂಭ ಸಿಕ್ಕಿದೆ, ಇದಕ್ಕಾಗಿ ನಮ್ಮ ವಿಜ್ಞಾನಿಗಳಿಗೆ ಅಭಿನಂದನೆಗಳು. ಈ ಉಡ್ಡಯನ ಬಾಹ್ಯಾಕಾಶ ವಲಯಕ್ಕೆ ಶುಭ ಸುದ್ದಿ ಮತ್ತು ಈ ವಲಯದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಭಾರತವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯುತ್ತಿರುವುದು ಇಸ್ರೋ ಮತ್ತು ಇತರೆ ವೈಜ್ಞಾನಿ ತಂಡಕ್ಕೆ ಅಭಿನಂದನೆಗಳು.
- ನರೇಂದ್ರ ಮೋದಿ, ಪ್ರಧಾನಿ


ಹೊಸ ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲೇ ಎಕ್ಸ್‌ಪೋಸ್ಯಾಟ್‌ ಉಪಗ್ರಹವನ್ನು ಇಸ್ರೋ ತನ್ನ ಪಿಎಸ್‌ಎಲ್‌ವಿ ಸಿ58 ಉಪಗ್ರಹದ ಮೂಲಕ ಕಕ್ಷೆಗೆ ಯಶಸ್ವಿಯಾಗಿ ಸೇರಿಸುವುದಕ್ಕೆ ಸಾಕ್ಷಿಯಾದ ಹೆಮ್ಮೆ ಇದೆ. ಎಕ್ಸ್‌ರೇ ಕಿರಣಗಳ ಕುರಿತಾದ ಅಧ್ಯಯನಕ್ಕೆ ಇಸ್ರೋ ಹಾರಿಬಿಟ್ಟ ಈ ಉಪಗ್ರಹ ನಮ್ಮ ವಿಜ್ಞಾನಿಗಳು, ಬಾಹ್ಯಾಕಾಶ ಎಂಜಿನಿಯರ್‌ಗಳು, ಸಂಶೋಧಕರು ಮತ್ತು ಇತರೆ ಸಿಬ್ಬಂದಿಗಳ ಶ್ರಮಕ್ಕೆ ಸಾಕ್ಷಿ.
- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

Follow Us:
Download App:
  • android
  • ios