ಸತ್ಯ ಹೊರತೆಗೆಯಲು ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಮಂಪರು ಪರೀಕ್ಷೆ ವಿಧಾನವನ್ನು ಅನುಸರಿಸುತ್ತಾರೆ. ಆದರೆ, ಈ ವಿಧಾನ ವಾಸ್ತವವಾಗಿ ನಿಜ ಹೊರತರಲು ನೆರವಾಗುತ್ತದೆಯೇ? ಅಥವಾ ಬುದ್ಧಿವಂತ ಅಪರಾಧಿಗಳು ಈ ವ್ಯವಸ್ಥೆಯನ್ನು ಮೋಸಗೊಳಿಸಲು ಸಾಧ್ಯವೇ?
ಗಿರೀಶ್ ಲಿಂಗಣ್ಣ
(ಲೇಖಕರು ವಿಜ್ಞಾನ ಬರಹಗಾರ)
ಒಂದು ಸರಳ ಚುಚ್ಚುಮದ್ದು ಅಪರಾಧಿಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಲು ಸಾಧ್ಯವೇ? ಆದರೆ ವಾಸ್ತವ ವಿಚಾರ ನಾವು ಅಂದುಕೊಂಡಿರುವುದಕ್ಕಿಂತಲೂ ಬಹಳಷ್ಟು ಸಂಕೀರ್ಣವಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ನಾವು ಬಹಳಷ್ಟು ಬಾರಿ ದೊಡ್ಡ ಪ್ರಮಾಣದ ಅಪರಾಧದ ಪ್ರಕರಣಗಳಲ್ಲಿ 'ನಾರ್ಕೋ ಅನಾಲಿಸಿಸ್' ಅಥವಾ ಮಂಪರು ಪರೀಕ್ಷೆಯ ಕುರಿತು ಮಾತನಾಡುವುದನ್ನು ನಾವು ಬಹಳಷ್ಟು ಬಾರಿ ಕೇಳಿರುತ್ತೇವೆ. ಕೆಲವು ಬಾರಿ ಶಂಕಿತರು ವಿಚಾರಣೆಗೆ ಸಹಕರಿಸದಿರುವಾಗ ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಈ ವಿಧಾನವನ್ನು ಅನುಸರಿಸುತ್ತಾರೆ. ಆದರೆ, ಈ ವಿಧಾನ ವಾಸ್ತವವಾಗಿ ನಿಜ ಹೊರತರಲು ನೆರವಾಗುತ್ತದೆಯೇ? ಅಥವಾ ಬುದ್ಧಿವಂತ ಅಪರಾಧಿಗಳು ಈ ವ್ಯವಸ್ಥೆಯನ್ನು ಮೋಸಗೊಳಿಸಲು ಸಾಧ್ಯವೇ?
ಮಂಪರು ಪರೀಕ್ಷೆ ಅಥವಾ ನಾರ್ಕೋ ಅನಾಲಿಸಿಸ್ ಎಂದರೇನು?
ಮಂಪರು ಪರೀಕ್ಷೆ ಅಥವಾ ನಾರ್ಕೋ ಅನಾಲಿಸಿಸ್ ಅನ್ನು 'ಟ್ರುತ್ ಸೆರಮ್ ಟೆಸ್ಟ್' ಎಂದೂ ಕರೆಯಲಾಗುತ್ತದೆ. ಇದರಲ್ಲಿ ಪರೀಕ್ಷೆಗೆ ಒಳಪಡುವ ವ್ಯಕ್ತಿಗೆ ಸೋಡಿಯಂ ಪೆಂಟೋಥಾಲ್ ಅಥವಾ ತತ್ಸಮಾನ ಔಷಧವನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ. ಈ ಔಷಧಗಳು ಮೆದುಳಿನ ಚಟುವಟಿಕೆಗಳನ್ನು ನಿಧಾನವಾಗಿಸಿ, ವ್ಯಕ್ತಿಯನ್ನು ಮಂಪರು ಕವಿಯುವಂತೆ ಮಾಡಿ, ಆತ ಜಾಗೃತಿ ವಹಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಇಲ್ಲಿನ ಆಲೋಚನೆ ಸರಳ - ಯಾರಾದರೂ ತಮ್ಮ ಕುರಿತು ಜಾಗೃತಿ ವಹಿಸಲು ಸಾಧ್ಯವಾಗದೆ ಹೋದರೆ, ಅವರು ಸುಳ್ಳಿನ ಕುರಿತು ಆಲೋಚಿಸದೆ, ನಿಜವನ್ನೇ ಮಾತನಾಡಲು ಆರಂಭಿಸುತ್ತಾರೆ.
ಈ ಪ್ರಕ್ರಿಯೆಯ ಸಂದರ್ಭದಲ್ಲಿ, ವ್ಯಕ್ತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ತನಿಖಾಧಿಕಾರಿಗಳು ಆತನಿಗೆ ಪ್ರಶ್ನೆ ಕೇಳಲು ಆರಂಭಿಸುತ್ತಾರೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೋ ಮೂಲಕ ದಾಖಲಿಸಲಾಗುತ್ತದೆ. ಮಂಪರು ಪರೀಕ್ಷೆಯ ಬೆಂಬಲಿಗರು, ಇಂತಹ ಪರಿಸ್ಥಿತಿಯಲ್ಲಿ ಶಂಕಿತ ವ್ಯಕ್ತಿಗೆ ಸತ್ಯವನ್ನು ಮರೆಮಾಚಲು ಅಥವಾ ಸುಳ್ಳು ಕತೆಗಳನ್ನು ಹೆಣೆಯಲು ಕಷ್ಟವಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.
ಕಲ್ಪನೆ vs ವಾಸ್ತವ
ಕಲ್ಪನೆ: ನಾರ್ಕೋ ಅನಾಲಿಸಿಸ್ ಅಥವಾ ಮಂಪರು ಪರೀಕ್ಷೆ ಸಂಕೀರ್ಣ ಅಪರಾಧ ಪ್ರಕರಣಗಳನ್ನು ಪರಿಹರಿಸಲು ಇರುವ ಮ್ಯಾಜಿಕ್ ಔಷಧಿಯಂತೆ ತೋರುತ್ತದೆ. ಯಾರಾದರೂ ಕೊಲೆ, ಕಳ್ಳತನ, ಅಥವಾ ಭ್ರಷ್ಟಾಚಾರ ನಡೆಸಿದರೆ, ಅವರಿಗೆ ಒಂದು ಚುಚ್ಚುಮದ್ದು ನೀಡಿದರೆ ಅವರು ಎಲ್ಲ ಸತ್ಯವನ್ನೂ ಬಾಯಿ ಬಿಡಲು ಆರಂಭಿಸುತ್ತಾರೆ. ಇದಕ್ಕಾಗಿ ಸುದೀರ್ಘ ವಿಚಾರಣೆ ಅಥವಾ ಕಷ್ಟಪಟ್ಟು ಒಂದೊಂದೇ ಸಾಕ್ಷಿಗಳನ್ನು ಕಲೆಹಾಕುವ ಅಗತ್ಯವಿಲ್ಲ.
ವಾಸ್ತವ: ವೈದ್ಯಕೀಯ ತಜ್ಞರು ಮತ್ತು ಕಾನೂನು ವೃತ್ತಿಪರರು ಈ ತಂತ್ರಜ್ಞಾನದ ಕುರಿತು ಹಲವು ಕಾರಣಗಳಿಂದ ಅನುಮಾನ ವ್ಯಕ್ತಪಡಿಸುತ್ತಾರೆ. ಅವೆಂದರೆ:
ಮೊದಲನೆಯದಾಗಿ, ಇಂತಹ ಔಷಧಗಳ ಪ್ರಭಾವದಡಿ ಇರುವ ವ್ಯಕ್ತಿಗಳು ಇಷ್ಟಾದರೂ ಸುಳ್ಳು ಹೇಳಲು ಸಾಧ್ಯ. ಓರ್ವ ನುರಿತ ಅಪರಾಧಿ ಅಥವಾ ಬಹಳ ದೃಢ ಮನಸ್ಸುಳ್ಳ ವ್ಯಕ್ತಿ ಇಂತಹ ಮಂಪರು ಸ್ಥಿತಿಯಲ್ಲೂ ಸಹ ಸುಳ್ಳು ಮಾಹಿತಿ ನೀಡಲು ಸಾಧ್ಯವಿದೆ. ಯಾಕೆಂದರೆ, ಇಂತಹ ಔಷಧಿಗಳು 'ನಿಜವನ್ನೇ ಹೇಳುವ ಸ್ಥಿತಿ'ಯನ್ನು ನಿರ್ಮಿಸಲು ಸಾಧ್ಯವಿಲ್ಲ. ಅವುಗಳು ಜನರನ್ನು ಕೇವಲ ಕಡಿಮೆ ಜಾಗರೂಕವಾಗಿ ಮತ್ತು ಹೆಚ್ಚು ಮಾತನಾಡುವಂತೆ ಮಾಡುತ್ತವೆ.
ಎರಡನೆಯದಾಗಿ, ವ್ಯಕ್ತಿ ತನ್ನ ನೈಜ ನೆನಪಿನ ಆಧಾರದಲ್ಲಿ ಅಲ್ಲದೆ, ಬೇರೇನೋ ವಿಚಾರಗಳನ್ನು ಮಾತನಾಡಬಹುದು. ಇಂತಹ ಔಷಧಗಳ ಪ್ರಭಾವದಲ್ಲಿ, ಜನರು ಕೆಲವೊಂದು ಬಾರಿ ತಮ್ಮ ಕನಸುಗಳು, ಭಯ, ಕಲ್ಪನೆಗಳನ್ನೂ ವಾಸ್ತವ ವಿಚಾರದೊಡನೆ ಬೆರೆಸಿ ಮಾತನಾಡತೊಡಗುತ್ತಾರೆ. ಅವರು ತಾವು ಎಂದೂ ಮಾಡಿಯೇ ಇರದ ಅಪರಾಧವನ್ನೂ ಮಾಡಿದ್ದೇವೆ ಎಂದುಬಿಡಬಹುದು! ಅಥವಾ ಅವರು ಅಪರಾಧಿಗಳು ಎಂದು ನಂಬುವಂತೆ ಮಾಡುವ, ಆದರೆ ವಾಸ್ತವವಾಗಿ ಸುಳ್ಳಾಗಿರುವ ಮಾಹಿತಿಗಳನ್ನು ಹಂಚಿಕೊಳ್ಳಬಹುದು!
ಮೂರನೆಯದಾಗಿ, ಕೆಲವು ವ್ಯಕ್ತಿಗಳು ತಮ್ಮ ದೇಹ ಪ್ರಕೃತಿಯ ಕಾರಣದಿಂದ, ಅಥವಾ ಹಿಂದೆ ಬಳಸುತ್ತಿದ್ದ ಔಷಧಗಳ ಕಾರಣದಿಂದ, ಅಥವಾ ಮಾನಸಿಕ ಸ್ಥಿತಿಗಳಿಂದ ಇಂತಹ ಔಷಧಗಳ ನಿರೋಧಕ ಗುಣ ಮೈಗೂಡಿಸಿಕೊಂಡಿರಬಹುದು. ಅಂದರೆ, ಈ ವಿಧಾನ ಎಲ್ಲರ ಮೇಲೂ ಸಮಾನವಾಗಿ ಕಾರ್ಯಾಚರಿಸುವುದಿಲ್ಲ.
ಅಪರಾಧಿಗಳು ಈ ವ್ಯವಸ್ಥೆಯನ್ನು ಮಣಿಸಬಲ್ಲರೇ?
ಈ ಪ್ರಶ್ನೆಗೆ ಹಲವು ಕಾರಣಗಳಿಂದಾಗಿ ಹೌದು ಎಂಬ ಉತ್ತರ ನೀಡಬೇಕಾಗುತ್ತದೆ:
ಮಾನಸಿಕ ಸಿದ್ಧತೆ: ಓರ್ವ ಬದ್ಧ ಅಪರಾಧಿ ಪರೀಕ್ಷೆಗೂ ಮುನ್ನ ಅದಕ್ಕೆ ಮಾನಸಿಕವಾಗಿ ಸಿದ್ಧವಾಗಬಲ್ಲ. ಆತ ಒಂದು ಸುಳ್ಳು ಕತೆಯನ್ನು ಪರೀಕ್ಷೆಗೂ ಮುನ್ನ ಹಲವಾರು ಬಾರಿ ಅಭ್ಯಾಸ ನಡೆಸಿ, ಔಷಧದ ಪ್ರಭಾವದಡಿಯಲ್ಲೂ ಅದು ನಿಜವೇ ಎಂಬಂತೆ ಹೇಳಬಲ್ಲ.
ದೈಹಿಕ ನಿರೋಧ: ಕೆಲವು ವ್ಯಕ್ತಿಗಳ ದೇಹದ ಮೇಲೆ ಇಂತಹ ಔಷಧಗಳು ಪ್ರಭಾವ ಬೀರಬೇಕಾದರೆ, ಅದನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕಾಗುತ್ತದೆ. ಕೆಲವರಲ್ಲಿ ಈ ಔಷಧದ ಪರಿಣಾಮವನ್ನು ಕಡಿಮೆಗೊಳಿಸುವಂತಹ ವೈದ್ಯಕೀಯ ಪರಿಸ್ಥಿತಿ ಇರಬಹುದು.
ಅರ್ಧ ಸತ್ಯದ ತಂತ್ರ: ಬುದ್ಧಿವಂತ ಅಪರಾಧಿಗಳು ಸತ್ಯವನ್ನು ಸುಳ್ಳುಗಳೊಡನೆ ಮಿಶ್ರಣ ಮಾಡಬಲ್ಲರು. ಅವರು ಸಣ್ಣಪುಟ್ಟ ಸತ್ಯಗಳನ್ನು ಹೇಳುತ್ತಾ, ದೊಡ್ಡ ಅಪರಾಧಗಳನ್ನು ಬಚ್ಚಿಡಬಲ್ಲರು. ಇದು ಅವರ ಹೇಳಿಕೆಗಳನ್ನು ನಂಬಲು ಸಾಧ್ಯವಾಗುವಂತೆ ಮಾಡಬಹುದು.
ವೃತ್ತಿಪರ ತರಬೇತಿ: ಸಂಘಟಿತ ಅಪರಾಧಿಗಳು ಅಥವಾ ಬುದ್ಧಿವಂತಿಕೆ ಹಿನ್ನೆಲೆ ಉಳ್ಳವರು ಇಂತಹ ತಂತ್ರಜ್ಞಾನವನ್ನು ತಡೆಯುವ ತರಬೇತಿ ಹೊಂದಿರಬಹುದು.
ಕಾನೂನು ಮತ್ತು ನೈತಿಕ ಕಳವಳಗಳು
ಭಾರತೀಯ ನ್ಯಾಯಾಲಯಗಳು ಮಂಪರು ಪರೀಕ್ಷೆಯ ಕುರಿತು ಬಹಳ ಜಾಗರೂಕತೆ ವಹಿಸುತ್ತವೆ. 2010ರಲ್ಲಿ, ಯಾವುದೇ ವ್ಯಕ್ತಿಯನ್ನು ಅವರ ಇಚ್ಛೆಗೆ ವಿರೋಧವಾಗಿ ಬಲವಂತವಾಗಿ ಮಂಪರು ಪರೀಕ್ಷೆಗೆ ಒಳಪಡಿಸುವಂತಿಲ್ಲ ಎಂದು ಸ್ಪಷ್ಟವಾಗಿ ಆದೇಶಿಸಿದೆ. ಇಂತಹ ಬಲವಂತದ ಪರೀಕ್ಷೆ ವ್ಯಕ್ತಿಯ ಮೌನವಾಗಿರುವ ಹಕ್ಕಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ಪಟ್ಟಿತ್ತು.
ಒಂದು ವೇಳೆ ಯಾರಾದರೂ ಈ ಪರೀಕ್ಷೆಗೆ ಒಪ್ಪಿಗೆ ಸೂಚಿಸಿದರೆ, ಆ ಫಲಿತಾಂಶವನ್ನು ನೇರ ಸಾಕ್ಷಿ ಎಂದು ನ್ಯಾಯಾಲಯದಲ್ಲಿ ಬಳಸಲು ಸಾಧ್ಯವಿಲ್ಲ. ಈ ಹೇಳಿಕೆಗಳನ್ನು ಇನ್ನೂ ಹೆಚ್ಚಿನ ಸುಳಿವು ಅಥವಾ ಸಾಕ್ಷಿಗಳನ್ನು ಕಲೆಹಾಕಲು ಬಳಸಬಹುದಷ್ಟೇ. ಯಾಕೆಂದರೆ, ಔಷಧದ ಪ್ರಭಾವದಲ್ಲಿ ವ್ಯಕ್ತಿಗಳು ನೀಡುವ ಹೇಳಿಕೆಯ ನಂಬಿಕಾರ್ಹತೆ ಪ್ರಶ್ನಾರ್ಹವಾಗಿರುತ್ತದೆ.
ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ, ಅಥವಾ ಟಿವಿ ಧಾರಾವಾಹಿಗಳಲ್ಲಿ ತೋರಿಸುವಂತೆ ಮಂಪರು ಪರೀಕ್ಷೆಗಳು ದೋಷರಹಿತವಲ್ಲ. ಕೆಲವು ಬಾರಿ ಇದು ತನಿಖೆಗೆ ನೆರವಾಗಬಹುದಾದರೂ, ಇದು ಪತ್ತೇದಾರಿ ಕಾರ್ಯ, ಸಾಕ್ಷ್ಯ ಕಲೆಹಾಕುವಿಕೆ ಮತ್ತು ಕಾನೂನು ಪ್ರಕ್ರಿಯೆಗಳಿಗೆ ಬದಲಿಯಲ್ಲ.
ಅಪರಾಧಿಗಳಿಗೆ ಈ ವ್ಯವಸ್ಥೆಯನ್ನು ಹಲವು ರೀತಿಯಲ್ಲಿ ವಂಚಿಸಲು ಸಾಧ್ಯವಿದ್ದು, ಅಂತಹ ಹಲವು ಘಟನೆಗಳು ನಡೆದಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಔಷಧದ ಪ್ರಭಾವದಲ್ಲಿ ಅಮಾಯಕರೂ ಸಹ ಏನೇನೋ ಹೇಳಿಕೆಗಳನ್ನು ನೀಡಿ, ತಾವು ಎಂದೂ ಮಾಡಿರದ ಅಪರಾಧದಲ್ಲಿ ಭಾಗಿಯಾಗಿದ್ದೇವೆ ಎನ್ನಬಹುದು.
ವಾಸ್ತವ ಸತ್ಯ ಇದು: ನ್ಯಾಯ ಪಡೆಯುವ ಹಾದಿಯಲ್ಲಿ ಯಾವುದೇ ಅಡ್ಡದಾರಿಗಳಿಲ್ಲ. ಹಳೆಯ ಮಾದರಿಯ ತನಿಖೆ, ಅಂದರೆ, ಪುರಾವೆಗಳನ್ನು ಕಲೆಹಾಕುವುದು, ಸಾಕ್ಷಿಗಳನ್ನು ಮಾತನಾಡಿಸುವುದು, ವಾಸ್ತವ ಅಂಶಗಳ ವಿಶ್ಲೇಷಣೆ ನಡೆಸುವುದು ಇಂದಿಗೂ ಅಪರಾಧವನ್ನು ಬಗೆಹರಿಸುವ ಅತ್ಯಂತ ನಂಬಿಕಾರ್ಹ ವಿಧಾನವಾಗಿದೆ. ಆ ಮೂಲಕ ನ್ಯಾಯ ನಿಶ್ಚಿತವಾಗಿ ಗೆಲ್ಲುತ್ತದೆ.
ಜವಾಬ್ದಾರಿಯುತ ಪ್ರಜೆಗಳಾಗಿ, ನಾವು ಎಲ್ಲ ಸಮಸ್ಯೆಗಳಿಗೂ ಉತ್ತರ ನೀಡಬಲ್ಲದು ಎನ್ನುವ ಯಾವುದೇ ತಂತ್ರದ ಕುರಿತು ಜಾಗೃತಿ ವಹಿಸಬೇಕು. ಶಂಕಿತರ ಹಕ್ಕುಗಳನ್ನೂ ಉಳಿಸುವ, ಮತ್ತು ಸತ್ಯವನ್ನು ಕಲೆಹಾಕುವ ಜಾಗರೂಕವಾದ, ಕ್ರಮಬದ್ಧ ತನಿಖೆಯಿಂದ ಲಭಿಸುವ ನ್ಯಾಯ ನಿಜಕ್ಕೂ ಸರಿಯಾದ ವಿಧಾನವಾಗಿದೆ.
(ತಂತ್ರಜ್ಞಾನ ಅಪರಾಧದ ವಿಚಾರಣೆಗೆ ನೆರವಾಗಬಲ್ಲದಾದರೂ, ಅದು ಯಾವ ಕಾರಣಕ್ಕೂ ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಆಧಾರವಾಗಿರುವ ನ್ಯಾಯ ಮತ್ತು ಮಾನವ ಹಕ್ಕುಗಳ ಮೂಲಭೂತ ತತ್ವಗಳಿಗೆ ಬದಲಿಯಾಗಲು ಸಾಧ್ಯವಿಲ್ಲ ಎಂದು ಲೇಖಕರು ಭಾವಿಸುತ್ತಾರೆ)
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
