Recap 2023 ಚಂದ್ರನ ಮೇಲೆ ಭಾರತ, ಕಾರು-ಮೊಬೈಲ್ ನಡುವೆ AI ತಂತ್ರಜ್ಞಾನ ಡೀಪ್ ಫೇಕ್ ಆತಂಕ!
2023ರ ಸಾಲಿನಲ್ಲಿ ಭಾರತ ವಿಶ್ವದಲ್ಲೇ ಹಲವು ಕ್ಷೇತ್ರಗಳಲ್ಲಿ ಅಗ್ರಸ್ಥಾನಕ್ಕೇರಿದೆ. ಚಂದ್ರನ ಮೇಲೆ ಭಾರತ, ದೇಶಾದ್ಯಂತ 5ಜಿ ನೆಟ್‌ವರ್ಕ್, ಎಐ ಡೀಪ್ ಫೇಕ್ ಕಡಿವಾಣಕ್ಕೆ ಚರ್ಚೆ, 8.89 ಕೋಟಿ ರೂಪಾಯಿ ಕಾರು ಬಿಡುಗಡೆ, ಭಾರತದಲ್ಲಿ ಉತ್ಪಾದನೆಯಾದ ಆ್ಯಪಲ್ ಐಫೋನ್ ಬಿಡುಗಡೆ ಸೇರಿದಂತೆ ಈ ವರ್ಷ ಹೊಸ ಸಂಚಲನ ಸೃಷ್ಟಿಸಿದ ಮಾಹಿತಿ ಇಲ್ಲಿದೆ.
ಬೆಂಗಳೂರು(ಡಿ.12) ತಂತ್ರಜ್ಞಾನ, ಆಟೋಮೊಬೈಲ್ ಕ್ಷೇತ್ರ, ಸ್ಮಾರ್ಟ್ ಎಲೆಕ್ಟ್ರಾನಿಕ್ ಜಗತ್ತಿನಲ್ಲಿ ಭಾರತ ಅದ್ವಿತೀಯ ಸಾಧನೆ ಮಾಡಿದೆ. ಕಡಿಮೆ ಬೆಲೆ ಮಾತ್ರವಲ್ಲ, ಮೇಡ್ ಇನ್ ಇಂಡಿಯಾ ಮೊಬೈಲ್ ಫೋನ್ ಸೇರಿದಂತೆ ಗ್ಯಾಜೆಟ್ಸ್ ಬಿಡುಗಡೆ, 8.89 ಕೋಟಿ ರೂಪಾಯಿ ಬೆಲೆಯ ದುಬಾರಿ ಲ್ಯಾಂಬೋರ್ಗಿನಿ ಕಾರು ಭಾರತದಲ್ಲಿ ಬಿಡುಗಡೆ, ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಚಂದ್ರಯಾನ 3 ನೌಕೆ, ಬಾಹ್ಯಾಕಾಶ ಅಧ್ಯಯನ ಸೇರಿದಂತೆ 2023ರಲ್ಲಿ ಭಾರತದ ಸಾಧನೆ ಅಪಾರ. ಇದರ ನಡುವೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ಬಳಕೆಯಲ್ಲಿ ಕೆಲ ಆತಂಕವನ್ನೂ ಎದುರಿಸಿದೆ. ಡೀಪ್ ಫೇಕ್ ವಿಡಿಯೋಗಳು ಸೇರಿದಂತೆ ಕೆಲ ಅಪಾಯದ ಸೂಚನೆ ಕೂಡ ಇದೇ ವರ್ಷದಲ್ಲಿ ಎದುರಾಗಿದೆ.
ಚಂದ್ರನ ಮೇಲೆ ಭಾರತ
ಆಗಸ್ಟ್ 23ರಂದು ಭಾರತ ವಿಶ್ವದ ಬಾಹ್ಯಾಕಾಶ ಕ್ಷೇತ್ರದಲ್ಲಿ ಯಾರೂ ಮೂಡದ ಸಾಧನೆ ಮಾಡಿತ್ತು. ಅತೀ ಕಡಿಮೆ ಖರ್ಚಿನಲ್ಲಿ ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿ ಅಧ್ಯಯನ ನಡೆಸಿತ್ತು. ಕಳೆದ ಜು.14ರಂದು ಎಲ್‌ವಿಎಂ3- ಎಂ4 ರಾಕೆಟ್ ಮೂಲಕ ಚಂದ್ರಯಾನ 3 ನೌಕೆಯನ್ನು ಗಗನಕ್ಕೆ ಉಡ್ಡಯನ ಮಾಡಲಾಗಿತ್ತು. ಆಗಸ್ಟ್ 23ರಂದು ಯಶಸ್ವಿಯಾಗಿ ಚಂದ್ರನ ಮೇಲೆ ಭಾರತ ಕಾಲಿಟ್ಟಿತು. ಈ ಸಾಧನೆಯನ್ನು ವಿಶ್ವವೇ ಕೊಂಡಾಡಿತ್ತು. ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಮಹತ್ವದ ಮೈಲಿಗಲ್ಲು ನಿರ್ಮಿಸಿತ್ತು.
ಸೂರ್ಯನ ಅಧ್ಯಯನಕ್ಕೆ ಆದಿತ್ಯ ನೌಕೆ ಉಡಾವಣೆ ಸೇರಿದಂತೆ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದರ ಮೇಲೊಂದರಂತೆ ನೌಕೆ ಉಡಾಯಿಸಿ ಅಧ್ಯಯನ ನಡೆಸುತ್ತಿದೆ. ಇದರ ಜೊತೆಗೆ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳ ನೌಕೆ ಉಡಾವಣೆಗೂ ನೆರವು ನೀಡಿದೆ.
ಸಾಧನೆ-ವಿವಾದ, ಈ ವರ್ಷ ಸದ್ದು ಮಾಡಿದ ದಿಗ್ಗಜರ ಸಾಲಿನಲ್ಲಿ ಎಸ್ ಸೋಮನಾಥ್- ಅದಾನಿ ಟಾಪ್!
ಮೇಡ್ ಇನ್ ಇಂಡಿಯಾ ಐಫೋನ್
ಮೇಡ್ ಇನ್ ಇಂಡಿಯಾ ಆ್ಯಪಲ್ ಐಫೋನ್ 15 ಭಾರತದ ಮೂಲಕ ಜಾಗತಿಕವಾಗಿ ಬಿಡುಗಡೆಯಾಗಿದೆ. ಅಮೆರಿಕ ಮೂಲದ ಆ್ಯಪಲ್ ಸಂಸ್ಥೆಯ ಪ್ರಮುಖ ಪೂರೈಕೆದಾರ ಸಂಸ್ಥೆಯಾದ ಫಾಕ್ಸ್‌ಕಾನ್, ಭಾರತದಲ್ಲಿ ಐಫೋನ್ 15 ಮೊಬೈಲ್ ಉತ್ಪಾದನೆಯನ್ನು ಆರಂಭಿಸಿತ್ತು. ಐಫೋನ್ ಜೊತೆಗೆ ಈ ವರ್ಷ ಭಾರತದಲ್ಲಿ ಸ್ಯಾಮ್ಸನ್ ಫೋಲ್ಡೇಬಲ್, ಒನ್ ಪ್ಲಸ್ ಫೋಲ್ಡೇಬಲ್ ಸೇರಿದಂತೆ ಕೈಗೆಟುಕುವ ದರದಲ್ಲೂ ಫೋನ್ ಬಿಡುಗಡೆಯಾಗುವ ಮೂಲಕ ಭಾರಿ ಮಾರಾಟ ದಾಖಲೆ ಕಂಡಿದೆ.
ಐಫೋನ್ ಹ್ಯಾಕ್ ಗದ್ದಲ
ಕೇಂದ್ರ ಸರ್ಕಾರದಿಂದ ತಮ್ಮ ಐಫೋನ್‌ಗಳನ್ನು ಹ್ಯಾಕ್ ಮಾಡುವ ಯತ್ನ ನಡೆಸಿದೆ ಅನ್ನೋ ಪ್ರತಿಪಕ್ಷಗಳ ಆರೋಪ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ನಿಮ್ಮ ಐಫೋನ್ ಹ್ಯಾಕ್ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಐಫೋನ್‌ಗಳಲ್ಲಿ ಎಚ್ಚರಿಕೆ ಸಂದೇಶ ಬಂದಿತ್ತು. ಕೇಂದ್ರ ಸರ್ಕಾರವೇ ಇಂತಹ ಯತ್ನ ನಡೆಸಿದೆ ಎಂದು ವಿಪಕ್ಷಗಳು ದೂರಿದ್ದವು. ಇದು ರಾಜಕೀಯ ಸಮರಕ್ಕೆ ಕಾರಣವಾಗಿತ್ತು. ಆದರೆ 150 ದೇಶಗಳಲ್ಲಿ ಇಂತಹ ಸಂದೇಶ ಬಂದಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.ಈ ಕುರಿತು ಕೇಂದ್ರ ಸರ್ಕಾರ ತನಿಖೆ ನಡೆಸುತ್ತಿದೆ.
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಇದೀಗ ಎಲ್ಲಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಇದರ ನಡುವೆ ಡೀಫ್ ಫೇಕ್ ವಿಡಿಯೋ, ಫೋಟೋಗಳ ಆತಂಕವೂ ಎದುರಾಗಿದೆ. ರಶ್ಮಿಕಾ ಮಂದಣ್ಣ ಸೇರದಂತೆ ಕೆಲ ಬಾಲಿವುಡ್ ನಟಿಯರ ಡೀಪ್ ಫೇಕ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಡೀಪ್ ಫೇಕ್ ವಿಡಿಯೋ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊಸ ನೀತಿ ರೂಪಿಸಲು ಮುಂದಾಗಿದೆ.
6 ಲಕ್ಷ ರೂನಿಂದ 8.89 ಕೋಟಿ ರೂಪಾಯಿ ಮೌಲ್ಯದ ಕಾರು ಬಿಡುಗಡೆ
2023 ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದ ವರ್ಷ. ಕೋವಿಡ್ ಹಾಗೂ ಕೋವಿಡ್ ನಂತರದಲ್ಲಿ ಎದುರಾದ ಸವಾಲು ಮೆಟ್ಟಿನಿಂತ ಆಟೋ ಕ್ಷೇತ್ರ ದಾಖಲೆ ಪ್ರಮಾಣದಲ್ಲಿ ಮಾರಾಟವನ್ನೂ ಕಂಡಿದೆ. 6 ಲಕ್ಷ ರೂಪಾಯಿ ಬೆಲೆಯ ಹ್ಯುಂಡೈ ಎಕ್ಸಟರ್‌ನಿಂದ 8.89 ಕೋಟಿ ರೂಪಾಯಿ ಬೆಲೆಯ ಲ್ಯಾಂಬೋರ್ಗಿನಿ ಕಾರುಗಳು ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಿದೆ.
ಹೊಸ ವರ್ಷಕ್ಕೆ ಬಿಡುಗಡೆಯಾಗುತ್ತಿದೆ ಅತ್ಯಾಧುನಿಕ ಹೀರೋ ಸ್ಕೂಟರ್- ಬೈಕ್!
ಮಾರುತಿ ಸುಜುಕಿ ಫ್ರಾಂಕ್ಸ್, ಮಾರುತಿ ಸುಜುಕಿ ಜಿಮ್ನಿ, ಸಿಟ್ರೋನ್ C3 ಏರ್ಕ್ರಾಸ್, ಹೋಂಡಾ ಎಲಿವೇಟ್, ಟಾಟಾ ನೆಕ್ಸಾನ್ 2023, 2023 ಕಿಯಾ ಸೆಲ್ಟೋಸ್, ಟಾಟಾ ಹ್ಯಾರಿಯರ್, ಟಾಟಾ ಸಫಾರಿ, ಟಾಟಾ ಅಲ್ಟ್ರೋಜ್ ಸಿಎನ್‌ಜಿ, ಹ್ಯುಂಡೈ ವರ್ನಾ, ಟೋಯೋಟಾ ಇನೋವಾ ಹೈಕ್ರಾಸ್ ಸೇರಿದಂತೆ ಹಲವು ಕಾರುಗಳು ಈ ವರ್ಷ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಇನ್ನು ಟಾಟಾ ನೆಕ್ಸಾನ್ ಇವಿ, ಎಂಜಿ ಕೊಮೆಟ್, ಮಹೀಂದ್ರ XUV 400 ಸೇರಿದಂತೆ ಹಲವು ಎಲೆಕ್ಟಿಕ್ ಕಾರುಗಳು ಭಾರತದಲ್ಲಿ ಬಿಡುಗಡೆಯಾಗಿದೆ.
ಭಾರತದಲ್ಲೇ ನಿರ್ಮಾಣಗೊಂಡ ಹಾರ್ಲೇ ಡೇವಿಡ್ಸನ್ X440, ಹೀರೋ ಕರಿಜ್ಮಾ, 39 ಲಕ್ಷ ರೂಪಾಯಿ ಬೆಲೆಯ ಹೋಂಡಾ ಗೋಲ್ಡ್ ವಿಂಗ್, ರಾಯಲ್ ಎನ್‌ಫೀಲ್ಡ್ 350 ಸೇರಿದಂತೆ ಎನ್‌ಫೀಲ್ಡ್ ಸೀರಿಸ್ ಬೈಕ್, ಹೀರೋ ಗ್ರಾಮರ್, ಯಮಹಾ ಮಾನ್‌ಸ್ಟರ್ ಸೀರಿಸ್ ಸೇರಿದಂತೆ ನೂರಕ್ಕೂ ಹೆಚ್ಚು ಬೈಕ್ ಹಾಗೂ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಕ್ರಾಂತಿಯಾಗಿದೆ. ಪ್ರಮುಖವಾಗಿ ಬೆಂಗಳೂರಿನಿಂದಲೇ ಹಲವು ಇವಿ ಸ್ಕೂಟರ್ ದೇಶದಲ್ಲಿ ಲಾಂಚ್ ಆಗಿದೆ.