ಮೋಡಗಳ ಕಾಟವಿಲ್ಲ, ರಾತ್ರಿಯ ಕತ್ತಲೆಯಿಲ್ಲ, ಪಳೆಯುಳಿಕೆ ಇಂಧನಗಳ ಅಗತ್ಯವೇ ಇಲ್ಲ. ಕೇಳಲು ಯಾವುದೋ ವಿಜ್ಞಾನದ ಕಾಲ್ಪನಿಕ ಕಥೆಯಂತೆ ಎನಿಸಿದರೂ, ಇದು ಜಪಾನ್‌ನ ನಿರ್ಮಾಣ ಸಂಸ್ಥೆಯೊಂದು ರೂಪಿಸಿರುವ ಬೃಹತ್ ಯೋಜನೆ. 

ಬೆಂಗಳೂರು (ಏ.6): ಹತ್ತು ವರ್ಷಗಳ ಹಿಂದೆ, ಜಪಾನ್‌ನ ಪ್ರಸಿದ್ಧ ನಿರ್ಮಾಣ ಸಂಸ್ಥೆಯಾದ 'ಶಿಮಿಜು ಕಾರ್ಪೊರೇಷನ್' (Shimizu Corporation) ಚಂದ್ರನ ಸಮಭಾಜಕ ವೃತ್ತದ ಸುತ್ತಲೂ ಬೃಹತ್ ಸೌರ ಫಲಕಗಳ ಪಟ್ಟಿಯನ್ನು ನಿರ್ಮಿಸುವ ಯೋಜನೆಯನ್ನು ಅನಾವರಣಗೊಳಿಸಿತ್ತು. 'ಲೂನಾ ರಿಂಗ್' (Luna Ring) ಎಂದು ಕರೆಯಲ್ಪಡುವ ಈ ಪರಿಕಲ್ಪನೆಯು ಸುಮಾರು 6,800 ಮೈಲಿ ಉದ್ದದವರೆಗೆ ಹರಡಲಿದ್ದು, ಭೂಮಿಯ ಮೇಲಿನ ಸೌರ ವಿದ್ಯುತ್ ಸ್ಥಾವರಗಳಿಗೆ ಎದುರಾಗುವ ಹವಾಮಾನ ವೈಪರೀತ್ಯ ಅಥವಾ ರಾತ್ರಿಯ ಕತ್ತಲೆಯ ಸಮಸ್ಯೆಗಳಿಲ್ಲದೆ ನಿರಂತರವಾಗಿ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. 2011ರ ಫುಕುಶಿಮಾ ಪರಮಾಣು ದುರಂತದ ನಂತರ ಜಪಾನ್ ಪರ್ಯಾಯ ಇಂಧನ ಮೂಲಗಳ ಬಗ್ಗೆ ತೀವ್ರ ಆಸಕ್ತಿ ತೋರಿಸತೊಡಗಿದಾಗ ಈ ಯೋಜನೆ ಹೆಚ್ಚು ಚರ್ಚೆಗೆ ಬಂದಿತು.

ಶಿಮಿಜು ಕಾರ್ಪೊರೇಷನ್ ಪ್ರಕಾರ, ಭೂಮಿಯ ಮೇಲೆ ಉತ್ಪಾದಿಸುವ ಸೌರಶಕ್ತಿಗಿಂತ ಬಾಹ್ಯಾಕಾಶದಲ್ಲಿ ಅಳವಡಿಸಲಾದ ಸಮಾನ ಪ್ರಮಾಣದ ಸೌರ ಫಲಕಗಳು 20 ಪಟ್ಟು ಹೆಚ್ಚು ಶಕ್ತಿಯನ್ನು ಉತ್ಪಾದಿಸಬಲ್ಲವು. ಚಂದ್ರನ ಸಮಭಾಜಕದಲ್ಲಿ ಸೌರ ಕಿರಣಗಳನ್ನು ತಡೆಯಲು ವಾತಾವರಣವಿಲ್ಲ, ಮೋಡಗಳಿಲ್ಲ ಮತ್ತು ಸೂರ್ಯನ ಬೆಳಕು ಬೀಳುವ ಭಾಗದಲ್ಲಿ ರಾತ್ರಿಯೇ ಇರುವುದಿಲ್ಲ. ಅಂದರೆ ಈ ವ್ಯವಸ್ಥೆಯು ದಿನದ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡಬಲ್ಲದು.

"ಚಂದ್ರನ ಫಲಕಗಳಿಂದ ಬರುವ ಎಲ್ಲಾ ಶಕ್ತಿಯು ಭೂಮಿಯನ್ನು ತಲುಪಿದರೆ, ನಮಗೆ ಕಲ್ಲಿದ್ದಲು, ತೈಲ ಅಥವಾ ಜೈವಿಕ ಇಂಧನಗಳನ್ನು ಸುಡುವ ಅಗತ್ಯವೇ ಇರುವುದಿಲ್ಲ," ಎಂದು ಶಿಮಿಜು ಸಂಸ್ಥೆಯ ಬಾಹ್ಯಾಕಾಶ ಸಲಹಾ ಗುಂಪಿನ ಅಧ್ಯಕ್ಷ ಟೆಟ್ಸುಜಿ ಯೋಶಿದಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಂದ್ರನಿಂದ ನಿಮ್ಮ ಮನೆಗೆ ವಿದ್ಯುತ್ ತಲುಪುವುದು ಹೇಗೆ?

ಲೂನಾ ರಿಂಗ್ ಭೂಮಿಯ ಮೇಲಿನ ಸೌರಶಕ್ತಿಯ ದೊಡ್ಡ ಸಮಸ್ಯೆಯಾದ 'ಅಸ್ಥಿರತೆ'ಯನ್ನು (Intermittency) ಹೋಗಲಾಡಿಸುತ್ತದೆ. ಚಂದ್ರನಲ್ಲಿ ವಾತಾವರಣವಿಲ್ಲದ ಕಾರಣ ಸೂರ್ಯನ ಕಿರಣಗಳಿಗೆ ಯಾವುದೇ ಅಡೆತಡೆಯಿಲ್ಲ. ಚಂದ್ರನ ಸಮಭಾಜಕದ ಒಂದು ಭಾಗವು ಯಾವಾಗಲೂ ಸೂರ್ಯನ ಬೆಳಕಿನಲ್ಲಿರುತ್ತದೆ, ಇದು 24 ಗಂಟೆಗಳ ವಿದ್ಯುತ್ ಉತ್ಪಾದನೆಗೆ ಅನುವು ಮಾಡಿಕೊಡುತ್ತದೆ.

ಚಂದ್ರನ ಸಮಭಾಜಕದಲ್ಲಿರುವ ಸೌರ ಕೋಶಗಳು ಸೂರ್ಯನ ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುತ್ತವೆ. ಕೇಬಲ್‌ಗಳ ಮೂಲಕ ಈ ವಿದ್ಯುತ್ ಅನ್ನು ಚಂದ್ರನ 'ಹತ್ತಿರದ ಭಾಗಕ್ಕೆ' (Near side - ಭೂಮಿಗೆ ಯಾವಾಗಲೂ ಕಾಣಿಸುವ ಭಾಗ) ತರಲಾಗುತ್ತದೆ. ಅಲ್ಲಿರುವ ಟ್ರಾನ್ಸ್‌ಮಿಷನ್ ಸೌಲಭ್ಯಗಳು ವಿದ್ಯುತ್ ಅನ್ನು ಮೈಕ್ರೋವೇವ್ ಕಿರಣಗಳು ಮತ್ತು ಹೆಚ್ಚಿನ ಶಕ್ತಿಯ ಲೇಸರ್ ಆಗಿ ಪರಿವರ್ತಿಸಿ ಭೂಮಿಯತ್ತ ಹಾಯಿಸುತ್ತವೆ. ಭೂಮಿಯ ಮೇಲೆ 'ರೆಕ್ಟೆನ್ನಾಸ್' (Rectennas) ಎಂಬ ವಿಶೇಷ ಆಂಟೆನಾಗಳು ಈ ಕಿರಣಗಳನ್ನು ಸೆರೆಹಿಡಿದು ಮತ್ತೆ ವಿದ್ಯುತ್ ಆಗಿ ಪರಿವರ್ತಿಸಿ ಗ್ರಿಡ್‌ಗೆ ಪೂರೈಸುತ್ತವೆ. ಈ ವ್ಯವಸ್ಥೆಯನ್ನು ಬಳಸಿ ಹೈಡ್ರೋಜನ್ ಇಂಧನವನ್ನು ತಯಾರಿಸುವ ಮತ್ತು ಪಳೆಯುಳಿಕೆ ಇಂಧನ ಮುಕ್ತ ಸಮಾಜವನ್ನು ನಿರ್ಮಿಸುವ ಗುರಿಯನ್ನು ಶಿಮಿಜು ಹೊಂದಿದೆ.

ರೋಬೋಟ್‌ಗಳು ಮತ್ತು ಚಂದ್ರನ ಮಣ್ಣು: ವಿಶಿಷ್ಟ ನಿರ್ಮಾಣ ಯೋಜನೆ

ಚಂದ್ರನ ಮೇಲೆ ಏನನ್ನಾದರೂ ನಿರ್ಮಿಸುವುದು ಅತ್ಯಂತ ಕಷ್ಟಕರ. ಆದ್ದರಿಂದ ಶಿಮಿಜು ಸಂಪೂರ್ಣವಾಗಿ ರೋಬೋಟ್‌ಗಳ ಮೇಲೆ ಅವಲಂಬಿತವಾಗಲು ಯೋಜಿಸಿದೆ. ಈ ರೋಬೋಟ್‌ಗಳನ್ನು ಭೂಮಿಯಿಂದಲೇ 24 ಗಂಟೆಗಳ ಕಾಲ ನಿಯಂತ್ರಿಸಲಾಗುತ್ತದೆ. ಭೂಮಿಯನ್ನು ಸಮತಟ್ಟು ಮಾಡುವುದು, ಉತ್ಖನನ ಮತ್ತು ಉಪಕರಣಗಳ ಜೋಡಣೆಯನ್ನು ಇವೇ ಮಾಡುತ್ತವೆ. ಗಗನಯಾತ್ರಿಗಳ ಸಣ್ಣ ತಂಡವು ಇವುಗಳಿಗೆ ಪೂರಕವಾಗಿ ಕೆಲಸ ಮಾಡುತ್ತದೆ.

ನಿರ್ಮಾಣಕ್ಕೆ ಬೇಕಾದ ಹೆಚ್ಚಿನ ವಸ್ತುಗಳನ್ನು ಚಂದ್ರನ ಮೇಲೆಯೇ ಪಡೆಯಲಾಗುತ್ತದೆ. ಚಂದ್ರನ ಮಣ್ಣನ್ನು ಬಳಸಿ ನೀರು, ಆಮ್ಲಜನಕ, ಕಾಂಕ್ರೀಟ್, ಸೆರಾಮಿಕ್ಸ್ ಮತ್ತು ಸೌರ ಕೋಶಗಳನ್ನು ಸಹ ತಯಾರಿಸಬಹುದು. ಸ್ವಯಂ ಚಾಲಿತ ಉತ್ಪಾದನಾ ಘಟಕಗಳು ಚಂದ್ರನ ಸಮಭಾಜಕದ ಉದ್ದಕ್ಕೂ ಚಲಿಸುತ್ತಾ ಸೌರ ಕೋಶಗಳನ್ನು ತಯಾರಿಸಿ ಅಳವಡಿಸುತ್ತಾ ಹೋಗುತ್ತವೆ. ಈ ಸೌರ ಪಟ್ಟಿಯು ಕೆಲವು ಕಿಲೋಮೀಟರ್‌ನಿಂದ ಹಿಡಿದು 400 ಕಿಲೋಮೀಟರ್‌ವರೆಗೂ ಅಗಲವಾಗಿರಬಹುದು.

ಹಣಕಾಸಿನ ಸವಾಲು ಮತ್ತು ತಾಂತ್ರಿಕ ಅಡೆತಡೆಗಳು

ಎಲ್ಲವೂ ಆಕರ್ಷಕವಾಗಿದ್ದರೂ, ಈ ಯೋಜನೆಗೆ ಇರುವ ದೊಡ್ಡ ಅಡೆತಡೆ ಎಂದರೆ 'ಹಣ'. ಜಪಾನ್‌ನ ಎನರ್ಜಿ ಎಕನಾಮಿಕ್ಸ್ ಸಂಸ್ಥೆಯ ಅರ್ಥಶಾಸ್ತ್ರಜ್ಞ ಮಸಾನೋರಿ ಕೊಮೊರಿ ಪ್ರಕಾರ, ಈ ಯೋಜನೆ ಸಿದ್ಧಾಂತದಲ್ಲಿ ಚೆನ್ನಾಗಿದ್ದರೂ ಪ್ರಾಯೋಗಿಕವಾಗಿ ಅತೀ ಹೆಚ್ಚು ವೆಚ್ಚದಾಯಕ. ಇದರ ಬದಲು ಭೂಮಿಯಲ್ಲೇ ಲಭ್ಯವಿರುವ ಭೂಶಾಖದ (Geothermal) ಇಂಧನಕ್ಕೆ ಆದ್ಯತೆ ನೀಡುವುದು ಉತ್ತಮ ಎಂಬುದು ಅವರ ವಾದ. ಖುದ್ದು ಯೋಶಿದಾ ಅವರ ಬಳಿಯೂ ಈ ಯೋಜನೆಗೆ ತಗಲುವ ನಿಖರ ವೆಚ್ಚದ ಅಂದಾಜಿಲ್ಲ. 2,38,855 ಮೈಲಿಗಳಷ್ಟು ದೂರಕ್ಕೆ ಗಿಗಾವಾಟ್ ಪ್ರಮಾಣದ ವಿದ್ಯುತ್ ಅನ್ನು ಕರಾರುವಾಕ್ಕಾಗಿ ರವಾನಿಸುವ ತಂತ್ರಜ್ಞಾನ ಇನ್ನೂ ಸಂಶೋಧನಾ ಹಂತದಲ್ಲಿದೆ.

ಪ್ರಸ್ತುತ ಸ್ಥಿತಿ ಏನು?

2011ರ ದಾಖಲೆಗಳ ಪ್ರಕಾರ, ಲೂನಾ ರಿಂಗ್ ಶಿಮಿಜು ವೆಬ್‌ಸೈಟ್‌ನಲ್ಲಿ ಕೇವಲ ಒಂದು ಕಾಲ್ಪನಿಕ ಯೋಜನೆಯಾಗಿ ಉಳಿದಿದೆ. ಇದಕ್ಕೆ ಯಾವುದೇ ಅಧಿಕೃತ ಧನಸಹಾಯವಾಗಲಿ ಅಥವಾ ಜಪಾನ್‌ನ ಜಕ್ಸಾ (JAXA) ಅಥವಾ ಅಮೆರಿಕದ ನಾಸಾ (NASA) ಸಂಸ್ಥೆಗಳಿಂದ ಅಧಿಕೃತ ಅನುಮೋದನೆಯಾಗಲಿ ಸಿಕ್ಕಿಲ್ಲ. ಆದರೆ, ಫುಕುಶಿಮಾ ದುರಂತದ ನಂತರ ಇಂತಹ ಅಸಾಮಾನ್ಯ ಪರ್ಯಾಯಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಯೋಶಿದಾ ಅವರು ಮಾತ್ರ ವಿಶ್ವಾಸ ಕಳೆದುಕೊಂಡಿಲ್ಲ. "ನಾವು ಸಂಶೋಧನೆಯನ್ನು ಮುಂದುವರಿಸಿದರೆ, ಇದು ವಾಸ್ತವವಾಗುವ ದೊಡ್ಡ ಅವಕಾಶವಿದೆ," ಎನ್ನುತ್ತಾರೆ ಅವರು. ಬಾಹ್ಯಾಕಾಶದ ಅನಂತ ಸೂರ್ಯನ ಬೆಳಕನ್ನು ಬಳಸಿಕೊಳ್ಳುವ ಈ ಕನಸು ನನಸಾದರೆ, ಭೂಮಿಯ ಇಂಧನ ಬಿಕ್ಕಟ್ಟು ಶಾಶ್ವತವಾಗಿ ಪರಿಹಾರವಾಗುವುದರಲ್ಲಿ ಸಂಶಯವಿಲ್ಲ.