ಕೇವಲ 6 ದಿನದಲ್ಲಿ ಬಾಹ್ಯಾಕಾಶದಲ್ಲಿ ಮತ್ತೆ ಪ್ರತಿಧ್ವನಿಸಿದ ಭಾರತ| ಇಸ್ರೋ EMISAT ಉಪಗ್ರಹ ಯಶಸ್ವಿ ಉಡಾವಣೆ| ಶತ್ರು ರಾಷ್ಟ್ರಗಳ ರೆಡಾರ್ ಪತ್ತೆ ಹಚ್ಚುವ ಸಾಮರ್ಥ್ಯವುಳ್ಳ EMISAT| ಒಟ್ಟು 28 ಉಪಗ್ರಹಗಳನ್ನು ಹೊತ್ತು ನಭಕ್ಕೆ ಚಿಮ್ಮಿದ PSLV C-45 ರಾಕೆಟ್| ಮಿಶನ್ ಶಕ್ತಿ ಯಶಸ್ವಿ ಪ್ರಯೋಗದ ಬೆನ್ನಲ್ಲೇ ಬಾಹ್ಯಾಕಾಶದಿಂದ ಮತ್ತೊಂದು ಸಾಧನೆ|
ನವದೆಹಲಿ(ಏ.01):ಮಿಶನ್ ಶಕ್ತಿ ಯಶಸ್ವಿ ಪ್ರಯೋಗದ ಬೆನ್ನಲ್ಲೇ, ಇಸ್ರೋ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ. ಶತ್ರು ರಾಷ್ಟ್ರದ ರೆಡಾರ್ ಪತ್ತೆ ಹಚ್ಚಬಲ್ಲ ಸಾಮರ್ಥ್ಯ ಇರುವ EMISAT ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.
ಸಂಪೂರ್ಣ ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ತಂತ್ರಜ್ಞಾನ ಹೊಂದಿರುವ EMISAT ಉಪಗ್ರಹ, ಶತ್ರು ರಾಷ್ಟ್ರಗಳ ರೆಡಾರ್ ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ ಎಂದು ಇಸ್ರೋ ತಿಳಿಸಿದೆ.
EMISAT ಸೇರಿದಂತೆ ಒಟ್ಟು 28 ನ್ಯಾನೋ ಉಪಗ್ರಹಗಳನ್ನು ಹೊತ್ತು ನಭಕ್ಕೆ ಚಿಮ್ಮಿದ ಇಸ್ರೋದ PSLV C-45 ರಾಕೆಟ್, EMISAT ಉಪಗ್ರಹವನ್ನು ಸುರಕ್ಷಿತವಾಗಿ ಕಕ್ಷೆಗೆ ಸೇರಿಸಿದೆ.
ಈ ಕುರಿತು ಮಾತನಾಡಿರುವ ಈ ಕುರಿತು ಮಾತನಾಡಿರುವ DRDO ಮುಖ್ಯುಸ್ಥ ಡಾ. ಜಿ. ಸತೀಶ್ ರೆಡ್ಡಿ, ASAT ಕ್ಷಿಪಣಿ ಪ್ರಯೋಗದ 6 ದಿನಗಳೊಳಗಾಗಿ ಇಸ್ರೋ EMISAT ಉಪಗ್ರಹವನ್ನು ಕಕ್ಷೆಗೆ ಸೇರಿಸಿರುವುದು ಭಾರತದ ಬಾಹ್ಯಾಕಾಶ ಶಕ್ತಿಯ ಪ್ರದರ್ಶನ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟು 436 ಕೆಜಿ ತೂಕವುಳ್ಳ EMISAT ಕೆಳ ಭೂಕಕ್ಷೆ ವಲಯದಲ್ಲಿ ಶತ್ರು ರಾಷ್ಟ್ರಗಳ ರೆಡಾರ್ ಕುರಿತು ಮಾಹಿತಿ ಸಂಗ್ರಹಿಸಲಿದೆ.
ಇನ್ನು ಇದೇ ಮೊದಲ ಬಾರಿಗೆ ಉಪಗ್ರಹ ಉಡಾವಣೆಯನ್ನು ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶ ನೀಡಿದ್ದು, ವಿಶೇಷವಾಗಿತ್ತು.
