Asianet Suvarna News Asianet Suvarna News

ಚಂದ್ರಯಾನ -3ಕ್ಕೆ ಯಾವ ದೇಶವೂ ನೀಡದ ಆಂಪ್ಲಿಫೈಯರ್ ತಯಾರಿಸಿದ ಕನ್ನಡಿಗ ವಿಜ್ಞಾನಿ ದಾರುಕೇಶ್‌

ದೇಶದ ಹೆಮ್ಮೆಯ ಚಂದ್ರಯಾನ-3 ನೌಕೆ ಉಡಾವಣೆಗೆ ಯಾವ ದೇಶವೂ ಕೊಡದ ಆಂಪ್ಲಿಫೈಯರ್ (ಸಂದೇಶ ವಾಹಕ) ರಚಿಸಿದ ಇಸ್ರೋ ವಿಜ್ಞಾನಿ ದಾರುಕೇಶ್‌ ವಿಜಯನಗರ ಜಿಲ್ಲೆಯ ಕೊಟ್ಟೂರಿನವರು ಎಂಬುದು ನಮ್ಮ ಹೆಮ್ಮೆಯಾಗಿದೆ. 

ISRO scientist Dr Darukesh from Kottoor was created Chandrayaan 3 amplifier he was native sat
Author
First Published Jul 18, 2023, 10:12 PM IST

ಬೆಂಗಳೂರು (ಜು.18): ಜಾಗತಿಕವಾಗಿ ಭಾರಿ ಕುತೂಹಲವನ್ನು ಮೂಡಿಸಿರುವ ಹಾಗೂ ಭಾರತದ ಬಾಹ್ಯಾಕಾಶ ಕೇಂದ್ರದ ಸಂಶೋಧನೆಗಳಲ್ಲಿ ಮಹತ್ತರ ಹೆಜ್ಜೆಯಾಗಿರುವ ಚಂದ್ರಯಾನ-3 ಯಶಸ್ವಿ ಉಡಾವಣೆಯಾಗಿದೆ. ಈ ಚಂದ್ರಯಾನ-3ರ ಲ್ಯಾಂಡರ್ ಹಾಗೂ ರೋವರ್‌ನ ಮಹುಮುಖ್ಯ ಭಾಗವಾದ ಆಂಪ್ಲಿಫೈಯರ್ (ಸಂದೇಶ ವಾಹಕ) ರಚಿಸಿದ ಇಸ್ರೋ ವಿಜ್ಞಾನಿ ಡಾ.ಬಿ.ಹೆಚ್.ಎಂ. ದಾರುಕೇಶ್‌ ವಿಜಯನಗರ ಜಿಲ್ಲೆಯ ಕೊಟ್ಟೂರಿನವರು ಎಂಬುದು ನಮ್ಮ ರಾಜ್ಯದ ಹೆಮ್ಮೆಯಾಗಿದೆ. 

ಭೂಮಿಯಿಂದ ಸುಮಾರು ನಾಲ್ಕು ಲಕ್ಷ ಕಿಮೀ ದೂರದಲ್ಲಿರುವ ಚಂದ್ರನ ಮೇಲ್ಮೈನಲ್ಲಿ ಸುತ್ತುವ ಉಪಗ್ರಹಕ್ಕೆ ಲ್ಯಾಂಡರ್ ಮತ್ತು ರೂವರ್‌ನಿಂದ ಸಂದೇಶ ಪಡೆಯಲು, ರೂವರ್ ಹಾಗೂ ಲ್ಯಾಂಡರ್‌ನ ತಾಂತ್ರಿಕ ಸ್ಥಿತಿಗತಿ ತಿಳಿವಲ್ಲಿ ಆಂಪ್ಲಿಫೈಯರ್ ಪಾತ್ರ ಪ್ರಮುಖವಾಗಿದೆ. ಆದರೆ,ಚಂದ್ರಯಾನ ಉಡಾವಣೆಗೆ ಯಾವ ದೇಶಗಳೂ ಕೂಡ ಆಂಪ್ಲಿಫೈಯರ್ ಕೊಡಲು ಮುಂದಾಗಲಿಲ್ಲ. ಆದರೆ, ಈ ವೇಳೆ ಜಪಾನ್‌ ದೇಶದಿಂದ ಆಂಪ್ಲಿಫೈಯರ್ ನೀಡಿದರೂ ಅದನ್ನು ಬಳಸಿ ಚಂದ್ರಯಾನ ನೌಕೆ ಉಡಾವಣೆ ಮಾಡುವುದಕ್ಕೆ ಭಾರತ ದೃಢ ನಿರ್ಧಾರ ಕೈಗೊಳ್ಳಲಿಲ್ಲ. ಆಗ, ಸ್ಥಳೀಯ ಇಸ್ರೋ ವಿಜ್ಷಾನಿಗಳ ತಂಡದಿಂದಲೇ ಆಂಪ್ಲಿಫೈಯರ್ ಸಿದ್ಧಪಡಿಸಲು ಯೋಜನೆ ರೂಪಿಸಿತು. ಆಗ, ಆಂಪ್ಲಿಫೈಯರ್ ಸಿದ್ಧಗೊಳಿಸುವ ಜವಾಬ್ದಾರಿಯನ್ನು ಹೊತ್ತವರೇ ವಿಜ್ಞಾನಿ ಡಾ.ಬಿ.ಎಚ್‌ಎಂ. ದಾರುಕೇಶ್. ಇವರು, ಚಂದ್ರಯಾನ -1, ಚಂದ್ರಯಾನ-2 ಮತ್ತು ಚಂದ್ರಯಾನ-3ಕ್ಕೂ ಆಂಪ್ಲಿಫೈಯರ್ ರಚಿಸಿಕೊಟ್ಟಿದ್ದಾರೆ. ಈ ಮೂಲಕ ನಮ್ಮ ದೇಶದ ಬಾಹ್ಯಾಕಾಶ ಸಂಶೋಧನೆ ಹಾಗೂ ಚಂದ್ರಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಚಂದ್ರಯಾನ-3 ಯಶಸ್ವಿಯಿಂದ ಪಾಕ್‌ಗೆ ಹೊಟ್ಟೆ ಉರಿ, ಉಡಾವಣೆ ವ್ಯಂಗ್ಯವಾಡಿದ ಮಾಜಿ ಸಚಿವ!

ಹೂವಿನ ಹಡಗಲಿ ಮೂಲ ನಿವಾಸಿ, ಕೊಟ್ಟೂರಿನಲ್ಲಿ ಶಿಕ್ಷಣ: ಇನ್ನು ಇಸ್ರೋ ವಿಜ್ಞಾನಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಬಾವಿಹಳ್ಳಿಯ ಮೂಲದ ಸುವರ್ಣಮ್ಮ ಹಾಗೂ ಮಹದೇವಯ್ಯ ದಂಪತಿ ಮೊದಲ ಪುತ್ರರಾಗಿ 1979ರ ಆ.6ರಂದು ದಾರುಕೇಶ್ ಜನಿಸಿದ್ದಾರೆ. ತಂದೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಕೂಡ್ಲಿಗಿ ತಾಲೂಕಿನ ಶಿವಪುರ ಗೊಲ್ಲರಹಟ್ಟಿಯಲ್ಲಿ ಏಕೋಪಧ್ಯಾಯ ಶಿಕ್ಷಕರಾಗಿದ್ದ ತಂದೆಯ ಸರ್ಕಾರಿ ಶಾಲೆಯಲ್ಲೇ ಒಂದರಿಂದ ನಾಲ್ಕನೇ ತರಗತಿ, ನಂತರ ಕೊಟ್ಟೂರು ನಾಗರಾಜ ಸರ್ಕಾರಿ ಪ್ರಾಥಮಿಕ ಶಾಲೆ, ಬಾಯ್ಸ್‌ ಹೈಸ್ಕೂಲ್, ಪಿಯುಸಿ ವಿಜ್ಞಾನ, ಬಿಎಸ್‌ಸಿ ಹಾಗೂ ಎಂಎಸ್ಸಿ ಹಾಗೂ ಪಿಎಚ್.ಡಿ ಪೂರ್ಣಗೊಳಿಸಿದ್ದಾರೆ. 

25 ವರ್ಷಗಳಿಂದ ಇಸ್ರೋ ವಿಜ್ಞಾನಿಯಾಗಿ ಸೇವೆ: ಎಂಎಸ್‌ಸಿ ವಿದ್ಯಾರ್ಥಿಯಾಗಿದ್ದಾಗ ಅಹಮದಾಬಾದ್ ಫಿಸಿಕಲ್ ರಿಸರ್ಚ್ ಲ್ಯಾಬರೋಟರಿಯಲ್ಲಿ ನೀಡಲಾಗುವ 2 ತಿಂಗಳ ತರಬೇತಿಗೆ ದಾರುಕೇಶ್ ಆಯ್ಕೆಯಾಗಿದ್ದರು. ದೇಶದ 25 ವಿದ್ಯಾರ್ಥಿಗಳಲ್ಲಿ ಇವರೂ ಒಬ್ಬರಾಗಿದ್ದರು. ಇದಾದ ನಂತರ, ದಾರುಕೇಶ್‌ ಅವರ ಜೀವನದ ಗುರಿ ಬದಲಾಯಿತು. ಭೌತಶಾಸ್ತ್ರದಲ್ಲಿ ಮುಂದುವರಿಯಲು ನಿರ್ಧರಿಸಿದ್ದ ಅವರು, 1998ರಲ್ಲಿ ಇಸ್ರೋ ವಿಜ್ಞಾನಿಯಾಗಿ ನೇಮಕವಾದರು. ಅಲ್ಲಿಂದ ಬರೋಬ್ಬರಿ 25 ವರ್ಷಗಳವರೆಗೆ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸದ್ಯ ಇಸ್ರೋ ಬೆಂಗಳೂರು ಕೇಂದ್ರ ಕಚೇರಿಯ ಸಹ ನಿರ್ದೇಶಕರಾಗಿದ್ದಾರೆ.

ಚಂದ್ರಯಾನದ ಆಂಪ್ಲಿಫೈಯರ್ ನಿರ್ಮಾಣದ ರೂವಾರಿ: ಚಂದ್ರಯಾನ-1ಕ್ಕೆ ಕೈಹಾಕಿದ್ದ ಇಸ್ರೋಗೆ ಆಂಪ್ಲಿಫೈಯರ್ (ಸಂದೇಶ ವಾಹಕ) ಸಿದ್ಧಗೊಳಿಸುವುದು ದೊಡ್ಡ ಸವಾಲಾಗಿತ್ತು. ಭೂಮಿಯಿಂದ ಅಂದಾಜು 4 ಲಕ್ಷ ಕಿಮೀ ದೂರದಲ್ಲಿರುವ ಚಂದ್ರನ ಮೇಲ್ಮೈನಲ್ಲಿ ಸುತ್ತುವ ಉಪಗ್ರಹಕ್ಕೆ ಲ್ಯಾಂಡರ್ ಮತ್ತು ರೂವರ್‌ನಿಂದ ಸಂದೇಶ ಪಡೆಯಲು, ರೂವರ್ ಹಾಗೂ ಲ್ಯಾಂಡರ್‌ನ ತಾಂತ್ರಿಕ ಸ್ಥಿತಿಗತಿ ತಿಳಿಯಲು ಆಂಪ್ಲಿಫೈಯರ್ ಪಾತ್ರ ಪ್ರಮುಖ. ಅದಕ್ಕಾಗಿ 5 ವಾಟ್ ಸಿಗ್ನಲ್ ಆಂಪ್ಲಿಫೈಯರ್‌ಗಾಗಿ ಇಸ್ರೋ ಹುಡುಕಾಟದಲ್ಲಿತ್ತು. ಇದನ್ನು ಬಹುತೇಕ ಸೇನಾ ಪಡೆಗಳಲ್ಲಿ ಬಳಸುವುದರಿಂದ ಆಂಪ್ಲಿಫೈಯರ್ ನೀಡಲು ಯಾವ ದೇಶವೂ ಮುಂದಾಗಲಿಲ್ಲ. ಆದರೆ, ಜಪಾನ್ ಸಂಸ್ಥೆಯೊಂದು ತನ್ನಲ್ಲಿರುವ 12 ವಾಟ್‌ನ ಆಂಪ್ಲಿಫೈಯರ್ ಒದಗಿಸಿತ್ತು. ಆದರೆ, ಅಂತರಿಕ್ಷ ಯಾನಕ್ಕೆ ಬಳಸುವುದಕ್ಕೆ ಸೂಕ್ತವಾಗಿರಲಿಲ್ಲ.

ಆಸ್ಟ್ರೇಲಿಯಾ ಬೀಚ್‌ನಲ್ಲಿ ಚಂದ್ರಯಾನ-3 ಅವಶೇಷಗಳು ಪತ್ತೆ? ನಿಗೂಢ ವಸ್ತು ಬಗ್ಗೆ ನೆಟ್ಟಿಗರ ಚರ್ಚೆ

ಐಸಿ ಡಿಸೈನ್‌ ಮುಖ್ಯಸ್ಥರಾಗಿದ್ದ ದಾರುಕೇಶ್‌:  ಇಸ್ರೋ, ಸ್ಥಳೀಯವಾಗಿ ಆಂಪ್ಲಿಫೈಯರ್ ಸಿದ್ಧಗೊಳಿಸುವ ಹೊಣೆಯನ್ನು ಐಸಿ (ಇಂಟಿಗ್ರೇಟ್ ಸರ್ಕ್ಯೂಟ್) ಡಿಸೈನ್ ತಂಡದ ಮುಖ್ಯಸ್ಥರಾಗಿದ್ದ ಡಾ.ಬಿ.ಎಚ್.ಎಂ.ದಾರುಕೇಶ್ ಅವರಿಗೆ ನೀಡಿತು. ಇಸ್ರೋ ನಿರೀಕ್ಷೆಯಂತೆ ಅಚ್ಚುಕಟ್ಟಾಗಿ ಆಂಪ್ಲಿಫೈಯರ್ ರಚನೆ ಕಾರ್ಯ ನಿಭಾಯಿಸಿದ್ದರಿಂದ ಇಸ್ರೋ ನೀಡುವ ವಿವಿಧ ಪ್ರಶಸ್ತಿಗಳ ಭಾಜನರಾದರು. ಆನಂತರ ಚಂದ್ರಯಾನ-2, ಮಂಗಳಯಾನ, ಇದೀಗ ಚಂದ್ರಯಾನ-3ಕ್ಕೂ ದಾರುಕೇಶ್ ನೇತೃತ್ವದ ತಂಡವೇ ಆಂಪ್ಲಿಫೈರ್ ಸಿದ್ಧಗೊಳಿಸಿದೆ. ಅದನ್ನು ಲ್ಯಾಂಡರ್ (ನೌಕೆ), ರೋವರ್(ತೆವಳುವ ಬಂಡಿ)ಯಲ್ಲಿ ತಲಾ ಎರಡು ಯುನಿಟ್ 5 ವಾಟ್ ಆಂಪ್ಲಿಫೈರ್ ಅಳವಡಿಸಲಾಗಿದೆ.

ಚಂದ್ರನ ಅಂಗಳದಲ್ಲಿ ಕೆಲಸ ಮಾಡುವ ಹಂಬಲ: 
ಭೂಮಿಯಿಂದ ಉಟಾವಣೆ ಮಾಡುವ ಉಪಗ್ರಹದ ಅಥವಾ ನೌಕೆಯ ಕಾರ್ಯನಿರ್ವಹಣಾ ಸ್ಥಿತಿ, ಸೆನ್ಸರ್ ಕೆಲಸ ಮಾಡುವ ಬಗ್ಗೆ ತಿಳಿಯಲು ಆಂಪ್ಲಿಫೈರ್‌ ಬೇಕೇಬೇಕು. ಅದನ್ನು ಸಿದ್ಧಗೊಳಿಸುವ ಹೊಣೆ ನನ್ನದಾಗಿತ್ತು. ಜತೆಗೆ ಚಂದ್ರಯಾನ-3ರಲ್ಲಿ ಇಸ್ರೋ ಚೇರ್ಮನ್‌ಗೆ ಪಿಆರ್‌ಒ ಕೂಡಾ ಆಗಿದ್ದು, ಖುಷಿ ತಂದಿದೆ. ಎಲ್ಲರ ಆಸೆಯಂತೆ ಚಂದ್ರನ ಅಂಗಳದಲ್ಲಿ ಕೆಲಸ ಮಾಡುವಂತಾಗಬೇಕು. ಆಗ ನಮ್ಮೆಲ್ಲರ ಶ್ರಮ ಫಲಿಸಿದಂತಾಗಲಿದೆ. 
- ಡಾ.ಬಿ.ಎಚ್‌ಎಂ. ದಾರುಕೇಶ್, ಇಸ್ರೋ ಸಹ ನಿರ್ದೇಶಕ.

Follow Us:
Download App:
  • android
  • ios