ಮೇ 2025 ರಲ್ಲಿ ಉಡಾವಣೆಯಾಗಲಿರುವ AX-4 ಯೋಜನೆಯಲ್ಲಿ ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತೆರಳಲಿದ್ದಾರೆ. ಈ ಯೋಜನೆಯಲ್ಲಿ ಭಾರತವು ಬಾಹ್ಯಾಕಾಶದಲ್ಲಿ ಆಹಾರ ಬೆಳೆಯುವುದು, ಆಮ್ಲಜನಕ ಉತ್ಪಾದಿಸುವುದು, ಸ್ನಾಯು ನಷ್ಟವನ್ನು ಕಡಿಮೆ ಮಾಡುವುದು ಸೇರಿದಂತೆ ಹಲವು ಪ್ರಯೋಗಗಳನ್ನು ನಡೆಸಲಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಭಾರತ ತನ್ನ ಬಾಹ್ಯಾಕಾಶ ವಲಯಕ್ಕೆ ಸಂಬಂಧಿಸಿದಂತೆ ಒಂದು ವಿಶೇಷ ಕ್ಷಣಕ್ಕೆ ಸಿದ್ಧವಾಗುತ್ತಿದೆ. ಭಾರತದ ಎಎಕ್ಸ್-4 ಯೋಜನೆ ಮೇ 2025ರಲ್ಲಿ ಉಡಾವಣೆಗೆ ಸನ್ನದ್ಧವಾಗುತ್ತಿದ್ದು, ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಈ ಯೋಜನೆಯ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆರಳಲಿದ್ದಾರೆ. ಇದು ಭಾರತಕ್ಕೆ ಒಂದು ಹೆಮ್ಮೆಯ ಕ್ಷಣವಾಗಿರುವುದು ಮಾತ್ರವಲ್ಲದೆ, ನಮ್ಮ ವಿಜ್ಞಾನಿಗಳಿಗೆ, ಬಾಹ್ಯಾಕಾಶ ಯೋಜನೆಗಳಿಗೆ ಮತ್ತು ಬಾಹ್ಯಾಕಾಶವನ್ನು ತಲುಪುವ ಕನಸು ಕಾಣುತ್ತಿರುವ ಯುವ ಮನಸ್ಸುಗಳಿಗೆ ಬಹುದೊಡ್ಡ ಹೆಜ್ಜೆಯಾಗಿದೆ.
ಎಎಕ್ಸ್-4 ಅಮೆರಿಕಾದ ಆ್ಯಕ್ಸಿಯಮ್ ಸ್ಪೇಸ್ ಸಂಸ್ಥೆ ಆಯೋಜಿಸುತ್ತಿರುವ ಯೋಜನೆಯಾಗಿದೆ. ಇದು ಇಲ್ಲಿಯ ತನಕ ನಡೆದ ಅತ್ಯಂತ ವಿಜ್ಞಾನ ಕೇಂದ್ರಿತ ಯೋಜನೆಯಾಗಿದ್ದು, 31 ದೇಶಗಳ 60ಕ್ಕೂ ಹೆಚ್ಚು ಪ್ರಯೋಗಗಳನ್ನು ಒಳಗೊಂಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೂಲಕ ಭಾರತ ಇವುಗಳಲ್ಲಿ ಏಳು ಪ್ರಯೋಗಗಳ ನೇತೃತ್ವ ವಹಿಸುತ್ತಿದೆ. ಇದು ನಿಜಕ್ಕೂ ಭಾರತದ ಪಾಲಿಗೆ ಮಹತ್ತರ ಸಾಧನೆಯೇ ಸರಿ. ಈ ಮೂಲಕ ಭಾರತ ತಾನು ಈ ಯೋಜನೆಯಲ್ಲಿ ಮೂಕ ಪ್ರೇಕ್ಷಕನಾಗಿರದೆ, ಸಕ್ರಿಯವಾಗಿ ಭಾಗವಹಿಸಿ, ಜಗತ್ತಿಗೆ ಬಾಹ್ಯಾಕಾಶವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ನೆರವಾಗಲಿದೆ.
ಈ ಯೋಜನೆಯಲ್ಲಿ ಭಾರತ ಕೈಗೊಳ್ಳುತ್ತಿರುವ ಪ್ರಮುಖ ಕಾರ್ಯಗಳು:
ಬಾಹ್ಯಾಕಾಶವನ್ನು ಇನ್ನಷ್ಟು ಮಾನವ ಸ್ನೇಹಿಯಾಗಿಸುವುದು: ಇಸ್ರೋ ಗಗನಯಾತ್ರಿಗಳು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಹೇಗೆ ಸ್ಕ್ರೀನ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ನಿರ್ವಹಿಸುತ್ತಾರೆ ಎನ್ನುವುದರ ಅಧ್ಯಯನ ನಡೆಸುತ್ತಿದೆ. ಇದು ಭಾರತಕ್ಕೆ ತನ್ನ ಬಾಹ್ಯಾಕಾಶ ಯೋಜನೆಗಳಿಗೆ ಉತ್ತಮ ಸಿಸ್ಟಮ್‌ಗಳನ್ನು ನಿರ್ಮಿಸಲು ಅನುಕೂಲ ಕಲ್ಪಿಸಲಿದೆ. ಆ ಮೂಲಕ ಬಾಹ್ಯಾಕಾಶದಲ್ಲಿ ಕಾರ್ಯ ನಿರ್ವಹಿಸುವುದು ಸುಲಭ ಮತ್ತು ಸುರಕ್ಷಿತವಾಗಲಿದೆ.
ಬಾಹ್ಯಾಕಾಶದಲ್ಲಿ ಆಹಾರ ಬೆಳೆ: ಇನ್ನೊಂದು ಮುಖ್ಯ ಯೋಜನೆಯಲ್ಲಿ, ಸಂಪೂರ್ಣವಾಗಿ ಪೋಷಕಾಂಶಗಳನ್ನು ಹೊಂದಿರುವ, ಆಹಾರವಾಗಿ ಸೇವಿಸಬಹುದಾದ ಮೈಕ್ರೋ ಆಲ್ಗೇಗಳೆಂಬ ಸಸ್ಯಗಳನ್ನು ಬೆಳೆಯಲಾಗುತ್ತದೆ. ಒಂದು ವೇಳೆ ನಾವು ಬಾಹ್ಯಾಕಾಶದಲ್ಲಿ ಆಹಾರವನ್ನು ಬೆಳೆಯಲು ಸಾಧ್ಯವಾದರೆ, ಗಗನಯಾತ್ರಿಗಳು ಭೂಮಿಯಿಂದ ನಿರಂತರ ಆಹಾರ ಪೂರೈಕೆ ಇಲ್ಲದೆಯೂ ದೀರ್ಘಕಾಲ ಬಾಹ್ಯಾಕಾಶದಲ್ಲಿ ಕಳೆಯಬಹುದು.
ಬಾಹ್ಯಾಕಾಶದಲ್ಲಿ ಸುಲಭ ಉಸಿರಾಟ: ಬಾಹ್ಯಾಕಾಶದಲ್ಲಿ ಸಯಾನೋಬ್ಯಾಕ್ಟೀರಿಯಾಗಳು (ಇನ್ನೊಂದು ರೀತಿಯ ಸೂಕ್ಷ್ಮಜೀವಿ) ಆಮ್ಲಜನಕವನ್ನು ಉತ್ಪಾದಿಸಿ, ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳಲು ನೆರವಾಗಬಹುದೇ ಎಂದು ಇಸ್ರೋ ಪರೀಕ್ಷಿಸುತ್ತಿದೆ. ಈ ಯೋಜನೆ ಯಶಸ್ವಿಯಾದರೆ, ಬಾಹ್ಯಾಕಾಶದಲ್ಲಿ ಜೀವ ಬೆಂಬಲ ಒದಗಿಸಲು ಸಾಧ್ಯವಾಗಿ, ದೀರ್ಘಾವಧಿಯ ಯೋಜನೆಗಳನ್ನು ನಡೆಸಲು ಸಾಧ್ಯವಾಗುತ್ತದೆ.
ಸ್ನಾಯು ನಷ್ಟದ ವಿರುದ್ಧ ಹೋರಾಟ: ಬಾಹ್ಯಾಕಾಶದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆಯ ಕಾರಣದಿಂದ ಗಗನಯಾತ್ರಿಗಳು ಸ್ನಾಯು ನಷ್ಟವನ್ನು ಅನುಭವಿಸುತ್ತಾರೆ. ಇಸ್ರೋ ಈ ಪರಿಣಾಮವನ್ನು ಕಡಿಮೆಗೊಳಿಸುವ ಸಾಧ್ಯತೆಗಳ ಅಧ್ಯಯನ ನಡೆಸುತ್ತಿದೆ. ಇಸ್ರೋ ಸ್ನಾಯುಗಳ ಮೇಲಿನ ಬಾಹ್ಯಾಕಾಶದ ಪರಿಣಾಮವನ್ನು ಕಡಿಮೆಗೊಳಿಸಲು ಯಶಸ್ವಿಯಾದರೆ, ಅದು ಭೂಮಿಯಲ್ಲಿ ಸ್ನಾಯು ಸಮಸ್ಯೆಗಳನ್ನು ಎದುರಿಸುತ್ತಿರುವವರ ಚಿಕಿತ್ಸೆಯಲ್ಲಿ ನೆರವಾಗಬಲ್ಲದು.
ಬಾಹ್ಯಾಕಾಶದಲ್ಲಿ ಧಾನ್ಯ ಉತ್ಪಾದನೆ: ಎರಡು ಪ್ರಯೋಗಗಳು ಬಾಹ್ಯಾಕಾಶದಲ್ಲಿ ಕಾಲ ಕ್ರಮೇಣ ಆಹಾರ ಧಾನ್ಯಗಳನ್ನು ಬೆಳೆಯಲು ಸಾಧ್ಯವೇ ಎಂದು ಅಧ್ಯಯನ ನಡೆಸಲಿವೆ. ಭವಿಷ್ಯದಲ್ಲಿ ಚಂದ್ರ ಅಥವಾ ಮಂಗಳ ಗ್ರಹದಲ್ಲಿ ಆಹಾರ ಬೆಳೆಯಬೇಕಾದರೆ ಈ ಪ್ರಯೋಗ ಅತ್ಯಂತ ಮಹತ್ವದ್ದಾಗಿದೆ.
ಸೂಕ್ಷ್ಮ ಜೀವಿಗಳ ಅಧ್ಯಯನ: ಈ ಯೋಜನೆ ಅತ್ಯಂತ ಕಠಿಣ ವಾತಾವರಣದಲ್ಲೂ ಉಳಿಯಬಲ್ಲ ಸೂಕ್ಷ್ಮಾಣುಜೀವಿಗಳಾದ ಟಾರ್ಡಿಗ್ರೇಡ್‌ಗಳ ಅಧ್ಯಯನ ನಡೆಸಲಿದೆ. ಅವುಗಳ ಅಧ್ಯಯನ ನಡೆಸುವುದರಿಂದ, ವಿಜ್ಞಾನಿಗಳಿಗೆ ಬಾಹ್ಯಾಕಾಶದ ಕಠಿಣ ಸನ್ನವೇಶಗಳಿಂದ ಮಾನವರನ್ನು ರಕ್ಷಿಸಲು ಸಹಾಯವಾಗಬಹುದು.
ಇದನ್ನೂ ಓದಿ: ಅಸಾಧ್ಯವನ್ನೂ ಸಾಧ್ಯವಾಗಿಸುವ ಸಾಂಘಿಕ ಪ್ರಯತ್ನ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಯಶಸ್ಸಿನ ಕಥೆ!
ಈ ಯೋಜನೆ ಭಾರತೀಯರಿಗೆ ಯಾಕೆ ಇಷ್ಟೊಂದು ಉತ್ಸಾಹದಾಯಕವಾಗಿದೆ ಎಂದರೆ, ಭಾರತೀಯ ವಾಯುಪಡೆಯ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ರಾಕೇಶ್ ಶರ್ಮಾ ಅವರು 1984ರಲ್ಲಿ ಬಾಹ್ಯಾಕಾಶಕ್ಕೆ ತೆರಳಿದ ಬಳಿಕ, ಈ ಸಾಧನೆ ನಡೆಸಿದ ಎರಡನೇ ಭಾರತೀಯ ಎಂಬ ಹೆಮ್ಮೆಗೆ ಶುಭಾಂಶು ಶುಕ್ಲಾ ಭಾಜನರಾಗಲಿದ್ದಾರೆ. ಅವರ ತರಬೇತಿ ಕಾರ್ಯಕ್ರಮ ಭಾರತದ ಮಹತ್ವಾಕಾಂಕ್ಷಿ ಮಾನವ ಸಹಿತ ಬಾಹ್ಯಾಕಾಶ ಯೋಜನೆಯಾದ ಗಗನಯಾನಕ್ಕೆ ನೆರವಾಗಲಿದೆ.
ಈ ಯೋಜನೆ ಭಾರತ ಹೇಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಪ್ರಮುಖ ಶಕ್ತಿಯಾಗಿದೆ ಎನ್ನುವುದನ್ನು ಜಗತ್ತಿಗೆ ತೋರಿಸಲಿದೆ. ನಾಸಾ, ಇಎಸ್ಎ, ಮತ್ತು ಖಾಸಗಿ ಕಂಪನಿಗಳೊಡನೆ ಕಾರ್ಯ ನಿರ್ವಹಿಸುವ ಮೂಲಕ ಇಸ್ರೋ ಜಗತ್ತಿಗೆ ತಾನು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಅತ್ಯಂತ ಗಂಭೀರವಾಗಿದ್ದೇನೆ, ಜಾಗತಿಕ ಗುಣಮಟ್ಟದ ಸಂಶೋಧನೆಗಳನ್ನು ನಡೆಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ಸಾಬೀತುಪಡಿಸಲಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ಎಎಕ್ಸ್-4 ಯೋಜನೆ ಯುವ ಭಾರತೀಯರಿಗೆ ಒಂದು ಸಂದೇಶ ನೀಡಲಿದೆ: ನಮ್ಮ ಕನಸುಗಳು ನನಸಾಗಬಲ್ಲವು. ನಕ್ಷತ್ರಗಳೂ ನಮ್ಮ ಹಿಡಿತದಿಂದ ದೂರವಿಲ್ಲ ಎಂಬ ನಂಬಿಕೆ ಮೂಡಿಸಲಿದೆ. ಸರಿಯಾದ ಪ್ರಯತ್ನಗಳು, ಶಿಕ್ಷಣ ಮತ್ತು ತಂಡವಾಗಿ ಕಾರ್ಯ ನಿರ್ವಹಿಸುವುದರಿಂದ ನಾವು ಅಸಾಧಾರಣ ಸಾಧನೆಗಳನ್ನು ನಿರ್ಮಿಸಬಲ್ಲೆವು.
ಇದನ್ನೂ ಓದಿ: ಭಾರತದ ವಾಯು ರಕ್ಷಣಾ ಬಲ ವರ್ಧಿಸಿದ ಮೂರು ಆಧುನಿಕ ಕ್ಷಿಪಣಿ ವ್ಯವಸ್ಥೆಗಳು
ಎಎಕ್ಸ್-4 ಉಡಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಈ ಯೋಜನೆ ಕೇವಲ ವಿಜ್ಞಾನಿಗಳು ಮತ್ತು ಗಗನಯಾತ್ರಿಗಳನ್ನು ಮಾತ್ರವಲ್ಲದೆ, ಕೋಟ್ಯಂತರ ಜನರ ಕನಸುಗಳನ್ನೂ ಬಾಹ್ಯಾಕಾಶಕ್ಕೆ ಒಯ್ಯಲಿವೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
