ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯ ಮಾಜಿ ಸಂಸದ ಪಕ್ಷವನ್ನು ತೊರೆದಿದ್ದಾರೆ. ಇದು ಬಿಜೆಪಿಗೆ ಆಘಾತ ನೀಡಿದ್ದು, ಒಬಿಸಿ ಮತಗಳನ್ನು ಸೆಳೆಯಲು ಎದುರಾಳಿ ಪಕ್ಷದ ಅಭ್ಯರ್ಥಿಗೆ ವರದಾನವಾಗುವ ಸಾಧ್ಯತೆಯಿದೆ. ಅಲ್ಲದೆ, ಮುಂಬರುವ ಚುನಾವಣೆಯಲ್ಲಿ ಅವರ ಕುಟುಂಬಕ್ಕೆ ಎರಡು ಟಿಕೆಟ್ ಸಿಗುವ ನಿರೀಕ್ಷೆಯಿದೆ.
ಲಕ್ನೋ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ರಂಗೇರಿದೆ. ರೋಹಿಲ್‌ಖಂಡ್ (Rohilkhand) ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (BJP) ದೊಡ್ಡ ಆಘಾತ ಎದುರಾಗಿದ್ದು, ಬಿಜೆಪಿಯ ಮಾಜಿ ಸಂಸದ ಧರ್ಮೇಂದ್ರ ಕಶ್ಯಪ್ (Dharmendra Kashyap) ಅವರು ಕೇಸರಿ ಪಾಳಯ ತೊರೆದು ಸಮಾಜವಾದಿ ಪಕ್ಷದ (SP) ತೆರೆಗೆ ಜಿಗಿದಿದ್ದಾರೆ. ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ್ (Akhilesh Yadav) ಅವರನ್ನು ಭೇಟಿಯಾಗಿರುವ ಕಶ್ಯಪ್ ಅವರ ಈ ಹೆಜ್ಜೆ, ಬರೇಲಿ ಮತ್ತು ಸುತ್ತಮುತ್ತಲಿನ ರಾಜಕೀಯ ಸಮೀಕರಣಗಳನ್ನು ಬದಲಾಯಿಸುವ ಮುನ್ಸೂಚನೆ ನೀಡಿದೆ.
ಅಖಿಲೇಶ್ ಯಾದವ್ ಅವರ 'ಪಿಡಿಎ' (Pichhda, Dalit, Alpsankhyak - ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ರಣತಂತ್ರಕ್ಕೆ ಬಲ ತುಂಬಲು ಧರ್ಮೇಂದ್ರ ಕಶ್ಯಪ್ ಅವರ ಸೇರ್ಪಡೆ ಎಸ್‌ಪಿಗೆ ವರದಾನವಾಗಲಿದೆಯೇ ಅಥವಾ ಕೇವಲ ಸಾಂಕೇತಿಕವಷ್ಟೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.
ಎಸ್‌ಪಿ ಜತೆ ಕಶ್ಯಪ್ ರಾಜಕೀಯ ನಂಟು:
ಧರ್ಮೇಂದ್ರ ಕಶ್ಯಪ್ ಅವರು ಅನ್ಲಾ (Aonla) ಲೋಕಸಭೆ ಕ್ಷೇತ್ರದಿಂದ 2014 ಮತ್ತು 2019ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಆದರೆ 2024ರ ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿ ನೀರಜ್ ಮೌರ್ಯ ವಿರುದ್ಧ ಕೇವಲ 15,969 ಮತಗಳ ಅಂತರದಿಂದ ಸೋತಿದ್ದರು. ಬಿಜೆಪಿಗೆ ಬರುವ ಮುನ್ನ ಅವರು ಬಿಎಸ್‌ಪಿ ಹಾಗೂ ಸಮಾಜವಾದಿ ಪಕ್ಷದಲ್ಲೂ ಗುರುತಿಸಿಕೊಂಡಿದ್ದರು. 2002ರಲ್ಲಿ ಬಿಎಸ್‌ಪಿ ಮತ್ತು 2007ರಲ್ಲಿ ಎಸ್‌ಪಿ ಟಿಕೆಟ್‌ನಿಂದ ಬಿಥ್ರಿ ಚೈನ್ಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದುಕೊಂಡಿದ್ದ ಅನುಭವ ಅವರಿಗೆ ಇದೆ. ಹೀಗಾಗಿ ಎಸ್‌ಪಿಗೆ ಅವರ ಮರಳುವಿಕೆ ಹೊಸದೇನಲ್ಲ.
ಮಗಳಿಗೂ ಟಿಕೆಟ್ ಸಿಗುವ ಸಾಧ್ಯತೆ?
ಅಕ್ಟೋಬರ್ 11ರಂದು ಲಕ್ನೋದಲ್ಲಿ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಧರ್ಮೇಂದ್ರ ಕಶ್ಯಪ್ ಅವರ ಮಗಳಾದ ಕೀರ್ತಿ ಕಶ್ಯಪ್ ಕೂಡ ಜತೆಗಿದ್ದರು. ಅಕ್ಟೋಬರ್ 27ರಂದು ಅದ್ದೂರಿ ಕಾರ್ಯಕ್ರಮದಲ್ಲಿ ಕಶ್ಯಪ್ ಅಧಿಕೃತವಾಗಿ ಎಸ್‌ಪಿ ಸೇರುವ ನಿರೀಕ್ಷೆಯಿದೆ. ಅಲ್ಲದೆ, 2027ರ ವಿಧಾನಸಭಾ ಚುನಾವಣೆಯಲ್ಲಿ ಕೀರ್ತಿ ಕಶ್ಯಪ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದ್ದು, ಇದು ಪಕ್ಷದ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳ ನಡುವೆ ಆಂತರಿಕ ಪೈಪೋಟಿಗೆ ಕಾರಣವಾಗಬಹುದು.
ಒಬಿಸಿ (OBC) ಮತಗಳ ಮೇಲೆ ಕಣ್ಣು:
ರೋಹಿಲ್‌ಖಂಡ್ ಪ್ರದೇಶದಲ್ಲಿ, ಅದರಲ್ಲೂ ವಿಶೇಷವಾಗಿ ಬರೇಲಿ-ಅನ್ಲಾ ಬೆಲ್ಟ್‌ನಲ್ಲಿ ಹಿಂದುಳಿದ ವರ್ಗಗಳ (OBC) ಮತಗಳನ್ನು ಸೆಳೆಯಲು ಧರ್ಮೇಂದ್ರ ಕಶ್ಯಪ್ ಅವರ ಬರುವು ಎಸ್‌ಪಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಲಕ್ನೋ ವಿಶ್ವವಿದ್ಯಾನಿಲಯದ ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶಶಿಕಾಂತ್ ಪಾಂಡೆ ಮಾತನಾಡಿ, "ಧರ್ಮೇಂದ್ರ ಕಶ್ಯಪ್ ಸೇರ್ಪಡೆಯಿಂದ ಹಿಂದುಳಿದ ಸಮುದಾಯಗಳ ಒಲವು ಎಸ್‌ಪಿ ಕಡೆಗೆ ಹೆಚ್ಚಾಗಬಹುದು. ಆದರೆ, ಅವರು ತಮ್ಮ ಬೆಂಬಲಿಗರನ್ನು ಪಕ್ಷದ ಜತೆಗೆ ಕರೆತರುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆಂಬುದೇ ಅಂತಿಮ ಪರೀಕ್ಷೆ" ಎಂದಿದ್ದಾರೆ.
ಬಿಜೆಪಿಗೆ ಹಿನ್ನಡೆಯೇ?
ಮಾಜಿ ಸಂಸದರೊಬ್ಬರು ಪಕ್ಷಾಂತರ ಮಾಡಿರುವುದು ಬಿಜೆಪಿಗೆ ತಾತ್ಕಾಲಿಕ ಸಂದೇಶದ ಹಿನ್ನಡೆಯನ್ನು ತಂದರೂ, ಒಬ್ಬ ನಾಯಕನ ನಿರ್ಗಮನದಿಂದ ಇಡೀ ಸಮುದಾಯದ ಮತ ಬ್ಯಾಂಕ್ ಬದಲಾಗುತ್ತದೆ ಎಂದು ಹೇಳಲಾಗುವುದಿಲ್ಲ. 2024ರ ಚುನಾವಣೆಯಲ್ಲಿ ಕಶ್ಯಪ್ ಸೋತಿರುವುದರಿಂದ, ಬಿಜೆಪಿಯ ತಳಮಟ್ಟದ ಸಂಘಟನೆ ಎಷ್ಟು ಗಟ್ಟಿಯಾಗಿದೆ ಎಂಬುದರ ಮೇಲೆ ಮುಂದಿನ ರಾಜಕೀಯ ನಿರ್ಧಾರವಾಗಲಿದೆ.
ಒಟ್ಟಾರೆಯಾಗಿ, ಧರ್ಮೇಂದ್ರ ಕಶ್ಯಪ್ ಅವರ ಪಕ್ಷಾಂತರವು ಎಸ್‌ಪಿಗೆ ರೋಹಿಲ್‌ಖಂಡ్ನಲ್ಲಿ ಹೊಸ ಬಲ ತುಂಬಿದೆಯಾದರೂ, ಅಖಿಲೇಶ್ ಯಾದವ್ ಅವರು ಸ್ಥಳೀಯ ನಾಯಕರ ಅಸಮಾಧಾನವನ್ನು ಶಮನ ಮಾಡಿ, ಕಶ್ಯಪ್ ಅವರ ಜನಪ್ರಿಯತೆಯನ್ನು ಹೇಗೆ ಮತಗಳನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆ ಎಂಬುದು 2027ರ ಚುನಾವಣೆಯ ಫಲಿತಾಂಶದ ಮೇಲೆ ಪ್ರಮುಖ ಪ್ರಭಾವ ಬೀಳಲಿದೆ.


