ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆಯು ಭೂಮಿಯ ಮೇಲಿನ ಡೇಟಾ ಸೆಂಟರ್ಗಳ ಸಮಸ್ಯೆಗೆ ಪರ್ಯಾಯವಾಗಿ ಬಾಹ್ಯಾಕಾಶದಲ್ಲಿ 10 ಲಕ್ಷ ಉಪಗ್ರಹಗಳನ್ನು ಉಡಾಯಿಸಲು ಮುಂದಾಗಿದೆ. ಇದು ತಂತ್ರಜ್ಞಾನ ಲೋಕದಲ್ಲಿ ಕ್ರಾಂತಿ ತರಲಿದ್ದರೂ, ಬಾಹ್ಯಾಕಾಶ ಮಾಲಿನ್ಯ ಮತ್ತು ರಾತ್ರಿ ಆಕಾಶದ ಅಂದಕ್ಕೆ ಧಕ್ಕೆ ತರುವ ಆತಂಕವನ್ನು ಹುಟ್ಟುಹಾಕಿದೆ.
ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಪ್ರತಿ ಬಾರಿಯೂ ವಾಟ್ಸಾಪ್ ಸಂದೇಶ ಕಳುಹಿಸುವಾಗ, ಯೂಟ್ಯೂಬ್ ಅಥವಾ ನೆಟ್ಫ್ಲಿಕ್ಸ್ ವೀಕ್ಷಿಸುವಾಗ, ಆನ್ಲೈನ್ ಶಾಪಿಂಗ್ ನಡೆಸುವಾಗ, ಸರ್ಕಾರಿ ಸೇವೆಗಳನ್ನು ಪಡೆಯುವಾಗ, ಅಥವಾ ಅಂತರ್ಜಾಲದಲ್ಲಿನ ಛಾಯಾಚಿತ್ರಗಳನ್ನು ಸೇವ್ ಮಾಡಿಕೊಳ್ಳುವಾಗ ನಾವು ಡೇಟಾ ಸೆಂಟರ್ಗಳನ್ನು ಅವಲಂಬಿಸುತ್ತೇವೆ. ಈ ಬೃಹತ್ ಗಾತ್ರದ ಕಟ್ಟಡಗಳು ಡಿಜಿಟಲ್ ಮಾಹಿತಿಗಳನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಶಕ್ತಿಶಾಲಿ ಕಂಪ್ಯೂಟರ್ಗಳನ್ನು ಹೊಂದಿವೆ. ಅವು ಉದ್ಯೋಗಗಳನ್ನು ಸೃಷ್ಟಿಸಿ, ಆರ್ಥಿಕ ಪ್ರಗತಿಯನ್ನು ಬೆಂಬಲಿಸುತ್ತವೆ. ಆದರೆ, ಹೆಚ್ಚುತ್ತಿರುವ ಡೇಟಾ ಸೆಂಟರ್ಗಳ ಸಂಖ್ಯೆಯೂ ಒಂದು ಗಂಭೀರ ಆತಂಕದ ವಿಚಾರವಾಗಿದೆ.
ಭಾರತದಿಂದ ಚಿಲಿ ತನಕ ಎಲ್ಲೆಡೆಯೂ ಡೇಟಾ ಕೇಂದ್ರಗಳಿಗೆ ಪ್ರತಿರೋಧ ಹೆಚ್ಚುತ್ತಿದೆ. ಅವು ಅಗಾಧ ಪ್ರಮಾಣದ ವಿದ್ಯುತ್ ಶಕ್ತಿ ಮತ್ತು ನೀರನ್ನು ಬಳಸಿಕೊಳ್ಳುತ್ತವೆ, ಮತ್ತು ದೊಡ್ಡ ಪ್ರಮಾಣದಲ್ಲಿ ಮೌಲ್ಯಯುತ ಭೂಮಿಯನ್ನು ವ್ಯಾಪಿಸಿವೆ. ಸ್ಕಾಟ್ಲೆಂಡ್ನ ಅತಿದೊಡ್ಡ ಡೇಟಾ ಸೆಂಟರ್ಗೆ ಭೇಟಿ ನೀಡಿದ ಬಿಬಿಸಿ, ದೊಡ್ಡ ಸದ್ದು ಮಾಡುವ ಸಾಲು ಸಾಲು ಕಂಪ್ಯೂಟರ್ಗಳು ಎಷ್ಟು ಅಗಾಧ ಪ್ರಮಾಣದ ಉಷ್ಣವನ್ನು ಬಿಡುಗಡೆಗೊಳಿಸುತ್ತವೆ ಎನ್ನುವುದನ್ನು ಕಂಡಿತು. ಸಹಜವಾಗಿಯೇ ತಣ್ಣಗಿರುವ ಸ್ಕಾಟ್ಲೆಂಡ್ನ ಹವೆ ಇವು ಅತಿಯಾಗಿ ಬಿಸಿಯಾಗದಂತೆ ತಡೆಯುತ್ತವೆ.
ಈಸ್ಟ್ ಲಂಡನ್ ಪ್ರದೇಶದ ನಿವಾಸಿಗಳು ಎಂಟರಿಂದ ಇಪ್ಪತ್ತು ವರ್ಷಗಳ ಕಾಲ ನಡೆಯಬಲ್ಲ ನಿರ್ಮಾಣ ಕಾರ್ಯಗಳು, ಪ್ರತಿದಿನವೂ ಕನಿಷ್ಠ 1,000 ಹೆಚ್ಚುವರಿ ವಾಹನಗಳು, ದೊಡ್ಡದಾದ ಸದ್ದು, ಮತ್ತು ವಿದ್ಯುತ್ ಶಕ್ತಿಯ ಕೊರತೆಗಳ ಕುರಿತು ಆತಂಕ ಹೊಂದಿದ್ದಾರೆ. ಕೆಲವೆಡೆ ಈಗಾಗಲೇ ತಿಂಗಳಿಗೆ ಎರಡು ಬಾರಿ ವಿದ್ಯುತ್ ಕಡಿತ ಆರಂಭಗೊಂಡಿದೆ. ಬಿಬಿಸಿ ವೆರಿಫೈ ಪ್ರಕಾರ, ನವೆಂಬರ್ 2026ರ ಮಧ್ಯಂತರ ಚುನಾವಣೆಯ ಸಂದರ್ಭದಲ್ಲಿ, ಬಹುತೇಕ ಅರ್ಧದಷ್ಟು ಅಮೆರಿಕನ್ನರು ಡೇಟಾ ಕೇಂದ್ರಗಳನ್ನು ಮಹತ್ವದ ವಿಷಯವಾಗಿ ಪರಿಗಣಿಸಿದ್ದರು. ಅಂದಾಜು 75% ಜನರು ತಮ್ಮ ನೆರೆಹೊರೆಯಲ್ಲಿ ಡೇಟಾ ಸೆಂಟರ್ಗಳನ್ನು ಹೊಂದುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಆದರೆ, ಕೃತಕ ಬುದ್ಧಿಮತ್ತೆಯ (ಎಐ) ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಹೂಡಿಕೆ ನಡೆದಿರುವುದು ಅಮೆರಿಕದ ಆರ್ಥಿಕ ಬೆಳವಣಿಗೆಗೆ ನೆರವಾಗಿದೆ. ಇಂತಹ ಹೂಡಿಕೆಗಳನ್ನು ಕಡಿತಗೊಳಿಸಿದರೆ, ಅದರಿಂದ ಉದ್ಯೋಗಗಳು, ವೇತನ ಮತ್ತು ಆರ್ಥಿಕ ಪ್ರಗತಿಗಳ ಮೇಲೆ ಋಣಾತ್ಮಕ ಪ್ರಭಾವ ಉಂಟಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಹತ್ತು ಲಕ್ಷ ಉಪಗ್ರಹಗಳ ಉಡಾವಣೆ
ಆದರೆ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಈ ಸಮಸ್ಯೆಗೆ ಒಂದು ಅಸಾಧಾರಣ ಪರ್ಯಾಯ ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ. ಅದೇನೆಂದರೆ, ಡೇಟಾ ಸೆಂಟರ್ಗಳನ್ನು ಬಾಹ್ಯಾಕಾಶಕ್ಕೆ ಸ್ಥಳಾಂತರಿಸುವುದು! ಅಮೆರಿಕನ್ ಆಡಳಿತಗಾರರು ಈಗಾಗಲೇ ಶಕ್ತಿಶಾಲಿ ಎಐ ಕಂಪ್ಯೂಟರ್ಗಳನ್ನು ಒಳಗೊಂಡ ಹತ್ತು ಲಕ್ಷ ಉಪಗ್ರಹಗಳ ಉಡಾವಣೆ ನಡೆಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಉಪಗ್ರಹಗಳು ಭೂಮಿಯಿಂದ ಅಂದಾಜು 500ರಿಂದ 2,000 ಕಿಲೋಮೀಟರ್ ಎತ್ತರದ, ಭೂಮಿಯ ಕೆಳ ಕಕ್ಷೆಯಲ್ಲಿ (ಎಲ್ಇಒ) ಪರಿಭ್ರಮಣೆ ನಡೆಸಲಿವೆ. ಪ್ರತಿಯೊಂದು ಉಪಗ್ರಹವೂ ತನ್ನದೇ ಆದ ಸೌರ ಫಲಕಗಳನ್ನು ಹೊಂದಿರಲಿದ್ದು, ಅಂದಾಜು 75 ಮೀಟರ್ ವ್ಯಾಪ್ತಿಯಲ್ಲಿರಲಿದೆ. ಇದು ಒಂದು ಫುಟ್ಬಾಲ್ ಮೈದಾನದ ಮುಕ್ಕಾಲ ಭಾಗದಷ್ಟು ದೊಡ್ಡದಾಗಿರಲಿದೆ. ಇದರ ಕಂಪ್ಯೂಟರ್ಗಳಿಗೆ 175 ಕಿಲೋವ್ಯಾಟ್ ವಿದ್ಯುತ್ ಬೇಕಿದ್ದು, ಇದು ತಲಾ 1,000 ವ್ಯಾಟ್ ಸಾಮರ್ಥ್ಯದ 175 ಇಲೆಕ್ಟ್ರಿಕ್ ಹೀಟರ್ಗಳನ್ನು ಬಳಸುವುದಕ್ಕೆ ಸಮನಾಗಿದೆ.
ಈ ಉಪಗ್ರಹಗಳು ಮಾಹಿತಿ ವರ್ಗಾವಣೆಗೆ ಕೇಬಲ್ಗಳ ಬದಲಿಗೆ ಲೇಸರ್ ಕಿರಣಗಳನ್ನು ಬಳಸಲಿವೆ. ಈಗಾಗಲೇ ಬಳಕೆಯಲ್ಲಿರುವ ಮಸ್ಕ್ ಅವರ ಸ್ಟಾರ್ಲಿಂಕ್ ಉಪಗ್ರಹ ಜಾಲ ಬಾಹ್ಯಾಕಾಶ ಆಧಾರಿತ ಕಂಪ್ಯೂಟರ್ಗಳು ಮತ್ತು ಭೂಮಿಯ ನಡುವೆ ಮಾಹಿತಿ ವರ್ಗಾವಣೆಗೆ ನೆರವಾಗಲಿವೆ.
ಬಿಬಿಸಿ ಜೊತೆ ಮಾತನಾಡಿದ ಸ್ಪೇಸ್ಎಕ್ಸ್ ಸಂಸ್ಥೆಯ ಉಪಗ್ರಹ ಇಂಜಿನಿಯರಿಂಗ್ ವಿಭಾಗದ ನಿರ್ದೇಶಕ ಇಯಾನ್ ದಹ್ಲ್ ಅವರು ಕಂಪ್ಯೂಟರ್ ಚಿಪ್ಗಳು ಬಹಳಷ್ಟು ಸಣ್ಣದಾಗಿರುತ್ತವೆ ಎಂದಿದ್ದಾರೆ. ಅಗತ್ಯ ಇರುವಷ್ಟು ವಿದ್ಯುತ್ ಉತ್ಪಾದಿಸುವುದೇ ಬಹುದೊಡ್ಡ ಸವಾಲಾಗಿದೆ. ಸ್ಪೇಸ್ಎಕ್ಸ್ ಸ್ಟಾರ್ಲಿಂಕ್ ಸೋಲಾರ್ ಪ್ಯಾನೆಲ್ಗಳನ್ನು ಅಭಿವೃದ್ಧಿ ಪಡಿಸುವಲ್ಲಿ ತನ್ನ ಅನುಭವವನ್ನು ಬಳಸಿಕೊಳ್ಳಲಿದೆ.
ಉಪಗ್ರಹಗಳು ಭೂಮಿಯ ಸುತ್ತಲೂ ನಿರ್ದಿಷ್ಟ ಪಥಗಳನ್ನು ಬಳಸಿ ಸಂಚರಿಸಲಿವೆ. ಈ ಕಕ್ಷೆಗಳನ್ನು ಸನ್ ಸಿಂಕ್ರೊನಸ್ ಕಕ್ಷೆಗಳು ಎಂದು ಕರೆಯಲಾಗಿದ್ದು, ಇವು ಸೂರ್ಯನ ಬೆಳಕನ್ನು ಬಹಳ ದೀರ್ಘಕಾಲ ಒದಗಿಸುತ್ತವೆ. ಇದು ಉಪಗ್ರಹಗಳಿಗೆ ಭೂಮಿಯ ವಿದ್ಯುತ್ ಜಾಲದ ಮೇಲೆ ಅವಲಂಬಿಸದೆ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ನೆರವಾಗುತ್ತದೆ.
ಆದರೆ, ಈ ಕಂಪ್ಯೂಟರ್ಗಳನ್ನು ತಣ್ಣಗೆ ಇರಿಸುವುದೇ ಒಂದು ಅನಿರೀಕ್ಷಿತ ಕಷ್ಟದ ವಿಚಾರ. ಭೂಮಿಯಲ್ಲಿ ನೀರು ಮತ್ತು ಗಾಳಿಗಳು ಆ ತಾಪವನ್ನು ದೂರ ಮಾಡಲು ನೆರವಾಗುತ್ತವೆ. ಆದರೆ ಬಾಹ್ಯಾಕಾಶದಲ್ಲಿ ಗಾಳಿಯೇ ಇಲ್ಲದ್ದರಿಂದ, ಬಾಹ್ಯಾಕಾಶದ ತಂಪಾದ ಪ್ರದೇಶಗಳಲ್ಲಿರುವ ಅವುಗಳನ್ನು ತಣ್ಣಗಾಗಿಸುವುದು ಕಷ್ಟಕರವಾಗಿದೆ.
ಬ್ರಿಟನ್ನಿನ ಲೀಸೆಸ್ಟರ್ ವಿಶ್ವವಿದ್ಯಾಲಯದ ಬಾಹ್ಯಾಕಾಶ ಭೌತಶಾಸ್ತ್ರಜ್ಞರಾದ ಪ್ರೊಫೆಸರ್ ಸೂಸಿ಼ ಇಂಬರ್ ಅವರು ಬಿಬಿಸಿಯೊಡನೆ ಮಾತನಾಡುತ್ತಾ, ಉಪಗ್ರಹಗಳು ಬಾಹ್ಯಾಕಾಶದಲ್ಲಿ ಇಷ್ಟು ಅಪಾರ ಪ್ರಮಾಣದ ತಾಪವನ್ನು ಬಿಡುಗಡೆಗೊಳಿಸಲು ಬಹುದೊಡ್ಡ ಪ್ಯಾನೆಲ್ಗಳೇ ಬೇಕಾಗಬಹುದು ಎಂದಿದ್ದಾರೆ. ಇವು ಉಪಗ್ರಹಗಳ ಗಾತ್ರವನ್ನು ಅಗಾಧವಾಗಿ ಹೆಚ್ಚಿಸಿ, ಅವುಗಳು ಪರಸ್ಪರ ಡಿಕ್ಕಿ ಹೊಡೆಯುವ ಅಪಾಯಗಳನ್ನು ಹೆಚ್ಚಿಸಬಲ್ಲವು. ಸಣ್ಣದಾದ, ಆದರೆ ಅಪಾರ ಶಕ್ತಿಯೊಡನೆ ಬಾಹ್ಯಾಕಾಶದಲ್ಲಿ ವೇಗವಾಗಿ ಚಲಿಸುವ ಕಣಗಳು ಕಂಪ್ಯೂಟರ್ ಚಿಪ್ಗಳಿಗೆ ಅಪ್ಪಳಿಸಿ, ಆಕಸ್ಮಿಕವಾಗಿಯೇ ಸಂಗ್ರಹಿಸಿರುವ ಮಾಹಿತಿಗಳನ್ನು ಬದಲಾಯಿಸಬಹುದು. ಇದರಿಂದ ಲೆಕ್ಕಾಚಾರಗಳು ಬದಲಾಗಬಹುದು, ಅಥವಾ ಕಂಪ್ಯೂಟರ್ಗಳು ವಿಫಲವಾಗಬಹುದು.
ಹತ್ತು ಲಕ್ಷ ಉಪಗ್ರಹಗಳನ್ನು ಉಡಾವಣೆಗೊಳಿಸುವುದು ವಾತಾವರಣದ ಮೇಲೂ ಪರಿಣಾಮ ಬೀರಬಹುದು. ಹಳೆಯ ಉಪಗ್ರಹಗಳನ್ನು ಬಹುತೇಕ ಐದು ವರ್ಷಗಳಿಗೊಮ್ಮೆ ಬದಲಿಸುವ ಅವಶ್ಯಕತೆ ಎದುರಾಗಲಿದೆ. ಅವು ಭೂಮಿಯ ವಾತಾವರಣಕ್ಕೆ ಪ್ರವೇಶಿಸಿ, ಉರಿದು ಹೋಗುವ ಸಾಧ್ಯತೆಗಳಿರುವುದರಿಂದ, ಅವು ವಾತಾವರಣದ ಸಂಯೋಜನೆಗಳ ಮೇಲೆ ದುಷ್ಪರಿಣಾಮ ಬೀರಬಲ್ಲದು.
ದ ಅಮೆರಿಕನ್ ಆ್ಯಸ್ಟ್ರಾನಮಿಕಲ್ ಸೊಸೈಟಿ ಈ ಕುರಿತು ಗಂಭೀರ ಅಸಮಾಧಾನ ಮತ್ತು ಆತಂಕ ವ್ಯಕ್ತಪಡಿಸಿದೆ. ಈಗಾಗಲೇ ಬಳಕೆಯಲ್ಲಿರುವ ಸ್ಟಾರ್ಲಿಂಕ್ ಉಪಗ್ರಹಗಳು ರಾತ್ರಿಯ ಆಗಸದಲ್ಲಿ ಹೊಳೆಯುವ ಮುತ್ತಿನ ಹಾರಗಳಂತೆ ಗೋಚರಿಸುತ್ತವೆ. ಇದರಿಂದ ವೃತ್ತಿಪರ ಮತ್ತು ಹವ್ಯಾಸಿ ಖಗೋಳ ವೀಕ್ಷಕರಿಗೆ ತೊಂದರೆ ಉಂಟಾಗುತ್ತಿದೆ.
ವರ್ಜೀನಿಯಾ ಟೆಕ್ನ ಏರೋಸ್ಪೇಸ್ ಮತ್ತು ಸಾಗರ ಎಂಜಿನಿಯರಿಂಗ್ ತಜ್ಞರಾದ ಪ್ರೊಫೆಸರ್ ಶೇನ್ ರಾಸ್, ಐದು ಲಕ್ಷ ಉಪಗ್ರಹಗಳು ಭೂಮಿಯಿಂದ ಹೇಗೆ ಕಾಣಿಸಬಹುದು ಎಂಬುದನ್ನು ತೋರಿಸುವ ಕಂಪ್ಯೂಟರ್ ಸಿಮ್ಯುಲೇಶನ್ ಸಿದ್ಧಪಡಿಸಿದ್ದಾರೆ.
ವರ್ಜೀನಿಯಾದ ಬೆಳಕಿನ ಮಾಲಿನ್ಯ ಕಡಿಮೆ ಇರುವ ರಾತ್ರಿ ಆಕಾಶದಲ್ಲಿ ಸುಮಾರು 2,500 ನಕ್ಷತ್ರಗಳ ಎದುರು ಸುಮಾರು 38,000 ಉಪಗ್ರಹಗಳು ಗೋಚರಿಸಬಹುದು. ಅಂದರೆ, ಕಣ್ಣಿಗೆ ಕಾಣುವ ಉಪಗ್ರಹಗಳ ಸಂಖ್ಯೆ ನಕ್ಷತ್ರಗಳಿಗಿಂತ ಸುಮಾರು 15 ಪಟ್ಟು ಹೆಚ್ಚಿರಬಹುದು. ಲಂಡನ್ನಂತಹ ನಗರಗಳಲ್ಲಿ ಕೃತಕ ಬೆಳಕಿನ ಕಾರಣದಿಂದ ಉಪಗ್ರಹಗಳು ಅಷ್ಟೊಂದು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಅವುಗಳ ಗೋಚರತೆ ಸ್ಥಳ, ಋತು ಮತ್ತು ಸೂರ್ಯನ ಬೆಳಕಿನ ಪ್ರತಿಫಲನವನ್ನು ಕಡಿಮೆ ಮಾಡುವ ಕ್ರಮಗಳನ್ನು ಅವಲಂಬಿಸಿರುತ್ತವೆ.
ಉಪಗ್ರಹಗಳು ಪರಸ್ಪರ ಡಿಕ್ಕಿ ಹೊಡೆಯುವುದು ಮತ್ತೊಂದು ಸಂಭವನೀಯ ಅಪಾಯ. ರಸ್ತೆಯಲ್ಲಿ ಸರಣಿ ಅಪಘಾತಗಳು ಸಂಭವಿಸುವಂತೆಯೇ, ಒಂದು ಉಪಗ್ರಹದ ಡಿಕ್ಕಿಯು ಹಲವು ಇತರ ಡಿಕ್ಕಿಗಳಿಗೆ ಕಾರಣವಾಗಬಹುದು. ಒಡೆದು ಚದುರಿದ ಉಪಗ್ರಹದ ತುಣುಕುಗಳು ಸುತ್ತಮುತ್ತಲಿನ ಇತರ ಉಪಗ್ರಹಗಳಿಗೆ ಅಪ್ಪಳಿಸಬಹುದು. ಇದರಿಂದ ಬಾಹ್ಯಾಕಾಶದಲ್ಲಿ ಅಪಾರ ಪ್ರಮಾಣದ ಅವಶೇಷಗಳು ಸೃಷ್ಟಿಯಾಗಿ, ಭೂಮಿಯ ಕಕ್ಷೆಯ ಕೆಲವು ಭಾಗಗಳನ್ನು ಬಳಕೆಗೆ ಅಯೋಗ್ಯವಾಗಿಸಬಹುದು.
ಆದರೆ, ಮಸ್ಕ್ ಇದನ್ನು ಒಪ್ಪುವುದಿಲ್ಲ. ಬಾಹ್ಯಾಕಾಶವು ಅತ್ಯಂತ ವಿಶಾಲವಾಗಿದೆ ಮತ್ತು ಭೂಮಿಗೆ ಹೋಲಿಸಿದರೆ ಉಪಗ್ರಹಗಳು ಅತಿ ಚಿಕ್ಕ ಗಾತ್ರ ಹೊಂದಿವೆ ಎಂಬುದು ಅವರ ವಾದ.
ಬಾಹ್ಯಾಕಾಶ ಆಧಾರಿತ ಕಂಪ್ಯೂಟಿಂಗ್ ವ್ಯವಸ್ಥೆಗಳ ಮೇಲೆ ಖಾಸಗಿ ಕಂಪನಿಗಳು ಅತಿಯಾದ ನಿಯಂತ್ರಣ ಸಾಧಿಸುವ ಆತಂಕವೂ ಇದೆ. ಆದರೆ, ಇದೇ ರೀತಿಯ ತಂತ್ರಜ್ಞಾನವನ್ನು ಹಲವು ಕಂಪನಿಗಳು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿವೆ ಎಂದು ಪ್ರೊಫೆಸರ್ ಇಂಬರ್ ಅಭಿಪ್ರಾಯ ಪಟ್ಟಿದ್ದಾರೆ.
ಸಂವಹನ ವ್ಯವಸ್ಥೆಗಳನ್ನು ನಿಯಂತ್ರಿಸುವ ಅಮೆರಿಕದ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (ಎಫ್ಸಿಸಿ), ಸ್ಪೇಸ್ಎಕ್ಸ್ಗೆ 2033ರ ವೇಳೆಗೆ ಒಂದು ಲಕ್ಷ ಮತ್ತು 2038ರ ವೇಳೆಗೆ ಐದು ಲಕ್ಷ ಉಪಗ್ರಹಗಳನ್ನು ಉಡಾವಣೆ ಮಾಡುವಂತೆ ಸೂಚಿಸಿದೆ ಎನ್ನಲಾಗಿದೆ.
ಭಾರತ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಈ ಬೆಳವಣಿಗೆ ಕೈಗೆಟುಕುವ ದರದ ಕಂಪ್ಯೂಟಿಂಗ್, ತಾಂತ್ರಿಕ ಸ್ವಾತಂತ್ರ್ಯ, ಮತ್ತು ಬಾಹ್ಯಾಕಾಶದಲ್ಲಿ ಸಮಾನ ಅವಕಾಶಗಳ ಕುರಿತ ಪ್ರಮುಖ ಪ್ರಶ್ನೆಯನ್ನು ಮೂಡಿಸಿದೆ.
ಡೇಟಾ ಸೆಂಟರ್ಗಳನ್ನು ಬಾಹ್ಯಾಕಾಶಕ್ಕೆ ಸ್ಥಳಾಂತರಿಸುವುದರಿಂದ, ಭೂಮಿಯ ನೆಲ, ನೀರು ಮತ್ತು ವಿದ್ಯುತ್ ಪೂರೈಕೆಯ ಮೇಲಿನ ಒತ್ತಡವೇನೋ ಕಡಿಮೆಯಾಗಬಹುದು. ಆದರೆ, ಭೂಮಿಯ ಮೇಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ಬಾಹ್ಯಾಕಾಶದಲ್ಲಿ ಇನ್ನೂ ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸದಂತೆ ಮಾನವಕುಲ ಎಚ್ಚರಿಕೆ ವಹಿಸಬೇಕು. ರಾತ್ರಿ ಆಕಾಶ ಎಲ್ಲರಿಗೂ ಸೇರಿದ್ದು, ತಾಂತ್ರಿಕ ಪ್ರಗತಿಯಷ್ಟೇ ಅದನ್ನು ಸಂರಕ್ಷಿಸುವುದೂ ಮುಖ್ಯವಾಗಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)












