ಭೂಮಿಯ ಸಮೀಪಕ್ಕೆ ಬರುತ್ತಿದೆ ಅಪಾಯಕಾರಿ ಕ್ಷುದ್ರಗ್ರಹ; ಚೀನಾದಿಂದ ಡಿಫೆನ್ಸ್ ಫೋರ್ಸ್ ನೇಮಕ
Asteroid 2024 YR4 ಎಂಬ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆದರೆ ದೊಡ್ಡ ಹಾನಿಯನ್ನುಂಟುಮಾಡಬಹುದು. ಚೀನಾ ಈ ಕ್ಷುದ್ರಗ್ರಹದ ಮೇಲೆ ನಿಗಾ ಇರಿಸಲು ತಜ್ಞರ ತಂಡವನ್ನು ನೇಮಿಸಿಕೊಳ್ಳುತ್ತಿದೆ.

ನವದೆಹಲಿ: ಅಪೋಫಿಸ್ ನಂತರ ಭೂಮಿಯ ಸಮೀಪಕ್ಕೆ ಮತ್ತೊಂದು ಕ್ಷುದ್ರಗ್ರಹ ಸಮೀಪಕ್ಕೆ ಬರಲಿದೆ. 2024 YR4 ಎಂದು ಈ ಈ ಕ್ಷುದ್ರಗ್ರಹಕ್ಕೆ ಹೆಸರಿಡಲಾಗಿದೆ. ಈ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆಯಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆರ್ಯಭಟ ವೀಕ್ಷಣಾ ವಿಜ್ಞಾನ ಸಂಶೋಧನಾ ಸಂಸ್ಥೆಯ (ARIES) ಹಿರಿಯ ಖಗೋಳಶಾಸ್ತ್ರಜ್ಞ ಡಾ. ಶಶಿಭೂಷಣ್ ಪಾಂಡೆ ಅವರು ಅಪಾಯಕಾರಿ 2024 YR4 ಕ್ಷುದ್ರಗ್ರಹದ ಬಗ್ಗೆ ಮಾತನಾಡಿದ್ದಾರೆ. ಈ ಕ್ಷುದ್ರಗ್ರಹ ಅಪೋಫಿಸ್‌ನಷ್ಟು ದೊಡ್ಡದಲ್ಲ ಎಂದು ಮಾಹಿತಿ ನೀಡಿದ್ದಾರೆ.
ಒಂದು ವೇಳೆ 2024 YR4 ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆದ್ರೆ ದೊಡ್ಡಮಟ್ಟದಲ್ಲಿ ಹಾನಿಯನ್ನುಂಟು ಮಾಡಲಿದೆ. ಈ ಕ್ಷುದ್ರಗ್ರಹ 2032ರ ಡಿಸೆಂಬರ್ 22ರಂದು ಭೂಮಿಯ ಸಮೀಪಕ್ಕೆ ಬರಲಿದೆ. ಇದು ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳಿವೆ. ಡಿಕ್ಕಿ ಹೊಡೆದ್ರೆ ದೊಡ್ಡಮಟ್ಟದ ಹಾನಿಯನ್ನುಂಟು ಮಾಡುವ ಶಕ್ತಿಯನ್ನು ಈ ಕ್ಷುದ್ರಗ್ರಹ ಹೊಂದಿದೆ. ಆದ ಕಾರಣ 2024 YR4 ಕ್ಷುದ್ರಗ್ರಹವನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ ಎಂದು ಡಾ. ಶಶಿಭೂಷಣ್ ಪಾಂಡೆ ಹೇಳಿದ್ದಾರೆ.
ಸದ್ಯ 2024 YR4 ಕ್ಷುದ್ರಗ್ರಹ ಚಲನೆ ಗಮನಿಸಿದ್ರೆ ಅದು ಭೂಮಿಗೆ ಡಿಕ್ಕಿ ಹೊಡೆಯತ್ತಾ ಅಥವಾ ಪಕ್ಕದಿಂದಲೇ ಹೋಗುತ್ತಾ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂಬುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಸದ್ಯಕ್ಕೆ ಭೂಮಿಗೆ ಈ ಕ್ಷುದ್ರಗ್ರಹದಿಂದ ಭೂಮಿಗೆ ಯಾವುದೇ ಅಪಾಯವಿಲ್ಲ. ಭವಿಷ್ಯದಲ್ಲಿ ಈ ಕ್ಷುದ್ರಗ್ರಹ ಚಲನೆ ಮೇಲೆ ಕಣ್ಗಾವಲು ಇಡಲು ತಂತ್ರಜ್ಞಾನ ಬಳಸಲು ವಿಜ್ಞಾನಿಗಳು ಮುಂದಾಗಿದ್ದಾರೆ. ಇದಕ್ಕಾಗಿ ಕೃತಕ ಉಪಗ್ರಹಗಳನ್ನ ಬಳಸಿಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ. ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ ಸ್ಟೇಷನ್ 2024ರಲ್ಲಿ ಈ ಕ್ಷುದ್ರಗ್ರಹವನ್ನು ಪತ್ತೆ ಮಾಡಿತ್ತು. ಅಂದಿನಿಂದ 2024 YR4 ಕ್ಷುದ್ರಗ್ರಹ ಬಗ್ಗೆ ವಿಜ್ಞಾನಿಗಳು ನಿರಂತರವಾಗಿ ಅಧ್ಯಯನ ನಡೆಸುತ್ತಿದ್ದಾರೆ.
ಕ್ಷುದ್ರಗ್ರಹದ ಮೇಲ್ವಿಚಾರಣೆ ನಡೆಸುತ್ತಿರುವ ವಿಜ್ಞಾನಿಗಳ ಪ್ರಕಾರ, 2024 YR4 ಸುಮಾರು150 ಅಡಿ ಅಗಲವನ್ನು ಹೊಂದಿದೆ. ಕಲ್ಲಿನ ತುಂಡಿನಂತಿರುವ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದ್ರೆ ದೊಡ್ಡ ಪ್ರಮಾಣದಲ್ಲಿ ಅಪಾಯವನ್ನುಂಟು ಮಾಡಲಿದೆ. ಕ್ಷುದ್ರಗ್ರಹದ ಚಿತ್ರಣ ಅಸ್ಪಷ್ಟವಾಗಿದ್ದು, ತನ್ನದೇ ಪಥದಲ್ಲಿ ಚಲಿಸುತ್ತಿದೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ (ESA) ಗ್ರಹ ರಕ್ಷಣಾ ಇಲಾಖೆಯು ಈ ಕ್ಷುದ್ರಗ್ರಹವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಆರಂಭದಲ್ಲಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಶೇ.1.3ರಷ್ಟಿತ್ತು. ಆದ್ರೀಗ ಇದು ಶೇ.2.3ಕ್ಕೆ ಏರಿಕೆಯಾಗಿದೆ. ಪೆಸಿಫಿಕ್ ಮಹಾಸಾಗರ, ಉತ್ತರ ದಕ್ಷಿಣ ಅಮೆರಿಕಾ, ಅಟ್ಲಾಂಟಿಕ್ ಮಹಾಸಾಗರ, ಆಫ್ರಿಕಾ, ಅರೇಬಿಯನ್ ಸಮುದ್ರ ಮತ್ತು ದಕ್ಷಿಣ ಏಷ್ಯಾ ಭಾಗದಲ್ಲಿ ಈ ಕ್ಷುದ್ರಗ್ರಹ ಪರಿಣಾಮ ಬೀರಲಿದೆ.
ಚೀನಾದಿಂದ ತಜ್ಞರ ಪಡೆ ನೇಮಕ
ಈ ಕ್ಷುದ್ರಗ್ರಹದ ಮೇಲೆ ನಿಗಾ ಇರಿಸಲು ಚೀನಾ, ತಜ್ಞರ ತಂಡವನ್ನ ನೇಮಕ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪದವೀಧರರಿಂದ ಚೀನಾ ಅರ್ಜಿ ಆಹ್ವಾನಿಸಿದೆ.
ಇದನ್ನೂ ಓದಿ: ಆಗಸದ ಕೌತುಕ ನೀವು ಗಮಿಸಿದ್ರಾ? ಅಪರೂಪದ ಬೆಳಕಿನ ಚಿತ್ತಾರದ ಐನ್‌ಸ್ಟೀನ್ ರಿಂಗ್ ಪತ್ತೆ
2 ತಿಂಗಳಲ್ಲಿ 2 ಡಜನ್ ಕ್ಷುದ್ರಗ್ರಹಗಳು
ಖಗೋಳಶಾಸ್ತ್ರಜ್ಞ ಡಾ. ಶಶಿಭೂಷಣ್ ಪಾಂಡೆ ಕ್ಷುದ್ರಗ್ರಹಗಳ ಕುರಿತು ಅಧ್ಯಯನ ನಡೆಸುತ್ತಿರುತ್ತಾರೆ. ಭೂಮಿಗೆ ಸಮೀಪ ಬರುವ ಕ್ಷುದ್ರಗ್ರಹಗಳ ಮೇಲೆ ಶಶಿಭೂಷನ್ ಪಾಂಡೆ ಕಣ್ಣಿಟ್ಟಿರುತ್ತಾರೆ. ಪಾಂಡೆ ಅವರ ಅಧ್ಯಯನದ ಪ್ರಕಾರ, ಫೆಬ್ರವರಿ ಮತ್ತು ಮಾರ್ಚ್ ಎರಡು ತಿಂಗಳಲ್ಲಿ ಭೂಮಿಯ ಸಮೀಪ 2 ಡಜನ್ (24) ಕ್ಷುದ್ರಗ್ರಹಳಿ ಹಾದು ಹೋಗಲಿವೆ ಎಂದು ಹೇಳಿದ್ದಾರೆ. ಇವುಗಳಲ್ಲಿ ಅಪಾಯಕಾರಿಯಾದ ಮೂರು ಕ್ಷುದ್ರಗಳ ಪೈಕಿ ಎರಡು ಫೆಬ್ರವರಿ 4 ಮತ್ತು 9ರಂದು ಹಾದು ಹೋಗಿವೆ. ಮೂರನೇ ಅಪಾಯಕಾರಿಯಾದ 31 ಮೀಟರ್ ಗಾತ್ರದ ಕ್ಷುದ್ರಗ್ರಹ ಮಾರ್ಚ್ 21 ರಂದು ಭೂಮಿಯ ಸಮೀಪಕ್ಕೆ ಬಂದು ಹಾದು ಹೋಗಲಿದೆ. ಈ ಎರಡು ಡಜನ್ ಕ್ಷುದ್ರಗ್ರಹಗಳಿಂದ ಭೂಮಿಗೆ ಯಾವುದೇ ಅಪಾಯವಿಲ್ಲ ಎಂದು ವಿಜ್ಞಾನಿಗಳು ಖಚಿತ ಪಡಿಸಿದ್ರೂ ಅವುಗಳ ಮೇಲೆ ನಿಗಾ ವಹಿಸಿದ್ದಾರೆ.
ಸುಮಾರು 10 ಮೀಟರ್ ಗಾತ್ರದ ಕ್ಷುದ್ರಗ್ರಹಗಳು ಭೂಮಿಗೆ ಡಿಕ್ಕಿ ಹೊಡೆಯಬಹುದು. ಆದ್ರೆ ಈ ಕ್ಷುದ್ರಗ್ರಹಗಳು ಭೂಮಿಯ ವಾತಾವರಣಕ್ಕೆ ಬರುತ್ತಿದ್ದಂತೆ ಆಕಾಶದಲ್ಲಿ ಸುಟ್ಟು ಹೋಗುತ್ತವೆ. ಭೂಮಿಯ ವಾತಾವರಣವೇ ಭೂಮಿಗೆ ರಕ್ಷಾ ಕವಚವಾಗಿ ಕೆಲಸ ಮಾಡುತ್ತದೆ.
ಇದನ್ನೂ ಓದಿ: ಕೊನೆಗೂ ಏಲಿಯನ್ ಪ್ಲಾನೆಟ್ ಪತ್ತೆ ಹಚ್ಚಿದ ಭಾರತೀಯ ಸೈಂಟಿಸ್ಟ್, ಈ ಗ್ರಹ ಎಲ್ಲಿದೆ?