ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕಿ '2026 QQ8' ಎಂಬ ಸಣ್ಣ ಕ್ಷುದ್ರಗ್ರಹ ತಾತ್ಕಾಲಿಕ 'ಮಿನಿ-ಚಂದ್ರ'ನಾಗಿ ಮಾರ್ಪಟ್ಟಿದೆ. 2026ರ ಡಿಸೆಂಬರ್ ಅಥವಾ 2027ರ ಜನವರಿವರೆಗೆ ಈ ಕಾಯವು ಭೂಮಿಯ ಸಾಮೀಪ್ಯದಲ್ಲಿರಲಿದೆ. ವಿಜ್ಞಾನಿಗಳು ಇದನ್ನು ಕೃತಕ ವಸ್ತುವಲ್ಲ, ನೈಸರ್ಗಿಕ ಕ್ಷುದ್ರಗ್ರಹ ಎಂದು ದೃಢಪಡಿಸಿದ್ದಾರೆ.
ನಮ್ಮ ವಿಶಾಲ ಬ್ರಹ್ಮಾಂಡದಲ್ಲಿ ಭೂಮಿಗೆ ತಾತ್ಕಾಲಿಕವಾಗಿ ಮತ್ತೊಬ್ಬ ಬಾಹ್ಯಾಕಾಶ ಸಂಗಾತಿ ಲಭಿಸಿದ್ದಾನೆ. ಸುಮಾರು 1 ರಿಂದ 2 ಮೀಟರ್ ಅಗಲವಿರುವ ‘2026 QQ8’ ಎಂಬ ಸಣ್ಣ ಕ್ಷುದ್ರಗ್ರಹವನ್ನು ಭೂಮಿಯ ಗುರುತ್ವಾಕರ್ಷಣಾ ಬಲವು ತನ್ನತ್ತ ಸೆಳೆದುಕೊಂಡಿದ್ದು, ಇದನ್ನು ವಿಜ್ಞಾನಿಗಳು ತಾತ್ಕಾಲಿಕ ಉಪಗ್ರಹ ಎಂದು ಕರೆದಿದ್ದಾರೆ. 2026 ರ ಏಪ್ರಿಲ್ ತಿಂಗಳಿನಲ್ಲೇ ಇದು ಭೂಮಿಯ ಕಕ್ಷೆಯ ಪ್ರಭಾವಲಯಕ್ಕೆ ಬಂದಿದ್ದರೂ, ಹಲವು ತಿಂಗಳುಗಳ ಕಾಲ ಯಾರ ಗಮನಕ್ಕೂ ಬಂದಿರಲಿಲ್ಲ. ಆ ಬಳಿಕ ಆಗಸ್ಟ್ನಲ್ಲಿ ಮೊದಲು ಪತ್ತೆಯಾದ ಈ ಬಾಹ್ಯಾಕಾಶ ಕಾಯವು, 2026 ರ ಡಿಸೆಂಬರ್ ಅಥವಾ 2027 ರ ಆರಂಭದವರೆಗೆ ಭೂಮಿಯ ಸಾಮೀಪ್ಯದಲ್ಲಿದ್ದು, ನಂತರ ಸೂರ್ಯನ ಸುತ್ತ ತನ್ನ ಸಾಮಾನ್ಯ ಪಥಕ್ಕೆ ಮರಳಲಿದೆ.
ಆವಿಷ್ಕಾರ ಮತ್ತು ವಿಜ್ಞಾನಿಗಳ ದೃಢೀಕರಣ
ಹಂಗೇರಿಯನ್ ಖಗೋಳವಿಜ್ಞಾನಿ ಕ್ರಿಸ್ಜ್ಟಿಯಾನ್ ಸರ್ನೆಕ್ಜ್ಕಿ ಅವರು ಆಗಸ್ಟ್ 19-20 ರ ನಡುವೆ ಈ ಮಸುಕಾದ ಆಕಾಶಕಾಯವನ್ನು ಪ್ರಥಮ ಬಾರಿಗೆ ವೀಕ್ಷಿಸಿದರು. ಆರಂಭದಲ್ಲಿ, ಈ ಸಣ್ಣ ವಸ್ತುವು ನೈಸರ್ಗಿಕ ಬಾಹ್ಯಾಕಾಶ ಶಿಲೆಯೇ ಅಥವಾ ರಾಕೆಟ್ನ ಮಾನವ ನಿರ್ಮಿತ ಅವಶೇಷವೇ ಎಂಬ ಗೊಂದಲ ಖಗೋಳಶಾಸ್ತ್ರಜ್ಞರಲ್ಲಿ ಮೂಡಿತ್ತು.
ಈ ಅನಿಶ್ಚಿತತೆಯನ್ನು ನಿವಾರಿಸಲು, ವಿಜ್ಞಾನಿಗಳು ಹವಾಯಿ ವಿಶ್ವವಿದ್ಯಾಲಯದ 2.2-ಮೀಟರ್ ದೂರದರ್ಶಕ ಮತ್ತು ಲೋವೆಲ್ ಡಿಸ್ಕವರಿ ದೂರದರ್ಶಕವನ್ನು ಬಳಸಿ ವಿಸ್ತೃತ ಅಧ್ಯಯನ ನಡೆಸಿದರು. ಈ ಕಾಯವು ಸೌರ ವಿಕಿರಣದ ಒತ್ತಡಕ್ಕೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಅಳೆದು, ಇದು ಕೃತಕ ವಸ್ತುವಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡರು. ತದನಂತರ, ಅಕ್ಟೋಬರ್ 29 ರಂದು ಅಂತರರಾಷ್ಟ್ರೀಯ ಖಗೋಳ ಒಕ್ಕೂಟದಲ್ಲಿ ಇದನ್ನು ನೈಸರ್ಗಿಕ ಕ್ಷುದ್ರಗ್ರಹ ಹಾಗೂ ಭೂಮಿಯ ತಾತ್ಕಾಲಿಕ ‘ಮಿನಿ ಚಂದ್ರ’ ಎಂದು ಅಧಿಕೃತವಾಗಿ ವರ್ಗೀಕರಿಸಿತು.
ಭೂಮಿಯು ಈ ಮಿನಿ-ಚಂದ್ರನನ್ನು ಸೆರೆಹಿಡಿದಿದ್ದು ಹೇಗೆ?
ಈ ಕ್ಷುದ್ರಗ್ರಹವು ಭೂಮಿಯ ಕಡೆಗೆ ಉದ್ದೇಶಪೂರ್ವಕವಾಗಿ ಧಾವಿಸಿ ಬರಲಿಲ್ಲ. ಬದಲಾಗಿ, ಅದು ಹಾದುಹೋಗುವಾಗ ಭೂಮಿಯ ಗುರುತ್ವಾಕರ್ಷಣಾ ವಲಯದ ಅತ್ಯಂತ ಹತ್ತಿರಕ್ಕೆ ಬಂದಿದ್ದರಿಂದ, ಭೂಮಿಯ ಗುರುತ್ವ ಶಕ್ತಿಯು ಸೂರ್ಯನ ಆಕರ್ಷಣೆಯನ್ನು ಮೀರಿ ಇದರ ಪಥವನ್ನು ತಾತ್ಕಾಲಿಕವಾಗಿ ಬದಲಾಯಿಸಿತು.
ಆದಾಗ್ಯೂ, ಭೂಮಿಯ ಶಾಶ್ವತ ಚಂದ್ರನಂತೆ ಈ ಮಿನಿ-ಚಂದ್ರನು ನಿರ್ದಿಷ್ಟ ವೃತ್ತಾಕಾರದ ಕಕ್ಷೆಯಲ್ಲಿ ಸುತ್ತುವುದಿಲ್ಲ. ಇದರ ಪಥವು ಅತ್ಯಂತ ಅನಿಯಮಿತವಾಗಿರುತ್ತದೆ. 2026 QQ8 ನ ಸಂದರ್ಭದಲ್ಲಿ, ಈ ಸೆರೆಹಿಡಿಯುವಿಕೆಯು ಒಟ್ಟು 8 ರಿಂದ 9 ತಿಂಗಳುಗಳ ಕಾಲ ಇರಲಿದೆ. ಪ್ರಸ್ತುತ ಇದು ಭೂಮಿಯಿಂದ ಸುಮಾರು 5,68,000 ಕಿಲೋಮೀಟರ್ ದೂರದಲ್ಲಿದ್ದು, ಇದು ಭೂಮಿ-ಚಂದ್ರರ ನಡುವಿನ ಸರಾಸರಿ ಅಂತರಕ್ಕಿಂತ 1.5 ಪಟ್ಟು ಹೆಚ್ಚು. ಆದ್ದರಿಂದ ಇದರಿಂದ ಭೂಮಿಗೆ ಯಾವುದೇ ರೀತಿಯ ಡಿಕ್ಕಿಯ ಅಪಾಯವಾಗಲಿ ಇಲ್ಲ.
ಭೂಮಿಯ ಹಳೆಯ ಗೆಳೆಯ ರ
ಕಕ್ಷೆಯ ವಿಶ್ಲೇಷಣೆಗಳ ಪ್ರಕಾರ, 2026 QQ8 ಕಾಯವು ಪ್ರತಿ ದಶಕಕ್ಕೊಮ್ಮೆ ಭೂಮಿಯ ನೆರೆಹೊರೆಗೆ ಹಾದುಹೋಗುತ್ತದೆ. ಇದು ಹಿಂದೆ 1965 ರಲ್ಲೂ ಭೂಮಿಯ ಸಮೀಪಕ್ಕೆ ಬಂದಿತ್ತಾದರೂ, ಗುರುತ್ವಾಕರ್ಷಣೆಗೆ ಸಿಲುಕುವಷ್ಟು ಹತ್ತಿರ ಬಂದಿರಲಿಲ್ಲ. ಭವಿಷ್ಯದಲ್ಲಿ ಅಂದರೆ 2058 ರಲ್ಲಿ ಇದು ಮತ್ತೆ ಭೂಮಿಯ ಸಮೀಪಕ್ಕೆ ಬಂದರೂ, ಆಗಲೂ ಮಿನಿ-ಚಂದ್ರನಾಗಿ ಬದಲಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಈ ಕ್ಷುದ್ರಗ್ರಹವು ಸೂರ್ಯನ ಸುತ್ತ ಒಂದು ಸುತ್ತು ಬರಲು ಸುಮಾರು 359 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ ಇದರ ವರ್ಷವು ಭೂಮಿಯ ವರ್ಷಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಪ್ರಸ್ತುತ ನವೆಂಬರ್ನಲ್ಲಿ ಭೂಮಿಯ ಜೊತೆಗಿರುವ ಈ ಕಾಯವು ಡಿಸೆಂಬರ್ ಕೊನೆಯಲ್ಲಿ ಅಥವಾ 2027 ರ ಜನವರಿ ವೇಳೆಗೆ ಭೂಮಿಯ ಹಿಡಿತದಿಂದ ಮುಕ್ತವಾಗಿ ತನ್ನದೇ ಸೌರ ಕಕ್ಷೆಯಲ್ಲಿ ಪ್ರಯಾಣ ಮುಂದುವರಿಸಲಿದೆ.
ಭೂಮಿಗೆ ಒಂದಕ್ಕಿಂತ ಹೆಚ್ಚು ಮಿನಿ-ಚಂದ್ರರಿರಬಹುದೇ?
ಭೂಮಿಗೆ ಮಿನಿ-ಚಂದ್ರ ಸಿಕ್ಕಿರುವುದು ಇದೇ ಮೊದಲೇನಲ್ಲ. ಹಿಂದೆ 2020 CD3 ಮತ್ತು 2024 PT5 ಎಂಬ ಕ್ಷುದ್ರಗ್ರಹಗಳು ಸಹ ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕಿ ತಾತ್ಕಾಲಿಕ ಉಪಗ್ರಹಗಳಾಗಿದ್ದವು.
ಖಗೋಳ ವಿಜ್ಞಾನದ ಅಧ್ಯಯನಗಳ ಪ್ರಕಾರ, ಯಾವುದೇ ನೀಡಿಷ್ಟ ಸಮಯದಲ್ಲಿ ಭೂಮಿಯ ಸುತ್ತ ಸುಮಾರು 6 ಸಣ್ಣ ಮಿನಿ-ಚಂದ್ರಗಳು ಇರಬಹುದು. ಇವುಗಳಲ್ಲಿ ಹಲವು ಕ್ಷುದ್ರಗ್ರಹಗಳು ಚಂದ್ರನ ಮೇಲ್ಮೈಗೆ ಅಪ್ಪಳಿಸಿದಾಗ ಸಿಡಿದುಬಂದ ಚಂದ್ರನ ಬಂಡೆಯ ತುಣುಕುಗಳೇ ಆಗಿರುತ್ತವೆ. ಇಂತಹ ತಾತ್ಕಾಲಿಕ ಕಾಯಗಳು ಸಾಮಾನ್ಯವಾಗಿ 9 ತಿಂಗಳವರೆಗೆ ಭೂಮಿಯ ಸಾಮೀಪ್ಯದಲ್ಲಿರುತ್ತವೆ. ಈ ಬಾಹ್ಯಾಕಾಶ ಕಾಯಗಳು ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿ ಹಾಗೂ ಮಸುಕಾಗಿರುವುದರಿಂದ ಇವುಗಳನ್ನು ಸಾಮಾನ್ಯ ದೂರದರ್ಶಕಗಳಿಂದ ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿದೆ.
'ಮಿನಿ-ಮೂನ್' ಮತ್ತು 'ಕ್ವಾಸಿ-ಮೂನ್' ನಡುವಿನ ವ್ಯತ್ಯಾಸ
ಮಿನಿ-ಮೂನ್: ಗ್ರಹದ ಗುರುತ್ವಾಕರ್ಷಣಾ ಶಕ್ತಿಗೆ ನೇರವಾಗಿ ಸಿಲುಕಿ ತಾತ್ಕಾಲಿಕವಾಗಿ ಬಂಧಿಯಾಗುವ ಕಾಯ.
ಕ್ವಾಸಿ-ಮೂನ್: ಸೂರ್ಯನ ಸುತ್ತ ಭೂಮಿಯ ಜೊತೆಜೊತೆಯಲ್ಲೇ ಚಲಿಸುವಂತೆ ಕಾಣುವ, ಆದರೆ ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕದೆ ಸ್ವತಂತ್ರವಾಗಿ ಸೂರ್ಯನ ಸುತ್ತ ಸುತ್ತುವ ಕಾಯ.
2026 QQ8 ಕ್ಷುದ್ರಗ್ರಹವು ಗಾತ್ರದಲ್ಲಿ ತೀರಾ ಚಿಕ್ಕದಾಗಿರುವುದರಿಂದ ರಾತ್ರಿ ಆಕಾಶದಲ್ಲಿ ಬರಿಗಣ್ಣಿಗೆ ಅಥವಾ ಸಾಮಾನ್ಯ ದೂರದರ್ಶಕಗಳಿಗೆ ಕಾಣಿಸುವುದಿಲ್ಲ. ಆದಾಗ್ಯೂ, ಭೂಮಿಯ ಸುತ್ತಲಿನ ಬಾಹ್ಯಾಕಾಶ ಪರಿಸರ ಮತ್ತು ಕ್ಷುದ್ರಗ್ರಹಗಳ ಚಲನವಲನಗಳನ್ನು ಅಭ್ಯಾಸ ಮಾಡಲು ಖಗೋಳಶಾಸ್ತ್ರಜ್ಞರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. 2027 ರ ಆರಂಭಕ್ಕೆ ಈ ಪುಟ್ಟ ಬಾಹ್ಯಾಕಾಶ ಸಂದರ್ಶಕ ಭೂಮಿಯ ಹಿಡಿತದಿಂದ ಕಳಚಿಕೊಂಡು ಸೂರ್ಯನ ವಿಶಾಲ ಕಕ್ಷೆಯಲ್ಲಿ ತನ್ನ ಅನಂತ ಪಯಣವನ್ನು ಮುಂದುವರಿಸಲಿದ್ದಾನೆ.














