Asianet Suvarna News Asianet Suvarna News

Climate Change Karnataka: ರಾಜ್ಯದಲ್ಲಿ ಇನ್ನು 30 ವರ್ಷ ನೆರೆ, ಸೆಖೆಯ ಅಬ್ಬರ: ಕಾದಿದೆ ಅಪಾಯ!

*3 ದಶಕದ ಕಾಲ ರಾಜ್ಯದಲ್ಲಿ ಅನೇಕ ಹವಾಮಾನ ಸ್ಥಿತ್ಯಂತರ:
*ತಜ್ಞರ ಅಧ್ಯಯನದಲ್ಲಿ ಆಪತ್ತಿನ ಮುನ್ಸೂಚನೆ
*ಬೇಸಿಗೆಯಲ್ಲಿ 1.5 ಡಿಗ್ರಿ ಗರಿಷ್ಠ ಉಷ್ಣಾಂಶ ಏರಿಕೆ
*ಚಳಿಗಾಲದಲ್ಲಿ 2 ಡಿಗ್ರಿ ಕನಿಷ್ಠ ಉಷ್ಣಾಂಶ ಹೆಚ್ಚಳ

climate change are exacerbating and can no longer be ignored in Karnataka Report mnj
Author
Bengaluru, First Published Jan 16, 2022, 8:19 AM IST

ಬೆಂಗಳೂರು (ಜ. 16): ರಾಜ್ಯವು ಮುಂದಿನ 30 ವರ್ಷಗಳ ಕಾಲ ಅನೇಕ ಹವಾಮಾನ ಸ್ಥಿತ್ಯಂತರಗಳಿಗೆ ಒಳಗಾಗಲಿದ್ದು, ರಾಜ್ಯದೆಲ್ಲೆಡೆ ಮಳೆ ಹೆಚ್ಚಾಗಿ ಪ್ರವಾಹ (Flood) ಮತ್ತು ಉಷ್ಣತೆ ಹೆಚ್ಚಾಗಿ (Temperature) ವಿಪರೀತ ಸೆಖೆಯ ದಿನಗಳು ಬರಲಿವೆ ಎಂದು ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿಗಳ ಅಧ್ಯಯನ ಕೇಂದ್ರ (center for study of science technology and policy) ನಡೆಸಿದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.’ದಕ್ಷಿಣ ಭಾರತದ ಜಿಲ್ಲೆಗಳಲ್ಲಿನ ಹವಾಮಾನ ಬದಲಾವಣೆ: ಐತಿಹಾಸಿಕ ಹವಾಮಾನ ಮತ್ತು ಭವಿಷ್ಯದ ಬದಲಾವಣೆ’ ಎಂಬ ಬಗ್ಗೆ ವಿದ್ಯಾ ಎಸ್‌. ಮತ್ತು ಇಂದು ಮೂರ್ತಿ ಅವರು ನಡೆಸಿದ ಅಧ್ಯಯನ ವರದಿಯಲ್ಲಿ ರಾಜ್ಯದಲ್ಲಿನ ಹವಾಮಾನ ಬದಲಾವಣೆ ಮತ್ತು ಮುಂದಿನ ದಿನಗಳಲ್ಲಿ ಮತ್ತಷ್ಟುವೈಪರಿತ್ಯಗಳು ಸಂಭವಿಸುವ ಸುಳಿವನ್ನು ನೀಡಿದೆ.

ಬೇಸಿಗೆಗಿಂತ ಚಳಿಗಾಲದಲ್ಲಿ ತಾಪ ಹೆಚ್ಚಳ: 1990ರಿಂದ 2019ರವರೆಗಿನ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು 2020ರಿಂದ 2050ರವರೆಗಿನ ಹವಾಮಾನ ಬದಲಾವಣೆಯ ಏರಿಳಿತಗಳನ್ನು ಅಂದಾಜಿಸಲಾಗಿದೆ. ಕಳೆದ ಇಪ್ಪತ್ತು ವರ್ಷದಲ್ಲಿ ಬೇಸಿಗೆ ಮತ್ತು ಚಳಿಗಾಲದ ಗರಿಷ್ಠ ಉಷ್ಣತೆಯಲ್ಲಿ ಅರ್ಧ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಏರಿಕೆ ದಾಖಲಾಗಿದೆ. ಮುಂದಿನ ಮೂರು ದಶಕದಲ್ಲಿ ಬೇಸಿಗೆಯಲ್ಲಿನ ಗರಿಷ್ಠ ಉಷ್ಣಾಂಶ 0.5 ಡಿಗ್ರಿ ಸೆಲ್ಸಿಯಸ್‌ನಿಂದ 1.5 ಡಿಗ್ರಿ ಸೆಲ್ಸಿಯಸ್‌, ಚಳಿಗಾಲದ ಕನಿಷ್ಠ ಉಷ್ಣಾಂಶ 1 ಡಿಗ್ರಿ ಸೆಲ್ಸಿಯಸ್‌ನಿಂದ 2 ಡಿಗ್ರಿ ಸೆಲ್ಸಿಯಸ್‌ ತನಕ ಹೆಚ್ಚಾಗಲಿದೆ. ಉಷ್ಣ ಮಾರುತಗಳ ಬೀಸುವಿಕೆಯು ಹೆಚ್ಚಾಗಲಿದೆ ಎಚ್ಚರಿಕೆಯನ್ನು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Nature Wonder : ನೋಡು ನೋಡುತ್ತಿದ್ದಂತೆ ಹಿಮವಾಯ್ತು ಹರಿಯುತ್ತಿದ್ದ ಹೊಳೆ... ಇಲ್ಲಿದೆ ವಿಡಿಯೋ

ಬೇಸಿಗೆಗಿಂತಲೂ ಚಳಿಗಾಲದ ದಿನಗಳಲ್ಲಿ ರಾಜ್ಯದ ಕನಿಷ್ಠ ಉಷ್ಣಾಂಶ ಏರಿಕೆ ಕಾಣಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳ ಉಷ್ಣಾಂಶದಲ್ಲಿ ಬದಲಾವಣೆ ಆಗಲಿದೆ. ಅದರಲ್ಲಿಯೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉಷ್ಣಾಂಶ ಜಾಸ್ತಿ ಆಗಲಿದೆ. ತನ್ಮೂಲಕ ಜಗತ್ತಿನಾದ್ಯಂತ ಚರ್ಚೆ ಆಗುತ್ತಿರುವ ಜಾಗತಿಕ ತಾಪಮಾನ ಹೆಚ್ಚಳದ ವಿದ್ಯಮಾನ ರಾಜ್ಯದಲ್ಲಿಯೂ ನಿಜವಾಗಲಿದೆ ಎಂಬ ಮುನ್ಸೂಚನೆಯನ್ನು ಅಧ್ಯಯನ ನೀಡಿದೆ.

ಅಧ್ಯಯನ ಪರಿಗಣಿಸಿ, ಅನಾಹುತ ತಪ್ಪಿಸಿ: ಈ ಅಧ್ಯಯನ ನಡೆಸಿರುವ ಸಂಸ್ಥೆಯ ಹವಾಮಾನ, ಪರಿಸರ ಮತ್ತು ಸುಸ್ಥಿರತೆ ವಿಭಾಗದ ಮುಖ್ಯಸ್ಥೆ ಇಂದು ಕೆ ಮೂರ್ತಿ ಪ್ರಕಾರ, ಈ ಅಧ್ಯಯನದ ಮಾಹಿತಿಯನ್ನು ರಾಜ್ಯ ಹವಾಮಾನ ಬದಲಾವಣೆಯ ಕುರಿತ ಕ್ರಿಯಾ ಯೋಜನೆಯಲ್ಲಿ ಬಳಸಿಕೊಳ್ಳಬೇಕು. ಭವಿಷ್ಯದಲ್ಲಿನ ಹವಾಮಾನದ ಬದಲಾವಣೆಯ ಸಾಧ್ಯಾಸಾಧ್ಯತೆಗಳನ್ನು ಅರಿತುಕೊಳ್ಳಲು ನಮ್ಮ ಅಧ್ಯಯನ ಉಪಯುಕ್ತವಾಗಿದೆ. ಈ ಅಧ್ಯಯನ ಮುಂದಿನ ಹವಾಮಾನ ವೈಪರಿತ್ಯದ ಸಂದರ್ಭದಲ್ಲಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಲು ಅನುಕೂಲಕಾರಿಯಾಗಲಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: Cryogenic Engine Test: ಮಾನವಸಹಿತ ಗಗನಯಾನದ ಎಂಜಿನ್‌ ಪರೀಕ್ಷೆ ಯಶಸ್ವಿ!

ಹೆಚ್ಚುವರಿ 29 ದಿನ ಮಳೆ: ಪಶ್ಚಿಮ ಘಟ್ಟಕ್ಕೆ ಅಪಾಯ: ಭಾರತೀಯ ಹವಾಮಾನ ಸಂಸ್ಥೆಯು ದಿನವೊಂದರಲ್ಲಿ 2.5 ಮಿಮೀಗಿಂತ ಹೆಚ್ಚು ಮಳೆ ಬಂದರೆ ಅದನ್ನು ಮಳೆಯಾದ ದಿನ ಎಂದು ಪರಿಗಣಿಸುತ್ತದೆ. ಅದರಂತೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮಳೆಯಾಗುವ ದಿನಗಳ ಸಂಖ್ಯೆ ಹೆಚ್ಚಾಗಲಿದೆ. ಸದ್ಯ ಇರುವುದಕ್ಕಿಂತ ಒಂದರಿಂದ ಹನ್ನೆರಡು ದಿನ ಅಥವಾ 29 ದಿನ ಹೆಚ್ಚುವರಿಯಾಗಿ ಮಳೆಯ ದಿನಗಳು ಆಗಲಿದೆ. ಮುಂಗಾರು ಮತ್ತು ಹಿಂಗಾರು ಮಳೆ ಎಲ್ಲ ಜಿಲ್ಲೆಗಳಲ್ಲಿಯೂ ಹೆಚ್ಚಾಗಲಿದೆ. ಜೊತೆ ಜೊತೆಗೆ ಭಾರಿ ಮಳೆ ಸುರಿಯುವ ದಿನಗಳ ಸಂಖ್ಯೆಯೂ ಹೆಚ್ಚಾಗಲಿದೆ. ಮಳೆಯ ಕೊರತೆ ವರ್ಷಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಭಾರಿ ಮಟ್ಟದಲ್ಲಿ ಹೆಚ್ಚಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಕಳೆದ ಭಾರಿ ಮಳೆಗೆ ತುತ್ತಾಗಿ ಭೂ ಕುಸಿತದ ಅಪಾಯಕ್ಕೆ ಸಿಳುಕಿರುವ ಊರುಗಳಿಗೆ ಭವಿಷ್ಯದಲ್ಲಿಯೂ ಅಪಾಯದ ಗಂಟೆ ಬಾರಿಸಲಿದೆ.

-ಕನ್ನಡಪ್ರಭ ವಾರ್ತೆ, ರಾಕೇಶ್‌ ಎನ್‌.ಎಸ್‌.

Follow Us:
Download App:
  • android
  • ios