5 ಲಕ್ಷ ಜನಕ್ಕೆ ‘ಚೀನಿ ಆ್ಯಪ್’ 300 ಕೋಟಿ ದೋಖಾ! ಜನರೇ ಹುಷಾರ್
- ಚೀನಿ ಆ್ಯಪ್ ನಿಂದ ಮತ್ತೆ ಮಹಾ ವಂಚನೆ ಬೆಳಕಿಗೆ
- ಭಾರತದ 5 ಲಕ್ಷಕ್ಕೂ ಅಧಿಕ ಮಂದಿಗೆ 300 ಕೋಟಿಗೆ ಹೆಚ್ಚು ವಂಚನೆ
- ಭಾರತೀಯರನ್ನು ವಂಚಿಸುತ್ತಿದ್ದ ಚೀನೀಯರು
ನವದೆಹಲಿ (ಜೂ.11) : ಪಟಾಫಟ್ ಸಾಲ ನೀಡಿ ಅದಕ್ಕೆ ದುಬಾರಿ ಬಡ್ಡಿ ವಿಧಿಸಿ ಭಾರತೀಯರನ್ನು ವಂಚಿಸುತ್ತಿದ್ದ ಚೀನೀಯರು, ಇದೀಗ ಹಣ ದ್ವಿಗುಣದ ಆಮಿಷ ಒಡ್ಡಿ 5 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ 300 ಕೋಟಿ ರು.ಗೂ ಹೆಚ್ಚಿನ ವಂಚನೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ದೆಹಲಿ, ಗುರುಗ್ರಾಮ, ಡೆಹ್ರಾಡೂನ್ ಸೇರಿದಂತೆ ಹಲವು ಕಡೆ ದಾಳಿ ನಡೆಸಿ 12 ಜನರನ್ನು ಬಂಧಿಸಲಾಗಿದೆ.
ಅಲ್ಲದೆ ಪ್ರಕರಣದ ಕುರಿತು ಇನ್ನಷ್ಟುತನಿಖೆ ನಡೆಸುವ ನಿಟ್ಟಿನಲ್ಲಿ ದೆಹಲಿ ಮತ್ತು ಉತ್ತರಾಖಂಡ ಪೊಲೀಸರು ಸಿಬಿಐ, ಇಂಟೆಲಿಜೆನ್ಸ್ ಬ್ಯೂರೋ, ಜಾರಿ ನಿರ್ದೇಶನಾಲಯದ ನೆರವು ಕೋರಿದ್ದಾರೆ. ಹೀಗಾಗಿ ತನಿಖೆ ಇನ್ನಷ್ಟುವಿಸ್ತೃತವಾದರೆ ಇನ್ನಷ್ಟುಜನರಿಗೆ ವಂಚನೆಯಾಗಿರುವ ವಿಷಯ ಬೆಳಕಿಗೆ ಬರುವ ನಿರೀಕ್ಷೆ ಇದೆ.
'ಭಾವನೆಗೆ ಧಕ್ಕೆ ತರಲ್ಲ' ಚೀನಾ ಕಂಪನಿಯ ಪ್ರಾಯೋಜಕತ್ವ ಕೈಬಿಟ್ಟ ಭಾರತ ..
ಏನಿದು ಪ್ರಕರಣ?:
ಚೀನಾ ಮೂಲದ ವ್ಯಕ್ತಿಗಳು ಭಾರತದಲ್ಲಿ ಕಮಿಷನ್ ಆಧಾರದಲ್ಲಿ ಏಜೆಂಟ್‌ಗಳ ನೇಮಕ ಮಾಡಿಕೊಳ್ಳುತ್ತಿದ್ದರು. ಈ ಏಜೆಂಟ್‌ಗಳು ಯೂಟ್ಯೂಬ್, ವಾಟ್ಸಾಪ್, ಟೆಲಿಗ್ರಾಂನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಎಸ್ಸೆಮ್ಮೆಸ್ ಮೂಲಕ ಈ ಆ್ಯಪ್‌ಗಳ ಪ್ರಚಾರ ನಡೆಸುತ್ತಿದ್ದರು. ಠೇವಡಿ ಇರಿಸಲೆಂದೇ ಪವರ್ ಬ್ಯಾಂಕ್, ಈಜಿ ಪ್ಲ್ಯಾನ್, ಸನ್‌ಫ್ಯಾಕ್ಟರಿ ಹೆಸರಲ್ಲಿ ಗೂಗಲ್ ಸ್ಟೋರ್‌ನಲ್ಲಿ ಆ್ಯಪ್ ಬಿಡುಗಡೆ ಮಾಡಲಾಗಿತ್ತು. ಈ ಆ್ಯಪ್‌ನಲ್ಲಿ ಹಣ ಇಟ್ಟರೆ 24-35 ದಿನಗಳಲ್ಲಿ ಹಣ ದ್ವಿಗುಣದ ಆಫರ್ ನೀಡಲಾಗುತ್ತಿತ್ತು.
ಈ ವೇಳೆ ಹಣ ದ್ವಿಗುಣದ ಆಸೆಗೆ ಬಿದ್ದ ಜನರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಹಣ ಠೇವಣಿ ಇಡುತ್ತಿದ್ದರು. ಕನಿಷ್ಠ 300 ರು.ನಿಂದ ಗರಿಷ್ಠ 10 ಲಕ್ಷ ರು.ವರೆಗೆ ಠೇವಣಿ ಇಡುವ ಅವಕಾಶ ಕಲ್ಪಿಸಲಾಗಿತ್ತು. ಇದರಲ್ಲಿ ಗಂಟೆ ಮತ್ತು ದಿನಗಳ ಲೆಕ್ಕದಲ್ಲಿ ಠೇವಣಿ ಇಟ್ಟವರ ಆನ್‌ಲೈನ್ ಖಾತೆಗೆ ಹಣ ಜಮೆ ಆಗುತ್ತಿತ್ತು. ಆರಂಭದಲ್ಲಿ ಜನರ ವಿಶ್ವಾಸಗಳಿಸಲು ಗಂಟೆ ಲೆಕ್ಕದಲ್ಲಿ ಶೇ.5ರಿಂದ ಶೇ.10ರಷ್ಟುಬಡ್ಡಿ ಹಣ ಜಮೆ ಮಾಡಲಾಗುತ್ತಿತ್ತು. ಹೀಗೆ ಹಣ ಪಡೆದವರು ಮಲ್ಟಿಲೆವೆಲ್ ಮಾರ್ಕೆಂಟಿಂಗ್‌ನಲ್ಲಿ ಮಾಡುವಂತೆ ತಮ್ಮ ಪರಿಚಯದವರನ್ನೂ ಠೇವಣಿ ಇಡಲು ಆಹ್ವಾನಿಸುತ್ತಿದ್ದರು. ಹೀಗೆ ಆರಂಭದಲ್ಲಿ ಹಣ ನೀಡಿದ ಬಳಿಕ ಖಾತೆ ಬ್ಲಾಕ್ ಮಾಡಿ ಅವರಿಗೆ ವಂಚನೆ ಮಾಡಲಾಗುತ್ತಿತ್ತು.
'ನಿಮ್ಮರೊಂದಿಗೆ ಮಾತ್ರ ಡೇಟಿಂಗ್ ಮಾಡು' ಭಾರತೀಯನಿಗೆ ಚೀನಿ ಅವಾಜ್! ..
ಈ ಕುರಿತು ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಆಯುಕ್ತ ಎಸ್. ಎಸ್.ಶ್ರೀವಾಸ್ತವ, ‘ವಂಚಕರು ಅಂದಾಜು 5 ಲಕ್ಷ ಗ್ರಾಹಕರಿಂದ 2 ತಿಂಗಳಲ್ಲಿ 250-300 ಕೋಟಿ ರು. ಲೂಟಿ ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ದಿಲ್ಲಿಯ 2 ಲೆಕ್ಕಪರಿಶೋಧಕರು, ಒಬ್ಬ ಟಿಬೆಟನ್ ಮಹಿಳೆ, ಇತರ 9 ಮಂದಿಯನ್ನು ಬಂಧಿಸಲಾಗಿದೆ. ಗ್ರಾಹಕರಿಂದ ದೋಚಿ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದ 11 ಕೋಟಿ ರು.ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಚೀನಾ ವಂಚಕರ ಏಜೆಂಟನಂತೆ ಕೆಲಸ ಮಾಡುತ್ತಿದ್ದ ಗುರುಗ್ರಾಮ ಮೂಲದ ಲೆಕ್ಕಪರಿಶೋಧಕ 110 ನಕಲಿ ಕಂಪನಿಗಳನ್ನು ಸೃಷ್ಟಿಸಿ, ಅದನ್ನು ಪ್ರತಿಯೊಂದಕ್ಕೂ 2-3 ಲಕ್ಷ ರು.ನಂತೆ ಚೀನಿಯರಿಗೆ ಮಾರಿದ್ದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪೈಕಿ ಪವರ್ ಬ್ಯಾಂಕ್ ಕಂಪನಿಯನ್ನು ಬೆಂಗಳೂರು ಮೂಲದ ಸ್ಟಾರ್ಟಪ್ ಎಂದು ಬಿಂಬಿಸಲಾಗಿತ್ತಾದರೂ ಅದರ ಸರ್ವರ್‌ಗಳು ಚೀನಾದಲ್ಲಿದ್ದವು. ಆ್ಯಪ್ ಡೌನ್‌ಲೋಡ್ ಮಾಡಿಕೊಂಡವರ ಮೊಬೈಲ್‌ನ ವಿವರಗಳನ್ನೆಲ್ಲ ಕದಿಯಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.