Asianet Suvarna News Asianet Suvarna News

Chandrayaan-3: ಚಂದ್ರನ ನೆಲದಲ್ಲಿ ಮತ್ತೊಮ್ಮೆ ಹಿರಿಯಣ್ಣ ವಿಕ್ರಮನ ಫೋಟೋ ತೆಗೆದು ಸಂಭ್ರಮಿಸಿದ ಪ್ರಗ್ಯಾನ್‌!


ಭವಿಷ್ಯದ ದಿನಗಳಲ್ಲಿ ದಾಖಲೆಯಾಗಿ, ಮೊಬೈಲ್‌ಗಳ ವಾಲ್‌ಪೇಪರ್‌ ಆಗಿ ಉಳಿದುಕೊಳ್ಳಬಲ್ಲಂಥ ವಿಕ್ರಮ್‌ ಲ್ಯಾಂಡರ್‌ನ ಚಿತ್ರಗಳನ್ನು ಪ್ರಗ್ಯಾನ್‌ ರೋವರ್‌ ಸೆರೆ ಹಿಡಿದಿದೆ. ಇಂದು ಬೆಳಗ್ಗೆ ತೆಗೆದ ಚಿತ್ರವನ್ನು ಇಸ್ರೋ ಹಂಚಿಕೊಂಡಿದೆ.
 

chandrayaan 3 Pragyan Rover captures Vikram Lander in a Snap Isro Shares Images san
Author
First Published Aug 30, 2023, 9:12 PM IST

ಬೆಂಗಳೂರು (ಆ.30): ಚಂದ್ರನ ನೆಲದ ಮೇಲೆ ಹಿರಿಯಣ್ಣ ವಿಕ್ರಮ್‌ ಲ್ಯಾಂಡರ್‌ನ ಚಿತ್ರವನ್ನು ಪ್ರಗ್ಯಾನ್‌ ರೋವರ್ ಮತ್ತೊಮ್ಮೆ ತೆಗೆದಿದೆ. ಮುಂದಿನ ದಿನಗಳಲ್ಲಿ ಭಾರತದ ಭವಿಷ್ಯಕ್ಕೆ ಸ್ಫೂರ್ತಿಯಾಗಿ ನಿಲ್ಲಬಲ್ಲಂಥ ಈ ಚಿತ್ರಗಳನ್ನು ಪ್ರಗ್ಯಾನ್‌ ರೋವರ್‌ ತನ್ನ ನ್ಯಾವಿಗೇಷನ್‌ ಕ್ಯಾಮೆರಾ ಬಳಸಿ ತೆಗೆದಿದೆ. ಅಂದಾಜು 4 ಲಕ್ಷ ಕಿಲೋಮೀಟರ್‌ ದೂರದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಪರಿಶೋಧನೆಗೆ ಇಳಿದಿರುವ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ನ ಆಯಸ್ಸು ಇರುವುದು ಇನ್ನು ಏಳು ದಿನಗಳು ಮಾತ್ರ. ಅಷ್ಟರಲ್ಲಾಗಲೇ ಕೆಲವೊಂದು ವೈಜ್ಞಾನಿಕ ಸಂಶೋಧನೆಗಳನ್ನು ಇವರಿಬ್ಬರೂ ನಡೆಸಿದ್ದಾರೆ. ಇದರ ನಡುವೆ ಬುಧವಾರ ಬೆಳಗ್ಗೆ ಭಾರತೀಯ ಕಾಲಮಾನ 11 ಗಂಟೆ 4 ನಿಮಿಷದ ವೇಳೆ ವಿಕ್ರಮ್‌ ಲ್ಯಾಂಡರ್‌ನಿಂದ 15 ಮೀಟರ್‌ ದೂರದಲ್ಲಿ ನಿಂತು ಪ್ರಗ್ಯಾನ್‌ ರೋವರ್‌ ಚಿತ್ರ ತೆಗೆದಿದೆ. ತನ್ನ ಬಲಿಷ್ಠ ಕಾಲುಗಳನ್ನು ಕೆಲಕ್ಕೆ ಊರಿಕೊಂಡು ಸಾಹಸಮಯವಾಗಿ ನಿಂತಿರುವ ವಿಕ್ರಮ್‌ ಲ್ಯಾಂಡರ್‌ನ ಈ ಚಿತ್ರಗಳು ನಿಮ್ಮ ಮೊಬೈಲ್‌ಗಳ ವಾಲ್‌ಪೇಪರ್‌ಗಳಾದರೂ ಅಚ್ಚರಿಯಿಲ್ಲ. 

'ಎಲ್ಲಾ ಗಡಿಗಳನ್ನು ದಾಟಿಕೊಂಡು, ಇಡೀ ಚಂದ್ರನ ಒಳಗೊಂಡು, ಭಾರತದ ಸಾರ್ವಭೌಮತೆಗೆ ಮಿತಿ ಅನ್ನೋದೇ ಇಲ್ಲ. ಮತ್ತೊಮ್ಮೆ ಸಹ ಪ್ರಯಾಣಿಕ ಪ್ರಗ್ಯಾನ್‌, ವಿಕ್ರಮನ ಚಿತ್ರವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ. ಈ ಐತಿಹಾಸಿಕ ಚಿತ್ರವನ್ನು ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ವಿಕ್ರಮ್‌ ಲ್ಯಾಂಡರ್‌ನಿಂದ 15 ಮೀಟರ್‌ ದೂರದಲ್ಲಿ ನಿಂತು ಪ್ರಗ್ಯಾನ್‌ ತೆಗೆದುಕೊಂಡಿದೆ. ರೋವರ್‌ನಲ್ಲಿದ್ದ ನ್ಯಾವಿಗೇಷನ್‌ ಕ್ಯಾಮೆರಾ ಸೆರೆ ಹಿಡಿದ ಚಿತ್ರಗಳನ್ನು ಅಹಮದಾಬಾದ್‌ನಲ್ಲಿರುವ ಇಸ್ರೋದ ಸ್ಪೇಸ್‌ ಅಪ್ಲಿಕೇಶನ್‌ ಸೆಂಟರ್‌ನಲ್ಲಿ ಪ್ರಕ್ರಿಯೆ ಮಾಡಲಾಗಿದೆ' ಎಂದು ಇಸ್ರೋ ಚಿತ್ರವನ್ನು ಹಂಚಿಕೊಂಡಿದೆ.

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಏನು ಮಾಡುತ್ತಿದೆ? ಫೋಟೋ ಕಳುಹಿಸಿದ ಪ್ರಗ್ಯಾನ್ ರೋವರ್!

ಇದಕ್ಕೂ ಮುನ್ನ ಚಂದ್ರಯಾನ-3 ಯೋಜನೆಯಲ್ಲಿ ಪ್ರಗ್ಯಾನ್‌ ರೋವರ್‌ ತನ್ನ ಕ್ಯಾಮೆರಾದಿಂದ ವಿಕ್ರಮ್‌ ಲ್ಯಾಂಡರ್‌ನ ಚಿತ್ರವನ್ನು ಸೆರೆಹಿಡಿದ ಫೋಟೋವನ್ನು ಇಸ್ರೋ ಬೆಳಗ್ಗೆ ಪ್ರಕಟಿಸಿತ್ತು. ಬುಧವಾರ ಮುಂಜಾನೆ 7.35ರ ವೇಳೆಗೆ ತನ್ನ ನ್ಯಾವಿಗೇಶನ್‌ ಕ್ಯಾಮೆರಾ ಬಳಸಿಕೊಂಡು ತೆಗೆದ ಚಿತ್ರ ಅದಾಗಿತ್ತು. ಅದರಲ್ಲಿ ವಿಕ್ರಮ್‌ನ ಎರಡು ಪೇಲೋಡ್‌ಗಳಾ ಚಾಸ್ಟೆ ಹಾಗೂ ಇಲ್ಸಾ ಚಂದ್ರನ ನೆಲವನ್ನು ಪರಿಶೋಧನೆ ಮಾಡುತ್ತಿರುವ ಚಿತ್ರಗಳೂ ಕಾಣಿಸಿದ್ದವು.

Chandrayaan 3: ಚಂದ್ರನ ದಕ್ಷಿಣ ಧ್ರುವದಲ್ಲಿ ಆಮ್ಲಜನಕ ಸೇರಿದಂತೆ 9 ಧಾತುಗಳನ್ನು ಪತ್ತೆ ಮಾಡಿದ ಇಸ್ರೋ

ಇದಕ್ಕೂ ಮುನ್ನ ಚಂದ್ರಯಾನ-2 ಆರ್ಬಿಟರ್‌ನಿಂದ ವಿಕ್ರಮ್‌ ಲ್ಯಾಂಡರ್‌ ಶಿವಶಕ್ತಿ ಪಾಯಿಂಟ್‌ನಲ್ಲಿ ಇಳಿದ ಚಿತ್ರವನ್ನು ಇಸ್ರೋ ಪ್ರಕಟ ಮಾಡಿತ್ತಾದರೂ, ಬಳಿಕ ಡಿಲೀಟ್‌ ಮಾಡಿತ್ತು. ಅದರಿಂದಾಗಿ ಬುಧವಾರ ಬೆಳಗ್ಗೆ ಹಂಚಿಕೊಂಡಿದ್ದ ಫೋಟೋ, ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ನ ಮೊದಲ ಚಿತ್ರ ಎನಿಸಿತ್ತು. ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್‌ ಲ್ಯಾಂಡ್‌ ಆದ ಬಳಿಕ, ಇಸ್ರೋ ವಿಕ್ರಮ್‌ ಲ್ಯಾಂಡರ್‌ನಿಂದ ಪ್ರಗ್ಯಾನ್‌ ರೋವರ್‌ ಹೊರಬಂದ, ಅದು ಅನ್ವೇಷಣೆ ಮಾಡಿದ ಚಿತ್ರಗಳನ್ನು ಪ್ರಕಟ ಮಾಡಿತ್ತು. ಆದರೆ, ಇದೇ ಮೊದಲ ಬಾರಿಗೆ ವಿಕ್ರಮ್‌ ಲ್ಯಾಂಡರ್‌ ಇಳಿದ ಶಿವಶಕ್ತಿ ಪಾಯಿಂಟ್‌ನಲ್ಲಿ ನಿಂತಿರುವ ತನ್ನ ಗೆಳೆಯನ ಚಿತ್ರವನ್ನು ಪ್ರಗ್ಯಾನ್ ರೋವರ್‌ ಸೆರೆ ಹಿಡಿದಿತ್ತು.

 

 

Follow Us:
Download App:
  • android
  • ios