ನವದೆಹಲಿ (ಸೆ. 20):  ಚಂದ್ರನಿಂದ ಕೆಲವೇ ಸೆಕೆಂಡುಗಳ ಅಂತರದಲ್ಲಿರುವಾಗ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಚಂದ್ರಯಾನ-2 ನೌಕೆಯ ‘ವಿಕ್ರಮ್‌’ ಲ್ಯಾಂಡರ್‌ ಜತೆ ಸಂಪರ್ಕ ಸಾಧಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳಿಗೆ ಶುಕ್ರವಾರ ಕಟ್ಟಕಡೆಯ ಅವಕಾಶ ಉಳಿದಿದೆ.

ಕಳೆದ 14 ದಿನಗಳಿಂದ ಲ್ಯಾಂಡರ್‌ ಜತೆ ಸಂಪರ್ಕ ಸಾಧಿಸಲು ಅಪಾರ ಶ್ರಮ ಹಾಕುತ್ತಿರುವ ವಿಜ್ಞಾನಿಗಳಿಗೆ ಶುಕ್ರವಾರ ಯಶಸ್ಸು ಸಿಗದೇ ಹೋದರೆ, ವಿಕ್ರಮ್‌ ಲ್ಯಾಂಡರ್‌ ಶಾಶ್ವತವಾಗಿ ಸ್ತಬ್ಧವಾಗಲಿದೆ.

ವಿಕ್ರಮ್ ಲ್ಯಾಂಡರ್ ಸಿಗ್ತಿಲ್ಲ: ನಾಸಾ ಪ್ರಯತ್ನ ಬಿಡ್ತಿಲ್ಲ!

ಚಂದ್ರನ 1 ದಿನ ಭೂಮಿಯ 14 ದಿನಗಳಿಗೆ ಸಮ. ಸೆ.6ರ ರಾತ್ರಿ ಚಂದ್ರನಲ್ಲಿ ಬೆಳಗು ಆರಂಭವಾಗಿತ್ತು. ಶುಕ್ರವಾರದಿಂದ ಕತ್ತಲು ಕವಿಯಲಿದೆ. ಇನ್ನು 14 ದಿನಗಳ ಬಳಿಕವಷ್ಟೇ ಅಲ್ಲಿ ಬೆಳಕಾಗಲಿದೆ. ರಾತ್ರಿ ವೇಳೆ ಚಂದ್ರನಲ್ಲಿ ಮೈನಸ್‌ 240 ಡಿಗ್ರಿವರೆಗೂ ಉಷ್ಣಾಂಶವಿರಲಿದೆ. ಇಂತಹ ಪ್ರತಿಕೂಲ ಹವಾಮಾನದಲ್ಲಿ ಲ್ಯಾಂಡರ್‌ ಹಾಗೂ ಅದರ ಒಡಲಲ್ಲಿರುವ ‘ಪ್ರಜ್ಞಾನ್‌’ ರೋವರ್‌ನ ಎಲೆಕ್ಟ್ರಾನಿಕ್‌ ಪರಿಕರಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ತಿಳಿಸಿದ್ದಾರೆ.

ನಾಸಾಗೂ ಲ್ಯಾಂಡರ್‌ ಚಿತ್ರ ಸೆರೆ ಕಷ್ಟ?

ಸೆ.6ರ ತಡರಾತ್ರಿ ಚಂದ್ರನ ಮೇಲ್ಮೈಗೆ ಹತ್ತಿರದಲ್ಲಿರುವಾಗ ಲ್ಯಾಂಡರ್‌ ಸಂಪರ್ಕ ಕಡಿದುಕೊಂಡಿತ್ತು. ಅಂದಿನಿಂದಲೂ ಇಸ್ರೋ ವಿಜ್ಞಾನಿಗಳು ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿ ಅದರ ಜತೆ ಸಂಪರ್ಕ ಸಾಧಿಸಲು ಯತ್ನಿಸುತ್ತಲೇ ಇದ್ದಾರೆ. ಆದರೆ ಸಫಲವಾಗಿಲ್ಲ. ಈ ನಡುವೆ, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಕ್ಯಾಲಿಫೋರ್ನಿಯಾ, ಮ್ಯಾಡ್ರಿಡ್‌ ಹಾಗೂ ಕ್ಯಾನ್‌ಬೆರಾದಲ್ಲಿರುವ ತನ್ನ ಡೀಪ್‌ ಸ್ಪೇಸ್‌ ನೆಟ್‌ವರ್ಕ್ ಬಳಸಿ ಲ್ಯಾಂಡರ್‌ಗೆ ಸಂಕೇತ ರವಾನಿಸಿದೆ. ಆದರೆ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.