ಕುಡಿಯುವ ನೀರಿನಲ್ಲಿ ಸೇರಿರುವ ಅಪಾಯಕಾರಿ ಮೈಕ್ರೋಪ್ಲಾಸ್ಟಿಕ್‌ಗಳನ್ನು ತೆಗೆದುಹಾಕಲು ವಿಜ್ಞಾನಿಗಳು ತಳೀಯವಾಗಿ ಮಾರ್ಪಡಿಸಿದ ಪಾಚಿಯನ್ನು ಬಳಸುವ ಹೊಸ ತಂತ್ರವನ್ನು ಕಂಡುಹಿಡಿದಿದ್ದಾರೆ. ಈ ಹಸಿರು ಪರಿಹಾರವು ನೀರನ್ನು ಹೇಗೆ ಶುದ್ಧೀಕರಿಸುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.
ಶುದ್ಧ ಕುಡಿಯುವ ನೀರಿಗೆ ದಾರಿ ಸಿಕ್ತು!

ಮಿಸೌರಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕುಡಿಯುವ ನೀರಿನಿಂದ ಮೈಕ್ರೋಪ್ಲಾಸ್ಟಿಕ್‌ಗಳನ್ನು ತೆಗೆದುಹಾಕಲು ಒಂದು ಹೊಸ ತಂತ್ರವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇದಕ್ಕಾಗಿ ಅವರು ತಳೀಯವಾಗಿ ಮಾರ್ಪಡಿಸಿದ ಪಾಚಿಯನ್ನು ಬಳಸುತ್ತಿದ್ದಾರೆ. ಈ ಯೋಜನೆಯ ನೇತೃತ್ವವನ್ನು ಅಲ್ಲಿನ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಪ್ರೊಫೆಸರ್ ಸೂಸಿ ಡೈ ವಹಿಸಿದ್ದಾರೆ. ಈ ಸಂಶೋಧನೆಯ ವಿವರಗಳು 'ನೇಚರ್ ಕಮ್ಯುನಿಕೇಷನ್ಸ್' (Nature Communications) ಜರ್ನಲ್‌ನಲ್ಲಿ ಪ್ರಕಟವಾಗಿವೆ. "Remediation and upcycling of microplastics by algae" ಎಂಬುದು ಈ ಅಧ್ಯಯನದ ಶೀರ್ಷಿಕೆಯಾಗಿದೆ.
ಪ್ಲಾಸ್ಟಿಕ್ ಸಮಸ್ಯೆ
ಮೈಕ್ರೋಪ್ಲಾಸ್ಟಿಕ್‌ಗಳು ಅಂದರೆ ಪ್ಲಾಸ್ಟಿಕ್‌ನ ಅತಿ ಸಣ್ಣ ಕಣಗಳು. ಇವು ಈಗ ನಮ್ಮ ಪರಿಸರದಲ್ಲಿ ಎಲ್ಲೆಡೆ ವ್ಯಾಪಿಸಿವೆ. ನದಿ, ಕೆರೆ, ಕೊಳ, ತ್ಯಾಜ್ಯ ನೀರು, ಅಷ್ಟೇ ಏಕೆ, ನಾವು ತಿನ್ನುವ ಮೀನುಗಳಲ್ಲಿಯೂ ಇವು ಕಂಡುಬರುತ್ತವೆ. ಪ್ರೊಫೆಸರ್ ಡೈ ಅವರ ಪ್ರಕಾರ, ಹೆಚ್ಚಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ದೊಡ್ಡ ಪ್ಲಾಸ್ಟಿಕ್ ತುಂಡುಗಳನ್ನು ಮಾತ್ರ ಫಿಲ್ಟರ್ ಮಾಡಲು ಶಕ್ತವಾಗಿವೆ. ಆದರೆ ಈ ಸಣ್ಣ ಕಣಗಳು ಫಿಲ್ಟರ್‌ಗಳಿಂದ ಪಾರಾಗಿ ಕುಡಿಯುವ ನೀರು ಮತ್ತು ನೈಸರ್ಗಿಕ ಪರಿಸರವನ್ನು ಸೇರಿ ಮಾಲಿನ್ಯ ಉಂಟುಮಾಡುತ್ತಿವೆ.
ಪಾಚಿಯಿಂದ ಪರಿಹಾರ
ತಮ್ಮ ಅಧ್ಯಯನದಲ್ಲಿ, ಡೈ ಮತ್ತು ಅವರ ತಂಡವು ಒಂದು ವಿಶೇಷ ರೀತಿಯ ಪಾಚಿಯನ್ನು ಸೃಷ್ಟಿಸಿದ್ದಾರೆ. ಕಿತ್ತಳೆ ಹಣ್ಣಿನ ವಾಸನೆಗೆ ಕಾರಣವಾದ 'ಲಿಮೋನೀನ್' ಎಂಬ ನೈಸರ್ಗಿಕ ಎಣ್ಣೆಯನ್ನು ಉತ್ಪಾದಿಸುವಂತೆ ಈ ಪಾಚಿಯನ್ನು ತಳೀಯವಾಗಿ ಬದಲಾಯಿಸಲಾಗಿದೆ. ಈ ಲಿಮೋನೀನ್, ಪಾಚಿಯ ಮೇಲ್ಮೈಯನ್ನು ನೀರು ಹಿಡಿಯದಂತೆ (ವಾಟರ್-ರಿಪೆಲ್ಲೆಂಟ್) ಮಾಡುತ್ತದೆ.
ಮೈಕ್ರೋಪ್ಲಾಸ್ಟಿಕ್‌ಗಳಿಗೂ ನೀರು ಅಂಟಿಕೊಳ್ಳುವುದಿಲ್ಲ. ಹೀಗಾಗಿ, ಮೈಕ್ರೋಪ್ಲಾಸ್ಟಿಕ್ ಇರುವ ನೀರಿಗೆ ಈ ಪಾಚಿಯನ್ನು ಬೆರೆಸಿದಾಗ, ಪ್ಲಾಸ್ಟಿಕ್ ಕಣಗಳು ಸಹಜವಾಗಿಯೇ ಪಾಚಿಗೆ ಅಂಟಿಕೊಳ್ಳುತ್ತವೆ. ಹೀಗೆ ಅಂಟಿಕೊಂಡ ಪಾಚಿ ಮತ್ತು ಪ್ಲಾಸ್ಟಿಕ್, ಭಾರವಾದ ಗಡ್ಡೆಗಳಾಗಿ ನೀರಿನ ತಳದಲ್ಲಿ ಶೇಖರವಾಗುತ್ತವೆ. ಈ ಜೈವಿಕ ರಾಶಿಯನ್ನು ನಂತರ ಸುಲಭವಾಗಿ ನೀರಿನಿಂದ ತೆಗೆದುಹಾಕಬಹುದು.
ಈ ತಳೀಯವಾಗಿ ಮಾರ್ಪಡಿಸಿದ ಪಾಚಿ ತ್ಯಾಜ್ಯ ನೀರಿನಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಅಲ್ಲಿರುವ ಹೆಚ್ಚುವರಿ ಪೋಷಕಾಂಶಗಳನ್ನು ಹೀರಿಕೊಂಡು ನೀರನ್ನು ಇನ್ನಷ್ಟು ಶುದ್ಧಗೊಳಿಸಲು ಸಹಾಯ ಮಾಡುತ್ತದೆ. ಅಂದರೆ, ಒಂದೇ ಪ್ರಕ್ರಿಯೆಯಲ್ಲಿ ಹಲವು ಪರಿಸರ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಸಂಶೋಧಕರು ಭಾವಿಸಿದ್ದಾರೆ.
ಮುಂದಿನ ಯೋಜನೆಗಳು
ನೀರಿನಿಂದ ಮೈಕ್ರೋಪ್ಲಾಸ್ಟಿಕ್‌ಗಳನ್ನು ತೆಗೆಯುವುದು ಮಾತ್ರವಲ್ಲ, ಹಾಗೆ ಸಂಗ್ರಹಿಸಿದ ಪ್ಲಾಸ್ಟಿಕ್ ಅನ್ನು ಸುರಕ್ಷಿತ ಜೈವಿಕ ಪ್ಲಾಸ್ಟಿಕ್ ವಸ್ತುಗಳಾಗಿ (ಉದಾಹರಣೆಗೆ, ಕಾಂಪೋಸಿಟ್ ಪ್ಲಾಸ್ಟಿಕ್ ಫಿಲ್ಮ್‌ಗಳು) ಮರುಬಳಕೆ ಮಾಡುವುದು ನಮ್ಮ ದೀರ್ಘಕಾಲೀನ ಗುರಿ ಎಂದು ಡೈ ವಿವರಿಸಿದ್ದಾರೆ. ಅಸ್ತಿತ್ವದಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿ, ನೀರು ಶುದ್ಧೀಕರಣ ವ್ಯವಸ್ಥೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ತಂಡವು ಆಶಯ ಹೊಂದಿದೆ.
ಈಗಾಗಲೇ, ಪ್ರಯೋಗಾಲಯದಲ್ಲಿ ಪಾಚಿ ಬೆಳೆಸಲು ದೊಡ್ಡ ಬಯೋರಿಯಾಕ್ಟರ್‌ಗಳನ್ನು ಬಳಸಲಾಗುತ್ತಿದೆ. 'ಶ್ರೇಕ್' (Shrek) ಎಂದು ಅಡ್ಡಹೆಸರಿಟ್ಟಿರುವ 100-ಲೀಟರ್ ಸಾಮರ್ಥ್ಯದ ಒಂದು ಸಿಸ್ಟಮ್, ಮಾಲಿನ್ಯ ತಗ್ಗಿಸುವ ಉಪಕ್ರಮಗಳ ಭಾಗವಾಗಿ ಕೈಗಾರಿಕಾ ಹೊಗೆ ಅನಿಲವನ್ನು ಸಂಸ್ಕರಿಸಲು ಬಳಕೆಯಾಗುತ್ತಿದೆ. ಈಗ ಇದಕ್ಕಿಂತಲೂ ದೊಡ್ಡ ರಿಯಾಕ್ಟರ್‌ಗಳನ್ನು ಅಭಿವೃದ್ಧಿಪಡಿಸಿ, ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಇತರ ಹಾನಿಕಾರಕ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ಬಳಸುವ ಯೋಜನೆ ಸಂಶೋಧಕರ ಮುಂದಿದೆ.


