‘ಲಂಕೆ’ಯಲ್ಲಿ ರಾಮ, ರಾವಣ ಎರಡೂ ಆಗಲಿದ್ದಾರೆ ಲೂಸ್ ಮಾದ ಯೋಗಿ!
ರಾಮನ ತೇಜಸ್ಸು, ರಾವಣನ ವರ್ಚಸ್ಸು ಎಂಬ ಟ್ಯಾಗ್ ಲೈನ್ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ ‘ಲಂಕೆ’. ಲೂಸ್ ಮಾದ ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಸದ್ಯದಲ್ಲೇ ಸಿನಿರಸಿಕರನ್ನು ರಂಜಿಸಲು ಚಿತ್ರಮಂದಿರದ ಅಂಗಳಕ್ಕೆ ಕಾಲಿಡುತ್ತಿದೆ. ಚಿತ್ರತಂಡ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು ಟೀಸರ್ ಹಾಗೂ ಹಾಡುಗಳು ಹಿಟ್ ಲಿಸ್ಟ್ ಸೇರಿವೆ.
2019ರಲ್ಲಿ ಸೆಟ್ಟೇರಿದ್ದ ಈ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಕೊರೋನಾ ಕಾರಣದಿಂದ ತಡೆಯಾಗಿ ಈಗ ಬಿಡುಗಡೆಗೆ ರೆಡಿಯಾಗಿದೆ. ಸೆಪ್ಟೆಂಬರ್ 10ರಂದು ಲಂಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಾಮ್ ಪ್ರಸಾದ್ ಚಿತ್ರದ ಸೂತ್ರಧಾರಿ. ಕಥೆ, ಚಿತ್ರಕಥೆ, ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಬಣ್ಣ ಬಣ್ಣದ ಲೋಕ ಸಿನಿಮಾ ನಂತರ ಇವರ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಎರಡನೇ ಸಿನಿಮಾ ಇದಾಗಿದೆ. ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಚಿತ್ರದಲ್ಲಿದ್ದು ಪಕ್ಕಾ ಕಮರ್ಶಿಯಲ್ ಸಿನಿಮಾ ‘ಲಂಕೆ’.
ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಹೆಣೆದಿರುವ ನಿರ್ದೇಶಕರು ಈ ಚಿತ್ರ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದೆ ಎಂಬ ಭರವಸೆ ನೀಡಿದ್ದಾರೆ. ಯೋಗಿ ಪಾತ್ರ ವಿಭಿನ್ನವಾಗಿ ಮೂಡಿ ಬಂದಿದ್ದು ಡಿಫ್ರೆಂಟ್ ಮ್ಯಾನರಿಸಂ ಹಾಗೂ ಲುಕ್ ನಿಂದ ಯೋಗಿ ಲಂಕೆಯಲ್ಲಿ ಎಲ್ಲರ ಗಮನ ಸೆಳೆಯಲಿದ್ದಾರೆ ಎನ್ನುತ್ತಾರೆ ನಿರ್ದೇಶಕ ರಾಮ್ ಪ್ರಸಾದ್.
ಲೂಸ್ ಮಾದ ಸಿನಿಮಾ ಲಂಕೆ ಆಡಿಯೋ ಬಂತುಲಂಕೆಯಲ್ಲಿ ಡೊಡ್ಡ ತಾರಾಬಳಗವಿದ್ದು, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಶೋಭ್ ರಾಜ್,ಡ್ಯಾನಿ ಕುಟ್ಟಪ್ಪ, ವಾಣಿಶ್ರೀ ಹಾಗೂ ಇನ್ನಿತರ ಸ್ಟಾರ್ ಕಲಾವಿದರ ದಂಡು ಚಿತ್ರದಲ್ಲಿದೆ. ಯುವ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ, ರಮೇಶ್ ಬಾಬು ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ದಿ ಗ್ರೇಟ್ ಎಂಟಟೈನರ್ಸ್ ಬ್ಯಾನರ್ ನಡಿ ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ತುಣುಕುಗಳ ಮೂಲಕ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ ‘ಲಂಕೆ’ ಚಿತ್ರ ಸೆಪ್ಟೆಂಬರ್ 10ರಂದು ಮನರಂಜನೆ ನೀಡಲು ಥಿಯೇಟರ್ ಅಂಗಳಕ್ಕೆ ಬರುತ್ತಿದೆ.