ಭಾರತದ ಜತೆಗೆ ಬೇರೆ ಬೇರೆ ದೇಶಗಳಲ್ಲೂ ಏಕಕಾಲಕ್ಕೆ ಈ ಚಿತ್ರವನ್ನು ತೆರೆಗೆ ತರುವ ಪ್ಲಾನ್‌ ಮಾಡಿದ್ದಾರೆ ಚಿತ್ರದ ನಿರ್ಮಾಪಕ ವಿಜಯ್‌ ಕಿರಗಂದೂರು. ಸದ್ಯ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಶೂಟಿಂಗ್‌ ಮುಗಿಸಿರುವ ಕನ್ನಡದ ಬಿಗ್‌ ಬಜೆಟ್‌ ಸಿನಿಮಾಗಳು ಬಂದು ಹೋದ ನಂತರ ಜುಲೈ 16ರಂದು ‘ಕೆಜಿಎಫ್‌ 2’ ಚಿತ್ರದ ಬಿಡುಗಡೆಗೆ ಮುಹೂರ್ತ ಪಕ್ಕಾ ಮಾಡಿಕೊಂಡಿದ್ದಾರೆ.

ಕನ್ನಡ ಸೇರಿದಂತೆ ಬೇರೆ ಯಾವುದೇ ಭಾಷೆಯ ಸಿನಿಮಾಗಳು ಬಿಡುಗಡೆಯಾಗದ ಸಮಯ ನೋಡಿಕೊಂಡೇ ರಾಕಿಭಾಯ್‌ ಸಿನಿಮಾ ಥಿಯೇಟರ್‌ಗಳನ್ನು ಪ್ರವೇಶಿಸುತ್ತಿದೆ. ಮೇ 13ಕ್ಕೆ ಚಿರಂಜೀವಿ ನಟನೆಯ ‘ಆಚಾರ್ಯ’, ಅಕ್ಟೋಬರ್‌ಗೆ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’, ನವೆಂಬರ್‌ಗೆ ರಜನಿಕಾಂತ್‌ ‘ಅಣ್ಣಾಥೆ’ ಹಾಗೂ ಆಗಸ್ಟ್‌ ತಿಂಗಳಲ್ಲಿ ಅಜಿತ್‌ ಸಿನಿಮಾ ಬಂದು ಹೋಗಲಿದೆ. ಅಲ್ಲಿಗೆ ದಕ್ಷಿಣ ಭಾರತದ ಯಾವ ಬಿಗ್‌ ಬಜೆಟ್‌ ಸಿನಿಮಾಗಳು ಕೂಡ ಜುಲೈನಲ್ಲಿ ಬಿಡುಗಡೆಯ ಸಾಲಿನಲ್ಲಿ ನಿಂತಿಲ್ಲ.

ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕ ಅಧಿಕೃತ.. ಯಾವಾಗಿನಿಂದ ಅಬ್ಬರ? 

ಕನ್ನಡದ ಜತೆಗೆ ಬೇರೆ ಬೇರೆ ಭಾಷೆಯ ಚಿತ್ರಗಳ ಬಿಡುಗಡೆಯ ಪ್ಲಾನ್‌ಗಳನ್ನು ನೋಡಿಕೊಂಡೇ ‘ಕೆಜಿಎಫ್‌ 2’ ತೆರೆಗೆ ಬರಲು ತಯಾರಿ ಮಾಡಿಕೊಳ್ಳುತ್ತಿದೆ. ಪ್ರಕಾಶ್‌ ರೈ, ಸಂಜಯ್‌ ದತ್‌, ರವೀನಾ ಟಂಡನ್‌, ಶ್ರೀನಿಧಿ ಶೆಟ್ಟಿ, ವಸಿಷ್ಠ ಸಿಂಹ, ರಾವ್‌ ರಮೇಶ್‌ ಸೇರಿದಂತೆ ದೊಡ್ಡ ತಾರಾಗಣ ಇರುವ ಸಿನಿಮಾ ಇದಾಗಿದೆ.