ಒಂದು ಅಕ್ಕಿ ಕಾಳಿನಲ್ಲಿ ಹೊಂಬಾಳೆ ಹಾಗೂ ಕೆಜಿಎಫ್‌ ಸಿನಿಮಾದ ಹೆಸರು ಬರೆದ ಚಿಕ್ಕಮಗಳೂರು ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿ ವೈವಸ್ವತ್‌ ಟಂಡೂಲ ಅವರಿಗೆ ಕೆಜಿಎಫ್‌ 2 ಚಿತ್ರದ ಫಸ್ಟ್‌ ಡೇ ಫಸ್ಟ್‌ ಶೋ ಟಿಕೆಟ್‌ ಸಿಗಲಿದೆ. ಈ ವಿಷಯವನ್ನು ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ವೈವಸ್ವತ್‌ ಪ್ರತ್ಯೇಕ ಅಕ್ಕಿ ಕಾಳಿನಲ್ಲಿ ಹೊಂಬಾಳೆ ಮತ್ತು ಕೆಜಿಎಫ್‌ ಹೆಸರನ್ನು ಬರೆದು ಹೊಂಬಾಳೆ ಫಿಲಂಸ್‌ಗೆ ಕಳುಹಿಸಿದ್ದರು. ಜೊತೆಗೆ ಒಂದು ಪತ್ರವನ್ನೂ ಲಗತ್ತಿಸಿದ್ದರು. ‘ನಾನು ಹೊಂಬಾಳೆ ಸಂಸ್ಥೆಯ ಸಿನಿಮಾಗಳ ಅಭಿಮಾನಿ. ಕೆಜಿಎಫ್‌ 1 ಬಹುವಾಗಿ ಆಕರ್ಷಿಸಿತ್ತು. ನಿಮ್ಮೆಲ್ಲ ಸಿನಿಮಾಗಳೂ ಯಶಸ್ವಿಯಾಗಲಿ. ಕೆಜಿಎಫ್‌ 2 ಹೊಸ ದಾಖಲೆ ಬರೆಯಲಿ. ಈ ಚಿತ್ರದ ಪ್ರೀಮಿಯರ್‌ ಶೋ ನೋಡಬೇಕು ಅನ್ನೋದು ನನ್ನಾಸೆ’ ಎಂದು ಬರೆದಿದ್ದರು.

ಈ ವಿಚಾರವನ್ನು ಹೊಂಬಾಳೆ ಸಂಸ್ಥೆ ಟ್ವೀಟ್‌ ಮಾಡಿ, ಯುವ ಪ್ರತಿಭೆಯ ಅಭಿಮಾನವನ್ನು ಶ್ಲಾಘಿಸಿದೆ. ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಕೂಡ ಯುವ ಪ್ರತಿಭೆಗೆ ಶಹಭಾಸ್‌ ಹೇಳಿದ್ದಾರೆ. ಜೊತೆಗೆ ಕೆಜಿಎಫ್‌ ಸಿನಿಮಾದ ಮೊದಲ ದಿನದ ಮೊದಲ ಶೋನಲ್ಲಿ ತಂಡದ ಜೊತೆಗೆ ಸಿನಿಮಾ ನೋಡುವ ಅವಕಾಶ ನೀಡುವ ಭರವಸೆ ನೀಡಿದ್ದಾರೆ.

ಯಾರು ಈ ವೈವಸ್ವತ್‌?

5ನೇ ವಯಸ್ಸಿನಿಂದಲೇ ಅಕ್ಕಿ ಕಾಳಿನ ಮೇಲೆ ಅಕ್ಷರ ಬರೆಯುವ ಹವ್ಯಾಸ ರೂಢಿಸಿಕೊಂಡ ಪ್ರತಿಭೆ. ಊರು ಚಿಕ್ಕಮಗಳೂರು. ಈಗ ಪಿಯುಸಿ ವಿದ್ಯಾರ್ಥಿ. 2017ರಲ್ಲಿ ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದು ಅಕ್ಕಿ ಕಾಳಿನ ಮೇಲೆ 27 ಸಲ ಇಂಡಿಯಾ ಎಂದು ಬರೆದು ದಾಖಲೆ ಮಾಡಿದ್ದ. ಕೇವಲ 3 ನಿಮಿಷ 2 ಸೆಕೆಂಡ್‌ಗಳಲ್ಲಿ ಒಂದು ಅಕ್ಕಿ ಕಾಳಿನ ಮೇಲೆ 135 ಅಕ್ಷರ ಬರೆದ ಈತನ ಸಾಧನೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಸೇರಿತ್ತು.

ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಭೇಟಿ ನೀಡಿದಾಗ ಅಹಮದಾಬಾದ್‌ನ ವೆಂಕಟೇಶ್‌ ಎಂಬವರು ಟ್ರಂಪ್‌ ಹಾಗೂ ಮೋದಿಯ ಚಿತ್ರವನ್ನು ಅಕ್ಕಿ ಕಾಳಿನಲ್ಲಿ ಚಿತ್ರಿಸಿ ಗಿಫ್ಟ್‌ ನೀಡಿದ್ದರು. ಅವರು ತಾನು ಅಕ್ಕಿ ಕಾಳಿನಲ್ಲಿ ಬರೆಯುವ ಕಲೆಯನ್ನು ವೈವಸ್ವತ್‌ನಿಂದ ಕಲಿತಿರುವುದಾಗಿ ಹೇಳಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಹಿಂದೆ ವೈವಸ್ವತ್‌ ಪ್ರತಿಭೆಗೆ ರೇಮಂಡ್‌, ಪ್ಯಾರಗಾನ್‌ ಮೊದಲಾದ ಕಂಪೆನಿಗಳು ಶಹಭಾಸ್‌ಗಿರಿ ನೀಡಿದ್ದವು.

Scroll to load tweet…