ಗಳಿಕೆ, ಮನ್ನಣೆ ಮತ್ತು ಜನಪ್ರಿಯತೆಯಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತೀಯ ಚಿತ್ರರಂಗ, ಹಿಂದಿ ಚಿತ್ರರಂಗವನ್ನು ಬದಿಗೆ ಸರಿಸಿದೆ. ದಕ್ಷಿಣ ಭಾರತೀಯ ಚಿತ್ರಗಳೇ ಭಾರತೀಯ ಚಿತ್ರರಂಗವನ್ನು ಆಳುತ್ತಿವೆ. ಭಾಷೆಯ ಗಡಿಯನ್ನು ಮೀರಿ ಇಂಡಿಯನ್‌ ಸಿನಿಮಾಗಳೆಂದೇ ಕರೆಸಿಕೊಳ್ಳುತ್ತಿರುವ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳ ಬಿಡುಗಡೆಯ ಸಂಭ್ರಮ ಹಿಂದಿ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ.

ಮೊನ್ನೆ ಮೊನ್ನೆ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಒಂಬೈನೂರು ಕೋಟಿ ಗಳಿಸಿದ ಸುದ್ದಿ ಬಂತು. ನಾನ್ನೂರು ಕೋಟಿ ಬಂಡವಾಳ ಹೂಡಿದ ಸಿನಿಮಾ ಅದು. ಸಿನಿಮಾ ನೋಡಿದವರು ಚೆನ್ನಾಗಿದೆ ಅಂತ ಸಂತೋಷಪಟ್ಟರು. ಕೆಲವರು ಕಥೆಯೇ ಇಲ್ಲದ ಸಿನಿಮಾ ಅಂತ ಬೇಸರಿಸಿದರು. ಎಲ್ಲ ಮೆಚ್ಚುಗೆ ಮತ್ತು ಟೀಕೆಗಳನ್ನು ಮೀರಿ, ಅದು ಗೆಲುವಿನ ಹಾದಿ ಕಂಡಿತು.

ಅದಕ್ಕೂ ಮುಂಚೆ ಬಂದ ಜೇಮ್ಸ್‌ ಕೂಡ ಗೆಲುವು ಕಂಡಿತು. ಪುನೀತ್‌ ಕೊನೆಯ ಚಿತ್ರ ಎಂಬ ಭಾವನಾತ್ಮಕ ಸಂಗತಿ ಅದರ ಗೆಲುವಿಗೆ ಕಾರಣವಾಯಿತಾದರೂ, ನಿರ್ಮಾಪಕರು ಮಾತ್ರ ಬಿಸಿನೆಸ್ಸಿಗಿಂತ ಭಾವನೆ ದೊಡ್ಡದು ಅಂತ ಸಿನಿಮಾದ ಪೋಸ್ಟರಿನಲ್ಲೇ ಘೋಷಿಸಿಕೊಂಡಿದ್ದರು. ಜೇಮ್ಸ್‌ ಕೂಡ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆಯಿತು. ಅದಕ್ಕೂ ಮುಂಚೆ ತೆರೆಕಂಡಿದ್ದ ಪುಷ್ಪಾ ಕೂಡ ಭಾರತಾದ್ಯಂತ ಯಶಸ್ವೀ ಪ್ರದರ್ಶನ ಕಂಡಿತು. ಕರ್ನಾಟಕದಲ್ಲೂ ಸಾಧಾರಣ ಕನ್ನಡ ಸಿನಿಮಾಗಳು ಗಳಿಸುವುದಕ್ಕಿಂತ ಹೆಚ್ಚಿನ ಗಳಿಕೆ ಕಂಡಿತು.

ಇದೀಗ ಕೆಜಿಎಫ್‌ 2 ಮತ್ತು ಬೀಸ್ಟ್‌ ಚಿತ್ರಗಳು ಮುಂದಿನ ಶುಕ್ರವಾರ ತೆರೆಕಾಣುತ್ತಿವೆ. ಕೆಜಿಎಫ್‌ 2 ಚಿತ್ರಕ್ಕಿರುವ ನಿರೀಕ್ಷೆಯನ್ನು ನೋಡಿದರೆ ಅದು ಜಗತ್ತಿನಾದ್ಯಂತ ಹೊಸ ದಾಖಲೆಯನ್ನೇ ಬರೆಯುವಂತೆ ಕಾಣಿಸುತ್ತಿದೆ. ಈಗಾಗಲೇ ಯುನೈಟೆಡ್‌ ಕಿಂಗ್‌ಡಮ್‌, ಜರ್ಮನಿ ಮುಂತಾದ ರಾಷ್ಟ್ರಗಳಲ್ಲಿ ಮುಂಗಡ ಟಿಕೆಟ್ಟುಗಳ ಮಾರಾಟ ಆರಂಭವಾಗಿದೆ. ಬೀಸ್ಟ್‌ ಚಿತ್ರ ಕೂಡ ಹೊಸ ದಾಖಲೆ ಬರೆಯಲಿದೆ ಅನ್ನುವುದನ್ನು ಜನಪ್ರಿಯವಾಗಿರುವ ಆ ಚಿತ್ರದ ಹಾಡೇ ಹೇಳುತ್ತಿದೆ. ವಿಕ್ರಾಂತ್‌ ರೋಣ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದು ಕೊರೋನಾ ನಂತರದ, ಕಳೆದ ಐದಾರು ತಿಂಗಳ ಕತೆ. ಈ ಆರು ತಿಂಗಳಲ್ಲಿ ಸದ್ದು ಮಾಡಿದ ಏಕೈಕ ಹಿಂದಿ ಸಿನಿಮಾ ದಿ ಕಾಶ್ಮೀರ್‌ ಫೈಲ್ಸ್‌. ಅದನ್ನು ಹೊರತುಪ‚ಡಿಸಿದರೆ ಮತ್ಯಾವುದೇ ಹಿಂದಿ ಸಿನಿಮಾ ರಾಷ್ಟ್ರಮಟ್ಟದಲ್ಲಿ ಗೆಲುವು ಕಾಣಲಿಲ್ಲ. ಸದ್ದೂ ಮಾಡಲಿಲ್ಲ. ಬಹುನಿರೀಕ್ಷಿತ ಎಂದು ಭಾವಿಸಿದ್ದ 83 ಮನಸ್ಸು ಗೆಲ್ಲಲಿಲ್ಲ. ರಾಧೇ ಶ್ಯಾಮ್‌, ಗಂಗೂಬಾಯಿ ಕಥಿಯಾವಾಡಿ ಕೂಡ ಅಷ್ಟಾಗಿ ಗಮನ ಸೆಳೆಯಲಿಲ್ಲ. ದಕ್ಷಿಣದ ಚಿತ್ರಗಳ ಮುಂದೆ ಹಿಂದಿ ಸಪ್ಪಗಾಯಿತು.

ಹೇಗಾಯಿತು ಈ ಬದಲಾವಣೆ

ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್‌ ಎಂದೇ ನಂಬಲಾಗುತ್ತಿತ್ತು. ಹಾಗೆಂದು ನಂಬಿಸಲಾಗುತ್ತಿತ್ತು. ಪ್ರಾದೇಶಿಕ ಚಿತ್ರಗಳು ಆಯಾ ರಾಜ್ಯದ ಗಡಿ ದಾಟದಂತೆ ನೋಡಿಕೊಳ್ಳಲಾಗುತ್ತಿತ್ತು ಅಥವಾ ಗಡಿ ದಾಟಲಿಕ್ಕೆ ಬೇಕಾದ ಸೀಮೋಲ್ಲಂಘನೆಯ ಮಾರ್ಗಗಳು ಗೊತ್ತಿರಲಿಲ್ಲ. ಒಂದು ವೇಳೆ ಪ್ರಾದೇಶಿಕ ಚಿತ್ರವೊಂದು ಯಶಸ್ಸು ಕಂಡರೆ, ಅದನ್ನು ಬಾಲಿವುಡ್‌ ನಿರ್ದೇಶಕರು ಹಿಂದಿಗೆ ರೀಮೇಕ್‌ ಮಾಡುತ್ತಿದ್ದರು. ಪ್ರಾದೇಶಿಕ ಚಿತ್ರಗಳ ಸೂಪರ್‌ಹಿಟ್‌ ನಟರನ್ನು ದೇಶ ಗುರುತಿಸುತ್ತಿರಲಿಲ್ಲ. ಆದರೆ ಬಾಲಿವುಡ್‌ ನಟರು ದೇಶಾದ್ಯಂತ, ರಾಷ್ಟಾ್ರದ್ಯಂತ ಮನ್ನಣೆಗೆ ಪಾತ್ರರಾಗುತ್ತಿದ್ದರು. ಈ ಗಡಿಯನ್ನು ದಾಟುವುದಕ್ಕೆ ಅನೇಕ ಚಿತ್ರಗಳು ಯತ್ನಿಸಿ ಸೋತಿದ್ದವು. ಪರರಾಜ್ಯಗಳಲ್ಲಿ ಕೆಲವೊಂದು ಚಿತ್ರಗಳು ಪ್ರದರ್ಶನ ಕಾಣುತ್ತಿದ್ದುವಾದರೂ ಅವುಗಳಿಗೆ ಆಯಾ ಭಾಷೆಯ ಪ್ರೇಕ್ಷಕರಷ್ಟೇ ಬರುತ್ತಿದ್ದರು. ಹಾಲಿವುಡ್‌ ಸ್ಟಾರ್‌ಗಳಿಗೆ ಭಾರತಾದ್ಯಂತ ಇದ್ದ ಜನಪ್ರಿಯತೆ ಕೂಡ ಪ್ರಾದೇಶಿಕ ಚಿತ್ರನಟರಿಗೆ ಸಿಗುತ್ತಿರಲಿಲ್ಲ.

ಹಾಗಂತ ಬಾಲಿವುಡ್‌ ನಿರ್ದೇಶಕರನ್ನು ಮೀರಿಸುವಂಥ ಪ್ರತಿಭೆಗಳು ಪ್ರಾದೇಶಕ ಭಾಷೆಗಳಲ್ಲಿ ಇರಲಿಲ್ಲ ಎಂದೇನಲ್ಲ. ಕನ್ನಡ ಕೆವಿ ರಾಜು, ರಾಜೇಂದ್ರ ಸಿಂಗ್‌ ಬಾಬು, ಪುಟ್ಟಣ್ಣ ಕಣಗಾಲ್‌, ಕಾಶೀನಾಥ್‌ ಮುಂತಾದವರು ಹಿಂದಿ ಚಿತ್ರ ನಿರ್ದೇಶಿಸಿದ ಉದಾಹರಣೆಗಳಿವೆ. ತೆಲುಗಿನ ಅನೇಕ ನಿರ್ದೇಶಕರು ಹಿಂದಿ ಸಿನಿಮಾ ನಿರ್ದೇಶಿಸಿದ್ದಾರೆ. ಭಾರತೀರಾಜಾ, ಬಾಲುಮಹೇಂದರ್‌, ಕಮಲಹಾಸನ್‌ ಮೊದಲಾದವರು ಬಾಲಿವುಡ್‌ ನಿರ್ದೇಶಕರಾಗಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟರು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಮಣಿರತ್ನಂ, ರಾಮ್‌ಗೋಪಾಲ್‌ ವರ್ಮ ಹಿಂದಿಯಲ್ಲೇ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದರೂ ಅವು ದಕ್ಷಿಣ ಭಾರತೀಯ ಸಿನಿಮಾಗಳೆಂದು ಕರೆಸಿಕೊಳ್ಳಲಿಲ್ಲ.

ದಕ್ಷಿಣ ಭಾರತೀಯ ಚಿತ್ರಗಳ ಉತ್ಕರ್ಷ ಆರಂಭವಾದದ್ದು ‘ಈಗ’ ಚಿತ್ರದಿಂದ. ಅಲ್ಲಿ ಸಣ್ಣದಾಗಿ ಆರಂಭವಾದ ಅಲೆ, ಬಾಹುಬಲಿ ಚಿತ್ರ ಬಿಡುಗಡೆ ಆಗುವುದರೊಂದಿಗೆ ವ್ಯಾಪಕವಾಯಿತು. ಬಾಹುಬಲಿ ನಿಜವಾದ ಅರ್ಥದಲ್ಲಿ ಮೊಟ್ಟಮೊದಲ ಪಾನ್‌ ಇಂಡಿಯಾ ಸಿನಿಮಾ ಎಂದು ಹೇಳಬಹುದಾದ ಚಿತ್ರ. ಬಾಹುಬಲಿಯ ನಂತರ ಅಂಥದ್ದೇ ಸದ್ದು ಮಾಡಿದ್ದು ಕೆಜಿಎಫ್‌. ದಕ್ಷಿಣ ಭಾರತೀಯ ಚಿತ್ರರಂಗವನ್ನು ಇಡೀ ದೇಶ ತಿರುಗಿ ನೋಡುವಂತೆ ಮಾಡಿದ್ದರಲ್ಲಿ ಈ ಎರಡು ಚಿತ್ರಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಈ ಚಿತ್ರಗಳ ಜತೆಗೇ, ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ವರವಾಗಿ ಪರಿಣಮಿಸಿದ್ದು ಕೊರೋನಾ. ಬಾಲಿವುಡ್‌ ನಟ ಮನೋಜ್‌ ಬಾಜಪೈ ಹೇಳುವ ಹಾಗೆ ನಟರಲ್ಲಿ ಸಮಾನತೆ ತಂದದ್ದು ಓಟಿಟಿ ಫ್ಲಾಟ್‌ಫಾರಮ್‌ಗಳು. ಮನೆಯಲ್ಲಿ ಕುಳಿತು ಓಟಿಟಿಯಲ್ಲಿ ಎಲ್ಲಾ ಭಾಷೆಯ, ಎಲ್ಲಾ ನಟರ ಸಿನಿಮಾಗಳನ್ನು ದೊಡ್ಡ ಸಿನಿಮಾ, ಸಣ್ಣ ಸಿನಿಮಾ ಎಂಬ ಭೇದವಿಲ್ಲದೇ ನೋಡುತ್ತಾ ಇದ್ದ ಪ್ರೇಕ್ಷಕನಿಗೆ ಸ್ಟಾರುಗಳಾಚೆಯೂ ನಟರಿದ್ದಾರೆ ಎಂದು ಗೊತ್ತಾದದ್ದೇ ಕೊರೋನಾ ಸಮಯದಲ್ಲಿ ಅನ್ನುವ ಮನೋಜ್‌ ಬಾಜಪೈ ಮಾತನ್ನು ವಿಸ್ತರಿಸಿದರೆ, ಹಿಂದಿ ಸಿನಿಮಾಗಳಾಚೆ ಒಳ್ಳೆಯ ಸಿನಿಮಾಗಳು ಇವೆ ಅಂತ ಭಾರತೀಯ ಪ್ರೇಕ್ಷಕನಿಗೆ ಗೊತ್ತಾದದ್ದೂ ಕೊರೋನಾ ಅವಧಿಯಲ್ಲೇ.

ಮಲಯಾಳಂ ಚಿತ್ರಗಳು ಓಟಿಟಿಯನ್ನು ಆ ಅವಧಿಯಲ್ಲಿ ಅಕ್ಷರಶಃ ಆಳಿದವು. ಅದೇ ಅವಧಿಯಲ್ಲಿ ಪ್ರಾದೇಶಿಕ ಚಿತ್ರಗಳೂ, ನಟರೂ ಆಪ್ತರಾಗುತ್ತಾ ಹೋದರು. ಪಾನ್‌ ಇಂಡಿಯಾ ಸಿನಿಮಾಗಳ ಜಗತ್ತು ವಿಸ್ತಾರಗೊಳ್ಳಲಿಕ್ಕೆ ಓಟಿಟಿ ಕೂಡ ಕಾರಣವಾಯಿತು. ಆದರೆ ಓಟಿಟಿಗಿಂತ ಹೆಚ್ಚಿನ ಕೆಲಸ ಮಾಡಿದ್ದು ಯೂಟ್ಯೂಬ್‌ ಚಾನಲ್‌ಗಳು ಮತ್ತು ಅವುಗಳಲ್ಲಿ ಹಿಂದಿ ಭಾಷೆಯ ಡಬ್‌ ಆಗುತ್ತಿದ್ದ ಪ್ರಾದೇಶಿಕ ಭಾಷಾ ಚಿತ್ರಗಳು. ಅವುಗಳನ್ನು ನೋಡುತ್ತಾ ನೋಡುತ್ತಾ ಮನರಂಜನೆಯೇ ಮಹಾನವಮಿ ಎಂದು ನಂಬಿದ್ದ ಟೈಮ್‌ಪಾಸ್‌ ಪ್ರೇಕ್ಷಕರ ಬಹುದೊಡ್ಡ ವಲಯ, ದಕ್ಷಿಣ ಭಾರತದ ಲಾರ್ಜರ್‌ ದ್ಯಾನ್‌ ಲೈಫ್‌ ಸಿನಿಮಾಗಳಿಗೆ ಅಡಿಕ್ಟ್ ಆಯಿತೆಂದೇ ಹೇಳಬೇಕು. ಅಮಿತಾಬ್‌ ಬಚ್ಚನ್‌ ಮಾಡುತ್ತಿದ್ದ ಆ್ಯಂಗ್ರಿ ಯಂಗ್‌ಮ್ಯಾನ್‌ ಪಾತ್ರಗಳು ದಕ್ಷಿಣದ ಪ್ರತಿಯೊಂದು ಚಿತ್ರದಲ್ಲೂ ಕಂಡವು. ಅದೇ ಕಾರಣಕ್ಕೆ 2010ರಿಂದಾಚೆಗೆ ಹಿಂದಿಯಲ್ಲೂ ಸಿಂಗಂ ಶೈಲಿಯ ಹೀರೋಗಳು ಹುಟ್ಟಿಕೊಂಡರು.

KGF 2; ಸೋಲು ಗೆಲುವಿನ ಬಗ್ಗೆ ಯಶ್ ಮಾತು

ಅಂಕಿ ಅಂಶಗಳು ಏನನ್ನುತ್ತವೆ?

2019ರಲ್ಲಿ ಫೋರ್ಬ್‌್ಸ ಸಮೀಕ್ಷೆಯ ಪ್ರಕಾರ ಬಾಲಿವುಡ್‌ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ಮೂವರು ರಜನೀಕಾಂತ್‌, ಎಆರ್‌ ರೆಹಮಾನ್‌ ಮತ್ತು ಮೋಹನ್‌ಲಾಲ್‌. ಪೋರ್ಬ್‌್ಸ ಬಿಡುಗಡೆ ಮಾಡಿದ 100 ಮಂದಿ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ 13 ನಟರಿದ್ದರು. ಈ ಲೆಕ್ಕಾಚಾರವನ್ನಿಟ್ಟುಕೊಂಡು 2021ರ ಹೊತ್ತಿಗೆ ತೆಲುಗು ಚಿತ್ರೋದ್ಯಮ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಬಾಕ್ಸಾಫೀಸ್‌ ಗಳಿಕೆಯ ಚಿತ್ರರಂಗವಾಗಲಿದೆ. ಬಾಲಿವುಡ್‌ ಗಳಿಕೆ ಇಳಿಮುಖವಾಗಲಿದೆ ಎಂದು ಭವಿಷ್ಯ ನುಡಿದಿತ್ತು. ಅದೀಗ ನಿಜವಾಗಿದೆ. ಇತ್ತೀಚೆಗೆ ಯಶ್‌ ಹೇಳಿದ ‘ಟಾಲಿವುಡ್‌, ಮಾಲಿವುಡ್‌, ಸ್ಯಾಂಡಲ್‌ವುಡ್‌ ಅನ್ನೋದನ್ನೆಲ್ಲ ಬಿಡೋಣ. ಇಂಡಿಯನ್‌ ಸಿನಿಮಾ ಎಂದು ಕರೆಯೋಣ’ ಎಂಬ ಮಾತು ದಕ್ಷಿಣ ಭಾರತೀಯ ಚಿತ್ರರಂಗ ಸಾಧಿಸಿದ ಎತ್ತರಕ್ಕೆ ಸಾಕ್ಷಿ.

ಸಣ್ಣ ಸಿನಿಮಾಗಳ ಪಾಡೇನು?

ಪಾನ್‌ ಇಂಡಿಯಾ ಅನ್ನುವ ಪರಿಕಲ್ಪನೆ ಚಿತ್ರರಂಗದ ಪಾಲಿಗೆ ಒಳ್ಳೆಯದೋ ಕೆಟ್ಟದ್ದೋ ಎಂದು ಗಮನಿಸಿದರೆ, ಕೆಲವು ಅನಾನುಕೂಲಗಳೂ ಎದ್ದು ಕಾಣುತ್ತವೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಈ ನಾಲ್ಕು ಭಾಷೆಗಳಲ್ಲಿ ವರ್ಷಕ್ಕೆ ಕನಿಷ್ಠ 24 ಸ್ಟಾರ್‌ ಸಿನಿಮಾಗಳು ಬಿಡುಗಡೆ ಆಗುತ್ತವೆ. ಪಾನ್‌ಇಂಡಿಯಾ ಆಗುವುದಕ್ಕೆ ಮೊದಲು ಆಯಾ ಭಾಷೆಗಳ ನಟರಿಗೆ ಆದ್ಯತೆ ಸಿಗುತ್ತಿತ್ತು. ಕನ್ನಡದಲ್ಲಿ ಆರು ಸ್ಟಾರ್‌ ಸಿನಿಮಾಗಳು ತೆರೆಕಂಡರೆ ಎರಡು ತಿಂಗಳಿಗೊಂದು ಸಿನಿಮಾದಂತೆ ಬಿಡುಗಡೆಯಾಗುತ್ತಿತ್ತು. ಈಗ 24 ಸಿನಿಮಾಗಳೂ ಕನ್ನಡದ ಸಿನಿಮಾಗಳೇ ಆಗುವಂಥ ವಾತಾವರಣ ಇದೆ. ಪುಷ್ಪಾ, ಆರ್‌ಆರ್‌ಆರ್‌, ಬೀಸ್ಟ್‌ ಮತ್ತು ಕೆಜಿಎಫ್‌ 2 ಸಮಾನವಾಗಿ ಸ್ಪರ್ಧಿಸಬೇಕಾಗಿದೆ. ಹೀಗಾಗಿ ಪಾನ್‌ ಇಂಡಿಯಾ ಸಿನಿಮಾಗಳ ಅಬ್ಬರದಿಂದಾಗಿ ಸಣ್ಣ ಸಿನಿಮಾಗಳ ಗತಿಯೇನಾಗುತ್ತದೆ ಎಂಬ ಪ್ರಶ್ನೆ ಎದುರಾಗುತ್ತದೆ.

ಯಶ್‌ ಜಡ್ಜ್‌ಮೆಂಟ್‌ ನಾನು ಪೂರ್ತಿ ನಂಬುತ್ತೇನೆ: ಪ್ರಶಾಂತ್‌ ನೀಲ್‌

    ಮೊದಲೆಲ್ಲಾ, ಬಾಲಿವುಡ್‌ ಚಿತ್ರಗಳ ಜತೆ ಸ್ಪರ್ಧಿಸುವುದು ಕಷ್ಟ. ಅವರ ಬಜೆಟ್‌ ದೊಡ್ಡದಿದೆ ಎಂದು ಹೇಳಲಾಗುತ್ತಿತ್ತು. ಆದರೆ ಬಾಹುಬಲಿ, ಪುಷ್ಪಾ, ಜೇಮ್ಸ್‌, ವಿಕ್ರಮ್‌ ರೋಣ ಮತ್ತು ಕೆಜಿಎಫ್‌ 2 ಚಿತ್ರದ ಬಜೆಟ್‌ ಹಿಂದಿ ಚಿತ್ರಕ್ಕೆ ಸಮಾನವಾಗಿಯೇ ಇದೆ. ಹೀಗಾಗಿಯೇ ಅವು ಅದ್ದೂರಿತನದಲ್ಲಿ, ಪ್ರಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿವೆ. ಪಾನ್‌ ಇಂಡಿಯಾದಲ್ಲಿ ಗುರುತಿಸಿಕೊಳ್ಳಲಿಕ್ಕಾಗದ ಸ್ಟಾರುಗಳೂ ಕನ್ನಡದಲ್ಲಿದ್ದಾರೆ. ಈಗ ನಿಜವಾದ ಸಮಸ್ಯೆಯಿರುವುದು ಅವರಿಗೆ. ಅವರ ಸಿನಿಮಾಗಳಿಗೆ ಎಷ್ಟೇ ಖರ್ಚು ಮಾಡಿದರೂ, ಅವು ಪಾನ್‌ ಇಂಡಿಯಾ ಕನ್ನಡ ಚಿತ್ರದ ಮುಂದೆ ಸಪ್ಪೆಯಾಗಿ ಕಾಣಲಿದೆ.

    ತಿಂಗಳಿಗೆರಡು ಮೆಗಾ ಬಜೆಟ್ಟಿನ ಪಾನ್‌ಇಂಡಿಯಾ ಸಿನಿಮಾಗಳು ಬಂದರೆ, ವಾರಕ್ಕೆ ಏಳೆಂಟರಂತೆ ಬಿಡುಗಡೆಯಾಗುವ ಸಣ್ಣ ಸಿನಿಮಾಗಳ ಪಾಡೇನು ಎನ್ನುವುದು ಕೂಡ ಬಹುಮುಖ್ಯ ಪ್ರಶ್ನೆ. ಸಿನಿಮಾ ಅನ್ನುವುದು ಅನುಕಂಪ, ಪ್ರೀತಿಗಿಂತ ಹೆಚ್ಚಾಗಿ ನೋಡಲೇಬೇಕೆಂಬ ತೀವ್ರತೆಗೆ ಸಂಬಂಧಿಸಿದ್ದು. ಅಲ್ಲಿ ನಮ್ಮ ಭಾಷೆಯ ಸಿನಿಮಾ, ಕಷ್ಟಪಟ್ಟು ಮಾಡಿದ್ದಾರೆ, ಕನ್ನಡಕ್ಕೆ ಲಾಭವಾಗಬೇಕು ಎಂದೆಲ್ಲ ಹೇಳುವುದು ಕಷ್ಟ.

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಯಶ್‌ ಹೇಳಿದ ಹಾಗೆ ಮನೆ ಕಟ್ಟಲು ಬೇಕಾದ ಕಬ್ಬಿಣದ ಅದಿರು ಎಲ್ಲಿ ತಯಾರಾಗಿದೆ ಎಂದು ನಾವು ಕೇಳುವುದಿಲ್ಲ. ಸಿನಿಮಾಗಳೂ ಅಷ್ಟೇ. ಯಾವ ಭಾಷೆಯಿಂದ ಬಂದಿವೆ ಅನ್ನುವುದಕ್ಕಿಂತ ಹೇಗಿದೆ ಅನ್ನುವುದೇ ಮುಖ್ಯ.

    ಅದರ ಅರ್ಥ ಗುಡ್‌ ಸಿನಿಮಾ, ಬಿಗ್‌ ಸಿನಿಮಾಗಳಷ್ಟೇ ಮುಂದಿನ ದಿನಗಳಲ್ಲಿ ಸದ್ದು ಮಾಡಲಿವೆ.