Asianet Suvarna News Asianet Suvarna News

ಅನಂತ್ ನಾಗ್‌ ಏರು ಪೇರು ತೇರು; ಚಿತ್ರರಂಗಕ್ಕೆ ಬರಲು ಕಾರಣ ಏನು, ಇಂಟ್ರೆಸ್ಟಿಗ್ ಸ್ಟೋರಿ!

ಕನ್ನಡಪ್ರಭದ ಸಂಪಾದಕರಾಗಿದ್ದ, ಅನಂತ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಬರಲು ಕಾರಣರಾಗಿದ್ದ ವೈಯನ್ಕೆ ಅನಂತ್ ನಾಗ್ ಬಗ್ಗೆ ಹೇಳುತ್ತಿದ್ದ ಮಾತುಗಳಿವು. 
 

Why Anant Nag entered Kannada film industry writer Jogi pen down article vcs
Author
First Published Aug 11, 2023, 10:10 AM IST

ಜೋಗಿ

ಅನಂತ್... ಅನಂತ್ ನಾಗ್ ಏ ವನ್. ಬೇರೆಯವರೆಲ್ಲ ಏಟು!

ಕನ್ನಡಪ್ರಭದ ಸಂಪಾದಕರಾಗಿದ್ದ, ಅನಂತ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಬರಲು ಕಾರಣರಾಗಿದ್ದ ವೈಯನ್ಕೆ ಅನಂತ್ ನಾಗ್ ಬಗ್ಗೆ ಹೇಳುತ್ತಿದ್ದ ಮಾತುಗಳಿವು. ಯಾವಾಗಲೂ ಪನ್ ಬೆರೆಸಿ, ತಮಾಷೆಯಾಗಿ ಮಾತಾಡುತ್ತಿದ್ದ ವೈಯನ್ಕೆ ಮಾತಿನ ಅರ್ಥ ಅವರ ಆಪ್ತರಿಗೆ ಮಾತ್ರ ಗೊತ್ತಿತ್ತು. ಅನಂತ್ ನಾಗ್ A1 ನಟ, ಅಂದರೆ ಪ್ರಥಮ ದರ್ಜೆಯ ನಟ. ಮಿಕ್ಕವರು A2 ನಟರು. ಅಂದರೆ ಏಟು ಹೊಡೆಯುವ ಫೈಟಿಂಗ್ ಸಿನಿಮಾಗಳನ್ನು ಜಾಸ್ತಿ ಮಾಡುವವರು.

ಅನಂತ್‌ನಾಗ್ ಚಿತ್ರರಂಗಕ್ಕೆ ಕಾಲಿಟ್ಟು ಐವತ್ತು ವರ್ಷ. ಅವರಿಗೆ ಸೆಪ್ಟೆಂಬರ್ ತಿಂಗಳಿಗೆ ಎಪ್ಪತ್ತೈದು ತುಂಬುತ್ತದೆ. ಈ ಐವತ್ತು ವರ್ಷಗಳಲ್ಲಿ ಅನಂತ್ ಕನ್ನಡದ ಪ್ರಜ್ಞೆ ಮತ್ತು ಪರಿಸರವನ್ನು ಅನೇಕ ಆಯಾಮಗಳಿಂದ ಶ್ರೀಮಂತಗೊಳಿಸಿದ್ದಾರೆ. ತಮ್ಮ ಶಂಕರನ ಜತೆ ಸೇರಿ ಕಟ್ಟಿದ ಸಂಕೇತ್, ನಿರ್ಮಿಸಿದ ಸಿನಿಮಾಗಳು, ರಂಗಕ್ಕೆ ತಂದ ನಾಟಕಗಳು, ರಾಜಕಾರಣದಲ್ಲಿ ಮಾಡಿದ ಸಾಧನೆ, ಸಾಂಸ್ಕೃತಿಕ ಕೊಡುಗೆ, ಕನ್ನಡ ಚಲನಚಿತ್ರಕ್ಕೆ ಅವರ ಕಾಣಿಕೆ, ಕಿರುತರೆಯ ಪಾತ್ರಗಳು- ಎಲ್ಲವೂ ಅವಿಸ್ಮರಣೀಯ.

90ರ ಇಳಿವಯಸ್ಸಲ್ಲೂ ವೇಗವಾಗಿ ಕಾರು ಓಡಿಸುತ್ತಿದ್ದ ಭಗವಾನ್ ಪಾಸಿಟಿವ್‌ ಮನುಷ್ಯ: ಅನಂತ್ ನಾಗ್

ಅನಂತ್ ಅವರ ಶ್ರೇಷ್ಠ ಚಿತ್ರಗಳನ್ನು ಪಟ್ಟಿ ಮಾಡುತ್ತಾ ಹೋದರೆ ಕನಿಷ್ಠ ಐವತ್ತು ಸಿನಿಮಾಗಳು ಸುಲಭವಾಗಿ ಸಿಗುತ್ತವೆ. ಆ ಐವತ್ತು ಸಿನಿಮಾಗಳಲ್ಲಿ ಇರುವ ವೈವಿಧ್ಯ ಕೂಡ ಅಚ್ಚರಿಗೊಳಿಸುವಂಥದ್ದು. ಸಂಕಲ್ಪ, ಹಂಸಗೀತೆ, ಬರ ಮುಂತಾದ ಸಿನಿಮಾಗಳದ್ದೇ ಒಂದು ತೂಕವಾದರೆ ಉದ್ಭವ, ಗಣೇಶನ ಮದುವೆಯಂಥ ಚಿತ್ರಗಳದ್ದು ಮತ್ತೊಂದು ತೂಕ. ಚಂದನದ ಗೊಂಬೆ, ಬೆಂಕಿಯ ಬಲೆ ಮುಂತಾದ ಚಿತ್ರಗಳನ್ನು ಕೊಡುತ್ತಲೇ ಅವರು ಬೆಳದಿಂಗಳ ಬಾಲೆಯಂಥ ಅದ್ಭುತ ಸಿನಿಮಾವನ್ನೂ ಕೊಟ್ಟರು. ನಂಬರ್ ಐದೂ ಎಕ್ಕ ಚಿತ್ರ ಬಂದ ಆಸುಪಾಸಿನಲ್ಲೇ `ಅನುಪಮಾ'' ಕೂಡ ಬಂತು. ಮತದಾನ, ಮೌನಿ, ಗೋಧಿಬಣ್ಣ ಸಾಧಾರಣ ಮೈಕಟ್ಟುವನ್ನು ಕೊಟ್ಟವರೇ, ಮರಳು ಸರಪಣಿ, ಕುದುರೆಮುಖ, ವರ್ಣಚಕ್ರದಂಥ ಸಿನಿಮಾಗಳನ್ನೂ ನೀಡಿದರು. ಈ ಮಧ್ಯೆ ನಾರದವಿಜಯ, ತೆನಾಲಿ ರಾಮಕೃಷ್ಣದಂಥ ಸಿನಿಮಾಗಳು ಬಂದವು.

ಮಧ್ಯಮ ವರ್ಗದ ಡಾರ್ಲಿಂಗ್ ಅಂತಲೇ ಕರೆಸಿಕೊಂಡ ಅನಂತನಾಗ್, ಬುದ್ಧಿವಂತ ನಟ ಎಂದೂ ಹೆಸರು ಮಾಡಿದವರು. ಅವರ ಜತೆ ಮಾತಾಡುವುದು ಅಪೂರ್ವ ಅನುಭೂತಿ ಅನ್ನುವುದನ್ನು ಅವರ ಸಂಸರ್ಗಕ್ಕೆ ಬಂದವರೆಲ್ಲವೂ ಒಪ್ಪುತ್ತಾರೆ. ಸರಳ, ಸಜ್ಜನ, ನಿಗರ್ವಿ ಹೇಗೋ ಸಿಟ್ಟು ಬಂದರೆ ರುದ್ರಭಯಂಕರ ಕೂಡ. ಅವರ ನೆನಪಿನ ಶಕ್ತಿಯೂ ಅಗಾಧ. ಬಾಲ್ಯದಲ್ಲಿ ಕಲಿತ ಶ್ಲೋಕಗಳು ಅವರಿಗೆ ಕರತಲಾಮಲಕ. ಬ್ಯಾರಿಸ್ಟರ್ ನಾಟಕದಲ್ಲಿ ಹತ್ತಾರು ಪುಟಗಳ ಸಂಭಾಷಣೆ ಹೇಳಿದ್ದು ಆ ಕಾಲದ ಸಾಧನೆಯಾದರೆ, ರಿಷಬ್ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದಲ್ಲಿ 17 ನಿಮಿಷಗಳ ಸುದೀರ್ಘ ದೃಶ್ಯವನ್ನು ''ಸಿಂಗಲ್ ಶಾಟ್''''ನಲ್ಲಿ ನಿರ್ವಹಿಸಿದ್ದು ಅವರ ನೆನಪು ಇನ್ನೂ ಹಸಿರು ಅನ್ನುವುದಕ್ಕೆ ಸಾಕ್ಷಿ.

ಸಿನಿಮಾ ಮಾಡಲು ಮಗಳಿಗೆ ಒತ್ತಾಯ ಮಾಡಿದಕ್ಕೆ ಕಣ್ಣೀರಿಟ್ಟಳು: ನಟ ಅನಂತ್ ನಾಗ್

ಅನಂತ್ ಹೊಸ ಹುಡುಗರಿಗೆ ಸ್ಫೂರ್ತಿ. ಅದಕ್ಕೆ ಎರಡು ಕಾರಣಗಳು. ಮೊದಲನೆಯದಾಗಿ ಅನಂತ್ ನಾಗ್ ಪಾತ್ರವನ್ನು ಎಂಜಾಯ್ ಮಾಡುತ್ತಾರೆ. ಎರಡನೆಯದಾಗಿ ಅವರು ಚಿತ್ರಕತೆಯನ್ನು ಪೂರ್ತಿ ಓದುತ್ತಾರೆ. ಸಲಹೆ ಕೊಡುತ್ತಾರೆ. ನಿರ್ದೇಶಕರ ತಂಡದ ಜತೆ ಮಾತಿಗೆ ಕುಳಿತುಕೊಳ್ಳುತ್ತಾರೆ. ತನ್ನ ಪಾಲಿನ ಕೆಲಸ ಮುಗಿಸಿ ಎದ್ದು ಹೋಗುವ ಜಾಯಮಾನ ಅವರದ್ದಲ್ಲ. ತನ್ನ ಪಾತ್ರಕ್ಕಿಂತ ಸಿನಿಮಾ ಚೆನ್ನಾಗಿ ಬರಬೇಕು ಅನ್ನುವುದು ಅನಂತ್ ನಿಲುವು.

ಸ್ಪಷ್ಟವಾದ ರಾಜಕೀಯ ಒಲವು ಮತ್ತು ನಿಲುವು ಇದ್ದರೂ ರಾಜಕೀಯ ಪಕ್ಷ ಸೇರಲು ನಿರಾಕರಿಸುವ, ಪರಭಾಷೆಗಳಿಂದ ಬರುವ ಅಸಂಖ್ಯ ಆಹ್ವಾನಗಳನ್ನು ತಿರಸ್ಕರಿಸುವ, ತನ್ನ ಜಗತ್ತನ್ನು ತಾನೇ ನಿರ್ಮಿಸಿಕೊಳ್ಳಲು ಇಚ್ಚಿಸುವ, ಅನಗತ್ಯ ಪ್ರಚಾರ ಬಯಸದ, ರಾಜಕೀಯದ ಮೊಗಸಾಲೆಯಲ್ಲಿ ಅಡ್ಡಾಡಿಯೂ ಅದರಿಂದ ಹೊರಬಂದು ಯಾವುದೇ ಹಳಹಳಿಕೆ ಇಲ್ಲದೇ ಸಂತೋಷವಾಗಿರುವ, ಮಠದ ವಾತಾವರಣವನ್ನು ಇಷ್ಟಪಟ್ಟರೂ ಅಧ್ಯಾತ್ಮದಲ್ಲಿ ಮುಳುಗೇಳದ ಅನಂತ್ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸಲು ಹತ್ತಾರು ಕಾರಣಗಳು.

`ಕನ್ನಡ ಚಿತ್ರರಂಗ ಮದ್ರಾಸಿನಲ್ಲಿದ್ದಾಗ, ಅದು ಕರ್ನಾಟಕಕ್ಕೆ ಬರಬೇಕು ಅಂತ ಹೋರಾಡಿದವರ ಪೈಕಿ ಪತ್ರಕರ್ತರೂ ಇದ್ದಾರೆ. ಅವರೆಲ್ಲ ವಾರವಾರ ಪತ್ರಿಕೆಗಳಲ್ಲಿ ಬರೆದು ಕನ್ನಡ ಚಿತ್ರರಂಗ ಇಲ್ಲಿ ನೆಲೆಯೂರುವಂತೆ ಮಾಡಿದವರು. ನನ್ನ ಬದುಕಿನಲ್ಲಿ ಪತ್ರಕರ್ತರ ಪಾತ್ರ ಬಹಳ ದೊಡ್ಡದು. ಅವರು ನನ್ನ ಬೆಳವಣಿಗೆಯನ್ನು ಕಂಡು ಸಂತೋಷಪಟ್ಟವರು'' ಎಂದು ಆರಂಭದ ದಿನಗಳಿಂದ ಈ ತನಕದ ಮಾಧ್ಯಮದ ಮಂದಿಯನ್ನು ಅವರು ನೆನಪಿಸಿಕೊಳ್ಳುತ್ತಾರೆ. ಅವರ ಆಪ್ತ ಸಂಪಾದಕರ ಪಟ್ಟಿಯಲ್ಲಿ ವೈಯನ್ಕೆ ಇದ್ದರು, ಲಂಕೇಶರಿದ್ದರು. ಬಿವಿ ವೈಕುಂಠರಾಜ್ ಕೂಡ ಇದ್ದರು. ಲಂಕೇಶ್ ಪತ್ರಿಕೆಗೆ ಅವರು ಅಂಕಣ ಬರೆಯುತ್ತಿದ್ದರು.

ಚಿತ್ರರಂಗಕ್ಕೆ ಕಾಲಿಟ್ಟ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಅವರು ಆಪ್ತರಿಗೆ ಒಂದು ಪುಟ್ಟ ಪತ್ರ ಕಳುಹಿಸಿದ್ದರು. ಅದರಲ್ಲಿ ಅವರೇ ಬರೆದ ನಾಲ್ಕು ಸಾಲು ಇದು:

ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳ ಏರು-ಪೇರು-ತೇರುಗಳ ಆಟ ರೋಚಕವಾದುದು ತಮ್ಮೆಲ್ಲರ ಸಾಂಗತ್ಯದಿಂದ!

ಏರುಪೇರು ರಸ್ತೆಯಲ್ಲಿ ತೇರು ಎಳೆಯುವವರು ಅಭಿಮಾನಿಗಳು. ಚಿತ್ರರಂಗ, ನಾಟಕ ಎಂದರೆ ಆಟ, ಪ್ಲೇ. ಅದು ರೋಚಕವಾದದ್ದು ನಿಮ್ಮೆಲ್ಲರಿಂದ ಎನ್ನುವುದು ಅವರು ಕನ್ನಡದ ಹತ್ತುಸಮಸ್ತರಿಗೆ ಹೇಳಿದ ಮಾತು.

ಅದು ಅನಂತ್!

Follow Us:
Download App:
  • android
  • ios