Asianet Suvarna News Asianet Suvarna News

90ರ ಇಳಿವಯಸ್ಸಲ್ಲೂ ವೇಗವಾಗಿ ಕಾರು ಓಡಿಸುತ್ತಿದ್ದ ಭಗವಾನ್ ಪಾಸಿಟಿವ್‌ ಮನುಷ್ಯ: ಅನಂತ್ ನಾಗ್

‘ಬಯಲು ದಾರಿ’ಯಲ್ಲಿ ಸಿಕ್ಕ ಗುರು ಭಗವಾನ್‌ ಬಗ್ಗೆ  ಹಿರಿಯ ನಟ ಅನಂತ್ ನಾಗ್‌ ಮಾತು 

Actor Anant Nag talks about how he met SK Bhagavan vcs
Author
First Published Feb 21, 2023, 1:08 PM IST

ಅನಂತ್‌ನಾಗ್‌, ಹಿರಿಯ ಚಿತ್ರ ನಟ

ನನಗೆ ಚಿತ್ರರಂಗದಲ್ಲಿ ಆರು ಮಂದಿ ಗುರುಗಳು. ಅವರಲ್ಲಿ ಒಬ್ಬರು ಶ್ರೀಕೃಷ್ಣ ಭಗವಾನ್‌. ಅವರ ತಂದೆ-ತಾಯಿ ಇವರ ಹೆಸರು ಕರೆದಾಗಲೆಲ್ಲಾ ಶ್ರೀಕೃಷ್ಣ ಕಣ್ಣ ಮುಂದೆ ಬರಬೇಕು ಅಂತ ಎಸ್‌.ಕೆ. ಭಗವಾನ್‌ ಎಂದು ಹೆಸರಿಟ್ಟಿದ್ದರಂತೆ.

ನನಗೆ ಅವರು ಸಿಕ್ಕಿದ್ದು 1974ರಲ್ಲಿ. ‘ಬಯಲುದಾರಿ’ ಸಿನಿಮಾ ಮೂಲಕ. ನಾನು ಮುಂಬೈನಿಂದ ಬಂದಿದ್ದೆ. ಮೆಟ್ರೋಪಾಲಿಟನ್‌ ಸಂಸ್ಕಾರ ಬೆಳೆಸಿಕೊಂಡಿದ್ದೆ. ಅವರು ಈ ಭಾಗದ ಸಂಸ್ಕಾರ ಹೇಳುತ್ತಿದ್ದರು. ‘ನಮ್ಮದು ಸೌಮ್ಯ ಸ್ವಭಾವ, ಹೆಂಡತಿಯನ್ನು ಕರೆಯುವಾಗಲೂ ಬಹುವಚನ ಬಳಸುತ್ತೇವೆ. ಬೈಯುವಾಗಲೂ ಶುದ್ಧ ಕನ್ನಡದಲ್ಲೇ ಬೈಯುವುದು ಸಾಧ್ಯ’ ಎಂದು ಹೇಳುತ್ತಿದ್ದರು. ಅವರು ರಂಗಭೂಮಿಯಿಂದ ಬಂದವರು. ನಾನು ಕೂಡ ರಂಗಭೂಮಿಯಿಂದ ಬಂದವನೇ. ಆದರೆ ನನಗೂ ಅವರಿಗೂ ಎರಡು ಜನರೇಷನ್‌ ಅಂತರವಿತ್ತು.

ಕನ್ನಡದಲ್ಲಿ ಬಾಂಡ್‌ ಚಿತ್ರ ಪರಿಚಯಿಸಿದ ಭಗವಾನ್‌ ; ಅಣ್ಣಾವ್ರ ಜೊತೆ ಬಾಂಧವ್ಯ ಹೀಗಿತ್ತು

ಬಯಲುದಾರಿ ಸಿನಿಮಾ ಮಾಡುವಾಗ ನಾನು ನನ್ನ ಶೈಲಿಯಲ್ಲಿ ನಟಿಸುತ್ತಿದ್ದೆ. ನನ್ನದು ಸಹಜಾಭಿನಯ ಶೈಲಿ. ಆದರೆ ಅವರು ಮಾತ್ರ, ‘ನೀವು ನಟಿಸಿದ್ದೇ ಗೊತ್ತಾಗುವುದಿಲ್ಲ. ಸ್ವಲ್ಪ ನಾಟಕೀಯತೆ ಬೇಕು’ ಎನ್ನುತ್ತಿದ್ದರು. ನನಗೆ ನಟನೆ ಹೀಗೇ ಬರೋದು ಅಂತ ಹೇಳುತ್ತಿದ್ದೆ. ಚರ್ಚೆ ಆಗುತ್ತಿತ್ತು. ಆಗ ನಿರ್ದೇಶಕರು ಕ್ಯಾಮೆರಾ ಪಕ್ಕ ಕುಳಿತು ಆ್ಯಕ್ಷನ್‌ ಕಟ್‌ ಹೇಳುತ್ತಿದ್ದರು. ಮಾನಿಟರ್‌ ಇರಲಿಲ್ಲ. ನಾನು ಮಾತನಾಡುತ್ತಾ ಅವರಿಗೆ ‘ಚಿತ್ರೀಕರಿಸಿದ ಭಾಗ (ರಷಸ್‌)ವನ್ನು ತರಿಸಿ ನೀವು ಒಮ್ಮೆ ನೋಡಿಬಿಡಿ’ ಎಂದು ಕೋರಿಕೆ ಸಲ್ಲಿಸಿದೆ. ಅವರು ಒಪ್ಪಿಕೊಂಡರು. ಎರಡು ದಿನ ಕಳೆದು ರಷಸ್‌ ನೋಡಿಕೊಂಡು ಬಂದು, ‘ಸಾರಿ ಅನಂತ್‌, ನಿಮ್ಮದು ವಿಭಿನ್ನ ಶೈಲಿ ಇದೆ. ಸ್ಕ್ರೀನ್‌ನಲ್ಲಿ ಬಹಳ ಚೆನ್ನಾಗಿ ಕಾಣಿಸುತ್ತದೆ. ನನಗೆ ಕ್ಯಾಮೆರಾ ಪಕ್ಕ ದೂರದಿಂದ ಕುಳಿತು ನೋಡಿದ್ದರಿಂದ ಗೊತ್ತಾಗಲಿಲ್ಲ’ ಎಂದು ಹೇಳಿದರು. ಅಷ್ಟುದೊಡ್ಡ ವ್ಯಕ್ತಿ ಸಾರಿ ಕೇಳಿದ್ದು ನನಗೇ ಒಂಥರಾ ಅವಮಾನವಾದಂತೆ ಅನ್ನಿಸಿತು. ಅಂಥಾ ಔದಾರ್ಯ ಅವರದು.

ನಾನು ಅವರ ಜೊತೆ 10 ಸಿನಿಮಾ ಮಾಡಿದ್ದೇನೆ. ಕೊನೆಯ ಸಿನಿಮಾ ‘ಆಡುವ ಬೊಂಬೆ’. ಅವರಂತೂ ಐವತ್ತಕ್ಕಿಂತ ಹೆಚ್ಚು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಬಹುತೇಕ ಎಲ್ಲಾ ನಟರ ಜೊತೆ ಕೆಲಸ ಮಾಡಿದ್ದಾರೆ. ಅನೇಕ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಯಾವತ್ತೂ ದೂರದೆ, ದುಡಿಯುತ್ತಿದ್ದ ಕನ್ನಡ ಚಿತ್ರರಂಗದ ಮಹತ್ತರ ಮೈಲಿಗಲ್ಲು ಅವರು. ಯಾವತ್ತೂ ಪಾಸಿಟಿವ್‌ ಆಗಿಯೇ ಇರುತ್ತಿದ್ದರು. ಏನೇ ಹುಷಾರಿಲ್ಲದಿದ್ದರೂ ಐಯಾಮ್‌ ಫೈನ್‌ ಅಂತಲೇ ಹೇಳುತ್ತಿದ್ದರು. ಅವರು ಬೇಸರದಿಂದ ಇದ್ದಿದ್ದನ್ನು ನಾನು ನೋಡಿಲ್ಲ. ಜೀವನ ಅಂದ ಮೇಲೆ ಕಷ್ಟ-ಸುಖ ಇದ್ದೇ ಇರುತ್ತದೆ. ಆದರೆ ಅವರು ಯಾವತ್ತೂ ಯಾವ ವಿಚಾರದ ಕುರಿತೂ ಕಂಪ್ಲೇಂಟ್‌ ಮಾಡಿದವರಲ್ಲ.

ನನಗೆ ಕನ್ನಡ ಕಲಿಸಿದ ಗುರು ಭಗವಾನ್‌; ಹಿರಿಯ ನಟ ಲಕ್ಷ್ಮೀ

ಶ್ರದ್ಧೆಯಿಂದ ದಿರಿಸು ಧರಿಸುತ್ತಿದ್ದರು. ಯಾವ ಕಾರ್ಯಕ್ರಮಕ್ಕೆ ಬಂದರೂ ಚಂದ ಶೇವ್‌ ಮಾಡಿಕೊಂಡು, ಉತ್ತಮ ದಿರಿಸು ಧರಿಸಿಕೊಂಡೇ ಬರುತ್ತಿದ್ದರು. ನಮಗೂ ನೀವೆಲ್ಲಾ ನಟ, ನಟಿಯರು ಸಾರ್ವಜನಿಕವಾಗಿ ಉತ್ತಮವಾಗಿ ದಿರಿಸು ಧರಿಸಿಕೊಂಡೇ ಕಾಣಿಸಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಅವರು ಅಗಲಿದರು ಎಂದು ತಿಳಿದ ತಕ್ಷಣ ಶೇವ್‌ ಮಾಡಿಕೊಂಡು ಶ್ರದ್ಧೆಯಿಂದ ದಿರಿಸು ಧರಿಸಿಕೊಂಡು ಹೋಗಿ ಅಂತಿಮ ನಮನ ಸಲ್ಲಿಸಿದೆ.

ನನ್ನ ಜೊತೆ ಸದಾ ಸಂಪರ್ಕದಲ್ಲಿದ್ದರು. ಸಂದರ್ಶನ ಬಂದಾಗ ಅದನ್ನು ನೋಡಿ ಮಾತನಾಡುತ್ತಿದ್ದರು. ಸಿನಿಮಾ ಬಂದಾಗ ಚರ್ಚೆ ಮಾಡುತ್ತಿದ್ದರು. 90ರ ವಯಸ್ಸಿನಲ್ಲೂ ತಾವೇ ಕಾರು ಡ್ರೈವ್‌ ಮಾಡಿಕೊಂಡು ಬರುತ್ತಿದ್ದರು. ಅದೂ ವೇಗವಾಗಿ. ಒಂದು ದಿನ ಸಂಜೆ ಹೊತ್ತು ನಮ್ಮ ಮನೆಗೆ ಬಂದಿದ್ದರು. ಹೊರಡುವ ಹೊತ್ತಿಗೆ ನಾನು ಅವರ ಬಳಿ ಕಾರು ಇಲ್ಲೇ ಇಟ್ಟು ಹೋಗಿ, ನಮ್ಮ ಡ್ರೈವರ್‌ ಡ್ರಾಪ್‌ ಮಾಡುತ್ತಾನೆ ಎಂದೆ. ಆದರೆ ಅವರು ಕೇಳಲಿಲ್ಲ. ಕಾರು ಹತ್ತಿ ರೊಂಯ್ಯನೆ ವೇಗವಾಗಿ ಹೊರಟರು. ನಾನು ಆತಂಕದಿಂದ ಅವರ ಕಾರು ಕಣ್ಣಿಂದ ಮರೆಯಾಗುವವರೆಗೆ ನೋಡುತ್ತಲೇ ಇದ್ದೆ.

ಈಗ ಅವರೇ ಮರೆಯಾಗಿದ್ದಾರೆ. ನನ್ನ ಪಾಲಿಗೆ ಒಂದು ಯುಗ ಮುಗಿದಿದೆ.

Follow Us:
Download App:
  • android
  • ios