-ಕೆಂಡಪ್ರದಿ

ಕೇಂದ್ರ ಸರ್ಕಾರ ಅ. 15ರಿಂದ ಚಿತ್ರಮಂದಿರಗಳ ಬಾಗಿಲು ತೆರೆಯಲು ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಇದನ್ನು ಸ್ಯಾಂಡಲ್‌ವುಡ್‌ ಸೇರಿ ಭಾರತೀಯ ಎಲ್ಲಾ ಸಿನಿಮಾ ಇಂಡಸ್ಟ್ರಿಗಳೂ ಸ್ವಾಗತ ಮಾಡಿವೆ. ಆದರೆ ಯಕ್ಷ ಪ್ರಶ್ನೆ ಇರುವುದು ಪ್ರೇಕ್ಷಕ ಮೊದಲಿನಂತೆ ಥಿಯೇಟರ್‌ ಕಡೆಗೆ ಮುಖ ಮಾಡುತ್ತಾನಾ? ದೊಡ್ಡ ಚಿತ್ರಗಳು ತೆರೆಯ ಮೇಲೆ ಬರಲು ಸಿದ್ಧ ಇವೆಯೇ? ಎನ್ನುವುದು.

ಪ್ರೇಕ್ಷಕ ಥಿಯೇಟರ್‌ಗೆ ಬರುವುದು ಮತ್ತು ನಿರ್ಮಾಪಕರು ತಮ್ಮ ಚಿತ್ರಗಳನ್ನು ಧೈರ್ಯವಾಗಿ ಬಿಡುಗಡೆ ಮಾಡುವ ಸಾಹಸ ಮಾಡುವುದು ಎರಡೂ ಪರಸ್ಪರ ಸಂಬಂಧ ಹೊಂದಿವೆ. ಅ. 15ಕ್ಕೆ ಥಿಯೇಟರ್‌ಗಳ ಬಾಗಿಲು ತೆರೆದ ತಕ್ಷಣ ಎಲ್ಲಾ ವರ್ಗದ ಪ್ರೇಕ್ಷಕರು ಬರುವುದಿಲ್ಲ. ಅವರನ್ನು ಸೆಳೆಯಬೇಕು ಎಂದರೆ ದೊಡ್ಡ ಸ್ಟಾರ್‌ ನಟರ ಚಿತ್ರಗಳೇ ಬರಬೇಕು. ಸಣ್ಣ ಪುಟ್ಟಸಿನಿಮಾಗಳಿಂದ ಇದು ಸಾಧ್ಯವಿಲ್ಲ. ಇನ್ನು ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ ಎನ್ನುವ ಭರವಸೆ ಸಿಗುವವರೆಗೆ ದೊಡ್ಡ ಸಿನಿಮಾಗಳು ಬರುವುದೂ ಆರ್ಥಿಕ ದೃಷ್ಟಿಯಿಂದ ನಷ್ಟದ ಮಾತು.

ಆದರೆ ಇದರ ನಡುವಲ್ಲಿ ಥಿಯೇಟರ್‌ಗಳು ಪ್ರೇಕ್ಷಕನಿಗೆ ಭರವಸೆ ಮೂಡಿಸಿದರೆ, ಧೈರ್ಯವಾಗಿ ಥಿಯೇಟರ್‌ ಒಳಗೆ ಕಾಲಿಡಬಹುದು, ಕೂತು ಸಿನಿಮಾ ನೋಡಬಹುದು ಎನ್ನುವ ವಾತಾವರಣ ಮೂಡಿಸಿದರೆ ಖಂಡಿತವಾಗಿಯೂ ಪ್ರೇಕ್ಷಕ ನಿಧಾನವಾಗಿ ಚಿತ್ರಮಂದಿರಗಳ ಕಡೆ ಮುಖ ಮಾಡಿಯೇ ಮಾಡುತ್ತಾನೆ. ಇದಕ್ಕೆ ತಾಜಾ ಉದಾಹರಣೆಯಾಗಿ ನಮ್ಮ ಮುಂದೆ ಸಾಕಷ್ಟುಅಂಶಗಳಿವೆ. ಪ್ರಾರಂಭದಲ್ಲಿ ಹೋಟೆಲ್‌ ಕಡೆಗೆ ಮುಖ ಮಾಡಿದೇ ಇದ್ದ ಜನರು ಅಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿದ್ದಾರೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದ್ದಾರೆ ಎಂದು ತಿಳಿದ ಬಳಿಕ ನಿಧಾನವಾಗಿ ಹೋಟೆಲ್‌ ಕಡೆಗೆ ಮುಖ ಮಾಡಿದರು. ಪ್ರಾರಂಭವಾದ ಮೂರು ನಾಲ್ಕು ತಿಂಗಳಿನಲ್ಲಿ ಹೋಟೆಲ್‌ ಉದ್ಯಮ ಚೇತರಿಕೆಯ ಹಾದಿ ತುಳಿಯಿತು. ಇದೇ ರೀತಿ ಸಾರ್ವಜನಿಕ ಸಾರಿಗೆ, ಪ್ರವಾಸೋದ್ಯಮ ವಲಯಗಳೂ ನಿಧಾನಕ್ಕೆ ಹಳಿಗೆ ಬರುವ ಭರವಸೆ ಮೂಡಿಸಿವೆ. ಇದೆಲ್ಲಾ ಸಾಧ್ಯವಾಗಿದ್ದು ಸೇವೆಯ ಗುಣಮಟ್ಟಮತ್ತು ಸುರಕ್ಷಾ ಕ್ರಮಗಳ ಖಾತ್ರಿ.

ಪೂರ್ವ ತಯಾರಿಗೆ ಇದು ಸಕಾಲ

ಇದೇ ರೀತಿಯ ಖಾತ್ರಿಯನ್ನು ಥಿಯೇಟರ್‌ಗಳು ಒದಗಿಸಿದರೆ ಖಂಡಿತವಾಗಿಯೂ ಪ್ರೇಕ್ಷಕ ನಿಧಾನವಾಗಿ ಚಿತ್ರಮಂದಿರ ಪ್ರವೇಶ ಮಾಡಿಯೇ ಮಾಡುತ್ತಾನೆ. ಕೇಂದ್ರ ಸರ್ಕಾರ ಹೇಳಿರುವಂತೆ ಥಿಯೇಟರ್‌ ಓಪನ್‌ಗೆ ಇನ್ನೂ 14 ದಿನಗಳು ಬಾಕಿ ಇವೆ. ಸಿಕ್ಕಿರುವ ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಂಡು ಶುಚಿತ್ವ ಮತ್ತು ಕೊರೋನಾ ಮಾರ್ಗಸೂಚಿಗಳ ಪಾಲನೆಗೆ ಅಗತ್ಯವಾದ ತಯಾರಿ ಮಾಡಿಕೊಂಡಿದ್ದೇ ಆದರೆ ಚಿತ್ರರಂಗದ ಬೆಳವಣಿಗೆ ಸಾಧ್ಯವಾಗಲಿದೆ. ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳಿಗೆ ಮುಕ್ತಿ ದೊರೆಯಲಿದೆ. ಶೂಟಿಂಗ್‌ ಮಾಡಿಕೊಳ್ಳುತ್ತಿರುವ ಚಿತ್ರಗಳಿಗೆ ಬಲ ಬರಲಿದೆ. ಹೊಸ ಸಿನಿಮಾಗಳನ್ನು ಮಾಡಲು ಮುಂದಾಗುವ ನಿರ್ಮಾಪಕನಿಗೆ ಭರವಸೆ ಮೂಡಲಿದೆ. ಈ ನಿಟ್ಟಿನಲ್ಲಿ ನಿರ್ಮಾಪಕರು, ವಿತರಕರು, ಥಿಯೇಟರ್‌ ಮಾಲೀಕರು ಸಮನ್ವಯ ಸಾಧಿಸಿಕೊಂಡು ಮುಂದುವರೆಯಬೇಕು.

"

ಶೇ. 50 ಹೊರೆಯಲ್ಲ

ಇನ್ನು ಈಗ ಸಿಕ್ಕಿರುವ ಶೇ. 50 ರಷ್ಟುಪ್ರೇಕ್ಷಕರ ಪ್ರವೇಶ ಎನ್ನುವ ವಿಚಾರವನ್ನೇ ತೆಗೆದುಕೊಂಡರೂ ಇದು ಸಿನಿಮಾ ಮತ್ತು ಥಿಯೇಟರ್‌ಗಳ ಪಾಲಿಗೆ ದೊಡ್ಡ ಆತಂಕವನ್ನೇನು ತಂದೊಡ್ಡುವುದಿಲ್ಲ. ಹಾಗೆ ನೋಡಿದರೆ ದೊಡ್ಡ ಸ್ಟಾರ್‌ ಸಿನಿಮಾಗಳು ಬಿಡುಗಡೆಯಾದ ಒಂದೆರಡು ದಿನ ಅಥವಾ ಹೆಚ್ಚೆಂದರೆ ಒಂದು ವಾರ ಮಾತ್ರವೇ ಹೌಸ್‌ಫುಲ್‌ ಆಗುವುದು. ಬಳಿಕ ಅವುಗಳಿಗೂ ಬರುವ ಪ್ರೇಕ್ಷಕರ ಸಂಖ್ಯೆ ಗರಿಷ್ಟಶೇ.38 ರಿಂದ 40 ಮಾತ್ರ. ಹೀಗಿರುವಾಗ ಶೇ.50ರಷ್ಟುಎನ್ನುವ ನಿರ್ಬಂಧ ಹೆಚ್ಚಿನ ಸಮಸ್ಯೆ ತಂದೊಡ್ಡುವುದಿಲ್ಲ. ಆದರೆ ಅಷ್ಟುಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗುವುದು ಪ್ರೇಕ್ಷಕನಲ್ಲಿ ನಾನು ಥಿಯೇಟರ್‌ಗೆ ಹೋದರೂ ಏನೂ ಆಗುವುದಿಲ್ಲ. ಅಲ್ಲಿ ಸಾಕಷ್ಟುಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ ಎನ್ನುವ ಭರವಸೆ ಮೂಡಿದ ಬಳಿಕವೇ.

ಈಗ ಆರು ತಿಂಗಳಿನಿಂದ ಥಿಯೇಟರ್‌ ಬಾಗಿಲುಗಳು ಸಂಪೂರ್ಣವಾಗಿ ಮುಚ್ಚಿದ್ದ ಕಾರಣ ಪರದೆಗಳಿಗೆ ಹಾನಿಯಾಗಿರುತ್ತದೆ, ಸೀಟ್‌ಗಳು ಫಂಗಸ್‌ಗೆ ಒಳಗಾಗಿ ಕೆಟ್ಟಸ್ಥಿತಿಗೆ ತಲುಪಿರುತ್ತವೆ, ಧೂಳು ಹಿಡಿದಿರುತ್ತದೆ. ಇದೆಲ್ಲವನ್ನೂ ಶುಚಿ ಮಾಡಬೇಕು, ತುಸು ಹೊರೆ ಎನ್ನಿಸಿದರೂ ಪ್ರತಿ ಹಂತದಲ್ಲೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು, ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಂಡು ಸಾಮಾಜಿಕ ಅಂತರ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಒಬ್ಬ ಪ್ರೇಕ್ಷಕ ಥಿಯೇಟರ್‌ಗೆ ಹೋಗಿ ಬಂದು, ಅಲ್ಲಿ ಒಳ್ಳೆಯ ವ್ಯವಸ್ಥೆ ಇದೆ ಎಂದು ನಾಲ್ಕು ಮಂದಿಗೆ ಹೇಳಬೇಕು, ಆಗ ಮಾತ್ರವೇ ನಿಧಾನಕ್ಕೆ ಜನರು ಬರಲು ಸಾಧ್ಯವಾಗುವುದು.

ಸಿಂಗಲ್‌ ಸ್ಕ್ರೀನ್‌ ಮತ್ತು ಮಲ್ಟಿಪ್ಲೆಕ್ಸ್‌

ಈ ಹಿಂದೆ ಪಿವಿಆರ್‌ ಸಿನಿಮಾಸ್‌ ಒಂದು ವಿಡಿಯೋ ಬಿಡುಗಡೆ ಮಾಡಿತ್ತು. ಅದರಲ್ಲಿ ತಾವು ಸಿನಿಮಾವನ್ನು ಎಲ್ಲಾ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಿ ಬಿಡುಗಡೆ ಮಾಡಲು ಸಿದ್ಧರಿದ್ದೇವೆ ಎನ್ನುವುದನ್ನು ಹೇಳಿದ್ದರು. ಮಲ್ಟಿಪ್ಲೆಕ್ಸ್‌ ಒಳಗೆ ಕಾಲಿಟ್ಟಲ್ಲಿಂದ ಸಿನಿಮಾ ನೋಡಿ ಹೊರಗೆ ಬರುವವರೆಗೆ ಪ್ರತಿ ಹಂತದಲ್ಲೂ ಪ್ರೇಕ್ಷಕನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದು ಆ ವಿಡಿಯೋದಲ್ಲಿ ಎದ್ದು ಕಾಣುತ್ತಿತ್ತು. ಅಷ್ಟರ ಮಟ್ಟಿಗಾದರೂ ಮಲ್ಟಿಪ್ಲೆಕ್ಸ್‌ಗಳು ತಯಾರಾಗಿವೆ. ಆದರೆ 100ರಿಂದ 120 ಮಂದಿ ಸಾಮರ್ಥ್ಯದ ಮಲ್ಟಿಪ್ಲೆಕ್ಸ್‌ಗಳಿಗೆ ಶೇ.50ರಷ್ಟುಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಎನ್ನುವ ನಿರ್ಬಂಧ ಹೊರೆಯಾಗಬಹುದು. ಆದರೆ ಸಿಂಗಲ್‌ ಸ್ಕ್ರೀನ್‌ಗಳಿಗೆ ಇದು ದುಬಾರಿ ಎನ್ನಿಸುವುದಿಲ್ಲ. ಮೊದಲೇ ಹೇಳಿದ ಹಾಗೆ ಪೀಕ್‌ ಟೈಮ್‌ ಬಿಟ್ಟರೆ ಮಾಮೂಲಿ ಸಮಯದಲ್ಲಿ ಶೇ. 50 ರಷ್ಟುಪ್ರೇಕ್ಷಕರು ಥಿಯೇಟರ್‌ಗಳ ಕಡೆಗೆ ಮುಖ ಮಾಡುವುದಿಲ್ಲ. ಹಾಗಾಗಿ ಇರುವ ಅವಕಾಶವನ್ನು ಬಳಕೆ ಮಾಡಿಕೊಂಡು ಮಲ್ಟಿಪ್ಲೆಕ್ಸ್‌ಗಳ ರೀತಿಯಲ್ಲಿ ಸುರಕ್ಷತೆಯ ಭರವಸೆ ನೀಡಬೇಕು.

ವೃತ್ತ ಪೂರ್ಣವಾಗದು

ಯಾವುದೇ ಚಿತ್ರರಂಗವೇ ಇರಲಿ, ಅದರ ಸಂಭ್ರಮ, ಸಡಗರ, ಯಶಸ್ಸು, ಸೋಲು ಎಲ್ಲವೂ ನಿರ್ಧಾರ ಆಗುವುದು ಥಿಯೇಟರ್‌ನಲ್ಲಿಯೇ. ಸಿನಿಮಾ ರಂಗ ಎನ್ನುವುದು ಒಂದು ವೃತ್ತ. ಪ್ರೀ ಪ್ರೊಡಕ್ಷನ್‌, ಪ್ರೊಡಕ್ಷನ್‌, ಪೋಸ್ಟ್‌ ಪ್ರೊಡಕ್ಷನ್‌ ಈ ಮೂರು ಹಂತ ದಾಟಿದ ತಕ್ಷಣ ಚಿತ್ರ ನೇರ ಥಿಯೇಟರ್‌ಗೆ ಬರುತ್ತದೆ. ಅಲ್ಲಿಯೇ ಚಿತ್ರ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲರ ಅದೃಷ್ಟಖುಲಾಯಿಸುವುದು. ಅದು ಅಂತಿಮ ಹಂತ. ಅಲ್ಲಿಗೆ ವೃತ್ತ ಕಂಪ್ಲೀಟ್‌ ಆಗುತ್ತದೆ. ಈಗ ಕನ್ನಡದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಚಿತ್ರಗಳು ತಯಾರಿ ಆರಂಭಿಸಿ, ಹಲವು ಶೂಟಿಂಗ್‌ ಮುಗಿಸಿಕೊಂಡು ಮತ್ತೂ ಕೆಲವು ಬಿಡುಗಡೆಗೆ ಸಿದ್ಧವಾಗಿವೆ. ಹೀಗೆ ಸಿದ್ಧವಾಗಿರುವ ಚಿತ್ರಗಳು ಥಿಯೇಟರ್‌ನಲ್ಲಿ ಪ್ರದರ್ಶನ ಕಂಡ ಬಳಿಕವೇ ಚಿತ್ರರಂಗ ಮತ್ತಷ್ಟುವೇಗ ಪಡೆದುಕೊಳ್ಳಲು ಸಾಧ್ಯವಾಗುವುದು. ಇಲ್ಲದೇ ಇದ್ದರೆ ಇದ್ದಲ್ಲಿಯೇ ಇರಬೇಕಾಗುತ್ತದೆ. ಮಾಡಿದ ಅಡುಗೆಯೇ ಖರ್ಚಾಗದೇ, ಅದು ಹೇಗಿದೆ ಎಂದು ತಿಂದವರು ಹೇಳದೇ, ತಿಂದದ್ದಕ್ಕೆ ಸರಿಯಾದ ಪ್ರತಿಫಲ ನೀಡದೇ ಇದ್ದರೆ ಮತ್ತೆ ಹೊಸದಾದ ಅಡುಗೆಯನ್ನು ಯಾರೂ ಮಾಡಲು ಮುಂದಾಗುವುದಿಲ್ಲ. ಮುಂದಾದರೂ ಅಂತವರ ಸಂಖ್ಯೆ ತುಂಬಾ ಕಡಿಮೆ.

ಜವಾಬ್ದಾರಿ ಎಲ್ಲರ ಮೇಲೂ ಇದೆ

ಈಗ ಕನ್ನಡದಲ್ಲಿ ದರ್ಶನ್‌, ಪುನೀತ್‌, ದುನಿಯಾ ವಿಜಯ್‌, ಸುದೀಪ್‌, ಶಿವರಾಜ್‌ ಕುಮಾರ್‌, ಯಶ್‌, ಧ್ರುವ ಸರ್ಜಾ ಸೇರಿ ಸಾಲು ಸಾಲು ಸ್ಟಾರ್‌ ನಟರ ಸಿನಿಮಾಗಳು ಬಿಡುಗಡೆಯ ಹಂತಕ್ಕೆ ಬಂದಿವೆ. ಅವುಗಳು ಆದಷ್ಟುಬೇಗ ಥಿಯೇಟರ್‌ಗೆ ಬರುವ ಸಾಹಸ ಮಾಡಬೇಕು, ಸ್ಟಾರ್‌ ನಟರೂ ಕೂಡ ಜನ ಚಿತ್ರಮಂದಿರಗಳ ಕಡೆಗೆ ಮುಖ ಮಾಡುವಂತೆ ಮಾಡಲು ಏನೆಲ್ಲಾ ಸಾಧ್ಯವಿದೆಯೇ ಅದೆಲ್ಲಾ ದಾರಿಗಳನ್ನು ಕಂಡುಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಆಗ ಮಾತ್ರವೇ ಕನಿಷ್ಟ2021 ಜನವರಿಯಷ್ಟರಲ್ಲಿ ಚಿತ್ರರಂಗ ಒಂದು ಹಳಿಯ ಮೇಲೆ ಬಂದು ನಿಲ್ಲಲು ಸಾಧ್ಯವಾಗುತ್ತದೆ. ಹೀಗಾಗಿ ಸಿಕ್ಕಿರುವ ಕಡಿಮೆ ಸಮಯವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಇಡೀ ಉದ್ಯಮವನ್ನು ಚೇತರಿಕೆಯ ಹಾದಿಯಲ್ಲಿ ನಡೆಸುವ ಜವಾಬ್ದಾರಿ ಚಿತ್ರರಂಗಕ್ಕೆ ಸಂಬಂಧಿಸಿದ ಪ್ರತಿಯೊಬ್ಬರ ಮೇಲೆಯೂ ಇದೆ.

"