ವಿಷ್ಣುವರ್ಧನ್ ಹಾಗೂ ಅಂಬರೀಷ್ ಇಬ್ಬರು ಸ್ಟಾರ್ ನಟರು. ಇವರಿಬ್ಬರ ನಡುವಿನ ಸ್ನೇಹ, ಗೆಳೆತನ, ಸಲುಗೆ ಇನ್ಯಾವ ಸ್ಟಾರ್ ನಟರಲ್ಲೂ ಕಾಣಸಿಗದು. ಇದೀಗ ಅಪರೂಪದ ಫೋಟೋ ಒಂದು ವೈರಲ್ ಆಗಿದೆ.
ಚಿತ್ರರಂಗದಲ್ಲಿ ಅಮರ ಗೆಳೆತನ ಅನ್ನುವಂಥದ್ದು ಬಹಳ ಅಪರೂಪ. ಅದರಲ್ಲೂ ಸ್ಟಾರ್‌ಗಳು ಪರಮ ಸ್ನೇಹಿತರಾಗಿರುವುದಂತೂ ಇಲ್ಲವೇ ಇಲ್ಲ ಅನ್ನುವಷ್ಟು ಅಪರೂಪ. ಬೇರೆ ಕ್ಷೇತ್ರದಲ್ಲಿ ಸ್ನೇಹಿತರು ಇರಬಹುದು. ಆದರೆ ಚಿತ್ರರಂಗದಲ್ಲಿರುವವರೇ ಆಪ್ತ ಸ್ನೇಹಿತರಾಗಿ ಇರುವುದು ಕೊಂಚ ಕಷ್ಟ. ಯಾಕೆಂದರೆ ಇಲ್ಲಿ ಎಲ್ಲರೂ ಎಲ್ಲರಿಗೂ ಸ್ನೇಹಿತರೇ. ಎಲ್ಲರಿಗೂ ಆಗಿಬರುವವರೇ. ಅಂಥದ್ದರಲ್ಲಿ ಕೆಲವರು ಮಾತ್ರ ತಮ್ಮ ಸ್ನೇಹದಿಂದಲೇ ಗುರುತಿಸಿಕೊಳ್ಳುತ್ತಾರೆ. ಅಂಥಾ ಒಂದು ಸ್ಟಾರ್ ಜೋಡಿ ಅಂಬರೀಶ್ ಮತ್ತು ವಿಷ್ಣುವರ್ಧನ್.
ಅಂಬರೀಶ್ ಮತ್ತು ವಿಷ್ಣುವರ್ಧನ್ ಎಂಥಾ ಸ್ನೇಹಿತರು ಎಂದರೆ ಅವರು ಯಾವತ್ತೂ ಒಬ್ಬರನ್ನೊಬ್ಬರು ಬಿಟ್ಟುಕೊಡುತ್ತಿರಲಿಲ್ಲ. ವಿಷ್ಣು ಕೊಂಚ ಸಂಕೋಚದಿಂದ ಹಿಂದೆ ನಿಂತರೆ ಅಂಬಿ ಮಾತ್ರ ಅಪಾರ ವಿಶ್ವಾಸದಿಂದ ಅವರನ್ನು ಎಳೆದುಕೊಂಡು ಹೋಗುತ್ತಿದ್ದರು. ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಅಂಬರೀಶ್ ಎಲ್ಲಿದ್ದರೂ ವಿಷ್ಣುವರ್ಧನ್ ಇರುವ ಜಾಗಕ್ಕೆ ಬರುತ್ತಿದ್ದರು. ಅಂಥಾ ಆಪ್ತ ಸ್ನೇಹಿತರು ಅವರು. ಸ್ನೇಹಿತರು ಅಂದಮೇಲೆ ಅವರ ಕುಟುಂಬವೂ ಹತ್ತಿರ ಆಗುತ್ತದೆ. ಅಂಥಾ ಫೋಟೋ ಇದು. ಇಲ್ಲಿ ವಿಷ್ಣುವರ್ಧನ್, ಭಾರತಿ ವಿಷ್ಣುವರ್ಧನ್, ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಇದ್ದಾರೆ.
ಡಾ. ವಿಷ್ಣುವರ್ಧನ್ ಮಾತಿನ ಪ್ರಕಾರ ನೀವು ಬದುಕಿದರೆ ಆರೋಗ್ಯ ಸೂಪರ್; ಹಳೆ ವಿಡಿಯೋ ವೈರಲ್!
ವಿಷ್ಣುವರ್ಧನ್ ಮತ್ತು ಅಂಬರೀಶ್ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು. ವಿಷ್ಣುವರ್ಧನ್ 1972ರಲ್ಲಿ ವಂಶವೃಕ್ಷ ಸಿನಿಮಾದಲ್ಲಿ ನಟಿಸಿದ್ದರೂ ನಾಯಕನ ಪಾತ್ರದಲ್ಲಿ ನಟಿಸಿದ್ದು ನಾಗರಹಾವು ಚಿತ್ರದಲ್ಲಿ. ಅದೂ 1972ರಲ್ಲೇ. ಅದೇ ಸಿನಿಮಾದಲ್ಲಿ ಅಂಬರೀಶ್ ಕೂಡ ಚಿತ್ರರಂಗಕ್ಕೆ ಬಂದರು. ವಿಷ್ಣುವರ್ಧನ್ ನಾಯಕನಾಗಿ, ಅಂಬರೀಶ್ ಖಳನಾಯಕನಾಗಿ ಜನಮೆಚ್ಚುಗೆ ಗಳಿಸಿಕೊಂಡರು. ಸಿನಿಮಾದಲ್ಲಿ ಅವರಿಬ್ಬರು ವಿರೋಧಿಗಳಾಗಿದ್ದರೂ ಜೀವನದಲ್ಲಿ ಮಾತ್ರ ಸ್ನೇಹಿತರಾದರು. ಸಾಮಾನ್ಯ ಸ್ನೇಹಿತರಲ್ಲ. ಆಪ್ತ ಸ್ನೇಹಿತರು. ಜಗತ್ತು ನೆನಪಿಟ್ಟುಕೊಳ್ಳುವಂತಹ ಸ್ನೇಹಿತರು.
ಭಾರತಿ ವಿಷ್ಣುವರ್ಧನ್ ನಟನೆ ಶುರು ಮಾಡಿದ್ದು 1966ರಲ್ಲಿ, ಲವ್ ಇನ್ ಬೆಂಗಳೂರು ಎಂಬ ಸಿನಿಮಾದಲ್ಲಿ. ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಕಲ್ಯಾಣ್ ಕುಮಾರ್. ಆ ಚಿತ್ರದ ನಾಯಕನ ಪಾತ್ರದಲ್ಲಿ ಕಲ್ಯಾಣ್ ಕುಮಾರ್ ಅವರೇ ನಟಿಸಿದ್ದರು. ಇನ್ನು ಸುಮಲತಾ ಅವರು ಚಿತ್ರರಂಗಕ್ಕೆ ಬಂದಿದ್ದು 1979ರಲ್ಲಿ. ತಮಿಳು ಸಿನಿಮಾ ತಿಸೈ ಮಾರಿಯಾ ಪರವೈಗಲ್ ಎಂಬ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. 1980ರಲ್ಲಿ ರಾಜ್‌ಕುಮಾರ್ ನಟನೆಯ ರವಿಚಂದ್ರ ಸಿನಿಮಾ ಮೂಲಕ ಅವರು ಕನ್ನಡಕ್ಕೆ ಬಂದರು.
ಮುಂದೆ ಈ ನಾಲ್ವರು ಕನ್ನಡ ಚಿತ್ರರಂಗ ಆಸ್ತಿಯೇ ಆಗಿ ಬೆಳೆದರು. ಈ ನಾಲ್ಕು ಮಂದಿಗೂ ಪ್ರತ್ಯೇಕ ಅಭಿಮಾನಿ ಸಮೂಹ ಇದೆ. ಮದುವೆಯಾಗುವ ಮೊದಲೇ ಈ ನಾಲ್ವರೂ ಪ್ರತ್ಯೇಕವಾಗಿ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಜೋಡಿಯಾದ ಮೇಲೆ ಅ ಅಭಿಮಾನ ಇನ್ನಷ್ಟು ಜಾಸ್ತಿಯಾಯಿತು. ತಮ್ಮ ಇಷ್ಟದ ನಟ ನಟಿಯರು ಜೊತೆಯಾದರೆ ಯಾರಿಗೆ ಖುಷಿಯಾಗುವುದಿಲ್ಲ ಅಲ್ಲವೇ.
ವಿಷ್ಣುವರ್ಧನ್ ಸಾವಿನ ಮುನ್ಸೂಚನೆ ಸಾಯಿ ಬಾಬ ನನಗೆ ಮೊದಲೇ ಕೊಟ್ಟಿದ್ದರು: ಎಸ್ ನಾರಾಯಣ್
ಹೀಗೆ ಈ ನಾಲ್ವರು ಪ್ರತಿಭಾವಂತರು ಒಂದು ಕಾರ್ಯಕ್ರಮದಲ್ಲಿ ಜೊತೆಯಾಗಿ ತೆಗೆಸಿಕೊಂಡ ಈ ಫೋಟೋ ಇಂದಿಗೂ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಈ ಫೋಟೋ ನೋಡಿಯೇ ಖುಷಿ ಪಡುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಈ ಫೋಟೋ ನೋಡುತ್ತಾ ಆ ದಿನಗಳನ್ನು ನೆನಪಿಸಿಕೊಳ್ಳುವ ಸಾವಿರಾರು ಮಂದಿ ಇದ್ದಾರೆ. ಈ ಕಾಲದಲ್ಲಿ ಈ ಸಮಯಲ್ಲಿ ಆ ನೆನಪಿಗೆ ಹೊರಳುವ ಸಿನಿಮಾ ಪ್ರೇಮಿಗಳೇ ಈ ಫೋಟೋವನ್ನೂ ಹಸಿರಾಗಿ ಇಟ್ಟಿದ್ದಾರೆ. ಯಾವಾಗ ನೋಡಿದರೂ ಮನಸು ಅರಳಿಸುವ ಫೋಟೋಗಳಿಗೆ ಬೆಲೆ ಜಾಸ್ತಿ. ಈ ಫೋಟೋ ಕೂಡ ಅಂಥದ್ದೇ ಜಾಸ್ತಿ ಬೆಲೆಯ ಫೋಟೋ. ಹೌದು ಅಲ್ಲವೇ?
