ಸಾಹಸ ಸಿಂಹ ವಿಷ್ಣು ಅವರ ಹುಟ್ಟು ಹಬ್ಬದ ವಿಶೇಷ ಏನಿರುತ್ತದೆ?

ಅಭಿಮಾನ್‌ ಸ್ಟುಡಿಯೋದಲ್ಲಿರುವ ಡಾ ವಿಷ್ಣುವರ್ಧನ್‌ ಪುಣ್ಯಭೂಮಿಯಲ್ಲಿ ಪೂಜೆ ಮಾಡಲಿದ್ದೇವೆ. ಬೆಂಗಳೂರು ವಿವಿ ಆವರಣದಲ್ಲಿ ಎರಡು ಎಕರೆ ಜಾಗದಲ್ಲಿ ಒಂದು ಸಾವಿರ ಗಿಡಗಳನ್ನು ನæಡಲಿದ್ದೇವೆ. ಇದಕ್ಕೆ ಡಾ ವಿಷ್ಣುವರ್ಧನ್‌ ಸಸ್ಯದಾಮ ಎನ್ನುವ ಹೆಸರು ನಾಮಕರಣ ಮಾಡಲಿದ್ದೇವೆ. ಸಂಜೆ ಡಾ ವಿಷ್ಣುವರ್ಧನ್‌ ಅವರ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

5 ಎಕರೆ ಜಾಗದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ : ಹಾಲಾಳು ಗ್ರಾಮದಲ್ಲಿ ಭೂಮಿ ಪೂಜೆ

ಈ ಬಾರಿಯ ಹುಟ್ಟುಹಬ್ಬ ವಿಶೇಷ ಏನು?

ಇದು 70ನೇ ಹುಟ್ಟು ಹಬ್ಬ. ಜತೆಗೆ ವಿಷ್ಣುರ್ಧನ್‌ ಹೆಸರಿನಲ್ಲಿ ಕೇಂದ್ರ ಸರ್ಕಾರ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿದೆ. ದೇಶದ ಪ್ರಮುಖ ವಿದ್ಯಮಾನಗಳು, ಸಾಧಕರ ಮಹತ್ವದ ಹೆಜ್ಜೆಗಳನ್ನು ಭಾರತ ಸರ್ಕಾರದ ಅಂಚೆ ಇಲಾಖೆ ಪೋಸ್ಟಲ… ಸ್ಟ್ಯಾಂಪ್‌, ಪೋಸ್ಟಲ… ಕವರ್‌, ಪೋಸ್ಟಲ… ಫ್ರೇಮ…ಗಳ ಮೂಲಕ ದಾಖಲಿಸುತ್ತದೆ. ಡಾ.ವಿಷ್ಣುವರ್ಧನ್‌ ಅವರ ಹೆಸರಿನಲ್ಲಿ ಅಂಚೆ ಲಕೋಟೆ ಬಿಡುಗಡೆ ಮಾಡುತ್ತಿದೆ. ಆ ಮೂಲಕ ಯಜಮಾನ್ರಿಗೆ 70 ವರ್ಷ ತುಂಬಿದ ಸಂಗತಿ ಭಾರತ ಸರ್ಕಾರದ ದಾಖಲೆಗಳಲ್ಲಿ ಸೇರ್ಪಡೆಯಾಗುತ್ತಿದೆ. ಈ ಪೋಸ್ಟಲ… ಕವರ್‌ ದೇಶದಾದ್ಯಂತ ಇರುವ ಎಲ್ಲ ಅಂಚೆ ಚೀಟಿ ಸಂಗ್ರಹ ಮಾಡುವ ಹವ್ಯಾಸಿಗಳ ಕೈ ತಲುಪಲಿದೆ. ದೇಶದ ಯಾವುದೇ ಮೂಲೆಯಲ್ಲಿ ಅಂಚೆಚೀಟಿ ಸಂಗ್ರಹದ ಪ್ರದರ್ಶನವಾದರೂ ಅಲ್ಲಿ ಈ ವಿಶೇಷ ಪೋಸ್ಟಲ… ಕವರ್‌ ಪ್ರದರ್ಶನವಾಗಲಿದೆ.

"

ವಿಷ್ಣು ಅವರ ಈ ಸೇವೆವನ್ನು ನೀವು ಹೇಗೆ ನೋಡುತ್ತೀರಿ?

ನಾನು ಅವರ ಅಭಿಮಾನಿ. ದೆಹಲಿಯಲ್ಲಿ ರಾಷ್ಟ್ರೀಯ ಉತ್ಸವ, ನಾಟಕೋತ್ಸವ ಮಾಡಿದ್ವಿ. ಜತೆಗೆ ಈಗ ಅಂಚೆ ಲಕೋಟೆ ಬಿಡುಗಡೆ ಮಾಡುವ ಮಹತ್ತರ ಕೆಲಸದಲ್ಲಿ ನನ್ನ ಪಾತ್ರವಿದೆ. ಇದು ನನ್ನ ಗುರು, ಮಾರ್ಗದರ್ಶಿಯೂ ಆಗಿರುವ ವಿಷ್ಣುವರ್ಧನ್‌ ಅವರಿಗೆ ಋುಣ ಸಂದಾಯ ಮಾಡುತ್ತಿದ್ದೇನೆ ಅಷ್ಟೆ. ನನ್ನ ಈ ಕಾರ್ಯಕ್ಕೆ ಸ್ನೇಹಿತರು, ಕುಟುಂಬದವರು, ವಿಷ್ಣುವರ್ಧನ್‌ ಅವರ ದೊಡ್ಡ ಅಭಿಮಾನಿ ಸಮೂಹ ಬೆಂಬಲವಾಗಿ ನಿಂತಿದೆ.

ನಿಮಗೆ ವಿಷ್ಣುವರ್ಧನ್‌ ಅಂದರೆ ಯಾಕೆ ಅಷ್ಟುಇಷ್ಟ?

ವಿದ್ಯಾರ್ಥಿ ಆಗಿದ್ದ ದಿನಗಳಿಂದಲೂ ದನಿ ಇಲ್ಲದವರ ಪರವಾಗಿ ನಿಲ್ಲುವ ಪ್ರವೃತಿ ಬೆಳೆಸಿಕೊಂಡಿದ್ದವನು ನಾನು. ಸಿನಿಮಾ ನೋಡಿ ವಿಷ್ಣು ಅವರನ್ನು ಅಭಿಮಾನಿಸಲು ಶುರು ಮಾಡಿದಾಗ ನನ್ನ ನೆಚ್ಚಿನ ಕಲಾವಿದನಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎನ್ನುವ ನೋವು ನನ್ನಲ್ಲಿತ್ತು. ಬೇರೆ ಭಾಷೆಯಲ್ಲಿ ಹಾಸ್ಯ ನಟರಿಗೆ, ಪೋಷಕ ಕಲಾವಿದರಿಗೆ ಪದ್ಮಶ್ರೀ ಪ್ರಶಸ್ತಿ ಕೊಟ್ಟಿದ್ದಾರೆ. ಆದರೆ, ವಿಷ್ಣು ದಾದಾಗೆ ಕೊಟ್ಟಿಲ್ಲ. ಅವರಿಗೆ ಪದ್ಮಶ್ರೀ ಕೊಡಕ್ಕೆ ಬಯೋಡೆಟಾ ಕೊಟ್ಟು ಶಿಫಾರಸ್ಸು ಮಾಡಬೇಕಾ ಎನ್ನುವ ಸಿಟ್ಟು ಮತ್ತು ನೋವು ನನಗೆ ಇದೆ. ನಮ್ಮ ಯಜಮಾನರಿಗೆ ಸಿಗಬೇಕಾದ ಮನ್ನಣೆ ಸಿಗಬೇಕು. ಇದು ನನ್ನಂತಹ ಸಾವಿರಾರು ವಿಷ್ಣು ಅಭಿಮಾನಿಗಳ ಆಸೆ. ಈ ಅಸೆ ಮತ್ತು ಸಂಕಲ್ಪವೇ ಸಾಹಸ ಸಿಂಹ ಏಂದರೆ ಮತ್ತಷ್ಟುಇಷ್ಟವಾಗುತ್ತಾ ಹೋದರು.

ವೈಯಕ್ತಿಕವಾಗಿ ನಿಮಗೆ ವಿಷ್ಣು ಅವರು ಹೇಗೆ ಸ್ಫೂರ್ತಿ?

ಬರಿಗೈಯಲ್ಲಿ ಬೆಂಗಳೂರಿಗೆ ಬಂದು ಸ್ವಂತ ದುಡಿಮೆ ಮೇಲೆ ಬದುಕು ಕಟ್ಟಿಕೊಂಡು ಒಂದಿಷ್ಟುಜನಕ್ಕೆ ಜೀವನ ರೂಪಿಸಿಕೊಳ್ಳುವುದಕ್ಕೆ ನೆರವಾಗುತ್ತಿದ್ದೇನೆ, ಸುಂದರವಾದ ಕುಟುಂಬ ಕಟ್ಟಿಕೊಂಡಿದ್ದೇನೆ ಎಂದರೆ ಅದಕ್ಕೆ ವಿಷ್ಣು ಅವರೇ ಸ್ಫೂರ್ತಿ. ನನ್ನ ಬದುಕಿಗೆ ಅವರ ಆದರ್ಶಗಳು ಸಾಕಷ್ಟುಪ್ರೇರಣೆ ಆಗಿವೆ.

ಆದರೆ, ನೀವು ವಿಷ್ಣು ಅವರ ಕುಟುಂಬದ ಕೋಪಕ್ಕೆ ಗುರಿ ಆಗಿದ್ದೀರಲ್ಲ?

ಭಾರತಿ ವಿಷ್ಣುವರ್ಧನ್‌, ನಟ ಅನಿರುದ್‌್ಧ ಅವರು ನನ್ನ ಎಲ್ಲ ಕೆಲಸಗಳಿಗೂ ಬೆಂಬಲವಾಗಿ ನಿಂತಿದ್ದರು. ಸರ್ಕಾರ ಮತ್ತು ಅವರ ಕುಟುಂಬದ ನಡುವೆ ನಾನು ಸೇತುವೆ ಆಗಿದ್ದೆ. ಆದರೆ, ವಿಷ್ಣುವರ್ಧನ್‌ ಅವರ ಸ್ಮಾರ ನಿರ್ಮಾಣದ ಸ್ಥಳದ ವಿಚಾರದಲ್ಲಿ ಅಭಿಮಾನಿಗಳಿಗೂ ಮತ್ತು ಕುಟುಂಬದ ನಡುವೆ ಮನಸ್ತಾಪ ಬಂತು. ನಾನು ಅಭಿಮಾನಿಯಾಗಿ ಅಭಿಮಾನಿಗಳ ಜತೆ ನಿಂತೆ. ಯಾಕೆಂದರೆ ನಾನು ಅಭಿಮಾನಿಯಾಗಿರೋದು ವಿಷ್ಣುವರ್ಧನ್‌ ಅವರಿಗೆ.

'ವಿಷ್ಣು ಅಪ್ಪಾಜಿಯೊಂದಿಗೆ ನನ್ನ ಹೋಲಿಕೆ ಮಾಡಬಾರದು'

ಯಾಕೆ ಅಭಿಮಾನ್‌ ಸ್ಟುಡಿಯೋದಲ್ಲಿ ಸ್ಮಾರಕ ಆಗಬೇಕೆಂದು ಪಟ್ಟು ಹಿಡಿದಿರುವುದು?

ಡಾ ವಿಷ್ಣುವರ್ಧನ್‌ ಅವರ ಅಂತ್ಯ ಸಂಸ್ಕಾರ ಮಾಡಿದ್ದು ಎಲ್ಲಿ, ಬಾಲಣ್ಣ ಅವರ ಸ್ಟುಡಿಯೋದಲ್ಲಿ. ಅಂತ್ಯ ಸಂಸ್ಕಾರ ಮಾಡಿ ವಿಷ್ಣು ಪುಣ್ಯಭೂಮಿ ಎಂದು ಹೇಳಿದ ಮೇಲೆ ಅಲ್ಲೇ ಸ್ಮಾರಕ ಮಾಡಬೇಕು ಅಲ್ಲವೇ. ಆದರೆ, ಸಮಾಧಿಯನ್ನು ಬೇರೆ ಕಡೆ ಕಿತ್ತುಕೊಂಡು ಹೋಗಿ ಸ್ಮಾರಕ ಮಾಡುತ್ತೇವೆ ಎಂದರೆ ಹೇಗೆ ಎಂಬುದು ನನ್ನ ಪ್ರಶ್ನೆ. ಮೈಸೂರಿನಲ್ಲೇ ಅಂತ್ಯ ಸಂಸ್ಕಾರ ಮಾಡಿದ್ದರೆ ಖಂಡಿತ ಅಲ್ಲೇ ಸ್ಮಾರಕ ಕೂಡ ಮಾಡಲಿ. ಒಮ್ಮೆ ಎಲ್ಲಿ ಅಂತ್ಯ ಸಂಸ್ಕಾರ ಮಾಡಿರುತ್ತಾರೋ ಅಲ್ಲೇ ಸ್ಮಾರಕ, ಸಮಾಧಿ ಕಟ್ಟಬೇಕು ಎಂಬುದು ನಮ್ಮ ನಂಬಿಕೆ ಮತ್ತು ಅಭಿಮಾನಿಗಳ ನಂಬಿಕೆ. ನಾವು ಆ ನಂಬಿಕೆಗೆ ಬದ್ಧವಾಗಿ ನಿಂತಿದ್ದೇವೆ ಅಷ್ಟೆ.

ಸ್ಮಾರಕ, ಬಾಲಣ್ಣ ಸ್ಟುಡಿಯೋದಲ್ಲಿರುವ ಸಮಾಧಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಬೆಂಗಳೂರಿನ ಬಾಲಣ್ಣ ಸ್ಟುಡಿಯೋದಲ್ಲಿರುವುದು ಅಭಿಮಾನಿಗಳ ಪ್ರೀತಿಯ ಪುಣ್ಯ ಭೂಮಿ. ಅಲ್ಲಿ ವಿಷ್ಣು ಅವರ ಜೀವ ಇರುತ್ತದೆ. ಅದೇ ನಮ್ಮ ಯಜಮಾನರ ಮನೆ ಮತ್ತು ಕ್ಷೇತ್ರ ಎಂದಷ್ಟೆಹೇಳಬಲ್ಲೆ.

ಅಭಿಮಾನದ ಈ ಸೇವೆಗೆ ನಿಮ್ಮ ಕುಟುಂಬದವರ ಪ್ರತಿಕ್ರಿಯೆ ಏನು?

ನಾನು ಎರಡು ವಿಚಾರಗಳಿಗೆ ಮಹತ್ವ ಕೊಡುತ್ತೇನೆ. ಕುಟುಂಬ ಮತ್ತು ವಿಷ್ಣುವರ್ಧನ್‌ ಅವರ ಸೇವೆ. ನಾನು ಕುಟುಂಬವನ್ನು ಕಷ್ಟಕ್ಕೆ ತಳ್ಳಿ ಅಭಿಮಾನಿ ಜಾತ್ರೆ ಮಾಡುತ್ತಿಲ್ಲ. ಯಜಮಾನರೇ ಹೇಳುವಂತೆ ಕುಟುಂಬವನ್ನು ಚೆನ್ನಾಗಿ ನೋಡಿಕೊಂಡೇ ನಾನು ನನ್ನ ನೆಚ್ಚಿನ ನಟನ ಸಂಭ್ರಮಕ್ಕೆ ಶ್ರಮಿಸುತ್ತಿದ್ದೇನೆ. ಹೀಗಾಗಿ ನನ್ನ ಕುಟುಂಬದಲ್ಲಿ ಈ ಬಗ್ಗೆ ಯಾರಿಗೂ ತಕರಾರು ಇಲ್ಲ.