Asianet Suvarna News Asianet Suvarna News

ಅಪ್ಪುವಿಗೆ ಪಿಂಡ ಪ್ರದಾನ ಮಾಡಿದ ನಟ ವಿನೋದ್‌ ರಾಜ್‌

  • ಗಂಜಾಂನ ಸಂಗಮ ಬಳಿ ನಟ ಪುನೀತ್‌ ರಾಜ್‌ಕುಮಾರ್‌ ಅವರ 11ನೇ ದಿನದ ಪುಣ್ಯತಿಥಿ ಅಂಗವಾಗಿ ಪಿಂಡ ಪ್ರದಾನ
  • ಹಿರಿಯ ನಟಿ ಲೀಲಾವತಿ ಹಾಗೂ ಅವರ ಪುತ್ರ, ನಟ ವಿನೋದ್‌ರಾಜ್‌ ಅವರಿಂದ ಪುಣ್ಯತಿಥಿ ಅಂಗವಾಗಿ ಪಿಂಡ ಪ್ರದಾನ
Vinod Raj performs Pinda pradan Ritual For actor Puneeth rajkumar snr
Author
Bengaluru, First Published Nov 9, 2021, 9:25 AM IST
  • Facebook
  • Twitter
  • Whatsapp

 ಶ್ರೀರಂಗಪಟ್ಟಣ (ನ.09):  ಹಿರಿಯ ನಟಿ ಲೀಲಾವತಿ (Leelavathi) ಹಾಗೂ ಅವರ ಪುತ್ರ, ನಟ ವಿನೋದ್‌ರಾಜ್‌ (Vinod Raj) ಪಟ್ಟಣದ ಗಂಜಾಂನ ಸಂಗಮ ಬಳಿ ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ 11ನೇ ದಿನದ ಪುಣ್ಯತಿಥಿ ಅಂಗವಾಗಿ ಪಿಂಡ ಪ್ರದಾನ ಕಾರ್ಯ ನೆರವೇರಿಸಿದರು. ವೈದಿಕರ ನೇತೃತ್ವದಲ್ಲಿ ಸಂಕಲ್ಪ ಕೈಗೊಂಡ ವಿನೋದ್‌ ರಾಜ್ ಗಣಪತಿ ಪೂಜೆ, ಆಶ್ಲೇಷ ಬಲಿ, ನಾರಾಯಣ ಬಲಿ ಪೂಜೆ ನೆರವೇರಿಸಿ ಕಾವೇರಿ ನದಿಯಲ್ಲಿ (Cauvery river) ತರ್ಪಣ ಬಿಟ್ಟು ಪುನೀತ್‌ ಆತ್ಮಕ್ಕೆ ಶಾಂತಿ ಕೋರಿದರು. ಪೂಜಾ ಕೈಂಕರ್ಯ ನಡೆಯುವ ವೇಳೆ ಕಾರಿನಲ್ಲೇ ಕುಳಿತಿದ್ದ ಹಿರಿಯ ನಟಿ ತಾಯಿ ಲೀಲಾವತಿ ಎಲ್ಲವನ್ನು ವೀಕ್ಷಿಸುತ್ತಿದ್ದರು. ಸಂಪೂರ್ಣ ಪೂಜೆಯ ಬಳಿಕ ಮಂಗಳಾರತಿ ಪಡೆದ ಅವರು ಜೀವನದಿ ಕಾವೇರಿಗೆ ಕೈ ಮುಗಿದು ಮುಕ್ತಿಗಾಗಿ ಪ್ರಾರ್ಥಿಸಿದರು.

ಸೋಮವಾರ ತಮ್ಮ ಕೆಲವೇ ಕೆಲವು ಆಪ್ತರೊಂದಿಗೆ ಆಗಮಿಸಿದ ಲೀಲಾವತಿ, ವಿನೋದ್‌ ರಾಜ್‌ ಸಂಪ್ರದಾಯದಂತೆ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ತಾಯಿಯ ಮಾರ್ಗದರ್ಶನದಂತೆ, ಇದಕ್ಕೂ ಮೊದಲು ವರನಟ ಡಾ.ರಾಜ್ ಕುಮಾರ್‌ ಸಮಾಧಿ ಮಣ್ಣಿಗೆ ವಿಶೇಷ ಪೂಜೆ ಸಲ್ಲಿಸಿ ಕಾವೇರಿಯಲ್ಲಿ ವಿಸರ್ಜನೆ ನಡೆಸಲಾಯಿತು.

ಶ್ರೀರಂಗಪಟ್ಟಣ (Shrirangapattana) ಹೊರವಲಯದ ಕಾವೇರಿ ಸಂಗಮದ ಬಳಿಯ ಕಾವೇರಿ ತಟದಲ್ಲಿ ನಟ ವಿನೋದ್‌ ರಾಜ್‌ ಅವರು ಪುನೀತ್‌ ರಾಜ್‌ಕುಮಾರ್‌ ಅವರ ಪಿಂಡ ಪ್ರದಾನ ಕಾರ್ಯ ನೆರವೇರಿಸಿದರು.

ಪುಣ್ಯತಿಥಿ ಪೂಜೆ :  ನಟ ಪುನೀತ್‌ ರಾಜ್‌ಕುಮಾರ್‌ 11ನೇ ದಿನ ಪುಣ್ಯತಿಥಿ ಕಾರ್ಯ ಶಾಸೊತ್ರೕಕ್ತವಾಗಿ ನೆರವೇರಿದೆ. ಬೆಳಗ್ಗೆ ಪುನೀತ್‌ ರಾಜ್‌ಕುಮಾರ್‌ ನಿವಾಸದಲ್ಲಿ ಶಾಸೊತ್ರೕಕ್ತವಾಗಿ 11ನೇ ದಿನದ ಕಾರ್ಯಗಳನ್ನು ನೆರವೇರಿಸಿದ ರಾಜ್‌ಕುಮಾರ್‌ ಕುಟುಂಬ ನಂತರ ಕಂಠೀರವ ಸ್ಟುಡಿಯೋ (kanteerava studio) ಆವರಣದಲ್ಲಿರುವ ಪುನೀತ್‌ ರಾಜ್‌ಕುಮಾರ್‌ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿತು.

ಪತ್ನಿ ಅಶ್ವಿನಿ ಮತ್ತು ಮಕ್ಕಳು ಮನೆಯಲ್ಲಿ ಪೂಜೆ ಸಲ್ಲಿಸಿ ಕಾರಿನಲ್ಲಿ ಸಮಾಧಿ ಸ್ಥಳಕ್ಕೆ ಆಗಮಿಸಿದರು. ಶಿವರಾಜ್‌ ಕುಮಾರ್‌ (Shivarajkumar), ರಾಘವೇಂದ್ರ ರಾಜ್‌ಕುಮಾರ್‌ ಕುಟುಂಬ ಕೂಡ ಕಾರಿನಲ್ಲಿ ಸಮಾಧಿ ಸ್ಥಳಕ್ಕೆ ಬಂದರೆ ಉಳಿದ ಕುಟುಂಬಸ್ಥರು ಎರಡು ಬಸ್ಸುಗಳಲ್ಲಿ (Bus) ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ಪುನೀತ್‌ ಅವರಿಗೆ ಇಷ್ಟವಾದ ಆಹಾರಗಳನ್ನು (Food) ಎಡೆ ಇಟ್ಟು ಪೂಜೆ ಸಲ್ಲಿಸಲಾಯಿತು. ಸಮಾಧಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. 11ನೇ ದಿನದ ಪುಣ್ಯ ತಿಥಿ ಕಾರ್ಯಗಳನ್ನು ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ವಿನಯ್‌ ರಾಜ್‌ಕುಮಾರ್‌ (vinay rajkumar) ನೆರವೇರಿಸಿದರು. ರಾಜ್ಯದ ನಾನಾ ಕಡೆಗಳಿಂದ ಪುನೀತ್‌ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಆಗಮಿಸಿದ್ದರು. ಪುನೀತ್‌ ಸಮಾಧಿ ದರ್ಶನಕ್ಕೆ ಅಭಿಮಾನಿಗಳು ಕಿಮೀ ದೂರದವರೆಗೆ ಸಾಲುಗಟ್ಟಿನಿಂತಿದ್ದರು.

ಪುನೀತ್‌ ಮನೆಗೆ ಕಲಾವಿದರು, ಗಣ್ಯರ ಭೇಟಿ

ಪುನೀತ್‌ 11ನೇ ದಿನದ ಪುಣ್ಯತಿಥಿ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಕಲಾವಿದರು, ಗಣ್ಯರಿಗೆ ಮಾತ್ರ ಆಹ್ವಾನ ಇತ್ತು. ಹಲವರು ಸಮಾಧಿ ಸ್ಥಳಕ್ಕೆ ಆಗಮಿಸಿ ಗೌರವ ಸಲ್ಲಿಸಿದರು. ಬಹುತೇಕರು ಪುನೀತ್‌ ರಾಜ್‌ಕುಮಾರ್‌ ನಿವಾಸಕ್ಕೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರವಿಚಂದ್ರನ್‌, ಉಪೇಂದ್ರ, ಗೋಲ್ಡನ್‌ ಸ್ಟಾರ್‌ ಗಣೇಶ್‌, ದುನಿಯ ವಿಜಯ್‌, ಶರಣ್‌, ರಕ್ಷಿತ್‌ ಶೆಟ್ಟಿ, ಅನೂಪ್‌ ಭಂಡಾರಿ, ನಿರೂಪ್‌ ಭಂಡಾರಿ, ಲಹರಿ ವೇಲು, ಧನಂಜಯ್‌, ವಸಿಷ್ಠ ಸಿಂಹ ಸೇರಿದಂತ ಅನೇಕರು ಪುಣ್ಯತಿಥಿ ಕಾರ್ಯದಲ್ಲಿ ಹಾಜರಿದ್ದರು.

ಇಂದು ಅಭಿಮಾನಿಗಳಿಗೆ ಅನ್ನದಾನ

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಾ.ರಾಜ್‌ಕುಮಾರ್‌ ಕುಟುಂಬದ ವತಿಯಿಂದ ಅಭಿಮಾನಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. 11ನೇ ದಿನದ ಪುಣ್ಯ ತಿಥಿ ಕಾರ್ಯಕ್ರಮಕ್ಕೆ ಗಣ್ಯರಿಗೆ ಮಾತ್ರ ಆಹ್ವಾನಿಸಲಾಗಿತ್ತು. ಹಾಗಾಗಿ ನ.9ರಂದು ಅಭಿಮಾನಿಗಳಿಗೆ ಅನ್ನದಾನ ಏರ್ಪಡಿಸಲು ಕುಟುಂಬ ನಿರ್ಧರಿಸಿತ್ತು. ಆ ಪ್ರಕಾರವೇ ಇಂದು ಅನ್ನದಾನ ನಡೆಯಲಿದೆ. ಸಹಸ್ರಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ.

ಸುರೇಶ್‌ರಿಂದ 1000 ಜನರಿಗೆ ಅನ್ನದಾನ

ನಿರ್ಮಾಪಕ ಸುರೇಶ್‌ ಅವರು ಪುನೀತ್‌ ರಾಜ್‌ಕುಮಾರ್‌ ನೆನಪಲ್ಲಿ ಬೆಂಗಳೂರಿನ ನಾಗರಭಾವಿಯಲ್ಲಿರುವ ತಮ್ಮ ಕಚೇರಿ ಸಮೀಪದಲ್ಲಿ ಸುಮಾರು ಒಂದು ಸಾವಿರ ಮಂದಿಗೆ ಅನ್ನದಾನ ಮಾಡಿದ್ದಾರೆ. ವಿನಯ್‌ ರಾಜ್‌ಕುಮಾರ್‌ ನಟನೆಯ ‘ಅಂದೊಂದಿತ್ತು ಕಾಲ’ ಸಿನಿಮಾದ ನಿರ್ಮಾಪಕರಾಗಿರುವ ಅವರು ಪುನೀತ್‌ ಅವರ ಅಭಿಮಾನಿಯಾಗಿದ್ದರು.

ಪುನೀತ್‌ ನಿವಾಸದಲ್ಲಿ ಮತ್ತು ಸಮಾಧಿ ಸ್ಥಳದಲ್ಲಿ ನಡೆದ ಪುಣ್ಯತಿಥಿ ಕಾರ್ಯದಲ್ಲಿ ಭಾಗವಹಿಸಲು ಅಭಿಮಾನಿಗಳಿಗೆ ಅವಕಾಶ ಇರಲಿಲ್ಲ. ಮಧ್ಯಾಹ್ನ 12 ಗಂಟೆಯವರೆಗೂ ಸಮಾಧಿ ಸ್ಥಳಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಕುಟುಂಬಸ್ಥರ ಜೊತೆಗೆ ಚಿತ್ರರಂಗ ಗಣ್ಯರು ಮತ್ತು ರಾಜಕೀಯ ಧುರೀಣರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪುನೀತ್‌ ತೀರಿಕೊಂಡು 11 ದಿನ ಕಳೆದರೂ ಅಭಿಮಾನಿಗಳು ಬರುವುದು ಇನ್ನೂ ನಿಂತಿಲ್ಲ. 11ನೇ ಪುಣ್ಯತಿಥಿ ದಿನದಂದು ಸಮಾಧಿ ದರ್ಶನಕ್ಕೆ ಬಂದ ಅಭಿಮಾನಿಗಳ ಸಂಖ್ಯೆಯೇ ಪುನೀತ್‌ ಮೇಲಿನ ಮುಗಿಯದ ಅಭಿಮಾನವನ್ನು ಸಾರುತ್ತಿತ್ತು.

Follow Us:
Download App:
  • android
  • ios