ಪುನೀತ್‌ ರಾಜ್‌ಕುಮಾರ್‌ ಆಗಮಿಸಿ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರೆ, ನಿರ್ದೇಶಕ ಜೋಗಿ ಪ್ರೇಮ್‌ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದರು. ಇದು ತೊಂಭತ್ತರ ದಶಕದ ಕತೆಯನ್ನು ಹೇಳುವ ಸಿನಿಮಾ. ಅಂದರೆ 1990ರಿಂದ 2006ರವರೆಗಿನ ಕಾಲಘಟ್ಟದಲ್ಲಿ ನಡೆಯುವ ಪಯಣದ ಹೆಜ್ಜೆ ಗುರುತುಗಳು ಈ ಚಿತ್ರದಲ್ಲಿವೆ.

ಸ್ಯಾಂಡಲ್‌ವುಡ್‌ನಲ್ಲಿ ಸ್ವಜನಪಕ್ಷಪಾತ; ಟ್ರೋಲಿಗರಿಗೆ ಖಡಕ್‌ ಉತ್ತರ ಕೊಟ್ಟ ಅಣ್ಣಾವ್ರ ಮೊಮ್ಮಗ! 

ನಿರ್ದೇಶಕ ಪಿ.ಎನ್‌. ಸತ್ಯ, ಆರ್‌. ಚಂದ್ರು, ಜೋಗಿ ಪ್ರೇಮ್‌ ಜತೆ ಕೆಲಸ ಮಾಡಿರುವ ಕೀರ್ತಿ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗುತ್ತಿದ್ದಾರೆ. ‘ತೊಂಭತ್ತರ ದಶಕದಲ್ಲಿನ ವಾತಾವರಣ ಹೇಗಿತ್ತು, ಈಗಿನ ಕಾಲದ ಜನಜೀವನ ಹೇಗಿದೆ ಇವೆರಡರ ಮಿಶ್ರಣವೇ ಈ ಚಿತ್ರ. ವಿನಯ್‌ರಾಜ್‌ಕುಮಾರ್‌ ಅವರು ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಒಬ್ಬ ವ್ಯಕ್ತಿಯೊಬ್ಬನ ಸಾಧನೆಯ ಕತೆಯಾಗಿದೆ. ತೊಂಭತ್ತರ ಕಾಲದಿಂದ ಆತ ಮಾಡುವ ಸಾಧನೆಗಳು ಏನು ಎನ್ನುವುದು ಚಿತ್ರದಲ್ಲೇ ನೋಡಬೇಕು. ತೀರ್ಥಳ್ಳಿ ಹಾಗೂ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯಲಿದೆ’ ಎಂದರು ನಿರ್ದೇಶಕರು.

ಭುವನ್‌ ಸಿನಿಮಾಸ್‌ ಮೂಲಕ ಸುರೇಶ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಶೂಟಿಂಗ್‌ ಯೂನಿಟ್‌ಗಳನ್ನು ಒದಗಿಸುವ ಕಾಯಕ ಮಾಡಿಕೊಂಡಿದ್ದ ಇವರು ಈಗ ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದಾರೆ.‘ನನಗೆ ಉಪೇಂದ್ರ ನಿರ್ದೇಶನದ ಸಿನಿಮಾಗಳು ಇಷ್ಟ. ಈ ಚಿತ್ರದಲ್ಲಿ ನಾನು ನಿರ್ದೇಶಕನ ಪಾತ್ರವನ್ನು ಮಾಡಲು ಸಹ ನನಗೆ ಅವರೇ ಸ್ಫೂರ್ತಿ. ಮೂರು ಕಾಲಘಟ್ಟದಲ್ಲಿ ನಡೆಯುವ ಕತೆ. ಹೈಸ್ಕೂಲ್‌, ಕಾಲೇಜ್‌ ವಿದ್ಯಾರ್ಥಿ ಹಾಗೂ ಪ್ರಬುದ್ಧ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಮೊಬೈಲ್‌, ಇಂಟರ್‌ನೆಟ್‌ ಇಲ್ಲದಾಗಿನ ಕಾಲದಲ್ಲಿ ಜನರ ಜೀವನ ಹೇಗಿತ್ತು, ಅವರ ನಡುವೆ ಕಮ್ಯೂನಿಕೇಷನ್‌ ಯಾವ ರೀತಿ ನಡೆಯುತ್ತಿತ್ತು ಅನ್ನೋದನ್ನು ಈ ಚಿತ್ರದಲ್ಲಿ ಹೇಳಲು ಪ್ರಯತ್ನಿಸಲಾಗುತ್ತಿದೆ. ನನ್ನ ಕುಟುಂಬದವರೆಲ್ಲ ಸೇರಿ ಈ ಕತೆಯನ್ನು ಒಪ್ಪಿದ್ದಾರೆ’ ಎಂದು ವಿನಯ್‌ ರಾಜ್‌ಕುಮಾರ್‌ ಹೇಳಿಕೊಂಡರು.

3 ತಿಂಗಳು ತರಬೇತಿ ಪಡೆದರೂ ಬಾಕ್ಸರ್ ಪಟ್ಟಿಯಲ್ಲಿ ರಾಜ್‌ ಮೊಮ್ಮಗನಿಗೆ 'ಟೆನ್' ಸ್ಥಾನ! 

ಈ ಚಿತ್ರದ ನಾಯಕಿ ಅದಿತಿ ಪ್ರಭುದೇವ. ಇತ್ತೀಚೆಗೆ ಸಾಕಷ್ಟುಬ್ಯುಸಿ ಇರುವ ನಟಿಯರಲ್ಲಿ ಅದಿತಿ ಪ್ರಭುದೇವ ಪ್ರಮುಖರು. ‘ನಾನು ಡಾ.ರಾಜ್‌ಕುಮಾರ್‌ ಅವರ ಅಪ್ಪಟ ಅಭಿಮಾನಿ. ಈಗ ಅವರ ಮೊಮ್ಮಗನ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ’ ಎಂದರು ಅದಿತಿ. ಚಿತ್ರದ ಮತ್ತೊಬ್ಬ ನಾಯಕಿಯಾಗಿ ‘ಗಟ್ಟಿಮೇಳ’ ಖ್ಯಾತಿಯ ನಿಶಾ(ಅಮೂಲ್ಯ) ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಷೇಕ್‌ ಜಿ.ಕಾಸರಗೋಡು ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ.